logo
ಕನ್ನಡ ಸುದ್ದಿ  /  ಕ್ರಿಕೆಟ್  /  ಡಬ್ಲ್ಯುಪಿಎಲ್​ನಲ್ಲಿ ಘರ್ಜಿಸಲು ರೆಡಿಯಾದ ಭಾರತದ ಲೇಡಿ ಸೂಪರ್​ಸ್ಟಾರ್ಸ್; ಈ 10 ಆಟಗಾರ್ತಿಯರ ಮೇಲೆಯೇ ಎಲ್ಲರ ಕಣ್ಣು!

ಡಬ್ಲ್ಯುಪಿಎಲ್​ನಲ್ಲಿ ಘರ್ಜಿಸಲು ರೆಡಿಯಾದ ಭಾರತದ ಲೇಡಿ ಸೂಪರ್​ಸ್ಟಾರ್ಸ್; ಈ 10 ಆಟಗಾರ್ತಿಯರ ಮೇಲೆಯೇ ಎಲ್ಲರ ಕಣ್ಣು!

Prasanna Kumar P N HT Kannada

Feb 23, 2024 03:27 PM IST

google News

ಡಬ್ಲ್ಯುಪಿಎಲ್​ನಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ಭಾರತದ ಲೇಡಿ ಸೂಪರ್​ಸ್ಟಾರ್ಸ್

    • Womens Premier League 2024 : ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ಭಾರತದ ಟಾಪ್ -10 ಆಟಗಾರ್ತಿಯರು ಯಾರು? ಬನ್ನಿ ನೋಡೋಣ.
ಡಬ್ಲ್ಯುಪಿಎಲ್​ನಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ಭಾರತದ ಲೇಡಿ ಸೂಪರ್​ಸ್ಟಾರ್ಸ್
ಡಬ್ಲ್ಯುಪಿಎಲ್​ನಲ್ಲಿ ನಿರೀಕ್ಷೆ ಹುಟ್ಟು ಹಾಕಿರುವ ಭಾರತದ ಲೇಡಿ ಸೂಪರ್​ಸ್ಟಾರ್ಸ್

ಇಂದಿನಿಂದ (ಫೆಬ್ರವರಿ 23) ವುಮೆನ್ಸ್ ಪ್ರೀಮಿಯರ್​ ಲೀಗ್​ಗೆ (WPL 2024) ವಿದ್ಯುಕ್ತ ಚಾಲನೆ ಸಿಗಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಮೊದಲ ಹಂತದ 11 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಉದ್ಘಾಟನಾ ಪಂದ್ಯದಲ್ಲಿ ಕಳೆದ ವರ್ಷದ ಫೈನಲಿಸ್ಟ್​ಗಳಾದ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೆಣಸಾಟ ನಡೆಸಲಿವೆ. 

ಕಳೆದ ಬಾರಿ ವಿದೇಶಿ ಆಟಗಾರ್ತಿಯರು ಮಿಂಚಿನ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಆದರೆ ಈ ಬಾರಿ ಭಾರತೀಯರು ಅದ್ಭುತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ರನ್, ವಿಕೆಟ್ ಎಲ್ಲದರಲ್ಲೂ ಅವರನ್ನು ಮೀರಿಸುವ ಲೆಕ್ಕಾಚಾರದಲ್ಲಿದ್ದಾರೆ. ಹಾಗಾದರೆ 2ನೇ ಆವೃತ್ತಿಯಲ್ಲಿ ನಿರೀಕ್ಷೆ ಹುಟ್ಟಿಸಿರುವ ಭಾರತದ ಆಟಗಾರ್ತಿಯರು ಯಾರು?

ಹರ್ಮನ್‌ಪ್ರೀತ್ ಕೌರ್: ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್​ಪ್ರೀತ್, ಮತ್ತೊಂದು ಪ್ರಶಸ್ತಿಯ ಕನಸಿನಲ್ಲಿದ್ದಾರೆ. ಕಳೆದ ವರ್ಷ ಮುಂಬೈಗೆ ಟ್ರೋಫಿ ಗೆದ್ದುಕೊಟ್ಟಿದ್ದ ಹರ್ಮನ್, ಭಾರತದ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿಯಾಗಿದ್ದರು. ಈ ಬಾರಿಯೂ ಅವರ ಮೇಲೆ ನಿರೀಕ್ಷೆ ದುಪಟ್ಟಾಗಿದೆ.

ಸ್ಮೃತಿ ಮಂಧಾನ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ, ಡಬ್ಲ್ಯುಪಿಎಲ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ್ತಿ. ಕಳೆದ ವರ್ಷ ನಾಯಕಿ ಮತ್ತು ಬ್ಯಾಟರ್​​ ಆಗಿ ನಿರಾಸೆ ಮೂಡಿಸಿದ್ದರೂ ಅವರ ಮೇಲಿರುವ ನಿರೀಕ್ಷೆ ಮಾತ್ರ ಕುಸಿದಿಲ್ಲ. ಈ ಬಾರಿ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ.

ದೀಪ್ತಿ ಶರ್ಮಾ: ಯುಪಿ ವಾರಿಯರ್ಸ್ ತಂಡದ ಆಲ್​ರೌಂಡರ್​​ ದೀಪ್ತಿ ಶರ್ಮಾ ಎರಡನೇ ಅತ್ಯಂತ ದುಬಾರಿ ಭಾರತೀಯ ಆಟಗಾರ್ತಿ. ಆದರೆ 2023ರಲ್ಲಿ ಆಲ್​ರೌಂಡರ್ ಆಗಿ ಗಮನ ಸೆಳೆದಿರಲಿಲ್ಲ. ಈ ಡಬ್ಲ್ಯುಪಿಎಲ್​ ಪರಿಣಾಮಕಾರಿ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ.

ರೇಣುಕಾ ಠಾಕೂರ್: ಆರ್​ಸಿಬಿಯ ಪ್ರಮುಖ ವೇಗದ ಬೌಲರ್​ ಆಗಿದ್ದಾರೆ. ಆದರೆ, ಕಳೆದ ಬಾರಿಯ ಟೂರ್ನಿಯಲ್ಲಿ ರೇಣುಕಾ ಒಂದೇ ಒಂದು ವಿಕೆಟ್ ಮಾತ್ರ ಪಡೆದಿದ್ದರು. 2024 ರಲ್ಲಿ ಅವರು ಅತ್ಯುತ್ತಮ ಪ್ರದರ್ಶಿಸಲು ಸಜ್ಜಾಗಿದ್ದಾರೆ. ತಾನೆಂತ ಪ್ರತಿಭಾವಂತ ಬೌಲರ್​ ಎಂಬುದನ್ನು ಸಾಬೀತುಪಡಿಸಲು ಸಿದ್ಧರಾಗಿದ್ದಾರೆ.

ಟಿಟಾಸ್ ಸಾಧು: 2022ರಲ್ಲಿ ಅಂಡರ್-19 ಟಿ20 ವಿಶ್ವಕಪ್​ನಲ್ಲಿ ಭಾರತ ಪರ ಪ್ರಭಾವ ಬೀರಿದ ನಂತರ ಟಿಟಾಸ್ ಸಾಧು, ಬಳಿಕ ಹಿರಿಯರ ತಂಡಕ್ಕೂ ಪದಾರ್ಪಣೆ ಮಾಡಿ ಗಮನ ಸೆಳೆದಿದ್ದಾರೆ. ಕಳೆದ ಬಾರಿ ಬೆಂಚ್ ಕಾದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಟಿಟಾಸ್, ಈ ಸಲ ಪಂದ್ಯಾವಳಿಯಲ್ಲಿ ಬಲವಾದ ಪ್ರಭಾವ ಬೀರಲು ಮುಂದಾಗಿದ್ದಾರೆ.

ಶಫಾಲಿ ವರ್ಮಾ: ಸ್ಫೋಟಕ ಆರಂಭಿಕ ಆಟಗಾರ್ತಿ ಡೆಲ್ಲಿ ತಂಡಕ್ಕೆ ಟ್ರೋಫಿ ಗೆದ್ದುಕೊಡುವ ಇರಾದೆಯಲ್ಲಿದ್ದಾರೆ. ದಂಡಂ ದಶಗುಣಂ ಮಂತ್ರದೊಂದಿಗೆ ವಿಧ್ವಂಸ ಸೃಷ್ಟಿಸುವ ಶಫಾಲಿ ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳು ರಂಜಿಸಲು ಸಿದ್ಧರಾಗಿದ್ದಾರೆ.

ಶ್ರೇಯಾಂಕಾ ಪಾಟೀಲ್: ಚೊಚ್ಚಲ ಐಪಿಎಲ್​ನಲ್ಲೇ ಗಮನಾರ್ಹ ಪ್ರದರ್ಶನದ ಮೂಲಕ ಗಮನ ಸೆಳೆದಿರುವ ಕನ್ನಡತಿ ಶ್ರೇಯಾಂಕಾ ಮೇಲೆ ಈ ಬಾರಿ ಹೆಚ್ಚಿನ ನಿರೀಕ್ಷೆ ಇದೆ. ಈಗಾಗಲೇ ಭಾರತ ತಂಡಕ್ಕೂ ಪದಾರ್ಪಣೆ ಮಾಡಿ ಮಿಂಚಿರುವ ಆರ್​ಸಿಬಿ ಆಟಗಾರ್ತಿ, ರೆಡ್​ ಆರ್ಮಿಗೆ ಚೊಚ್ಚಲ ಟ್ರೋಫಿ ಗೆದ್ದುಕೊಡುವ ಭರವಸೆಯಲ್ಲಿದ್ದಾರೆ.

ಸಾಯಿಕಾ ಇಶಾಕ್: ಮುಂಬೈ ಇಂಡಿಯನ್ಸ್ ತಂಡದ ಅದ್ಭುತ ತಾರೆ ಸಾಯಿಕಾ ಕಳೆದ ಬಾರಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿ ಆಗಿದ್ದರು. ಮುಂಬೈ ಟ್ರೋಫಿ ಗೆಲ್ಲಲು ಪ್ರಮುಖ ಕಾರಣರಾಗಿದ್ದರು. ಭಾರತದ ಪರವೂ ಪದಾರ್ಪಣೆ ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಅಬ್ಬರಿಸಿದ್ದಾರೆ. ಈ ಬಾರಿಯೂ ಅದೇ ನಿರೀಕ್ಷೆ ಅವರ ಮೇಲಿದೆ.

ರಿಚಾ ಘೋಷ್: ತನ್ನ ಆಕ್ರಮಣಕಾರಿ ಶೈಲಿಯೊಂದಿಗೆ ಭಾರತದ ಎಕ್ಸ್-ಫ್ಯಾಕ್ಟರ್ ಪ್ಲೇಯರ್​ ಆಗಿರುವ ರಿಚಾ, 2023ರಲ್ಲಿ ಆರ್​ಸಿಬಿ ಪರ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿರುವ ಈ ವಿಕೆಟ್ ಕೀಪರ್, ಉತ್ತಮ ಫಿನಿಷರ್. ಈ ಸಲ ಅಬ್ಬರಿಸುವ ವಿಶ್ವಾಸ ಇದೆ.

ಜೆಮಿಮಾ ರೊಡ್ರಿಗಸ್: ಮಧ್ಯಮ ಕ್ರಮಾಂಕದಲ್ಲಿ ತನ್ನ ಕ್ಲಾಸಿಕಲ್ ಬ್ಯಾಟಿಂಗ್ ಮೂಲಕವೇ ಮಿನುಗುತ್ತಿರುವ ರೋಡ್ರಿಗಸ್, ಡೆಲ್ಲಿ ತಂಡದ ಪ್ರಮುಖ ಅಸ್ತ್ರವಾಗಿದ್ದಾರೆ. ಕಳೆದ ಬಾರಿ ನಿರಾಸೆ ಮೂಡಿಸಿದರೂ ಈ ಬಾರಿ ಅಬ್ಬರಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಇತ್ತೀಚಿನ ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಫಾರ್ಮ್​ನಲ್ಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ