ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿಗೆ ಆಘಾತ; ಡಬ್ಲ್ಯೂಪಿಎಲ್ 2024ರಿಂದ ಹೊರಬಿದ್ದ ಕನಿಕಾ ಅಹುಜಾ
Feb 19, 2024 07:02 PM IST
ಡಬ್ಲ್ಯೂಪಿಎಲ್ 2024ರಿಂದ ಹೊರಬಿದ್ದ ಕನಿಕಾ ಅಹುಜಾ
- Kanika Ahuja: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್‌ರೌಂಡರ್ ಕನಿಕಾ ಅಹುಜಾ ಗಾಯದ ಕಾರಣದಿಂದಾಗಿ ಡಬ್ಲ್ಯೂಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸದ್ಯ ಅಹುಜಾ ಅವರ ಬದಲಿಯಾಗಿ ಶ್ರದ್ದಾ ಪೋಖರ್ಕರ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ತಂಡಕ್ಕೆ ಕರೆಸಿಕೊಂಡಿದೆ. ಈ ಬಾರಿ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಶ್ರದ್ದಾ ಆಡಲಿದ್ದಾರೆ.
ಮಹಿಳಾ ಪ್ರೀಮಿಯರ್ ಲೀಗ್ (WPL) 2024ರ ಆವೃತ್ತಿಯ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ಕನಿಕಾ ಅಹುಜಾ ಗಾಯದ ಕಾರಣದಿಂದ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅಹುಜಾ ಅನುಪಸ್ಥಿತಿಯಿಂದಾಗಿ ತಂಡದ ಲೈನ್‌ಅಪ್‌ನಲ್ಲಿ ಮತ್ತೆ ಸಮಸ್ಯೆಯಾಗಲಿದೆ. ಇದು ನಾಯಕಿ ಸ್ಮೃತಿ ಮಂಧಾನ ಹಾಗೂ ತಂಡದ ಮ್ಯಾನೇಜ್‌ಮೆಂಟ್‌ಗೆ ಹೊಸ ಸವಾಲಾಗಲಿದೆ.
ಈಗಾಗಲೇ ಟೂರ್ನಿಯ ಆರಂಭಕ್ಕೂ ಮುನ್ನವೇ ತಂಡದ ಸ್ಟಾರ್ ಆಟಗಾರ್ತಿ ಹೆದರ್ ನೈಟ್ ಹೊರಬಿದ್ದಿದ್ದಾರೆ. ಇದೀಗ ಮತ್ತೊಂದು ಪ್ರಮುಖ ಆಟಗಾರ್ತಿಯ ಅನುಪಸ್ಥಿತಿಯನ್ನು ತಂಡ ಎದುರಿಸಬೇಕಾಗಿದೆ.
ಸದ್ಯ ಅಹುಜಾ ಅವರ ಬದಲಿಯಾಗಿ, ಶ್ರದ್ದಾ ಪೋಖರ್ಕರ್ ಅವರನ್ನು ಫ್ರಾಂಚೈಸಿಯು ತಂಡಕ್ಕೆ ಕರೆಸಿಕೊಂಡಿದೆ. ಮಹಾರಾಷ್ಟ್ರದವರಾದ ಪೋಖರ್ಕರ್, ಎಡಗೈ ವೇಗದ ಬೌಲರ್. 10 ಲಕ್ಷ ರೂಪಾಯಿ ಮೀಸಲು ಬೆಲೆಯಲ್ಲಿ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ.
ಇದನ್ನೂ ಓದಿ | ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಣಕ್ಕಿಳಿಸುವ ಪ್ಲೇಯಿಂಗ್ 11 ಹೇಗಿರಲಿದೆ; ಆರ್‌ಸಿಬಿ ವೇಳಾಪಟ್ಟಿ, ತಂಡ ಇಲ್ಲಿದೆ ನೋಡಿ
ಡಬ್ಲ್ಯೂಪಿಎಲ್‌ನ ಮೊದಲ ಹಾಗೂ ಉದ್ಘಾಟನಾ ಋತುವಿನಲ್ಲಿ, ಆರ್‌ಸಿಬಿ ನಿರಾಶಾದಾಯಕ ಪ್ರದರ್ಶನ ನೀಡಿತ್ತು. ಮೊದಲ ಆವೃತ್ತಿಗಿಂತ ಈ ಬಾರಿ ತಂಡ ಮತ್ತಷ್ಟು ಬಲಿಷ್ಠವಾಗಿದೆ. 2023ರಲ್ಲಿ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾಗಿದ್ದ ತಂಡವು, ಈ ಬಾರಿ ಫೆಬ್ರವರಿ 24ರಂದು ತನ್ನ ತವರು ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಜ್ ವಿರುದ್ಧ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.
ಇದನ್ನೂ ಓದಿ: ಮಹಿಳಾ ಪ್ರೀಮಿಯರ್ ಲೀಗ್ ಯಾವ ಚಾನೆಲ್ನಲ್ಲಿ ನೇರಪ್ರಸಾರ; ರೂಪಾಯಿ ಖರ್ಚಿಲ್ಲದೆ ಉಚಿತ ವೀಕ್ಷಣೆ ಹೇಗೆ? ಇಲ್ಲಿದೆ ವಿವರ
ಕಳೆದ ಋತುವಿನಲ್ಲಿ ತಂಡವು ಎಂಟು ಪಂದ್ಯಗಳಲ್ಲಿ ಕೇವಲ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳನ್ನು ಮಾತ್ರ ಗಳಿಸಿತ್ತು. ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಡೆದಿತ್ತು. ಈ ಬಾರಿ ವಿಮೆನ್ಸ್ ಪ್ರೀಮಿಯರ್ ಲೀಗ್ ಫೆಬ್ರುವರಿ 23ರಿಂದ ಆರಂಭವಾಗಲಿದೆ. ಬೆಂಗಳೂರು ತಂಡವು ಫೆಬ್ರವರಿ 24ರಿಂದ ಅಭಿಯಾನ ಆರಂಭಿಸಲಿದೆ.
ಆರ್‌ಸಿಬಿ ತಂಡದ ಪಂದ್ಯಗಳ ವೇಳಾಪಟ್ಟಿ
- ಫೆಬ್ರವರಿ 24- ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಯುಪಿ ವಾರಿಯರ್ಸ್ -ಬೆಂಗಳೂರು
- ಫೆಬ್ರವರಿ 27 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಜೈಂಟ್ಸ್ -ಬೆಂಗಳೂರು
- ಫೆಬ್ರವರಿ 29 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್ -ಬೆಂಗಳೂರು
- ಮಾರ್ಚ್ 2 - ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಮುಂಬೈ ಇಂಡಿಯನ್ಸ್ -ಬೆಂಗಳೂರು
- ಮಾರ್ಚ್ 4 - ಯುಪಿ ವಾರಿಯರ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ಬೆಂಗಳೂರು
- ಮಾರ್ಚ್ 6 - ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ದೆಹಲಿ
- ಮಾರ್ಚ್ 10 - ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ದೆಹಲಿ
- ಮಾರ್ಚ್ 12 - ಮುಂಬೈ ಇಂಡಿಯನ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು -ದೆಹಲಿ
ಇದನ್ನೂ ಓದಿ | ಬುಮ್ರಾ, ಪಾಟೀದಾರ್ ಔಟ್; ಕೆಎಲ್ ರಾಹುಲ್ ಇನ್; ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್‌ಗೆ ಭಾರತ ಸಂಭಾವ್ಯ ತಂಡ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ಆಶಾ ಶೋಭನಾ, ದಿಶಾ ಕಸತ್, ಎಲ್ಲಿಸ್ ಪೆರ್ರಿ, ನಡಿನ್ ಡಿ ಕ್ಲರ್ಕ್, ಇಂದ್ರಾಣಿ ರಾಯ್, ಶ್ರದ್ದಾ ಪೋಖರ್ಕರ್, ರೇಣುಕಾ ಸಿಂಗ್, ರಿಚಾ ಘೋಷ್, ಶ್ರೇಯಾಂಕಾ ಪಾಟೀಲ್, ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಜಾರ್ಜಿಯಾ ವೇರ್‌ಹ್ಯಾಮ್, ಕೇಟ್ ಕ್ರಾಸ್, ಏಕ್ತಾ ಬಿಷ್ತ್, ಶುಭಾ ಸತೀಶ್, ಸಬ್ಬಿನೇನಿ ಮೇಘನಾ, ಸೋಫಿ ಮೊಲಿನೆಕ್ಸ್, ಸಿಮ್ರಾನ್ ಬಹದ್ದೂರ್.
(This copy first appeared in Hindustan Times Kannada website. To read more like this please logon to kannada.hindustantimes.com)