ಯಾವುದೇ ಕಾರಣಕ್ಕೂ ಆ ಸಮಸ್ಯೆ ಉದ್ಭವಿಸಲ್ಲ; ಹಾರ್ದಿಕ್ ನಾಯಕನಾದ ಬಳಿಕ ರೋಹಿತ್ ಬಾಲ್ಯದ ಕೋಚ್ ಪ್ರತಿಕ್ರಿಯೆ
Dec 16, 2023 09:29 AM IST
ಹಾರ್ದಿಕ್ ನಾಯಕನಾದ ಬಳಿಕ ರೋಹಿತ್ ಬಾಲ್ಯದ ಕೋಚ್ ದಿನೇಶ್ ಲಾಡ್ ಪ್ರತಿಕ್ರಿಯೆ.
- Hardik Pandya named Mumbai Indians captain: ರೋಹಿತ್ ಶರ್ಮಾ 10 ವರ್ಷಗಳ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ನಾಯಕತ್ವ ಯುಗಾಂತ್ಯ ಕಂಡಿದ್ದು, ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮಿನಿ ಹರಾಜಿಗೆ (IPL Mini Auction 2024) ದಿನಗಣನೆ ಶುರುವಾಗಿದೆ. ಇದರ ನಡುವೆಯೇ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ರೋಹಿತ್ ಶರ್ಮಾ (Rohit Sharma) ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ರೋಹಿತ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ (Hardik Pandya) ತಂಡದ ಜವಾಬ್ದಾರಿಯನ್ನು ವಹಿಸಲಾಗಿದೆ.
ಆದರೆ ಇದು ರೋಹಿತ್ ಅವರ ಐತಿಹಾಸಿಕ ಅಧಿಕಾರವಧಿಯ ಅಂತ್ಯ ಕಂಡಿದೆ. ತಂಡಕ್ಕೆ 5 ಟ್ರೋಫಿಗಳನ್ನು ಗೆದ್ದುಕೊಟ್ಟ ರೋಹಿತ್, ಅತ್ಯಂತ ಯಶಸ್ವಿ ನಾಯಕ ಎನಿಸಿದರು. ಇದೀಗ ಅವರ ಹತ್ತು ವರ್ಷಗಳ ಐಪಿಎಲ್ ನಾಯಕತ್ವ ಯುಗಾಂತ್ಯ ಕಂಡಿದ್ದು, ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.
ಬಾಲ್ಯದ ಕೋಚ್ ಪ್ರತಿಕ್ರಿಯೆ
ಹಾರ್ದಿಕ್ ಕ್ಯಾಪ್ಟನ್ಸಿಯಲ್ಲಿ ರೋಹಿತ್ ಸಂಬಂಧ ಹೇಗಿರಲಿದೆ ಎಂಬುದಕ್ಕೆ ಹಿಟ್ಮ್ಯಾನ್ ಬಾಲ್ಯದ ಕೋಚ್ ದಿನೇಶ್ ಲಾಡ್ (Dinesh Lad) ಪ್ರತಿಕ್ರಿಯಿಸಿದ್ದಾರೆ. ಮೈ ಖೇಲ್ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ತುಟಿ ಬಿಚ್ಚಿರುವ ದಿನೇಶ್ ಲಾಡ್, ರೋಹಿತ್ ನಾಯಕತ್ವದ ಬಗ್ಗೆ ಎಂದೂ ಯೋಚಿಸುವುದಿಲ್ಲ. ಆದ್ದರಿಂದ ಅವರನ್ನು ಬದಲಾಯಿಸಿದ ಕಾರಣ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ. ಹೀಗಾಗಿ ಹಾರ್ದಿಕ್ ಸಾರಥ್ಯದಲ್ಲಿ ಆಡುವುದು ಆರಂಭಿಕ ಆಟಗಾರನಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.
‘ಮನಸ್ತಾಪದ ಪ್ರಶ್ನೆಯೇ ಬರಲ್ಲ’
ತಂಡದ ಜವಾಬ್ದಾರಿಯಿಂದ ತಪ್ಪಿಸಿದ ಕಾರಣ ಅವರಿಬ್ಬರ (ರೋಹಿತ್-ಹಾರ್ದಿಕ್) ನಡುವೆ ಮನಸ್ತಾಪ ಉಂಟಾಗುತ್ತದೆ ಎಂದು ಚರ್ಚೆ ನಡೆಯುತ್ತಿದೆ. ಆದರೆ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಕ್ರಿಕೆಟ್ ಆಟಗಾರರು. ರೋಹಿತ್ ಎಂದೂ ಕ್ಯಾಪ್ಟನ್ಸಿ ಬಗ್ಗೆ ತಲೆಕೆಡಿಸಿಕೊಂಡವರೇ ಅಲ್ಲ. ಅವರೇನಿದ್ದರೂ ಕ್ರಿಕೆಟ್ ಆಡುವುದನ್ನಷ್ಟೇ ಬಯಸಿದ್ದರು. ಹಾಗಾಗಿ ಇಬ್ಬರ ನಡುವೆ ಮನಸ್ತಾಪದ ಪ್ರಶ್ನೆಯೇ ಬರುವುದಿಲ್ಲ ಎಂದು ಬಾಲ್ಯದ ಕೋಚ್ ಹೇಳಿದ್ದಾರೆ.
5 ಟ್ರೋಫಿ ಗೆದ್ದುಕೊಟ್ಟ ನಾಯಕ
ರಿಕಿ ಪಾಂಟಿಂಗ್ ಕೆಳಗಿಳಿದ ನಂತರ ಮುಂಬೈ ಪಟ್ಟಕ್ಕೇರಿದ ರೋಹಿತ್ ಶರ್ಮಾ, ಅದೇ ವರ್ಷವೇ ಅಂಬಾನಿ ಬ್ರಿಗೇಡ್ಗೆ ಟ್ರೋಫಿ ಗೆದ್ದುಕೊಟ್ಟರು. 2013ರ ನಂತರ 2015, 2017, 2019 ಮತ್ತು 2020ರಲ್ಲಿ ಮುಂಬೈ ತಂಡವನ್ನು ಚಾಂಪಿಯನ್ ಮಾಡಿದ್ದರು. ಇದರೊಂದಿಗೆ ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ನಾಯಕತ್ವದಿಂದ ಕೆಳಗಿಳಿಸಿದ್ದು, ಅಭಿಮಾನಿಗಳಿಗೆ ಭಾರಿ ಬೇಸರವಾಗಿದೆ.
ಟ್ರೇಡ್ ಮೂಲಕ ಮುಂಬೈ ಸೇರಿದ ಹಾರ್ದಿಕ್
ಐಪಿಎಲ್ ಟ್ರೇಡ್ ವಿಂಡೋದಲ್ಲಿ ಗುಜರಾತ್ ಟೈಟಾನ್ಸ್ ತಂಡದಿಂದ ಮುಂಬೈಗೆ ಮರಳಿದ ಹಾರ್ದಿಕ್ ಪಾಂಡ್ಯ ಸಹ ಅತ್ಯಂತ ಯಶಸ್ವಿ ನಾಯಕ ಎನಿಸಿದ್ದಾರೆ. ಗುಜರಾತ್ ತಂಡವನ್ನು ಎರಡು ಬಾರಿ ಮುನ್ನಡೆಸಿದ್ದು, ಒಂದು ಬಾರಿ ಪ್ರಶಸ್ತಿ, ಇನ್ನೊಂದು ಬಾರಿ ತಂಡವನ್ನು ರನ್ನರ್ ಅಪ್ ಮಾಡಿಸಿದ್ದಾರೆ. 15 ಕೋಟಿಗೆ ತಂಡಕ್ಕೆ ಮುಂಬೈ ಸೇರಿದ ಪಾಂಡ್ಯ, ರೋಹಿತ್ ಅನುಪಸ್ಥಿತಿಯಲ್ಲಿ 2022ರ ಟಿ20 ವಿಶ್ವಕಪ್ ನಂತರ ಭಾರತದ ಟಿ20 ತಂಡವನ್ನೂ ಮುನ್ನಡೆಸುತ್ತಿದ್ದಾರೆ.