logo
ಕನ್ನಡ ಸುದ್ದಿ  /  ಕ್ರಿಕೆಟ್  /  30 ಎಸೆತ ಎದುರಿಸಿದ ಶ್ರೇಯಸ್ ಅಯ್ಯರ್‌ಗೆ ಬೆನ್ನುನೋವು; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ಹೊರಕ್ಕೆ

30 ಎಸೆತ ಎದುರಿಸಿದ ಶ್ರೇಯಸ್ ಅಯ್ಯರ್‌ಗೆ ಬೆನ್ನುನೋವು; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ಹೊರಕ್ಕೆ

Jayaraj HT Kannada

Feb 09, 2024 02:42 PM IST

google News

ಶ್ರೇಯಸ್ ಅಯ್ಯರ್‌ಗೆ ಬೆನ್ನುನೋವು; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ಹೊರಕ್ಕೆ

    • Shreyas Iyer: ಭಾರತ ತಂಡದ ಇತರ ಆಟಗಾರರ ಕಿಟ್‌ಗಳನ್ನು ವಿಶಾಖಪಟ್ಟಣದಿಂದ ರಾಜ್‌ಕೋಟ್‌ಗೆ ಕಳಿಸಲಾಗಿದೆ. ಆದರೆ, ಶ್ರೇಯಸ್ ಅಯ್ಯರ್ ಅವರ ಕಿಟ್ ಅನ್ನು ಮುಂಬೈಗೆ ಕಳುಹಿಸಲಾಗಿದೆ. ಮುಂಬೈನಲ್ಲಿ ಅಯ್ಯರ್‌ ವಿಶ್ರಾಂತಿ ಪಡೆಯಲಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಮೂರನೇ ಟೆಸ್ಟ್‌ಗೂ ಮುನ್ನ ಟೀಮ್‌ ಇಂಡಿಯಾ ಆಯ್ಕೆಗೆ ಮತ್ತೊಂದು ಸಮಸ್ಯೆ ಎದುರಾಗಿದೆ.
ಶ್ರೇಯಸ್ ಅಯ್ಯರ್‌ಗೆ ಬೆನ್ನುನೋವು; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ಹೊರಕ್ಕೆ
ಶ್ರೇಯಸ್ ಅಯ್ಯರ್‌ಗೆ ಬೆನ್ನುನೋವು; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಿಂದ ಬಹುತೇಕ ಹೊರಕ್ಕೆ (PTI)

ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ (India England 3rd Test) ಭಾರತ ತಂಡವನ್ನು ಆಯ್ಕೆ ಮಾಡಿದಾಗಿನಿಂದ, ಟೀಮ್‌ ಇಂಡಿಯಾದೊಳಗೆ ಒಂದರ ಮೇಲೊಂದರಂತೆ ಸಮಸ್ಯೆಗಳು ಹುಟ್ಟುತ್ತಿವೆ. ತಂಡಕ್ಕೆ ವಿರಾಟ್ ಕೊಹ್ಲಿ ಪುನರಾಗಮನದ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಅತ್ತ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಫಿಟ್ನೆಸ್ ಬಗ್ಗೆಯೂ ಯಾವುದೇ ಮಾಹಿತಿ ಇಲ್ಲ. ಆಂಗ್ಲರ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡದ ಆಯ್ಕೆ ಇನ್ನೂ ಆಗಿಲ್ಲ. ಈ ನಡುವೆ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ (Shreyas Iyer) ಸತತ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸುದ್ದಿ ಸಂಸ್ಥೆ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯ ಪ್ರಕಾರ, ಅಯ್ಯರ್ ಅವರು ಬೆನ್ನು ಬಿಗಿತ ಮತ್ತು ಸೊಂಟದ ಭಾಗದಲ್ಲಿ ನೋವಿನ ಬಗ್ಗೆ ಹೇಳಿಕೊಂಡಿದ್ದರು. ಹೀಗಾಗಿ ಬೆನ್‌ ಸ್ಟೋಕ್ಸ್‌ ಬಳಗದ ವಿರುದ್ಧದ ಉಳಿದ ಮೂರು ಟೆಸ್ಟ್ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗಿದೆ.

ಅಯ್ಯರ್‌ಗೆ ವಿಶ್ರಾಂತಿ

ಭಾರತ ತಂಡದ ಉಳಿದ ಆಟಗಾರರ ಕಿಟ್‌ಗಳನ್ನು ವಿಶಾಖಪಟ್ಟಣದಿಂದ ನೇರವಾಗಿ ಮೂರನೇ ಟೆಸ್ಟ್‌ ನಡೆಯಲಿರುವ ಸ್ಥಳವಾದ ರಾಜ್‌ಕೋಟ್‌ಗೆ ಕಳುಹಿಸಲಾಗಿದೆ. ಆದರೆ, ಅಯ್ಯರ್ ಅವರ ಕಿಟ್ ಅನ್ನು ಅವರ ಹುಟ್ಟೂರಾದ ಮುಂಬೈಗೆ ಕಳುಹಿಸಲಾಗಿದೆ ಎಂದು ವರದಿ ತಿಳಿಸಿದೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ(NCA) ತೆರಳಿ ಚೇತರಿಸಿಕೊಳ್ಳುವ ಮುನ್ನ ಅಯ್ಯರ್ ಕೆಲವು ದಿನಗಳ ಕಾಲ ಮುಂಬೈನಲ್ಲಿ ವಿಶ್ರಾಂತಿ ಪಡೆಯುವ ಸಾಧ್ಯತೆಯಿದೆ.

ಬಲಗೈ ಬ್ಯಾಟರ್‌ 30ಕ್ಕೂ‌ ಹೆಚ್ಚು ಎಸೆತಗಳನ್ನು ಎದುರಿಸಲು ಕ್ರೀಸ್‌ನಲ್ಲಿದ್ದ ನಂತರ ಬೆನ್ನು ಮತ್ತು ಸೊಂಟದ ನೋವಿನ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್‌ಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. “30ಕ್ಕೂ ಹೆಚ್ಚು ಎಸೆತಗಳನ್ನು ಎದುರಿಸಿದ ನಂತರ ಬೆನ್ನು ಮತ್ತು ಸೊಂಟ ನೋವು ಎಂದು ಅಯ್ಯರ್ ಭಾರತೀಯ ತಂಡದ ಮ್ಯಾನೇಜ್‌ಮೆಂಟ್ ಮತ್ತು ವೈದ್ಯಕೀಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ” ಎಂದು ಮೂಲವೊಂದು ತಿಳಿಸಿದೆ.

“ಶಸ್ತ್ರಚಿಕಿತ್ಸೆಯ ನಂತರ, ಅವರು ಮೊದಲ ಬಾರಿಗೆ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಆ ಬಳಿಕ ಅವರು ಎನ್‌ಸಿಎಗೆ ತೆರಳಲಿದ್ದಾರೆ” ಎಂದು ವರದಿ ಹೇಳಿದೆ.

ಇದನ್ನೂ ಓದಿ | ದ್ರಾವಿಡ್ ಸಲಹೆಯಂತೆ ರಣಜಿ ಆಡಲು ಒಲ್ಲದ ಇಶಾನ್ ಕಿಶನ್; ಹಾರ್ದಿಕ್, ಕೃನಾಲ್ ಜೊತೆ ಅಭ್ಯಾಸ

ಸದ್ಯ ಅಯ್ಯರ್‌ ಫಾರ್ಮ್‌ ಉತ್ತಮವಾಗಿಲ್ಲ. 13 ಇನ್ನಿಂಗ್ಸ್‌ಗಳಲ್ಲಿ ಅವರು ಕನಿಷ್ಠ ಅರ್ಧಶತಕ ಗಳಿಸಲು ಕೂಡಾ ಸಾಧ್ಯವಾಗಿಲ್ಲ. ಸ್ಪಿನ್ ವಿರುದ್ಧ ಉತ್ತಮವಾಗಿ ಬ್ಯಾಟ್‌ ಬೀಸಬಲ್ಲ ಸಾಮರ್ಥ್ಯವಿರುವ ಆಟಗಾರ, ಇಂಗ್ಲೆಂಡ್ ಸರಣಿಯಲ್ಲಿ ಎಲ್ಲಾ ನಾಲ್ಕು ಬಾರಿಯೂ ಸ್ಪಿನ್‌ ಬೌಲಿಂಗ್‌ನಲ್ಲಿ ಔಟ್ ಆಗಿದ್ದಾರೆ.

ರಜತ್ ಪಾಟೀದಾರ್, ಸರ್ಫರಾಜ್ ಖಾನ್‌ಗೆ ಬಂಪರ್

ಒಂದು ವೇಳೆ ಅಯ್ಯರ್ ಆಯ್ಕೆಗೆ ಲಭ್ಯವಿಲ್ಲದಿದ್ದರೆ, ಆಯ್ಕೆದಾರರು ರಜತ್ ಪಾಟೀದಾರ್ ಮತ್ತು ಸರ್ಫರಾಜ್ ಖಾನ್ ಅವರನ್ನು ತಂಡದಲ್ಲೇ ಉಳಿಸಲಿದ್ದಾರೆ. ಇದರ ಹೊರತು ಬೇರೆ ಆಯ್ಕೆಗಳಿಲ್ಲ. ಗಾಯದ ಸಮಸ್ಯೆಯಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಕೆಎಲ್ ರಾಹುಲ್ ತಂಡಕ್ಕೆ ಮರಳುವ ಸಾಧ್ಯತೆಯಿದೆ. ಅವರು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಓಂದು ವೇಳೆ ಜಡೇಜಾ ಫಿಟ್ ಆಗಿ ತಂಡದಲ್ಲಿ ಸ್ಥಾನ ಪಡೆದರೆ, ಹಿಂದಿನ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡಿದ ಪಾಟೀದಾರ್ ಆಡುವ ಬಳಗದಲ್ಲಿ ಸ್ಥಾನ ಕಳೆದುಕೊಳ್ಳುತ್ತಾರಾ ಎಂಬ ಅನುಮಾನಗಳಿವೆ.‌

ಇದನ್ನೂ ಓದಿ | ಇವತ್ತೇ ಭಾರತ ತಂಡ ಪ್ರಕಟ ಸಾಧ್ಯತೆ; ಜಸ್ಪ್ರೀತ್ ಬುಮ್ರಾ ಆಯ್ಕೆಯ ಗೊಂದಲದಲ್ಲಿ ಬಿಸಿಸಿಐ ಆಯ್ಕೆ ಸಮಿತಿ

ಅತ್ತ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ಬೇಕೋ ಬೇಡವೋ ಎಂಬ ಚರ್ಚೆ ಕೂಡಾ ಪ್ರಮುಖ ವಿಷಯವಾಗಿದೆ. ಅವರ ಕೆಲಸದ ಹೊರೆ ನಿರ್ವಹಣೆಗಾಗಿ ವಿಶ್ರಾಂತಿ ನೀಡುವ ಪ್ರಸ್ತಾಪವಿದೆ. ಆದರೆ, ಅವರ ಅಮೋಘ ಫಾರ್ಮ್‌ ನೋಡಿದರೆ, ಈ ನಿರ್ಧಾರಕ್ಕೆ ಬರುವುದು ಕಷ್ಟ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ