ಪಾಕ್ ವಿರುದ್ಧದ ಏಷ್ಯಾಕಪ್ ಪಂದ್ಯಕ್ಕೆ ಭಾರತದ ಬ್ಯಾಟಿಂಗ್ ಕ್ರಮಾಂಕ ಬಹಿರಂಗ; ಸಿಕ್ಕಿತು ಮಹತ್ವದ ಸುಳಿವು
Dec 22, 2023 06:22 PM IST
ವಿರಾಟ್ ಕೊಹ್ಲಿ
- ಏಷ್ಯಾಕಪ್ ಹಾಗೂ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬೇಕೋ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬರಬೇಕೋ ಎಂಬ ಬಗ್ಗೆ ಇತ್ತೀಚೆಗೆ ಭಾರಿ ಚರ್ಚೆಗಳು ನಡೆಯುತ್ತಿವೆ. ಟೀಮ್ ಇಂಡಿಯಾ ಅಭ್ಯಾಸದ ಅವಧಿಯು ಈ ಗೊಂದಲಕ್ಕೆ ಸುಳಿವು ನೀಡಿದೆ.
ಆಗಸ್ಟ್ 30ರಿಂದ ಆರಂಭವಾಗುತ್ತಿರುವ ಏಷ್ಯಾಕಪ್ (Asia Cup) ಟೂರ್ನಿಗೂ ಮುನ್ನ, ಮಹತ್ವದ ಟೂರ್ನಿಗಾಗಿ ಟೀಮ್ ಇಂಡಿಯಾ ಆಟಗಾರರು ತಯಾರಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಆರು ದಿನಗಳ ತರಬೇತಿ ಶಿಬಿರದಲ್ಲಿ ಆಟಗಾರರು ಪಾಲ್ಗೊಂಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಆಲೂರು ಕ್ಯಾಂಪಸ್‌ನಲ್ಲಿ ಸೇರಿರುವ ಆಟಗಾರರು ಅಂತಿಮ ತಯಾರಿ ನಡೆಸುತ್ತಿದ್ದಾರೆ. ಆದರೂ, ಪಂದ್ಯಾವಳಿಗಳಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕ ಹೇಗಿರಲಿದೆ ಎಂಬುದೇ ಪ್ರಶ್ನೆಯಾಗಿ ಉಳಿದಿದೆ.
ಭಾರತದ ಏಷ್ಯಾಕಪ್ ತಂಡದಲ್ಲಿ ಎಲ್ಲರ ಗಮನ ಸೆಳೆದ ಅಂಶವೆಂದರೆ ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್. ಸುದೀರ್ಘ ಅವಧಿಯಿಂದ ಗಾಯಗೊಂಡು ತಂಡದಿಂದ ಹೊರಬಿದ್ದಿದ್ದ ಕನ್ನಡಿಗ ರಾಹುಲ್ ಮತ್ತು ಅಯ್ಯರ್, ಏಷ್ಯಾಕಪ್ ಮೂಲಕ ತಂಡಕ್ಕೆ ಮರಳುತ್ತಿದ್ದಾರೆ. 2023ರ ಐಪಿಎಲ್ ಸಮಯದಲ್ಲಿ ಮಂಡಿರಜ್ಜು ಗಾಯಕ್ಕೆ ಒಳಗಾದ ರಾಹುಲ್, ಮೇ ತಿಂಗಳಿನಿಂದ ತಂಡದಿಂದ ಹೊರಗುಳಿದಿದ್ದರು. ಅತ್ತ ಕೆಳ ಬೆನ್ನಿನ ಗಾಯದಿಂದಾಗಿ ಅಯ್ಯರ್ ಕೂಡಾ ಈ ವರ್ಷದ ಮಾರ್ಚ್ ತಿಂಗಳಿನಿಂದಲೇ ಟೀಮ್ ಇಂಡಿಯಾದಿಂದ ಹೊರಬಿದ್ದಿದ್ದಾರೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಅಭ್ಯಾಸ ಪಂದ್ಯಗಳ ಮೂಲಕ ತಮ್ಮ ಫಿಟ್‌ನೆಸ್ ಸಾಬೀತುಪಡಿಸಿದ ಈ ಇಬ್ಬರು ಆಟಗಾರರು, ಸದ್ಯ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಈ ಜೋಡಿಯನ್ನು ಏಷ್ಯಾಕಪ್‌ಗೆ ಆಯ್ಕೆ ಮಾಡಲಾಗಿದೆ. ಆಲೂರಿನಲ್ಲಿ ಶುಕ್ರವಾರ ನಡೆದ ಭಾರತದ ತರಬೇತಿಯಲ್ಲಿ, ಮುಂದಿನ ತಿಂಗಳು ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಯೋಜನೆಗಳು ಹೇಗಿರಲಿದೆ ಎಂಬುದು ಬಹಿರಂಗಗೊಂಡಿದೆ.
ಹೀಗಿರಲಿದೆ ಭಾರತದ ಬ್ಯಾಟಿಂಗ್ ಕ್ರಮಾಂಕ
ಕ್ರಿಕ್‌ಬಜ್ ವರದಿಯ ಪ್ರಕಾರ, ಅಭ್ಯಾಸ ಅವಧಿಯಲ್ಲಿ ಭಾರತದ ಬ್ಯಾಟಿಂಗ್ ಕ್ರಮಾಂಕವನ್ನು ಗಮನಿಸಿದರೆ ಎಲ್ಲಾ ಗೊಂದಲ ಬಗೆಹರಿಯುತ್ತದೆ. ಸೆಂಟರ್-ವಿಕೆಟ್ ಅಭ್ಯಾಸವನ್ನು ಆರಿಸಿಕೊಂಡಿರುವ ಭಾರತವು, ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಿದೆ. ಆ ಬಳಿಕ ನಿರೀಕ್ಷೆಯಂತೆಯೇ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಆಡಿದ್ದಾರೆ. ಇದು ಏಷ್ಯಾಕಪ್‌ಗೆ ಭಾರತದ ಅಗ್ರ ಕ್ರಮಾಂಕದ ಸಂಯೋಜನೆಯ ಸುಳಿವು ನೀಡಿದೆ.
ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬೇಕೋ ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬರಬೇಕೋ ಎಂಬ ಬಗ್ಗೆ ಇತ್ತೀಚೆಗೆ ಭಾರಿ ಚರ್ಚೆಗಳು ನಡೆದಿದ್ದವು. ಈ ನಡುವೆ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎಂಬುದನ್ನು ಅಭ್ಯಾಸದ ಕ್ರಮಾಂಕ ತಿಳಿಸಿದೆ.
ವಿರಾಟ್-ಶ್ರೇಯಸ್ ಬ್ಯಾಟಿಂಗ್ ಕ್ರಮಾಂಕದ ಲೆಕ್ಕಾಚಾರ
2019ರಲ್ಲಿ ನಡೆದ ಕೊನೆಯ ಏಕದಿನ ವಿಶ್ವಕಪ್ ನಂತರ, ಕೊಹ್ಲಿ 2020ರಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಒಂದು ಪಂದ್ಯದಲ್ಲಿ ಮಾತ್ರ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ದಾರೆ. 2018ರಿಂದ ಕೊಹ್ಲಿ ಮತ್ತು ಅಯ್ಯರ್ ಒಂದೇ ತಂಡದಲ್ಲಿ 29 ಬಾರಿ ಆಡಿದ್ದಾರೆ. ಪ್ರತಿ ಬಾರಿಯೂ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ, ಶ್ರೇಯಸ್ ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದಿದ್ದಾರೆ. 2020ರ ಆರಂಭದಿಂದ ಅಯ್ಯರ್ ಒಮ್ಮೆ ಮಾತ್ರ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು, ಮೂರು ಬಾರಿ 5ನೇ ಕ್ರಮಾಂಕದಲ್ಲಿ ಬೌಲರ್‌ಗಳನ್ನು ಎದುರಿಸಿದ್ದಾರೆ.
ರಾಹುಲ್, ಸೂರ್ಯಕುಮಾರ್ ಆಡ್ತಾರಾ?
ಶುಕ್ರವಾರ ನಡೆದ ಅಭ್ಯಾಸ ಅವಧಿಯಲ್ಲಿ ಕನ್ನಡಿಗ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಐದು ಮತ್ತು ಆರನೇ ಕ್ರಮಾಂಕದಲ್ಲಿ ಮೈದಾನಕ್ಕೆ ಇಳಿದಿದ್ದಾರೆ.
ಭಾರತದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಹೇಳಿರುವ ಪ್ರಕಾರ, ಏಷ್ಯಾಕಪ್‌ನ ಮೊದಲೆರಡು ಪಂದ್ಯಗಳಿಂದ ಕೆಎಲ್ ರಾಹುಲ್ ಹೊರಗುಳಿಯಬಹುದು. ಹೀಗಾಗಿ ಅವರು ವಿಕೆಟ್‌ಗಳ ನಡುವೆ ಓಡಿಲ್ಲ. ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್ ಮತ್ತು ಇತರ ಕೆಲವು ನೆಟ್ ಬೌಲರ್‌ಗಳ ಎಸೆತಕ್ಕೆ ರಾಹುಲ್ ಬ್ಯಾಟ್ ಬೀಸಿದರು. ವೇಗಿಗಳ ಎಸೆತಗಳಿಗೆ ರಾಹುಲ್ ಬೌಂಡರಿಗಳನ್ನು ಸಿಡಿಸಿದರು. ಅಲ್ಲದೆ ಸ್ಪಿನ್ನರ್‌ಗಳನ್ನು ಕೂಡಾ ಸಮರ್ಥವಾಗಿ ಎದುರಿಸಿದರು. ಇದು ರಾಹುಲ್ ಆಟದ ಬಗ್ಗೆ ಅಭಿಮಾನಿಗಳಿಗೆ ಪಾಸಿಟಿವ್ ಅಭಿಪ್ರಾಯ ಕೊಟ್ಟಿದೆ.
ಒಂದು ವೇಳೆ ರಾಹುಲ್ ತಂಡದಿಂದ ಹೊರಗುಳಿದರೆ, ಇಶಾನ್ ವಿಕೆಟ್ ಕೀಪರ್ ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಆದರೆ, ಇಶಾನ್ 5ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೋ ಅಥವಾ ಗಿಲ್ ಬದಲಿಗೆ ಆರಂಭಿಕರಾಗಿ ಕಣಕ್ಕಿಳಿಯುತ್ತಾರೋ ಎಂಬ ಪ್ರಶ್ನೆ ಉದ್ಭವಿಸುತ್ತದೆ.