ಮೊದಲ ಟೆಸ್ಟ್‌ನಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಇಬ್ಬರು ಬೌಲರ್ಗಳಿಗೆ ಬೆಂಡೆತ್ತಿದ ಆರ್ಸಿಬಿ ಸ್ಟಾರ್
Dec 30, 2023 01:43 PM IST
ಕಳಪೆ ಬೌಲಿಂಗ್ ಪ್ರದರ್ಶನ ನೀಡಿದ ಇಬ್ಬರು ಬೌಲರ್ಗಳಿಗೆ ಬೆಂಡೆತ್ತಿದ ದಿನೇಶ್ ಕಾರ್ತಿಕ್.
- Dinesh Karthik: ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ಪದಾರ್ಪಣೆ ಆಟಗಾರ ಪ್ರಸಿದ್ಧ್ ಕೃಷ್ಣ ಅವರ ಕಳಪೆ ಬೌಲಿಂಗ್ ಪ್ರದರ್ಶನದ ವಿರುದ್ಧ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕಿಡಿಕಾರಿದ್ದಾರೆ.
ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡ, ಇನ್ನಿಂಗ್ಸ್ ಮತ್ತು 32 ರನ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಪಂದ್ಯ ಮೂರೇ ದಿನಕ್ಕೆ ಮುಕ್ತಾಯಗೊಂಡಿತು. ಪಂದ್ಯದಲ್ಲಿ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡದ ಆಟಗಾರರಿಬ್ಬರ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಭಾರತದ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಕಿಡಿಕಾರಿದ್ದಾರೆ.
ಶಾರ್ದೂಲ್-ಪ್ರಸಿದ್ಧ್ ವಿರುದ್ಧ ಡಿಕೆ ಕಿಡಿ
ಆಲ್ರೌಂಡರ್ ಶಾರ್ದೂಲ್ ಠಾಕೂರ್ ಮತ್ತು ಪದಾರ್ಪಣೆ ಆಟಗಾರ ಪ್ರಸಿದ್ಧ್ ಕೃಷ್ಣ ಅವರ ಕಳಪೆ ಬೌಲಿಂಗ್ ಪ್ರದರ್ಶನದ ವಿರುದ್ಧ ಕಾರ್ತಿಕ್ ಕಿಡಿಕಾರಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರು, ಈ ಇಬ್ಬರ ಮೇಲೆ ನಿಜವಾಗಲೂ ಕರುಣೆ ತೋರಿದರು ಎಂದು ಹೇಳಿದ್ದಾರೆ. ಶಾರ್ದೂಲ್ ಠಾಕೂರ್ 19 ಓವರ್‌ಗಳಲ್ಲಿ 101 ರನ್ ನೀಡಿದರೆ, ಪ್ರಸಿದ್ಧ್ 20 ಓವರ್‌ಗಳಲ್ಲಿ 93 ರನ್ ನೀಡಿ ತಲಾ ಒಂದು ವಿಕೆಟ್ ಪಡೆದರು. ತಂಡದ ಸೋಲಿನಲ್ಲಿ ಇವರ ಕಳಪೆ ಪ್ರದರ್ಶನವೂ ಕಾರಣವಾಯಿತು ಎಂದು ಹೇಳಿದ್ದಾರೆ.
‘ಪ್ರಸಿದ್ಧ್ಗೆ ಅನುಭವದ ಕೊರತೆ’
ಕ್ರಿಕ್‌ಬಝ್ ಜೊತೆಗಿನ ಸಂವಾದದಲ್ಲಿ ದಿನೇಶ್ ಕಾರ್ತಿಕ್, ಈ ಬಗ್ಗೆ ಮಾತನಾಡಿದ್ದಾರೆ. ಪ್ರಸಿದ್ಧ್ ಕೃಷ್ಣ ಮತ್ತು ಶಾರ್ದೂಲ್ ಇಬ್ಬರಿಂದಲೂ ಇದು ಸಾಮಾನ್ಯ ಪ್ರದರ್ಶನವಾಗಿದೆ ಎಂದು ಹೇಳಿದರು. ಪ್ರಸಿದ್ಧ್ ಕೃಷ್ಣ ಅವರು ಹೆಚ್ಚಿನ ಬೌಂಡರಿಗಳನ್ನು ಬಿಟ್ಟು ಕೊಟ್ಟರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತಿದೆ ಎಂಬುದು ಅವರ ಬೌಲಿಂಗ್ನಲ್ಲಿ ತಿಳಿಯುತ್ತದೆ ಎಂದು ಅವರು ಹೇಳಿದ್ದಾರೆ.
‘ಶಾರ್ದೂಲ್ ತೀರಾ ಸಾಧಾರಣ ಪ್ರದರ್ಶನ’
ಶಾರ್ದೂಲ್ ಮತ್ತು ಪ್ರಸಿದ್ಧ್ ಖಂಡಿತವಾಗಿಯೂ ತಮ್ಮ ಆಟದ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಶನ್ನಲ್ಲಿ ಈ ಇಬ್ಬರನ್ನು ಯುವ ಬೌಲರ್ಗಳು ಎಂದು ಹೇಳಿದ್ದು ನೋಡಿದರೆ ರೋಹಿತ್ ಎಷ್ಟು ಕರುಣಾಮಯಿ ಎಂಬುದು ತಿಳಿಯಿತು. ಇದೇ ಪಿಚ್ನಲ್ಲಿ ಸೌತ್ ಆಫ್ರಿಕಾದಲ್ಲಿ 2021-2022ರ ಸರಣಿಯಲ್ಲೂ ಆಡಿದ್ದ ಶಾರ್ದೂಲ್, ಅದ್ಭುತ ಪ್ರದರ್ಶನ ತೋರಿದ್ದರು. ಆದರೆ ಈ ಬಾರಿ ತೀರಾ ಸಾಧಾರಣ ಪ್ರದರ್ಶನವಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಿಕ್ಕ ಅವಕಾಶ ಬಿಡಬಾರದು ಎಂದ ಡಿಕೆ
ಪ್ರಸಿದ್ಧ್ ಕೃಷ್ಣ ಅವರು ಯುವ ಬೌಲರ್ ಆಗಿದ್ದು, ಅವರಿಗೆ ಹೆಚ್ಚಿನ ಪ್ರಥಮ ದರ್ಜೆ ಅನುಭವ ಇಲ್ಲ ಎಂಬುದನ್ನು ತೋರಿಸುತ್ತದೆ. ತಾನೆಸೆದ ಒಂದೊಂದು ಓವರ್ನಲ್ಲೂ ಒಂದಕ್ಕಿಂತ ಹೆಚ್ಚು ಬೌಂಡರಿಗಳನ್ನು ನೀಡಿದ್ದಾರೆ. ಬ್ಯಾಟ್ಸ್ಮನ್ಗೆ ಯಾವುದೇ ನಿಯಂತ್ರಣ ಹೇರುವ ಯತ್ನ ನಡೆಸಲಿಲ್ಲ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಎಂದಿಗೂ ಉತ್ತಮ ಸಂಕೇತವಲ್ಲ. ಸಿಕ್ಕ ಅವಕಾಶದಲ್ಲಿ ಖಡಕ್ ಬೌಲಿಂಗ್ ನಡೆಸಿ ಮುಂದಿನ ಸರಣಿಗಳಲ್ಲೂ ತಂಡದ ಭಾಗವಾಗುವಂತೆ ನೋಡಿಕೊಳ್ಳಬೇಕು ಎಂದು ಕಾರ್ತಿಕ್ ಸಲಹೆ ನೀಡಿದ್ದಾರೆ.
‘ಶಮಿ ಇಲ್ಲದ ಬೌಲಿಂಗ್ ವಿಭಾಗ ದುರ್ಬಲ’
ಗಾಯಗೊಂಡಿರುವ ಮೊಹಮ್ಮದ್ ಶಮಿ ಇಲ್ಲದ ಭಾರತದ ವೇಗದ ಬೌಲಿಂಗ್ ವಿಭಾಗ ಅತ್ಯಂತ ದುರ್ಬಲವಾಗಿ ಕಾಣುತ್ತದೆ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯಪಟ್ಟಿದ್ದಾರೆ. ಉಮೇಶ್ ಯಾದವ್, ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಅವರಂತಹ ಸ್ಥಿರ ಪ್ರದರ್ಶನ ನೀಡುವವರನ್ನು ಹೊಂದಿದ್ದರು. ಆದರೀಗ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವವರು ದೊಡ್ಡಮಟ್ಟದಲ್ಲಿ ಕಾಣೆಯಾಗಿರುವುದು ಕಂಡು ಬಂತು ಎಂದು ಅವರು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಲ್ಲಿ ಬೌಲಿಂಗ್ ದಾಳಿ ಅದ್ಭುತವಾಗಿದೆ ಎಂದು ಭಾರತ ಹೆಮ್ಮೆಪಡುತ್ತಿದೆ. ಆದರೆ ಮೊಹಮ್ಮದ್ ಶಮಿ ಇಲ್ಲದೆ ಟೀಮ್ ಇಂಡಿಯಾ ಅಟ್ಯಾಕಿಂಗ್ ಬೌಲಿಂಗ್ ನಡೆಸಿದ ಉದಾಹರಣೆಯೇ ಇಲ್ಲ. ಮೊದಲು ಉಮೇಶ್ ಯಾದವ್, ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಇದ್ದರು. ಕನಿಷ್ಠ ಸ್ಥಿರತೆಯನ್ನು ತೋರಿಸುತ್ತಿದ್ದರು. ಆದರೀಗ ಮಿಸ್ ಆದಂತೆ ಕಾಣುತ್ತಿದೆ ಎಂದು ಕಾರ್ತಿಕ್ ಹೇಳಿದ್ದಾರೆ.