ಯುಪಿ ವಾರಿಯರ್ಸ್ಗೆ 23 ರನ್ಗಳ ಸೋಲುಣಿಸಿ 3ನೇ ಜಯ ಸಾಧಿಸಿದ ಆರ್ಸಿಬಿ; ಬೆಂಗಳೂರಿಗೆ ಗೆಲುವಿನ ವಿದಾಯ ಹೇಳಿದ ಮಂಧಾನ ಪಡೆ
Mar 04, 2024 11:18 PM IST
ಯುಪಿ ವಾರಿಯರ್ಸ್ಗೆ 23 ರನ್ಗಳ ಸೋಲುಣಿಸಿ 3ನೇ ಜಯ ಸಾಧಿಸಿದ ಆರ್ಸಿಬಿ
- UP Warriorz vs Royal Challengers Bangalore: ಡಬ್ಲ್ಯುಪಿಎಲ್ನ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್ಗಳ ಭರ್ಜರಿ ಗೆಲುವು ಸಾಧಿಸಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತವರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ಗೆಲುವಿನೊಂದಿಗೆ ಬೆಂಗಳೂರು ಲೆಗ್ ಪಂದ್ಯಗಳಿಗೆ ಗುಡ್ಬೈ ಹೇಳಿದೆ. ಡಬ್ಲ್ಯುಪಿಎಲ್ನ 11ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಆರ್ಸಿಬಿ 23 ರನ್ ಗೆಲುವು ಸಾಧಿಸಿದೆ. ಇದು ಟೂರ್ನಿಯಲ್ಲಿ ಸ್ಮೃತಿ ಮಂಧಾನ ಪಡೆ ದಕ್ಕಿದ ಮೂರನೇ ಜಯವಾಗಿದೆ. ಸತತ ಎರಡು ಸೋಲುಗಳ ಬಳಿಕ ಗೆಲುವಿನ ಹಳಿಗೆ ಮರಳಿದ್ದು, ಪ್ಲೇ ಆಫ್ಗೇರುವ ಕನಸನ್ನು ನನಸಾಗಿಕೊಳ್ತಿದೆ.
ಮೊದಲು ಬ್ಯಾಟಿಂಗ್ ನಡೆಸಿದ ರೆಡ್ ಆರ್ಮಿ, ಭರ್ಜರಿ ಆರಂಭ ಪಡೆಯಿತು. ಸಬ್ಬಿನೇನಿ ಮೇಘನಾ ಮತ್ತು ಸ್ಮೃತಿ ಮಂಧಾನ ಬಿರುಸಿನ ಆರಂಭವನ್ನು ಒದಗಿಸಿದರು. ಪರಿಣಾಮ ಮೊದಲ ವಿಕೆಟ್ಗೆ 51 ರನ್ಗಳು ಹರಿದು ಬಂದವು. ಆದರೆ ಮೇಘನಾ 21 ಎಸೆತಗಳಲ್ಲಿ 5 ಬೌಂಡರಿ ಸಹಿತ 28 ರನ್ ಚಚ್ಚಿ ಅಂಜಲಿ ಸರ್ವಾನಿ ಬೌಲಿಂಗ್ನಲ್ಲಿ ಔಟಾದರು. ಆ ಬಳಿಕ ಜೊತೆಯಾದ ಸ್ಮೃತಿ ಮಂಧಾನ ಮತ್ತು ಎಲಿಸ್ ಪೆರ್ರಿ ಆರ್ಸಿಬಿ ದೊಡ್ಡ ಮೊತ್ತ ಕಲೆ ಹಾಕಲು ಸಹಾಯ ಮಾಡಿದರು. ಇಬ್ಬರು ಸಹ ಅರ್ಧಶತಕ ಸಿಡಿಸಿದರು.
ಆರಂಭದಿಂದಲೂ ಸ್ಪೋಟಕ ಆಟವಾಡುತ್ತಿದ್ದ ಮಂಧಾನ, ಯುಪಿ ವಾರಿಯರ್ಸ್ ಬೌಲರ್ಗಳ ಮೇಲೆ ಸವಾರಿ ಮಾಡಿದರು. ಅಲ್ಲದೆ, ಪೆರ್ರಿ ತಾನೆದುರಿಸಿದ ಮೊದಲ ಎಸೆತದಲ್ಲೇ ಬೌಂಡರಿ ಸಿಡಿಸಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದರು. ಈ ಜೋಡಿ ಎರಡನೇ ವಿಕೆಟ್ಗೆ 95 ರನ್ಗಳು ಹರಿದು ಬಂದವು. ಇದೇ ವೇಳೆ ಸ್ಮೃತಿ ತನ್ನ ಎರಡನೇ ಅರ್ಧಶತಕವನ್ನು ಪೂರೈಸಿ ಶತಕದತ್ತ ಹೆಜ್ಜೆ ಹಾಕಿದರು. ಹಾಫ್ ಸೆಂಚುರಿ ನಂತರವೂ ಬೌಂಡರಿ-ಸಿಕ್ಸರ್ಗಳ ಬೆಂಡೆತ್ತಿದ ಮಂಧಾನ 50 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 80 ರನ್ ಗಳಿಸಿ ದೀಪ್ತಿ ಶರ್ಮಾ ಬೌಲಿಂಗ್ನಲ್ಲಿ ಔಟಾದರು.
ಮತ್ತೊಂದೆಡೆ ಸ್ಮೃತಿ ಔಟಾದ ಬೆನ್ನಲ್ಲೇ ಬೌಲರ್ಗಳ ಮೇಲೆ ಚಾರ್ಜ್ ಮಾಡಲು ಶುರುವಿಟ್ಟ ಪೆರ್ರಿ ಕೊನೆಯಲ್ಲಿ ಸಿಕ್ಸರ್ಗಳ ಮಳೆ ಸುರಿಸಿದರು. 37 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್ಗಳ ಸಹಿತ ಭರ್ಜರಿ 58 ರನ್ ಚಚ್ಚಿದರು. ಕೊನೆಯಲ್ಲಿ 10 ಎಸೆತಗಳಲ್ಲಿ 1 ಸಿಕ್ಸರ್, 2 ಬೌಂಡರಿ ಸಹಿತ ಅಜೇಯ 21 ರನ್ ಬಾರಿಸಿದರು. ಅಂತಿಮವಾಗಿ ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ಗಳ ಬೃಹತ್ ಮೊತ್ತ ಪೇರಿಸಿತು. ಆದರೆ, ಈ ಗುರಿ ಬೆನ್ನಟ್ಟಿದ ಯುಪಿ ವಾರಿಯರ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 178 ರನ್ಗಳಿಸಿ 23 ರನ್ಗಳ ಸೋಲನುಭವಿಸಿತು.
ಅಲಿಸಾ ಹೀಲಿ ಹೋರಾಟ ವ್ಯರ್ಥ
ಬೃಹತ್ ಗುರಿ ಬೆನ್ನಟ್ಟಿದ ಯುಪಿ ಭರ್ಜರಿ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್ಗೆ 4.2 ಓವರ್ಗಳಲ್ಲಿ 47 ರನ್ ಕಲೆ ಹಾಕಿತು. ಆದರೆ, ಕಿರಣ್ ನವ್ಗಿರೆ 18 ರನ್ ಗಳಿಸಿ ಔಟಾದರು. ಬಳಿಕ ಚಾಮರಿ ಅಟ್ಟಾಪಟ್ಟು ಔಟಾಗಿ ನಿರಾಸೆ ಮೂಡಿಸಿದರು. ಆದರೆ ಅಲಿಸಾ ಹೀಲಿ ಏಕಾಂಗಿ ಹೋರಾಟ ನಡೆಸಿದರು. 33 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಿತ 58 ರನ್ ಗಳಿಸಿದರು. ಆದರೆ ಆರ್ಸಿಬಿ ಬೌಲರ್ಗಳು ಆಗಾಗ್ಗೆ ವಿಕೆಟ್ ಪಡೆಯುವ ಮೂಲಕ ಎದುರಾಳಿ ತಂಡಕ್ಕೆ ಆಘಾತ ನೀಡಿದರು. ದೀಪ್ತಿ ಶರ್ಮಾ 33 ರನ್, ಪೂನಂ ಖೇಮ್ನಾರ್ 31 ರನ್ ಗಳಿಸಿ ಪೈಪೋಟಿ ನೀಡಿದರು.
ಅಂತಿಮವಾಗಿ ಯುಪಿ ವಾರಿಯರ್ಸ್ 8 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಲಷ್ಟೇ ಶಕ್ತವಾಯಿತು. ಆರ್ಸಿಬಿ ಪರ ಸೋಫಿ ಡಿವೈನ್, ಜಾರ್ಜಿಯಾ ವೇರ್ಹ್ಯಾಮ್, ಸೋಫಿ ಮೊಲಿನಿಕ್ಸ್, ಆಶಾ ಶೋಭಾನಾ ತಲಾ 2 ವಿಕೆಟ್ ಪಡೆದರು. ಈ ಗೆಲುವಿನೊಂದಿಗೆ ಆರ್ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿದೆ. ಸೋತ ಯುಪಿ ವಾರಿಯರ್ಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.