Video: ಹಿಮ್ಮುಖವಾಗಿ ಓಡಿ ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್; ನೆನಪಾಯ್ತು ವಿಶ್ವಕಪ್ ಫೈನಲ್ ಪಂದ್ಯ
Feb 03, 2024 03:00 PM IST
ಹಿಮ್ಮುಖವಾಗಿ ಓಡಿ ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್ ಅಯ್ಯರ್
- Shreyas Iyer Catch: ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ 2ನೇ ದಿನದಾಟದಲ್ಲಿ ಶ್ರೇಯಸ್ ಅಯ್ಯರ್ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಜಾಕ್ ಕ್ರಾಲೆ ಹೊಡೆತವನ್ನು ಹಿಮ್ಮುಖವಾಗಿ ಓಡಿ ಕ್ಯಾಚ್ ಹಿಡಿದು ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸಿದ್ದಾರೆ.
ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ (India vs England 2nd Test) ಪಂದ್ಯದ ಎರಡನೇ ದಿನದಾಟದಲ್ಲಿ, ಭಾರತ ತಂಡದ ಶ್ರೇಯಸ್ ಅಯ್ಯರ್ (Shreyas Iyer) ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಹಿಮ್ಮುಖವಾಗಿ ವೇಗವಾಗಿ ಓಡಿ ಹಿಡಿದ ಈ ರನ್ನಿಂಗ್ ಕ್ಯಾಚ್, ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸಿದೆ. ಭಾರತ ತಂಡದ ನಾಯಕನ ವಿಕೆಟ್ ಪಡೆಯಲು ಆಸೀಸ್ ತಂಡದ ಟ್ರಾವಿಸ್ ಹೆಡ್ ಇದೇ ರೀತಿ ಕ್ಯಾಚ್ ಪಡೆದಿದ್ದರು. ಇದೀಗ ಇಂಗ್ಲೆಂಡ್ ಆಟಗಾರ ಜಾಕ್ ಕ್ರಾಲೆ ಸ್ಫೋಟಕ ಬ್ಯಾಟಿಂಗ್‌ಗೆ ಬ್ರೇಕ್ ಹಾಕಲು ಅಯ್ಯರ್ ಅದ್ಭುತ್ ಕ್ಯಾಚ್ ಹಿಡಿದರು.
ಎರಡನೇ ದಿನದಾಟದ ಆರಂಭದಲ್ಲಿ ಭಾರತ ತಂಡವು 396 ರನ್ ಗಳಿಸಿ ಆಲೌಟ್ ಆಯ್ತು. ಆ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಪರ, ಆರಂಭಿಕರಾದ ಕ್ರಾಲೆ ವೇಗದ ಆಟಕ್ಕೆ ಕೈ ಹಾಕಿದರು. 77 ಎಸೆತಗಳಲ್ಲಿ 76 ರನ್ ಗಳಿಸಿದ್ದಾಗ ಅಕ್ಷರ್ ಪಟೇಲ್ ಮ್ಯಾಜಿಕ್ ಮಾಡಿದರು. ಅಕ್ಷರ್ ಎಸೆದ ಫುಲ್ ಡೆಲಿವರಿಗೆ ದೊಡ್ಡ ಹೊಡೆತಕ್ಕೆ ಕ್ರಾಲೆ ಮುಂದಾದರು. ಆದರೆ, ಆ ಎಸೆತವು ಗಾಳಿಯಲ್ಲಿ ಹಾರಿತು. ಈ ವೇಳೆ ಅಯ್ಯರ್ ವೇಗವಾಗಿ ಹಿಂದಕ್ಕೆ ಓಡಿ ಸಮಯೋಚಿತವಾಗಿ ಡೈವ್ ಹೊಡೆದು ಕ್ಯಾಚ್ ಹಿಡಿದೇ ಬಿಟ್ಟರು. ಆ ಮೂಲಕ ಅಪಾಯಕಾರಿ ಬ್ಯಾಟರ್ ಔಟಾಗಲು ನೆರವಾದರು.
ಇದನ್ನೂ ಓದಿ | ಅನುಭವಿಗಳು ವೈಫಲ್ಯ, ಅನಾನುಭವಿ ಯಶಸ್ವಿ ಜೈಸ್ವಾಲ್ ದ್ವಿಶತಕ; ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 396 ರನ್
ಏಷ್ಯಾದ ಪಿಚ್‌ಗಳಲ್ಲಿ ಎಡಗೈ ಸಾಂಪ್ರದಾಯಿಕ ಸ್ಪಿನ್ ವಿರುದ್ಧ ಕ್ರಾಲೆ ಇದು ಎಂಟನೇ ಬಾರಿ ಔಟ್ ಆಗಿದ್ದು, ಸ್ಪಿನ್ನರ್‌ಗಳ ವಿರುದ್ಧ ಅವರ ಬ್ಯಾಟಿಂಗ್ ದೌರ್ಬಲ್ಯವನ್ನು ಮತ್ತಷ್ಟು ಎತ್ತಿ ತೋರಿಸುತ್ತದೆ.
ಅಯ್ಯರ್ ಹಿಡಿದ ಅದ್ಭುತ ಕ್ಯಾಚ್ ವಿಡಿಯೋ ಇಲ್ಲಿದೆ
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಕ್ಯಾಚ್
ಈ ಕ್ಯಾಚ್, ಅಭಿಮಾನಿಗಳಿಗೆ ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸಿದೆ. ಆಸ್ಟ್ರೇಲಿಯಾ ವಿರುದ್ಧದ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದೇ ರೀತಿಯ ಕ್ಯಾಚ್‌ನಿಂದ ಔಟಾದರು. ಟ್ರಾವಿಸ್ ಹೆಟ್ ಕ್ಯಾಚ್ ಹಿಡಿದು ಭಾರತದ ಇನ್ನಿಂಗ್ಸ್‌ಗೆ ಮಹತ್ವದ ತಿರುವು ತಂದುಕೊಟ್ಟರು. ಇದೀಗ ಅಯ್ಯರ್ ಹಿಡಿದ ಕ್ಯಾಚ್ ವಿಶಾಖಪಟ್ಟಣ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳ ಸಂತೋಷವನ್ನು ಹೆಚ್ಚಿಸಿತು.
ಇದನ್ನೂ ಓದಿ | ಇಂಗ್ಲೆಂಡ್ ಎದುರಿನ 2ನೇ ಟೆಸ್ಟ್ನಲ್ಲೂ ರೋಹಿತ್ ಶರ್ಮಾ ಕಳಪೆ ಬ್ಯಾಟಿಂಗ್; ಸೋಮಾರಿತನ ಎಂದ ಕೆವಿನ್ ಪೀಟರ್ಸನ್
ಆರಂಭಿಕ ಆಟಗಾರ ಬೆನ್ ಡಕೆಟ್ ಔಟಾದ ಬಳಿಕ, ಭಾರತೀಯ ಬೌಲರ್‌ಗಳ ವಿರುದ್ಧ ಕ್ರಾಲೆ ಆಕ್ರಮಣಕಾರಿ ಆಟವಾಡಿದರು. ತಮ್ಮ ಇನ್ನಿಂಗ್ಸ್‌ನಲ್ಲಿ 11 ಬೌಂಡರಿಗಳು ಮತ್ತು ಎರಡು ಸಿಕ್ಸರ್ ಸಿಡಿಸಿದರು. ಕ್ರಾಲೆ ಬೆನ್ನಲ್ಲೇ ಜೋ ರೂಟ್ ಕೇವಲ 5 ರನ್ ಗಳಿಸಿ ಬುಮ್ರಾ ಎಸೆತದಲ್ಲಿ ಶುಭ್ಮನ್ ಗಿಲ್‌ಗೆ ಕ್ಯಾಚ್ ನೀಡಿ ಔಟಾದರು. ಆ ಬಳಿಕ ಓಲಿ ಪೋಪ್ 23 ರನ್ ಗಳಿಸಿ ಕ್ಲೀನ್ ಬೋಲ್ಡ್ ಆದರು.
ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್ ಚೊಚ್ಚಲ ದ್ವಿಶತಕದ ನೆರವಿಂದ ಭಾರತ ತಂಡವು 396 ರನ್ ಗಳಿಸಿತು. ಭಾರತದ ಪರ ಜೈಸ್ವಾಲ್ ಒಬ್ಬರೇ ಏಕಾಂಗಿ ಹೋರಾಟ ನಡೆಸಿ 209 ರನ್ ಗಳಿಸಿದರು.
ಇದನ್ನೂ ಓದಿ | ವರ್ಷ 22, ಸಿಡಿಸಿದ್ದು 209; ಚಿಕ್ಕ ವಯಸ್ಸಲ್ಲೇ ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಇಂಗ್ಲೆಂಡ್ ಪರ ಜೇಮ್ಸ್ ಆಂಡರ್ಸನ್ 3 ವಿಕೆಟ್ ಪಡೆದರೆ, ರೆಹಾನ್ ಅಹ್ಮದ್ ಮತ್ತು ಪದರ್ಪಣಾ ಪಂದ್ಯ ಆಡುತ್ತಿರುವ ಶೋಯೆಬ್ ಬಶೀರ್ ಕೂಡಾ ತಲಾ ಮೂರು ವಿಕೆಟ್ ಕಬಳಿಸಿದರು.
(This copy first appeared in Hindustan Times Kannada website. To read more like this please logon to kannada.hindustantime.com)