logo
ಕನ್ನಡ ಸುದ್ದಿ  /  ಕ್ರಿಕೆಟ್  /  ಇದು ಅತಿ ದೊಡ್ಡ ಅವಮಾನ; ನಿಜಕ್ಕೂ ನಿರಾಶೆಯಾಗಿದೆ; ಯುಎಸ್‌ ವಿರುದ್ಧ ಪಾಕಿಸ್ತಾನ ಸೋಲಿಗೆ ಮಾಜಿ ಕ್ರಿಕೆಟಿಗರ ಬೇಸರ

ಇದು ಅತಿ ದೊಡ್ಡ ಅವಮಾನ; ನಿಜಕ್ಕೂ ನಿರಾಶೆಯಾಗಿದೆ; ಯುಎಸ್‌ ವಿರುದ್ಧ ಪಾಕಿಸ್ತಾನ ಸೋಲಿಗೆ ಮಾಜಿ ಕ್ರಿಕೆಟಿಗರ ಬೇಸರ

Jayaraj HT Kannada

Jun 07, 2024 05:06 PM IST

google News

ಯುಎಸ್‌ ವಿರುದ್ಧ ಪಾಕಿಸ್ತಾನ ಸೋಲಿಗೆ ಮಾಜಿ ಕ್ರಿಕೆಟಿಗರ ಬೇಸರ

    • ಟಿ20 ವಿಶ್ವಕಪ್‌ನಲ್ಲಿ ಕ್ರಿಕೆಟ್‌ ಶಿಶು ಯುಎಸ್ಎ ವಿರುದ್ಧ ಪಾಕಿಸ್ತಾನ ಕ್ರಿಕೆಟ್‌ ತಂಡ ಆಘಾತಕಾರಿ ಸೋಲು ಕಂಡಿತು. ಇದನ್ನು ಮಾಜಿ ಕ್ರಿಕೆಟಿಗರಿಂದ ಅರಗಿಸಿಕೊಳ್ಳಲಾಗುತ್ತಿಲ್ಲ. ಶೋಯೆಬ್ ಅಖ್ತರ್ ಹಾಗೂ ಕಮ್ರಾನ್‌ ಅಕ್ಮಲ್ ಪ್ರತಿಕ್ರಿಯಿಸಿದ್ದು, ಇದು ಅವಮಾನಕರ ಎಂದಿದ್ದಾರೆ.
ಯುಎಸ್‌ ವಿರುದ್ಧ ಪಾಕಿಸ್ತಾನ ಸೋಲಿಗೆ ಮಾಜಿ ಕ್ರಿಕೆಟಿಗರ ಬೇಸರ
ಯುಎಸ್‌ ವಿರುದ್ಧ ಪಾಕಿಸ್ತಾನ ಸೋಲಿಗೆ ಮಾಜಿ ಕ್ರಿಕೆಟಿಗರ ಬೇಸರ (Getty-Agency)

2009ರ ಟಿ20 ವಿಶ್ವಕಪ್ ಚಾಂಪಿಯನ್‌ ಪಾಕಿಸ್ತಾನ ಕ್ರಿಕೆಟ್‌ ತಂಡವು, ಇದೀಗ ಯುಎಸ್‌ಎ ವಿರುದ್ದದ ಸೋಲನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಿದೆ. ಈ ಬಾರಿಯ ಟಿ20 ವಿಶ್ವಕಪ್‌ ಪಂದ್ಯಾವಳಿಯಲ್ಲಿ ತನ್ನ ಮೊದಲ ಪಂದ್ಯದಲ್ಲೇ ಪಾಕಿಸ್ತಾನ ಅಚ್ಚರಿಯ ಸೋಲು ಕಂಡಿದೆ. ಸೂಪರ್‌ ಓವರ್‌ನಲ್ಲಿ ರೋಚಕ ಗೆಲುವು ಸಾಧಿಸಿದ ಯುಎಸ್‌ಎ, ಐತಿಹಾಸಿಕ ಸಾಧನೆ ಮಾಡಿದೆ. ಈ ಸೋಲು ಪಾಕ್‌ ತಂಡ ಮಾತ್ರವಲ್ಲದೆ, ಅಲ್ಲಿನ ಮಾಜಿ ಆಟಗಾರರು ಹಾಗೂ ಅಭಿಮಾನಿಗಳಿಗೂ ನುಂಗಲಾರದ ತುತ್ತಾಗಿದೆ. ಪಂದ್ಯ ಮುಗಿದ ಬಳಿಕ ಪ್ರತಿಕ್ರಿಯೆ ನೀಡಿರುವ ದೇಶದ ಮಾಜಿ ಆಟಗಾರರು, ಇದು ದೊಡ್ಡ ಅವಮಾನ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.

ಪಾಕ್‌ ತಂಡದ ಮಾಜಿ ವೇಗಿ ಶೋಯೆಬ್ ಅಖ್ತರ್, ಪಂದ್ಯದ ಫಲಿತಾಂಶದಿಂದ ನಿರಾಶರಾಗಿದ್ದಾರೆ. 1999ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಪಾಕಿಸ್ತಾನ ಸೋಲು ಕಂಡಿತ್ತು. ಅದಾದ 25 ವರ್ಷಗಳ ನಂತರ, ಬಾಬರ್ ಅಜಮ್ ಪಡೆಯು ಮತ್ತೊಮ್ಮೆ ಾದೇ ರೀತಿ ಸೋತು ಕೆಟ್ಟ ದಾಖಲೆ ನಿರ್ಮಿಸಿದೆ ಎಂದು ಮಾಜಿ ವೇಗದ ಬೌಲರ್ ಹೇಳಿದ್ದಾರೆ.

“ಇದು ಪಾಕಿಸ್ತಾನಕ್ಕೆ ತುಂಬಾ ನಿರಾಶಾದಾಯಕ ಸೋಲು. ಆರಂಭ ಉತ್ತಮವಾಗಿರಲಿಲ್ಲ. ಈ ಸೋಲು, ನಾವು 1999ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಮಾಡಿದಂತೆಯೇ ಆಯ್ತು. ನಾವು ಅನಗತ್ಯ ಇತಿಹಾಸ ರಚಿಸಿದ್ದೇವೆ. ದುರದೃಷ್ಟವೆಂದರೆ, ಈ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲಲು ಅರ್ಹ ತಂಡವಾಗಿರಲಿಲ್ಲ. ಇದಕ್ಕೆ ಕಾರಣ ಯುಎಸ್ಎ ಉತ್ತಮವಾಗಿ ಆಡಿತು,” ಎಂದು ಅಖ್ತರ್ ಹೇಳಿದ್ದಾರೆ.

ಈ ಸೋಲು ಅತ್ಯಂತ ಅವಮಾನಕರ ಎಂದ ಅಕ್ಮಲ್

“ಸೂಪರ್ ಓವರ್‌ನಲ್ಲಿ ಪಂದ್ಯವನ್ನು ಕಳೆದುಕೊಂಡಿರುವುದು ಪಾಕಿಸ್ತಾನ ಕ್ರಿಕೆಟ್‌ಗೆ ಅತಿ ದೊಡ್ಡ ಅವಮಾನವಾಗಿದೆ. ಇದಕ್ಕಿಂತ ದೊಡ್ಡ ಅವಮಾನ ಎದುರಿಸಲು ಸಾಧ್ಯವಿಲ್ಲ. ಯುಎಸ್ಎ ಅಸಾಧಾರಣ ಪ್ರದರ್ಶನ ನೀಡಿತು. ಅದು ಕೆಳ ಶ್ರೇಯಾಂಕದ ತಂಡವೆಂದು ಭಾವಿಸಲಿಲ್ಲ. ಅವರು ಪಾಕಿಸ್ತಾನಕ್ಕಿಂತ ಮೇಲಿದ್ದಾರೆ ಎಂದು ಅನಿಸಿತು. ಇದು ಅವರು ತೋರಿಸಿದ ಪ್ರಬುದ್ಧತೆಯ ಮಟ್ಟ,” ಎಂದು ಅಕ್ಮಲ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಅಚ್ಚರಿಯ ಫಲಿತಾಂಶಗಳು

ಟಿ20 ವಿಶ್ವಕಪ್‌ನಲ್ಲಿ ಅಚ್ಚರಿಯ ಫಲಿತಾಂಶ ಬಂದಿರುವುದು ಇದೇ ಮೊದಲಲ್ಲ. ಈ ಹಿಂದಿನ ಎಂಟು ಆವೃತ್ತಿಗಳಲ್ಲಿ, ಇಂಥಾ ಸನ್ನಿವೇಶಗಳು ನಡೆದಿವೆ. 2007ರಲ್ಲಿ ಜಿಂಬಾಬ್ವೆ ತಂಡವು ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಆ ಬಳಿಕ 2009ರಲ್ಲಿ ನೆದರ್ಲ್ಯಾಂಡ್ಸ್ ತಂಡ ಇಂಗ್ಲೆಂಡ್ ಅನ್ನು ಸೋಲಿಸಿತ್ತು. 2022ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನ ಸೋಲು ಕಂಡಿತ್ತು. ಇದೇ ಆವೃತ್ತಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿದ್ದ ನೆದರ್ಲೆಂಡ್ಸ್‌, ಹರಿಣಗಳನ್ನು ಟೂರ್ನಿಯಿಂದ ಹೊರಹಾಕಿತ್ತು. ಇದೀಗ ಈ ಆವೃತ್ತಿಯಲ್ಲಿ ಪಾಕಿಸ್ತಾನವನ್ನು ಯುಎಸ್‌ಎ ಮಣಿಸಿದೆ. ಕ್ರಿಕೆಟ್‌ ಇತಿಹಾಸದಲ್ಲಿ ಉಭಯ ತಂಡಗಳ ನಡುವೆ ಮೊದಲ ಪಂದ್ಯ ಇದಾಗಿತ್ತು. ಅದರಲ್ಲೇ ಬಾಬರ್‌ ಪಡೆ ನಿರಾಶೆ ಅನುಭವಿಸಿದೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌, 20 ಓವರ್‌​​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 159 ರನ್‌ ಗಳಿಸಿತು. ಚೇಸಿಂಗ್‌ ನಡೆಸಿದ ಯುಎಸ್‌ಎ ಪಂದ್ಯ ಸಮಬಲಗೊಳಿಸಿತು. ಹೀಗಾಗಿ ಸೂಪರ್ ಓವರ್ ನಡೆಸಲಾಯಿತು. ಈ ವೇಳೆ ಮೊದಲು ಬ್ಯಾಟಿಂಗ್ ಮಾಡಿದ ಅಮೆರಿಕ 19 ರನ್‌​​ಗಳ ಗುರಿ ನೀಡಿತು. ಆದರೆ ಪಾಕಿಸ್ತಾನ ಕೇವಲ 13 ರನ್ ಗಳಿಸಲಷ್ಟೇ ಶಕ್ತವಾಯಿತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ