Shoaib Akhtar: ವಿರಾಟ್ ಕೊಹ್ಲಿ ಏಕದಿನ, ಟಿ20ಯಿಂದ ನಿವೃತ್ತಿಯಾಗಬೇಕು; ಶೋಯೆಬ್ ಅಖ್ತರ್ ಸಲಹೆ
Aug 20, 2023 05:00 AM IST
ವಿರಾಟ್ ಕೊಹ್ಲಿಗೆ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಸಲಹೆ ನೀಡಿದ ಶೋಯೆಬ್ ಅಖ್ತರ್.
- Shoaib Akhtar: 2023ರ ಏಕದಿನ ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಏಕದಿನ ಮತ್ತು ಟಿ20I ಕ್ರಿಕೆಟ್‌ನಿಂದ ನಿವೃತ್ತಿ ಹೊಂದಬೇಕು. ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಬೇಕು ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಸಲಹೆ ನೀಡಿದ್ದಾರೆ.
ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಏಕದಿನ ವಿಶ್ವಕಪ್ ಟೂರ್ನಿಯ (ODI World Cup 2023) ನಂತರ ಏಕದಿನ ಮತ್ತು ಟಿ20 ಕ್ರಿಕೆಟ್ಗೆ ವಿದಾಯ (Virat Kohli Retire) ಘೋಷಿಸಬೇಕು ಎಂದು ಪಾಕಿಸ್ತಾನದ ದಿಗ್ಗಜ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar) ಸಲಹೆ ನೀಡಿದ್ದಾರೆ. ಸೀಮಿತ ಓವರ್ಗಳಿಗೆ ವಿದಾಯ ಘೋಷಿಸಿದರೆ ಟೆಸ್ಟ್ ಕ್ರಿಕೆಟ್ ಮೇಲೆ ಹೆಚ್ಚು ಗಮನ ಹರಿಸಿ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ 100 ಶತಕಗಳ ದಾಖಲೆ ಮುರಿಯಬಹುದು ಎಂದು ಅಖ್ತರ್ ಹೇಳಿದ್ದಾರೆ.
ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಭಾರತೀಯ ಕ್ರಿಕೆಟ್ಗೆ ಪದಾರ್ಪಣೆ 15 ವರ್ಷ ಪೂರೈಸಿದ್ದಾರೆ. ಈ 15 ವರ್ಷಗಳ ಕಾಲ ಆಟಗಾರನಾಗಿ, ನಾಯಕನಾಗಿ ತಂಡಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಈಗ ಏಷ್ಯಾಕಪ್, ಏಕದಿನ ವಿಶ್ವಕಪ್ ಭರ್ಜರಿ ಸಿದ್ಧತೆ ನಡೆಸುತ್ತಿರುವ ಕೊಹ್ಲಿಗೆ ನಿವೃತ್ತಿಯ ಸಲಹೆ ನೀಡಿದ್ದಾರೆ. ಇದು ವಿರಾಟ್ ಕೊಹ್ಲಿ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿದೆ.
‘ಕೊಹ್ಲಿ ಟೆಸ್ಟ್ನಲ್ಲಿ ಮಾತ್ರ ಮುಂದುವರೆಯಬೇಕು’
RevSportzಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಖ್ತರ್, ಕೊಹ್ಲಿ ಮತ್ತು ಅವರ ಫಾರ್ಮ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಜೊತೆಗೆ ಪಾಕಿಸ್ತಾನದ ಮಾಜಿ ವೇಗಿ ನಿವೃತ್ತಿಯ ಸಲಹೆಯೊಂದನ್ನು ಹಂಚಿಕೊಂಡಿದ್ದಾರೆ. 2023ರ ಏಕದಿನ ವಿಶ್ವಕಪ್ ನಂತರ ಕೊಹ್ಲಿ ಏಕದಿನ ಮತ್ತು ಟಿ20I ಕ್ರಿಕೆಟ್‌ನಿಂದ ನಿವೃತ್ತಿ ಹೊಂದಬೇಕು. ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಬೇಕು ಎಂದು ರಾವಲ್ಪಿಂಡಿ ಎಕ್ಸ್‌ಪ್ರೆಸ್ ಹೇಳಿದ್ದಾರೆ.
‘ಕೆಲಸದ ಒತ್ತಡ ಕಡಿಮೆ ಮಾಡಲು ನೆರವು’
ವಿರಾಟ್ ಕೊಹ್ಲಿ ಸೀಮಿತ ಓವರ್ಗಳ ಮಾದರಿಗೆ ಏಕೆ ನಿವೃತ್ತಿ ನೀಡಬೇಕು ಎನ್ನುವುದಕ್ಕೂ ಅಖ್ತರ್ ಉತ್ತರಿಸಿದ್ದಾರೆ. ಈ ವಿಶ್ವಕಪ್ ನಂತರ ಕೊಹ್ಲಿ ಏಕದಿನ ಕ್ರಿಕೆಟ್ ಆಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅಲ್ಲದೆ, ಹಾಗೆಯೇ ಟಿ20 ಕ್ರಿಕೆಟ್ನಲ್ಲೂ ಅಷ್ಟೆ. ಅವರಿಗೆ ಅವಕಾಶಗಳು ಸಿಗುವುದು ಕೂಡ ಕಡಿಮೆ ಎಂದು ಭಾವಿಸುತ್ತೇನೆ. ಕೆಲಸದ ಒತ್ತಡ ಕಡಿಮೆಯಾಗಲು ಈ ನಿವೃತ್ತಿ ನಿರ್ಧಾರ ಉತ್ತಮ ಎಂದು ಅಖ್ತರ್ ಹೇಳಿದ್ದಾರೆ.
‘ಸಚಿನ್ ದಾಖಲೆ ಮುರಿಯಬೇಕು’
ಒಂದು ವೇಳೆ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ 100 ಶತಕಗಳ ದಾಖಲೆಯನ್ನು ಮುರಿಯಬೇಕು ಎಂದರೆ ಕೊಹ್ಲಿ ಇನ್ನೂ ಕನಿಷ್ಠ ಆರು ವರ್ಷಗಳ ಕಾಲ ಆಡಬೇಕು. ಹಾಗಾಗಿ ವಿಶ್ವಕಪ್ ಬಳಿಕ ಈ ಕಡೆ ಗಮನ ಹರಿಸಬೇಕಾಗುತ್ತದೆ. ಹೀಗಿದ್ದಾಗ ಮಾತ್ರ ದಾಖಲೆ ಮುರಿಯಲು ಸಾಧ್ಯವಾಗುತ್ತದೆ. ವಿಶ್ವಕಪ್ ಬಳಿಕ ಕೊಹ್ಲಿ ಟೆಸ್ಟ್ ಕ್ರಿಕೆಟ್ನತ್ತ ಗಮನ ಹರಿಸಬೇಕು. ಸಚಿನ್ ಅವರ ದಾಖಲೆ ಮುರಿಯಬೇಕು ಎಂದು ಅಖ್ತರ್ ಹೇಳಿದ್ದಾರೆ. ಆದರೆ, ಅಖ್ತರ್ ನೀಡಿದ ಹೇಳಿಕೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಖ್ತರ್ ವಿರುದ್ಧ ತಿರುಗಿಬಿದ್ದಿದ್ದಾರೆ.