Shikhar Dhawan: ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಮೌನ ಮುರಿದ ಸ್ಟಾರ್ ಆಟಗಾರ ಶಿಖರ್ ಧವನ್
Aug 13, 2023 10:30 AM IST
ಟೀಂ ಇಂಡಿಯಾದ ಆರಂಭಿಕ ಬ್ಯಾಟರ್ ಶಿಖರ್ ಧವನ್ (ಫೋಟೋ-ಫೈಲ್)
ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿರುವುದಕ್ಕೆ ಗಬ್ಬರ್ ಖ್ಯಾತಿಯ ಆರಂಭಿಕ ಬ್ಯಾಟರ್ ಶಿಖರ್ ಧವನ್ ಬೇಸರ ವ್ಯಕ್ತಪಡಿಸಿದ್ದಾರೆ. ಆಯ್ಕೆಗಾರರು ಹಾಗೂ ಬಿಸಿಸಿಐ ಬಗ್ಗೆ ಏನು ಮಾತನಾಡಿದ್ದಾರೆ ಅನ್ನೋದರ ಕುರಿತ ವರದಿ ಇಲ್ಲಿದೆ.
ಮುಂಬೈ: ಟೀಂ ಇಂಡಿಯಾದ (Team India) ಹಿರಿಯ ಹಾಗೂ ಆರಂಭಿಕ ಬ್ಯಾಟರ್ ಶಿಖರ್ ಧವನ್ (Shikhar Dhawan) ಕಳೆದ ಹಲವು ದಿನಗಳಿಂದ ಬ್ಯಾಟ್ ಹಿಡಿದು ಕ್ರೀಸ್‌ಗೆ ಬರುತ್ತಿಲ್ಲ. ಶತಕ ಸಿಡಿಸಲಿ, ಕ್ಯಾಚ್ ಹಿಡಿಯಲಿ ತೊಡೆ ತಟ್ಟಿ ಮೀಸೆ ತಿರುವುತ್ತಿಲ್ಲ. ಪಂದ್ಯದ ಸಂದರ್ಭದಲ್ಲಿ ಡಿಫರೆಂಟ್ ಆಗಿ ಸಂಭ್ರಮಿಸುವ ಗಬ್ಬರ್ ಖ್ಯಾತಿಯ ಧವನ್ ಫಾರ್ಮ್‌ನಲ್ಲಿರುವಾಗಲೇ ಟೀಂ ಇಂಡಿಯಾದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ.
ಯುವ ಆಟಗಾರರಿಗೆ ಭಾರತ ತಂಡದಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡುತ್ತಿರುವ ಆಯ್ಕೆಗಾರರು ಶಿಖರ್ ಅವರನ್ನು ಸಂಪೂರ್ಣವಾಗಿ ಬದಿಗಿಟ್ಟಿದ್ದಾರೆ. ಉತ್ತಮ ಬ್ಯಾಟಿಂಗ್‌ನೊಂದಿಗೆ ಒಳ್ಳೆಯ ಅಂಕಿಅಂಶಗಳನ್ನು ಹೊಂದಿದ್ದರೂ ಈ ಆರಂಭಿಕನಿಗೆ ಅವಕಾಶವೇ ನೀಡುತ್ತಿಲ್ಲ.
ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಚೀನಾದಲ್ಲಿ ಏಷ್ಯನ್ ಗೇಮ್ಸ್ ನಡೆಯಲಿದೆ. ಈ ಕ್ರೀಡಾಕೂಟಕ್ಕಾಗಿ ಟೀಂ ಇಂಡಿಯಾದ ಎರಡನೇ ತಂಡವನ್ನು ಆಯ್ಕೆ ಮಾಡಲಾಗಿದೆ. ಐಸಿಸಿ ಏಕದಿನ ವಿಶ್ವಕಪ್‌ಗೆ ಯಾರಿಗೆ ಸ್ಥಾನ ಸಿಗುವುದಿಲ್ಲವೋ ಅಂತಹ ಆಟಗಾರರನ್ನು ಏಷ್ಯಾ ಗೇಮ್ಸ್ ಕ್ರೀಡಾ ಕೂಟದಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ. ಆದರೆ ಈ ತಂಡದಲ್ಲೂ ಶಿಖರ್ ಧವನ್ ಸ್ಥಾನ ಪಡೆಯುವಲ್ಲಿ ವಿಫಲವಾಗಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ಶಿಖರ್ ಧವನ್ ನಾಯಕತ್ವದಲ್ಲಿ ಭಾರತ ತಂಡ ಕಣ್ಣಕ್ಕೆ ಇಳಿಯುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಆಯ್ಕೆದಾರರು ಧವನ್ ಅವರಿಗೆ ಮಣೆ ಹಾಕಿಲ್ಲ. ಅಂತಿಮವಾಗಿ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಧವನ್ ಮೌನ ಮುರಿದಿದ್ದು, ಒಂದಷ್ಟು ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಶಿಖರ್ ಧವನ್, ಗುರುವಾರ ಪ್ರಕಟವಾಗಿರುವ ಏಷ್ಯನ್ ಗೇಮ್ಸ್ ತಂಡದಲ್ಲಿ ನನ್ನ ಹೆಸರು ಇಲ್ಲದಿರುವುದು ಆಘಾತ ತಂದಿದೆ ಎಂದು ಹೇಳಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ನನ್ನ ಹೆಸರಿಲ್ಲದಿದ್ದಾಗ ನನಗೆ ಆಘಾತವಾಯಿತು. ಆದರೆ ಆಯ್ಕೆದಾರರು, ಬಿಸಿಸಿಐ ವಿಭಿನ್ನ ಮನಸ್ಥಿತಿ ಹೊಂದಿರುವುದು ತಿಳಿದು ಬಂದಿದೆ. ಇಂತಹ ವಿಷಯಗಳನ್ನು ಒಪ್ಪಿಕೊಳ್ಳಬೇಕು. ನಾಯಕನಾಗಿ ರುತುರಾಜ್ ಗಾಯಕ್ವಾಡ್ ಆಯ್ಕೆಯಾಗಿರುವುದು ಸಂಸತ ತಂದಿದೆ. ಎಲ್ಲರೂ ಯುವ ಆಟಗಾರರು. ಅವರೆಲ್ಲರೂ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು 37 ವರ್ಷದ ಶಿಖರ್ ಧವನ್ ಹೇಳಿದ್ದಾರೆ.
ವಿಜಯ್ ಹಜಾರೆ ಏಕಿದಿನ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ದೇಶಿಯ ಪಂದ್ಯಗಳನ್ನು ಆಡಲು ಬಯಸುವುದಾಗಿ ಶಿಖರ್ ಧವನ್ ಹೇಳಿದ್ದಾರೆ. ಮುಂದಿನ ವರ್ಷ ಐಪಿಎಲ್‌ಗೂ ಮುನ್ನ ಈ ಟೂರ್ನಿಯ ತಯಾರಿ ಭಾಗವಾಗಿ ಈ ದೇಶಿ ಪಂದ್ಯಗಳಲ್ಲಿ ಆಡುತ್ತೇನೆ ಎಂದು ತಿಳಿಸಿದ್ದಾರೆ. ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ಧವನ್ ಆಡುತ್ತಿದ್ದಾರೆ.
ಆದರೆ ತಮಗೆ ಮತ್ತೆ ಅವಕಾಶ ಸಿಕ್ಕೇ ಸಿಗುತ್ತೆ ಎಂದಿರುವ ಗಬ್ಬರ್, ಅವಕಾಶ ಬಂದಾಗಲೆಲ್ಲ ನಾನು ಯಾವಾಗಲೂ ಸಿದ್ಧ. ಅದಕ್ಕಾಗಿಯೇ ಫಿಟ್ ಆಗಿ ಮುಂದುವರಿಯುತ್ತೇನೆ. ಶೇಕಡಾ 20 ರಷ್ಟು ನನಗೆ ಮತ್ತೆ ಅವಕಾಶ ಸಿಗುತ್ತೆ. ಸದ್ಯ ತರಬೇತಿಯಲ್ಲಿ ಖುಷಿಯಾಗಿ ಇದ್ದೇನೆ ಎಂದಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಬಾಂಗ್ಲಾದೇಶ ಸರಣಿಯ ನಂತರ ಶಿಖರ್ ಧವನ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರಲಿಲ್ಲ. ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಆರಂಭಿಕರಾಗಿ ಸ್ಥಾನ ಪಡೆದ ಪರಿಣಾಮ ಧವನ್‌ಗೆ ಅವಕಾಶಗಳು ಸಿಗುತ್ತಿಲ್ಲ.
ಶಿಖರ್ ಧವನ್ ಈವರೆಗೆ ಟೀಂ ಇಂಡಿಯಾ ಪರ 167 ಏಕದಿನ ಪಂದ್ಯಗಳಲ್ಲಿ 164 ಇನ್ನಿಂಗ್ಸ್‌ಗಳನ್ನು ಆಡಿದ್ದು, 44.11 ಸರಾಸರಿಯಲ್ಲಿ 6,793 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕಗಳು, 39 ಅರ್ಧ ಶತಕಗಳು ಸೇರಿವೆ.