1983ರಲ್ಲಿ ವಿಶ್ವಕಪ್ ಗೆದ್ದ ಭಾರತದ ಆಟಗಾರರಿಗೆ ಸಿಗುತ್ತಿದ್ದ ವೇತನ ಈಗಿನ ದಿನಗೂಲಿಗಿಂತಲೂ ಕಡಿಮೆ!
Aug 27, 2023 07:05 AM IST
1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡ.
- 1983 World Cup: 1983ರ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರಿಗೆ ವೇತನ ಎಷ್ಟೆಂದು ನೀವೊಮ್ಮೆ ಊಹಿಸಿ. ಆಟಗಾರರಿಗೆ ಸಿಗುತ್ತಿದ್ದ ಸಂಭಾವನೆ ಇಂದಿನ ದಿನಗೂಲಿಗಿಂತಲೂ ಕಡಿಮೆ.
1983ರ ಏಕದಿನ ವಿಶ್ವಕಪ್ ಭಾರತದ ಪಾಲಿಗೆ ಒಂದು ಅವಿಸ್ಮರಣೀಯ. ಇಡೀ ಜಗತ್ತಿನ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿದ್ದ ಟೀಮ್ ಇಂಡಿಯಾ, ಚೊಚ್ಚಲ ಮತ್ತು ಐತಿಹಾಸಿಕ ಟ್ರೋಫಿ ಎತ್ತಿ ಹಿಡಿದಿತ್ತು. ಇಂಗ್ಲೆಂಡ್ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಟ್ರೋಫಿ ಎತ್ತಿಹಿಡಿದ ಭಾರತದ ಸಂಭ್ರಮ ಮುಗಿಲು ಮುಟ್ಟಿತ್ತು. ಗೆಲುವು ಕ್ರಿಕೆಟ್ ದಿಗ್ಗಜರನ್ನೇ ಒಂದು ಕ್ಷಣ ನಿಬ್ಬೆರಗಾಗಿಸಿತ್ತು. ಇಂಥ ಅವಿಸ್ಮರಣೀಯ ಗೆಲುವು ಸಾಧಿಸಿ ಟೀಮ್ ಇಂಡಿಯಾ, ಈ ವರ್ಷದ ಜೂನ್ 25ಕ್ಕೆ 40 ವರ್ಷ ಪೂರ್ಣಗೊಂಡಿದೆ.
1975, 1979ರ ವಿಶ್ವಕಪ್ಗಳಲ್ಲಿ ಸತತ ಚಾಂಪಿಯನ್ ಆಗಿದ್ದ ಬಲಿಷ್ಠ ವೆಸ್ಟ್ ಇಂಡೀಸ್ ತಂಡವೇ 1983ರ ವಿಶ್ವಕಪ್ನಲ್ಲೂ ಫೈನಲ್ ತಲುಪಿತ್ತು. ಕಳೆದ ಎರಡು ವಿಶ್ವಕಪ್ಗಳಲ್ಲೂ ಸತತ ಸೋಲಿನಿಂದ ಕಂಗೆಟ್ಟಿದ್ದ ಭಾರತ ತಂಡ, ಅಚ್ಚರಿ-ಅನಿರೀಕ್ಷಿತ ಎಂಬಂತೆ ಫೈನಲ್ ತಲುಪಿತ್ತು. ಫೈನಲ್ಗೇರಿದ್ದು ಅಲ್ಲದೆ, ಬಲಿಷ್ಠ ವಿಂಡೀಸ್ಗೇ ಮಣ್ಣು ಮುಕ್ಕಿಸಿತ್ತು. ಆದರೆ, ಅಂದು ಭಾರತೀಯ ಆಟಗಾರರಿಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೇ? ಅಂದು ಈಗಿನಷ್ಟು ಬಿಸಿಸಿಐ ಶ್ರೀಮಂತವಾಗಿರಲಿಲ್ಲ.
ಅಂದು ಇಂದಿನ ದಿನಗೂಲಿಗಿಂತಲೂ ಕಡಿಮೆ
1983ರ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರಿಗೆ ವೇತನ ಎಷ್ಟೆಂದು ನೀವೊಮ್ಮೆ ಊಹಿಸಿ. ಪ್ರಸ್ತುತ ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ. ಬಿಸಿಸಿಐ ವಾರ್ಷಿಕ ಆದಾಯ ಸಾವಿರಾರು ಕೋಟಿ. ಕೆಲ ಆಟಗಾರರಿಗೆ 7 ಕೋಟಿ ವೇತನ ನೀಡುತ್ತಿದೆ. ಟೆಸ್ಟ್ ಪಂದ್ಯದ ಶುಲ್ಕ 15 ಲಕ್ಷ. ಏಕದಿನ ಪಂದ್ಯದ ಶುಲ್ಕ 6 ಲಕ್ಷ, ಟಿ20 ಕ್ರಿಕೆಟ್ ಶುಲ್ಕ 3 ಲಕ್ಷ. ಅಲ್ಲದೆ, ಐಪಿಎಲ್ನಿಂದಲೂ ಸಾವಿರಾರು ಕೋಟಿ ದುಡಿಯುತ್ತಿದೆ. ಆದರೆ ಅಂದು ಇಷ್ಟು ದೊಡ್ಡ ಮೊತ್ತವೇ ಇರಲಿಲ್ಲ ಬಿಸಿಸಿಐ ಬಳಿ.
40 ವರ್ಷಗಳ ಹಿಂದಿನ ಲೆಕ್ಕಾಚಾರಕ್ಕೆ ಹೋಲಿಸಿದರೆ, ಇಂದಿನ ದಿನಗೂಲಿಗಿಂತಲೂ ಕಡಿಮೆ. ಭಾರತೀಯ ಆಟಗಾರರಿಗೆ ಮೂರು ದಿನಗಳವರೆಗೆ 200 ರೂಪಾಯಿನಂತೆ ದೈನಂದಿನ ಭತ್ಯೆ ಸಿಗುತ್ತಿತ್ತಂತೆ. ಒಟ್ಟು 600 ರೂಪಾಯಿ ವೇತನ ನೀಡಲಾಯಿತು. ಅದರ ಮೇಲೆ ಆಟಗಾರರ ಪಂದ್ಯದ ಶುಲ್ಕವು 1500 ರೂಪಾಯಿ ಆಗಿತ್ತು. ಕೊನೆಗೆ ಆಟಗಾರರು ನಿಗದಿಪಡಿಸಿದ 2100 ರೂಪಾಯಿ ವೇತನ ಪಡೆದುಕೊಂಡರು. ಆದರೆ ಈ ವೇತನವನ್ನೂ ಆ ಕಾಲದಲ್ಲಿ ದೊಡ್ಡ ಮೊತ್ತವೆಂದೇ ಪರಿಗಣಿಸಲಾಗಿತ್ತು. ಭಾರತೀಯ ಆಟಗಾರರು ಈಗ ಕೋಟಿಗಳಲ್ಲಿ ಸಂಭಾವನೆ ಪಡೆಯುತ್ತಿದ್ದಾರೆ.
ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ತಂಡದಲ್ಲಿ ಕ್ಯಾಪ್ಟನ್ ಕಪಿಲ್ ದೇವ್, ಕೃಷ್ಣಮಾಚಾರಿ ಶ್ರೀಕಾಂತ್, ಮೊಹಿಂದರ್ ಅಮರನಾಥ್, ಯಶ್ ಪಾಲ್ ಶರ್ಮಾ, ರೋಜರ್ ಬಿನ್ನಿ (ಪ್ರಸ್ತುತ ಬಿಸಿಸಿಐ ಅಧ್ಯಕ್ಷ), ಸೈಯದ್ ಕಿರ್ಮಾನಿ, ಬಲ್ವಿಂದರ್ ಸಂಧು, ಕೀರ್ತಿ ಆಜಾದ್, ಮದನ್ ಲಾಲ್, ರವಿ ಶಾಸ್ತ್ರಿ, ಸಂದೀಪ್ ಪಾಟೀಲ್, ಸುನಿಲ್ ಗವಾಸ್ಕರ್, ದಿಲೀಪ್ ವೆಂಗ್ಸರ್ಕರ್ ಮತ್ತು ಸುನಿಲ್ ವಲ್ಸನ್ ಆಡಿದ್ದರು.
ಸಣ್ಣ ಬಹುಮಾನ ಮೊತ್ತ
ಸದ್ಯದ ಮಟ್ಟಿಗೆ ಭಾರತದ ಆಟಗಾರರು ಕೋಟಿ ಕೋಟಿ ವೇತನ ಪಡೆಯುತ್ತಿದ್ದಾರೆ ಅಂದರೆ ಅದಕ್ಕೆ ಕಾರಣ, 1983ರ ವಿಶ್ವಕಪ್ ಗೆಲುವಿನ ಬಳಿಕ ಆದ ಬದಲಾವಣೆ ಎಂದರೆ ತಪ್ಪಾಗಲಾರದು. 83ರ ವಿಶ್ವಕಪ್ ಗೆದ್ದ ತಂಡದ ಆಟಗಾರರ ವೇತನ ಸಾವಿರದ ಲೆಕ್ಕಾಚಾರದಲ್ಲೇ ಇತ್ತು. ವಿಶ್ವಕಪ್ ಪ್ರಾಯೋಜಕ ಪ್ರುಡೆನ್ಶಿಯಲ್ ಕಂಪನಿಯಿಂದ 20 ಸಾವಿರ ಪೌಂಡ್ಸ್ ಬಹುಮಾನ ಸಿಕ್ಕಿತ್ತು. ಆಟಗಾರರಿಗೆ ಬಹುಮಾನ ವಿತರಿಸಲು ಬಿಸಿಸಿಐ ಅಷ್ಟೊಂದು ಮೊತ್ತ ಇರಲಿಲ್ಲ.
ಹಾಗಾಗಿ, ಬಹುಮಾನ ವಿತರಿಸಲು ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಸಾರಥ್ಯದಲ್ಲಿ ಅಂದು ಸಂಗೀತ ಕಾರ್ಯಕ್ರಮವನ್ನು ದೆಹಲಿಯಲ್ಲಿ ಆಯೋಜಿಸಿದ್ದ ಬಿಸಿಸಿಐ ಹಣ ಸಂಗ್ರಹಿಸಿತ್ತು. ಈ ಸಂಗೀತ ಕಾರ್ಯಕ್ರಮದಿಂದ 20 ಲಕ್ಷ ದೇಣಿಗೆ ಸಂಗ್ರಹವಾಗಿತ್ತು. ಬಳಿಕ ಎಲ್ಲ ಆಟಗಾರರಿಗೆ ತಲಾ 1 ಲಕ್ಷ ರೂ. ಬಹುಮಾನ ವಿತರಿಸಿತ್ತು. ಕಪಿಲ್ ದೇವ್ ಸೇರಿದಂತೆ ಕೆಲ ಆಟಗಾರರಿಗೆ ಅಂದು, ವಿವಿಧ ಜಾಹೀರಾತಿಗಳಿಂದ 30 ರಿಂದ 50 ಸಾವಿರದವರೆಗೂ ಮೊತ್ತದ ಒಪ್ಪಂದಗಳು ಸಿಕ್ಕಿದ್ದವು.
3ನೇ ವಿಶ್ವಕಪ್ ಗೆಲ್ಲೋಕೆ ಪಣ!
ಇದೇ ವರ್ಷ ಅಕ್ಟೋಬರ್ 5ರಿಂದ ಭಾರತದಲ್ಲಿ ಏಕದಿನ ವಿಶ್ವಕಪ್ ಜಾತ್ರೆ ಶುರುವಾಗಲಿದೆ. 1983ರ ಬಳಿಕ ಟೀಮ್ ಇಂಡಿಯಾ 2011ರಲ್ಲಿ ಏಕದಿನ ವಿಶ್ವಕಪ್ ಜಯಿಸಿತ್ತು. ಎರಡು ಏಕದಿನ ವಿಶ್ವಕಪ್ಗಳನ್ನು ಎದುರಿಸಿರುವ ಭಾರತ ಸೆಮಿಫೈನಲ್ನಲ್ಲೇ ಮುಗ್ಗರಿಸಿದೆ. ಇದೀಗ ತವರಿನಲ್ಲಿ ನಡೆಯುವ ಈ ಮೆಗಾ ಈವೆಂಟ್ನಲ್ಲಿ ಗೆದ್ದು ಭಾರತದ ಮುಕುಟಕ್ಕೆ 3ನೇ ವಿಶ್ವಕಪ್ ಮುಡಿಗೇರಿಸಲು ರೋಹಿತ್ ಶರ್ಮಾ ಪಡೆ ಸಜ್ಜಾಗಿದೆ. ಭಾರತ ತಂಡವು ಅದ್ಭುತ ಪ್ರದರ್ಶನ ನೀಡಲಿ, ಮತ್ತೊಂದು ವಿಶ್ವಕಪ್ಗೆ ಮುತ್ತಿಕ್ಕಲಿ ಎನ್ನುವುದೇ ನಮ್ಮೆಲ್ಲರ ಆಶಯ.