ಭಾರತ ನಿರ್ದಯಿ ತಂಡವಾಗ್ತಿದೆ; ಬುಮ್ರಾ, ಸಿರಾಜ್, ಶಮಿ ಆಕ್ರಮಣ ಎದುರಿಸುವುದು ಭಾರಿ ಕಷ್ಟ ಎಂದ ಅಖ್ತರ್
Nov 03, 2023 12:08 PM IST
ಭಾರತದ ವೇಗಿಗಳನ್ನು ಪ್ರಶಂಸಿಸಿದ ಅಖ್ತರ್
- Shoaib Akhtar: ಭಾರತವು ಬೌಲಿಂಗ್‌ನಲ್ಲಿ ನಿರ್ದಯಿ ತಂಡವಾಗಿದೆ. ಈ ಪ್ರಖರ ಬೌಲಿಂಗ್ ದಾಳಿ ವಿಶ್ವಕಪ್‌ನ ಉಳಿದ ಪಂದ್ಯಗಳಲ್ಲಿಯೂ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಎದುರಾಳಿ ತಂಡಗಳಿಗೆ ಮಾಜಿ ವೇಗಿ ಶೋಯೆಬ್ ಅಖ್ತರ್ ಎಚ್ಚರಿಕೆಯ ಕರೆ ನೀಡಿದ್ದಾರೆ.
ಏಕದಿನ ವಿಶ್ವಕಪ್ 2023ರಲ್ಲಿ (ICC ODI World Cup 2023) ಭಾರತ ತಂಡವು ಆಲೌರೌಂಡ್ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್, ಬೌಲಿಂಗ್ ಮಾತ್ರವಲ್ಲದೆ ಫೀಲ್ಡಿಂಗ್‌ನಲ್ಲೂ ತಂಡ ಬಲಿಷ್ಠವಾಗಿದೆ. ಅದರ ಪರಿಣಾಮವೇ ಆಡಿರುವ ಎಲ್ಲಾ ಏಳು ಪಂದ್ಯಗಳಲ್ಲಿ ತಂಡ ಭರ್ಜರಿ ಜಯ ಸಾಧಿಸಿದೆ. ಮೊದಲ ಐದು ಪಂದ್ಯಗಳಲ್ಲಿ ಯಶಸ್ವಿಯಾಗಿ ಚೇಸಿಂಗ್ ಮಾಡಿದ ತಂಡವು, ಕೊನೆಯ ಎರಡು ಪಂದ್ಯಗಳಲ್ಲಿ ಡಿಫೆಂಡ್ ಮಾಡಿ ಗೆದ್ದಿದೆ. ಭಾರತದ ಖಡಕ್ ಬೌಲಿಂಗ್ ದಾಳಿಗೆ ಎದುರಾಳಿ ತಂಡಗಳಾದ ಇಂಗ್ಲೆಂಡ್ ಮತ್ತು ಶ್ರೀಲಂಕಾ ಬೆದರಿ ಹೋಗಿದೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ (Shoaib Akhtar) ಮಾತನಾಡಿದ್ದಾರೆ.
ಹಿಂದೆ ಭಾರತದ ಬೌಲಿಂಗ್ ವಿಭಾಗವು ಬ್ಯಾಟಿಂಗ್‌ನಷ್ಟು ಸಮತೋಲಿತವಾಗಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿದ್ದವು. ಆದರೆ, ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತದ ಬೌಲರ್‌ಗಳೇ ಅಬ್ಬರಿಸುತ್ತಿದ್ದಾರೆ. ಅದರಲ್ಲೂ ವೇಗದ ಬಳಗ ಬೆಂಕಿಯ ಚೆಂಡು ಉಗುಳುತ್ತಿದೆ. ಇದುವರೆಗೆ ನಡೆದ ಏಳು ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳಲ್ಲಿ ಮಾತ್ರ ಎದುರಾಳಿ ತಂಡವು ಭಾರತದ ವಿರುದ್ಧ 200 ಪ್ಲಸ್ ರನ್ ಗಳಿಸಲು ಸಾಧ್ಯವಾಗಿದೆ. ಉಳಿದಂತೆ ಐದು ಪಂದ್ಯಗಳಲ್ಲಿ ಎದುರಾಳಿ ತಂಡವನ್ನು ಭಾರತ ಆಲೌಟ್ ಮಾಡಿದೆ.
ಭಾರತ ಮೊದಲು ಬೌಲಿಂಗ್ ಮಾಡಿದ ಪಂದ್ಯಗಳಲ್ಲಿ, ವೇಗದ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ನಿರ್ಣಾಯಕ ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೇ ವೇಳೆ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಕುಲ್ದೀಪ್ ಯಾದವ್ ಕೂಡಾ ರನ್ ಹರಿಯುವುದನ್ನು ನಿಯಂತ್ರಿಸಿದ್ದಾರೆ.
ನಿರ್ದಯ ತಂಡ
ಭಾರತದ ಖರಾರುವಕ್ ಬೌಲಿಂಗ್ ದಾಳಿಗೆ ಎದುರಾಳಿ ತಂಡಗಳು ಭಯಭೀತವಾಗಿವೆ. ಈ ಬಗ್ಗೆ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಮಾತನಾಡಿದ್ದು, ಭಾರತವು ‘ನಿರ್ದಯಿ ತಂಡ’ ಎಂದು ಹೇಳಿಕೊಂಡಿದ್ದಾರೆ. ಈ ಪ್ರಬಲ ದಾಳಿ ವಿಶ್ವಕಪ್‌ನ ಉಳಿದ ಭಾಗದಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
“ಈ ಹಂತದಿಂದ ಭಾರತ ಕರುಣೆಯೇ ಇಲ್ಲದ ನಿರ್ದಯಿ ತಂಡವಾಗುತ್ತಿದೆ. ಮುಂದೆ ಬೌಲರ್‌ಗಳ ಆಕ್ರಮಣವನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ವೇಗದ ಬೌಲರ್‌ಗಳ ಪ್ರದರ್ಶನವನ್ನು ಸಂಭ್ರಮಿಸುವಂತೆ ಭಾರತೀಯರಲ್ಲಿ ನಾನು ಮನವಿ ಮಾಡುತ್ತೇನೆ. ವಾಂಖೆಡೆ ಸ್ಟೇಡಿಯಂನಲ್ಲಿ ಒಂದೊಂದು ಎಸೆತ ಬೀಳುತ್ತಿದ್ದಾಗಲೂ ಪ್ರೇಕ್ಷಕರ ಸದು ಗದ್ದಲ ದುಪ್ಪಟ್ಟಾಗುತ್ತಿತ್ತು” ಎಂದು ಅಖ್ತರ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡಿದ್ದಾರೆ.
ವೇಗಿಗಳನ್ನು ಹೊಗಳಿದ ಅಖ್ತರ್
ಪಂದ್ಯಾವಳಿಯಲ್ಲಿ ಶಮಿ ಆಡಿದ ಮೂರು ಪಂದ್ಯಗಳಲ್ಲಿ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ ಎರಡು ಪಂದ್ಯದಲ್ಲಿ ಪಂದ್ಯಶ್ರೇಷ್ಠರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅಖ್ತರ್, ಶಮಿ ಹಲವು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು ಲಯವನ್ನು ಕಂಡುಕೊಂಡಿದ್ದಕ್ಕಾಗಿ ನನಗೆ ವೈಯಕ್ತಿಕವಾಗಿ ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ವೇಗಿ ಸಿರಾಜ್ ಫಾರ್ಮ್ ಕುರಿತು ಭಾರಿ ಗೊಂದಲಗಳಿದ್ದವು. ಆದರೆ ಬಲಗೈ ವೇಗಿ ಎಲ್ಲಾ ಪ್ರಶ್ನೆಗಳಿಗೂ ತಮ್ಮ ಬೌಲಿಂಗ್‌ನಲ್ಲೇ ಉತ್ತರಿಸಿದ್ದಾರೆ. ಅಂತಿಮವಾಗಿ 15 ರನ್ ಬಿಟ್ಟುಕೊಟ್ಟು 3 ವಿಕೆಟ್ ತಮ್ಮದಾಗಿಸಿಕೊಂಡರು.
“ಒಂದು ಕಡೆ ಸಿರಾಜ್ ತಮ್ಮ ಓಟ ಮುಂದುವರೆಸಿದ್ದಾರೆ. ಮತ್ತೊಂದೆಡೆ ಬುಮ್ರಾ ಮಾರಣಾಂತಿಕವಾಗುತ್ತಿದ್ದಾರೆ” ಎಂದು ಶೋಯೆಬ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.