ಕ್ರಿಕೆಟ್ನಲ್ಲಿ ಸೂಪರ್ ಓವರ್ ಪರಿಚಯವಾಗಿದ್ದು ಯಾವಾಗ; ಅದಕ್ಕೂ ಹಿಂದಿದ್ದ ನಿಯಮವೇನು? ಇಲ್ಲಿದೆ ಸೂಪರ್ ವಿವರ
Jan 19, 2024 01:26 PM IST
ಸೂಪರ್ ಓವರ್.
- What is a Super Over: ಸೂಪರ್ ಓವರ್ ಎಂದರೇನು? ಸೂಪರ್ ಓವರ್‌ನಲ್ಲಿ ಎಷ್ಟು ವಿಕೆಟ್‌ಗಳು? ಯಾರು ಮೊದಲು ಬ್ಯಾಟ್ ಮಾಡುತ್ತಾರೆ? ಸೂಪರ್ ಓವರ್ ಟೈ ಆಗಿದ್ದರೆ ಏನಾಗುತ್ತದೆ? ಸೂಪರ್ ಓವರ್ ಪರಿಚಯ ಆಗಿದ್ದು ಯಾವಾಗ? ಈ ಎಲ್ಲರ ಕುರಿತ ಸಂಪೂರ್ಣ ಮಾಹಿತಿ ಈ ಮುಂದಿನಂತಿದೆ.
ಭಾರತ ಮತ್ತು ಅಫ್ಘಾನಿಸ್ತಾನ (India vs Afghanistan) ನಡುವಿನ ಮೂರನೇ ಟಿ20 ಪಂದ್ಯವು ಡಬಲ್ ಸೂಪರ್ ಓವರ್ಗೆ ಸಾಕ್ಷಿಯಾಯಿತು. ಟೀಮ್ ಇಂಡಿಯಾ ನೀಡಿದ್ದ 212 ರನ್ಗಳ ದೊಡ್ಡ ಗುರಿಯನ್ನು ಬೆನ್ನಟ್ಟಿದ ಅಫ್ಘನ್ ಅಷ್ಟೇ ರನ್ಗಳನ್ನು ಕಲೆ ಹಾಕಿತು. ಬಳಿಕ ನಡೆಸಿದ ಸೂಪರ್ ಓವರ್ನಲ್ಲೂ ಪಂದ್ಯ ಟೈ ಆಯಿತು. ಹಾಗಾಗಿ ಎರಡನೇ ಸೂಪರ್ ಮೊರೆ ಹೋಗಬೇಕಾಯಿತು. ಭಾರತ ಭರ್ಜರಿ ಗೆಲುವು ದಾಖಲಿಸಿತು.
ಇಂಡೋ-ಅಫ್ಘನ್ ಪಂದ್ಯದ ಬಳಿಕ ಸೂಪರ್ ಓವರ್ ಕುರಿತು ಗೂಗಲ್ನಲ್ಲಿ ಹೆಚ್ಚು ಹುಡುಕಾಟ ನಡೆಯುತ್ತಿದೆ. ಸೂಪರ್ ಓವರ್ ನಿಯಮಗಳು, ಸೂಪರ್ ಓವರ್‌ನಲ್ಲಿ ಎಷ್ಟು ವಿಕೆಟ್‌ಗಳು? ಯಾರು ಮೊದಲು ಬ್ಯಾಟ್ ಮಾಡುತ್ತಾರೆ? ಸೂಪರ್ ಓವರ್ ಟೈ ಆಗಿದ್ದರೆ ಏನಾಗುತ್ತದೆ? ಸೂಪರ್ ಓವರ್ ಪರಿಚಯ ಆಗಿದ್ದು ಯಾವಾಗ? ಈ ಎಲ್ಲರ ಕುರಿತ ಸಂಪೂರ್ಣ ಮಾಹಿತಿ ಈ ಮುಂದಿನಂತಿದೆ. ಓದಿ ಪ್ರತಿಕ್ರಿಯಿಸಿ.
ಸೂಪರ್ ಓವರ್ ಎಂದರೇನು?
ಸೂಪರ್ ಓವರ್ ಅನ್ನು ಒಂದು ಒಂದು ಓವರ್ ಎಲಿಮಿನೇಟರ್ ಎಂದೂ ಕರೆಯಲಾಗುತ್ತದೆ. ಪಂದ್ಯವು ಟೈ ಆದಾಗ ವಿಜೇತರನ್ನು ನಿರ್ಧರಿಸಲು ಸೀಮಿತ-ಓವರ್‌ಗಳ ಕ್ರಿಕೆಟ್ ಪಂದ್ಯಗಳಲ್ಲಿ ಬಳಸುವ ಒಂದು ವಿಧಾನ ಇದಾಗಿದೆ. ಆದರೆ ಈ ವಿಧಾನ ಅಭಿಮಾನಿಗಳಿಗೆ ಸಾಕಷ್ಟು ರೋಮಾಂಚನ ಉಂಟು ಮಾಡುತ್ತದೆ. ಪ್ರತಿ ಕ್ಷಣವೂ ಉಸಿರು ಬಿಗಿಡಿಡುವಂತೆ ಮಾಡುತ್ತದೆ.
ಮೊದಲು ಬಳಕೆಯಲ್ಲಿದ್ದ ವಿಧಾನ ಬೌಲ್ ಔಟ್
ಸೂಪರ್ ಓವರ್ ಜಾರಿಗೆ ಬರುವುದಕ್ಕೂ ಮುನ್ನ ಪಂದ್ಯ ಟೈಗೊಂಡರೆ ಫಲಿತಾಂಶ ನಿರ್ಧರಿಸಲು ಬೌಲ್ ಔಟ್ ವಿಧಾನ ಅಳವಡಿಕೆಯಲ್ಲಿತ್ತು. ಈ ವಿಧಾನ ಕೇವಲ ಸ್ಟಂಪ್ಸ್ಗೆ ಬೌಲ್ ಮಾಡುವುದು. ಬ್ಯಾಟ್ಸ್ಮನ್ ಯಾರೂ ಇರುವಂತಿಲ್ಲ. ಅಂದರೆ ಬೌಲಿಂಗ್ ಮೂಲಕ ಆರು ಎಸೆತಗಳಲ್ಲಿ (ಒಂದು ಓವರ್) ಹೆಚ್ಚು ಬಾರಿ ಯಾರು ಸ್ಟಂಪ್ಸ್ಗೆ ಹೊಡೆಯುತ್ತಾರೋ ಅವರನ್ನು ವಿಜೇತರೆಂದು ನಿರ್ಧರಿಸಲಾಗುತ್ತಿತ್ತು. 2007ರಲ್ಲಿ ಭಾರತ-ಪಾಕಿಸ್ತಾನ ಪಂದ್ಯ ಟೈಗೊಂಡಾಗ ಈ ಪದ್ಧತಿಯ ಮೂಲಕ ಫಲಿತಾಂಶ ನಿರ್ಧರಿಸಲಾಗಿತ್ತು. ಭಾರತ ಗೆದ್ದಿತ್ತು.
ಸೂಪರ್ ಓವರ್ ನಿಯಮಗಳು
ಪಂದ್ಯವು ಟೈ ಆಗಿದ್ದರೆ, ಎರಡು ತಂಡಗಳು ಮೂವರು ಬ್ಯಾಟರ್ಗಳು ಮತ್ತು ಒಬ್ಬ ಬೌಲರ್ ಆಯ್ಕೆ ಮಾಡಿ ಪಟ್ಟಿ ಕೊಡಬೇಕು. ಪಟ್ಟಿ ಕೊಟ್ಟ ಆಟಗಾರರು ಬ್ಯಾಟಿಂಗ್ ನಡೆಸಬೇಕು. ಹೆಸರು ಕೊಟ್ಟ ಬೌಲರ್ ಮಾತ್ರ ಬೌಲಿಂಗ್ ಮಾಡಲು ಅವಕಾಶ ಇದೆ. ಉಳಿದ ಆಟಗಾರರು ಫೀಲ್ಡಿಂಗ್ ನಡೆಸಬೇಕು. ಸೂಪರ್ ಓವರ್‌ನಲ್ಲಿ ಅಧಿಕ ರನ್ ಗಳಿಸಿದ ತಂಡವನ್ನು ವಿಜೇತರೆಂದು ಪರಿಗಣಿಸಲಾಗುತ್ತದೆ.
ಸೂಪರ್ ಓವರ್‌ನಲ್ಲಿ ಯಾರು ಮೊದಲು ಬ್ಯಾಟ್ ಮಾಡುತ್ತಾರೆ?
ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಯಾರು ನಡೆಸುತ್ತಾರೆ ಎಂಬುದನ್ನು ನಿರ್ಧರಿಸುವುದೇಗೆ ಎಂಬ ಗೊಂದಲ ಈಗಲೂ ಎಲ್ಲರಿಗೂ ಇದೆ. ಆದರೆ ಇದಕ್ಕಾಗಿ ಟಾಸ್ ಪ್ರಕ್ರಿಯೆ ನಡೆಯುವುದಿಲ್ಲ. ಮೂಲ ಪಂದ್ಯದಲ್ಲಿ ಚೇಸಿಂಗ್ ಮಾಡುತ್ತಿರುವ ತಂಡವೇ ಮೊದಲು ಬ್ಯಾಟ್ ಮಾಡಲಿದೆ. ಒಂದು ವೇಳೆ ಎರಡನೇ ಸೂಪರ್ ಓವರ್ ಆದರೆ? ಆಗಲೂ ಅಷ್ಟೆ ಚೇಸಿಂಗ್ ನಡೆಸುತ್ತಿರುವ ತಂಡವೇ ಮೊದಲು ಬ್ಯಾಟ್ ಬೀಸಲಿದೆ.
ಸೂಪರ್ ಓವರ್‌ನಲ್ಲಿ ಎಷ್ಟು ವಿಕೆಟ್‌ಗಳು?
ಪ್ರತಿ ತಂಡವು ಮೂವರು ಬ್ಯಾಟ್ಸ್‌ಮನ್‌ಗಳನ್ನು ನಾಮನಿರ್ದೇಶನ ಮಾಡಬಹುದು. ಅಂದರೆ ಸೂಪರ್ ಓವರ್‌ನಲ್ಲಿ ಪ್ರತಿ ಬ್ಯಾಟಿಂಗ್ ತಂಡಕ್ಕೆ ಎರಡು ವಿಕೆಟ್‌ಗಳನ್ನು ಅನುಮತಿಸಲಾಗುತ್ತದೆ. ಮೂವರಲ್ಲಿ ಇಬ್ಬರು ಔಟಾಗುತ್ತಿದ್ದಂತೆ ಆಲೌಟ್ ಎಂದು ಪರಿಗಣಿಸಲಾಗುತ್ತದೆ. ಬ್ಯಾಟಿಂಗ್ ಮಾಡುವ ತಂಡ ಎರಡೂ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡರೆ, ಆ ತಂಡದ ಇನ್ನಿಂಗ್ಸ್ ಅಲ್ಲಿಗೆ ಮುಕ್ತಾಯ ಎಂದರ್ಥ.
ಸೂಪರ್ ಓವರ್ ಟೈ ಆಗಿದ್ದರೆ ಏನಾಗುತ್ತದೆ?
ಐಸಿಸಿ ನಿಯಮಗಳ ಪ್ರಕಾರ, ಸೂಪರ್ ಓವರ್ ಟೈ ಆದರೆ, ಫಲಿತಾಂಶ ಬರುವವರೆಗೂ ಸೂಪರ್ ಓವರ್‌ಗಳ ಪ್ರಕ್ರಿಯೆ ಮುಂದುವರೆಯುತ್ತದೆ. ಮೊದಲ ಸೂಪರ್ ಓವರ್ ಎಸೆದ ಬೌಲರ್ಗೆ ಮತ್ತೊಂದು ಸೂಪರ್ ಓವರ್ ಎಸೆಯಲು ಅವಕಾಶ ಇರುವುದಿಲ್ಲ. ಹಾಗೆಯೇ ಸೂಪರ್ ಓವರ್‌ನಲ್ಲಿ ಔಟಾದ ಬ್ಯಾಟರ್ ಮತ್ತೆ ಬ್ಯಾಟಿಂಗ್ ಮಾಡಲು ಅನರ್ಹ. ಒಂದು ವೇಳೆ ಬ್ಯಾಟ್ಸ್ಮನ್ ಬ್ಯಾಟಿಂಗ್ ಮಾಡದಿದ್ದರೆ ಆತನಿಗೆ ಮತ್ತೆ ಅವಕಾಶ ನೀಡಲಾಗುತ್ತದೆ. ಹಾಗೆಯೇ ಚೆಂಡು ಎದುರಿಸಿ ಅನಿವಾರ್ಯ ಕಾರಣಕ್ಕೆ ನಿವೃತ್ತರಾದರೆ ಆತನಿಗೂ ಮತ್ತೆ ಆಡಲು ಅವಕಾಶ ಸಿಗುತ್ತದೆ.
ಬೌಂಡರಿ ಕೌಂಟ್ ಮೂಲಕ ಫಲಿತಾಂಶ ನಿರ್ಧಾರ
ಈ ಹಿಂದೆ ಟೈನಲ್ಲಿ ಕೊನೆಗೊಂಡ ಸೂಪರ್ ಓವರ್‌ಗಳನ್ನು ಬೌಂಡರಿ ಕೌಂಟ್‌ಬ್ಯಾಕ್ ನಿಯಮದ ಮೇಲೆ ನಿರ್ಧರಿಸಲಾಗುತ್ತಿತ್ತು. ಹೆಚ್ಚು ಬೌಂಡರಿ ಸಿಡಿಸಿದ ತಂಡವನ್ನು ವಿಜೇತ ಎಂದು ಘೋಷಿಸಲಾಗ್ತಿತ್ತು. ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ 2019 ಕ್ರಿಕೆಟ್ ವಿಶ್ವಕಪ್ ಫೈನಲ್‌ನ ನಂತರ ಭಾರೀ ಟೀಕೆಗೆ ಗುರಿಯಾದ ಕಾರಣ ಈ ನಿಯಮವನ್ನು ನಂತರ ರದ್ದುಗೊಳಿಸಲಾಯಿತು. ಈ ಪಂದ್ಯದಲ್ಲಿ ಸೂಪರ್ ಓವರ್ ಸಹ ಟೈ ಆದ ಕಾರಣ ಬೌಂಡರಿ ಕೌಂಟ್ನೊಂದಿಗೆ ಫಲಿತಾಂಶ ನಿರ್ಧರಿಸಲಾಗಿತ್ತು. ಅಂದು ಇಂಗ್ಲೆಂಡ್ ತಂಡಕ್ಕೆ ಗೆಲುವು ನೀಡಲಾಗಿತ್ತು. ಇದು ಭಾರಿ ಟೀಕೆಗೆ ಒಳಗಾಗಿತ್ತು.
ಸೂಪರ್ ಓವರ್ ಪರಿಚಯ ಆಗಿದ್ದು ಯಾವಾಗ?
2008ರ ಡಿಸೆಂಬರ್ 26ರಂದು ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಬಾರಿಗೆ ಸೂಪರ್ ಓವರ್ ಪರಿಚಯಿಸಲಾಯಿತು. ಈ ಸೂಪರ್ ಓವರ್‌ನಲ್ಲಿ ವೆಸ್ಟ್ ಇಂಡೀಸ್ ಕ್ರಿಸ್ ಗೇಲ್, ಕ್ಸೇವಿಯರ್ ಮಾರ್ಷಲ್ ಮತ್ತು ಶಿವನಾರಾಯಣ್ ಚಂದ್ರಪಾಲ್ ಬ್ಯಾಟ್ ಮಾಡಲು ಆಯ್ಕೆಯಾಗಿದ್ದರು. ಎಡಗೈ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ನ್ಯೂಜಿಲೆಂಡ್‌ನ ನಾಮನಿರ್ದೇಶಿತ ಬೌಲರ್ ಆಗಿದ್ದರು.
ವೆಸ್ಟ್ ಇಂಡೀಸ್ 6 ಎಸೆತಗಳಲ್ಲಿ 1 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿತು. ಕ್ರಿಸ್ ಗೇಲ್ ಆರು ಎಸೆತಗಳಲ್ಲಿ ಎಲ್ಲಾ ರನ್ ಸಿಡಿಸಿದ್ದರು. ಸೂಪರ್ ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈಗಲೂ ಅವರ ಹೆಸರಲ್ಲೇ ಇದೆ. ಕ್ಸೇವಿಯರ್ ಮಾರ್ಷಲ್ ಚೆಂಡು ಎದುರಿಸದೆಯೇ ರನೌಟ್ ಆದರು. ಶಿವನಾರಾಯಣ್ ಚಂದ್ರಪಾಲ್ ನಾನ್ ಸ್ಟ್ರೈಕರ್ ಎಂಡ್ನಲ್ಲಿ ಉಳಿದರು.
ಪ್ರತ್ಯುತ್ತರವಾಗಿ ಬ್ಯಾಟ್ ಬೀಸಿದ ಕಿವೀಸ್ ಪರ ರಾಸ್ ಟೇಲರ್ ಔಟಾದರು. ಆ ಬಳಿಕ ಜಾಕೋಬ್ ಓರಮ್ ಮತ್ತು ಬ್ರೆಂಡನ್ ಮೆಕಲಮ್ ಅವರು ಉಳಿದೈದು ಎಸೆತಗಳಲ್ಲಿ ಕೇವಲ 15 ರನ್ ಗಳಿಸಿ ಸೋಲಿಗೆ ಶರಣಾದರು. ವಿಂಡೀಸ್ ಪರ ಎಡಗೈ ಸ್ಪಿನ್ನರ್ ಸುಲೆಮಾನ್ ಬೆನ್ ವೆಸ್ಟ್ ಇಂಡೀಸ್ ನ ನಾಮನಿರ್ದೇಶಿತ ಬೌಲರ್ ಆಗಿದ್ದರು. ಬ್ರೆಂಡನ್ ಮೆಕಲಮ್ ಒಂದೇ ಒಂದು ಎಸೆತವನ್ನು ಎದುರಿಸಿರಲಿಲ್ಲ.