ತುಂಬಾ ನಿರಾಶೆಯಾಗಿದೆ, ಒಂದೊಳ್ಳೆ ಅವಕಾಶ ಕಳ್ಕೊಂಡ್ರಿ; ಪಾಕ್ ಬ್ಯಾಟಿಂಗ್ ಕುಸಿತಕ್ಕೆ ಅಖ್ತರ್ ಬೇಸರ
Oct 14, 2023 08:59 PM IST
ಪಾಕ್ ಬ್ಯಾಟಿಂಗ್ ಕುಸಿತಕ್ಕೆ ಅಖ್ತರ್ ಅಸಮಾಧಾನ
- India vs Pakistan: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬಾಬರ್ ಬಳಗವು ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದಕ್ಕೆ, ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಶೋಯೆಬ್ ಅಖ್ತರ್ ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತ ವಿರುದ್ಧದ ವಿಶ್ವಕಪ್ 2023ರ ಪಂದ್ಯದಲ್ಲಿ ಪಾಕಿಸ್ತಾನ 191 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಭಾರಿ ಬ್ಯಾಟಿಂಗ್ ಕುಸಿತಕ್ಕೊಳಗಾದ ತಂಡವು, ಅಹಮದಾಬಾದ್‌ನ ಬ್ಯಾಟಿಂಗ್ ಪಿಚ್‌ನಲ್ಲಿ ಬ್ಯಾಟ್ ಬೀಸಲು ಪರದಾಡಿತು. ಭಾರತೀಯ ಬೌಲರ್‌ಗಳ ದಾಳಿಗೆ ಪಾಕ್ ದಾಂಡಿಗರು ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡರು.
ಉತ್ತಮ ರನ್ ಕಲೆಬಹುದಾಗಿದ್ದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಬಾಬರ್ ಬಳಗವು ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದಕ್ಕೆ, ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ಬೇಸರ ವ್ಯಕ್ತಪಡಿಸಿದ್ದಾರೆ. ಉತ್ತಮ ರನ್ ಕಲೆ ಹಾಕಬಹುದಾಗಿದ್ದ ಅವಕಾಶವನ್ನು ಕಳೆದುಕೊಂಡ ಬಾಬರ್ ಅಜಮ್ ಬಳಗದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಂದು ಹಂತದಲ್ಲಿ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಉತ್ತಮ ಜೊತೆಯಾಟ ಆಡಿದರು. ಆದರೆ, ಆ ಬಳಿಕ ತಂಡವು ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಹೋಯ್ತು. 191 ರನ್‌ಗಳಿಗೆ ತಂಡ ಆಲೌಟ್ ಆಯ್ತು. ಇದು ಅಖ್ತರ್‌ಗೆ ಹಿಡಿಸಿಲ್ಲ. ಬ್ಯಾಟಿಂಗ್ ಸ್ನೇಹಿಯಾದ ವಿಕೆಟ್‌ನಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ದಾಖಲಿಸುವ ಅವಕಾಶವನ್ನು ಕಳೆದುಕೊಂಡರು ಎಂದು ತಮ್ಮ ದೇಶದ ತಂಡದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
“ಅತ್ಯುತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ಉತ್ತಮ ಅವಕಾಶವನ್ನು ಕಳೆದುಕೊಂಡರು. ನಿರಾಶೆಯಾಗಿದೆ. ತುಂಬಾ ನಿರಾಶೆಯಾಗಿದೆ,” ಎಂದು ಎಕ್ಸ್ (ಟ್ವಿಟರ್)ನಲ್ಲಿ ಅಖ್ತರ್ ಪೋಸ್ಟ್ ಮಾಡಿದ್ದಾರೆ.
ಉತ್ತಮ ಅವಕಾಶವನ್ನು ಎಲ್ಲಾ ಬ್ಯಾಟರ್‌ಗಳು ಮಿಸ್ ಮಾಡಿಕೊಂಡರು. ಎಲ್ಲರಿಗೂ ಅವಕಾಶ ಸಿಕ್ಕರೂ, ಅದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು. ಎಂಥಾ ಅದ್ಭುತ ಅವಕಾಶ ಇದು. ಭಾರತದ ಬೌಲರ್‌ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ಅದ್ಭುತವಾಗಿ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದರು. ರೋಹಿತ್ ಶರ್ಮಾ ನಾಯಕತ್ವ ಚೆನ್ನಾಗಿತ್ತು, ಎಂದು ಅಖ್ತರ್ ಹೇಳಿದ್ದಾರೆ.
ಭಾರತವು ಸಾಂಪ್ರದಾಯಿಕ ಎದುರಾಳಿಗಳನ್ನು 42.5 ಓವರ್‌ಗಳಲ್ಲಿ 191 ರನ್‌ಗಳಿಗೆ ಆಲೌಟ್ ಮಾಡಿತು. ಅಲ್ಲದೆ ಇನ್ನಿಂಗ್ಸ್‌ನಲ್ಲಿನ ಒಂದೇ ಒಂದು ಸಿಕ್ಸರ್ ಸಿಡಿಸಲು ಭಾರತ ಅವಕಾಶ ನೀಡಲಿಲ್ಲ. 1999ರ ವಿಶ್ವಕಪ್‌ನಲ್ಲಿ ಪಾಕ್ 180 ರನ್‌ಗಳಿಗೆ ಆಲೌಟ್ ಆಗಿತ್ತು. ಅದಾದ ಬಳಿಕ ಏಕದಿನ ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ಎರಡನೇ ಅತಿ ಕಡಿಮೆ ಸ್ಕೋರ್ ಆಗಿದೆ.
ನಾಯಕ ರೋಹಿತ್ ಶರ್ಮಾ ಗುಡುಗು; ಪಾಕಿಸ್ತಾನ ವಿರುದ್ಧ ಭಾರತ ಅಜೇಯ ಗೆಲುವಿನ ಓಟ
ಪ್ರಸಕ್ತ ಸಾಲಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 12ನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಭಾರತ ತಂಡ ಮಣಿಸಿದೆ. ಆ ಮೂಲಕ ಸತತ ಮೂರನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಹಾಗೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕ್ ಎದುರು ಅಜೇಯ ಗೆಲುವಿನ ಓಟ ಮುಂದುವರೆಸಿದ್ದು, 1992ರಿಂದ ಇಲ್ಲಿಯವರೆಗೂ ಭಾರತ ಸೋತಿಲ್ಲ. ಅಹ್ಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಬ್ಯಾಟಿಂಗ್-ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ರೋಹಿತ್ ಪಡೆ 7 ವಿಕೆಟ್ಗಳ ದಿಗ್ವಿಜಯ ಸಾಧಿಸಿತು.
ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ, ಭಾರತೀಯ ಬೌಲರ್‌ಗಳ ಆರ್ಭಟಕ್ಕೆ ತತ್ತರಿಸಿತು. ಬಾಬರ್ ಅಜಮ್ (50), ಮೊಹಮ್ಮದ್ ರಿಜ್ವಾನ್ (49) ಅವರ ಉತ್ತಮ ಪ್ರದರ್ಶನದ ಹೊರತಾಗಿಯೂ ಪಾಕ್ 42.5 ಓವರ್‌ಗಳಲ್ಲಿ 191 ರನ್ಗಳ ಸಾಧಾರಣ ಮೊತ್ತಕ್ಕೆ ಕುಸಿತ ಕಂಡಿತು. ಈ ಗುರಿ ಬೆನ್ನಟ್ಟಿದ ಭಾರತ ತಂಡ, ಆಕ್ರಮಣಕಾರಿ ಆಟದ ಮೂಲಕ ಗೆಲುವಿನ ನಗೆ ಬೀರಿತು. ನಾಯಕ ರೋಹಿತ್ ಶರ್ಮಾ, ಮತ್ತೊಂದು ಆಕ್ರಮಣಕಾರಿ ಇನ್ನಿಂಗ್ಸ್ ಆಡುವ ಮೂಲಕ ಗಮನ ಸೆಳೆದರು. ಅವರ ಅದ್ಭುತ ಆಟದ ಹಿನ್ನೆಲೆಯಲ್ಲಿ ಭಾರತ 30.3 ಓವರ್‌ಗಳಲ್ಲಿ ಗೆಲುವಿನ ನಗೆ ಬೀರಿತು.