Video: ವಿಶ್ವಕಪ್ ನಡುವೆ ದೀಪಾವಳಿ ಆಚರಿಸಿದ ಟೀಮ್ ಇಂಡಿಯಾ ಆಟಗಾರರು; ಕುಟುಂಬದೊಂದಿಗೆ ಸಂಭ್ರಮ
Nov 12, 2023 03:03 PM IST
ಸಾಂಪ್ರದಾಯಿಕ ಉಡುಗೆಯಲ್ಲಿ ಟೀಮ್ ಇಂಡಿಯಾ ಆಟಗಾರರು
- ಭಾರತದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ವಿಶ್ವಕಪ್‌ನಲ್ಲಿ ನಿರತರಾಗಿರುವ ಭಾರತ ಕ್ರಿಕೆಟ್ ತಂಡ ಕೂಡಾ ಈ ಸಂಭ್ರಮದಲ್ಲಿ ಭಾಗಿಯಾಗಿದೆ. ಟೀಮ್ ಇಂಡಿಯಾ ಆಟಗಾರರು ದೀಪಾವಳಿ ಆಚರಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
ಪ್ರಸಕ್ತ ಆವೃತ್ತಿಯ ಕ್ರಿಕೆಟ್ ವಿಶ್ವಕಪ್‌ನಲ್ಲಿ ಆತಿಥೇಯ ಭಾರತ ತಂಡವು ಅಜೇಯವಾಗಿ ಮುನ್ನಡೆಯುತ್ತಿದ್ದು, ನವೆಂಬರ್ 12ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲೀಗ್ ಹಂತದ ಅಂತಿಮ ಪಂದ್ಯ ಆಡುತ್ತಿದೆ. ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ನೆದರ್ಲ್ಯಾಂಡ್ಸ್ ವಿರುದ್ಧ ಟೀಮ್ ಇಂಡಿಯಾ ಸೆಣಸುತ್ತಿದೆ. ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ, ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಮತ್ತು ಸಹಾಯಕ ಸಿಬ್ಬಂದಿ ಬೆಂಗಳೂರಿನ ಟೀಮ್ ಹೋಟೆಲ್‌ನಲ್ಲಿ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಅದ್ಧೂರಿಯಾಗಿ ದೀಪಾವಳಿ ಆಚರಿಸಿದ್ದಾರೆ.
ದೇಶಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ವಿಶ್ವಕಪ್‌ನಲ್ಲಿ ಬ್ಯುಸಿಯಾಗಿರುವ ರೋಹಿತ್ ಪಡೆ ಕೂಡಾ ಈ ಸಂಭ್ರಮದಲ್ಲಿ ಭಾಗಿಯಾಗಿದೆ. ಭಾರತ ತಂಡದ ಆಟಗಾರರು ದೀಪಾವಳಿ ಆಚರಿಸುತ್ತಿರುವ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ ಭಾರತೀಯ ಕ್ರಿಕೆಟಿಗರ ಸಂಭ್ರಮಾಚರಣೆ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ. ಎಲ್ಲಾ ಆಟಗಾರರು ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳ ಮನಗೆದ್ದಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್ ಅವರು ದೀಪಾವಳಿ ಸಂಭ್ರಮದ ಚಿತ್ರವನ್ನು ಎಕ್ಸ್‌ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿದ್ದಾರೆ. ತಂಡದ ಎಲ್ಲಾ ಕ್ರಿಕೆಟಿಗರು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ತಮ್ಮ ಪತ್ನಿ ರಿತಿಕಾ ಅವರೊಂದಿಗೆ ಚಿತ್ರವನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಸ್ನೇಹಿತರು, ಕುಟುಂಬ ಮತ್ತು ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ.
ವೇಗಿ ಮೊಹಮ್ಮದ್ ಶಮಿ ಹಬ್ಬದ ಶುಭಾಶಯ ಕೋರಿದ್ದಾರೆ.
ಸೂರ್ಯಕುಮಾರ್ ಯಾದವ್ ತಮ್ಮ ಪತ್ನಿ ದೇವಿಶಾ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಶುಭ್ಮನ್ ಗಿಲ್, ಮೊಹಮ್ಮದ್ ಸಿರಾಜ್, ಇಶಾನ್ ಕಿಶನ್ ಮತ್ತು ಕುಲ್ದೀಪ್ ಯಾದವ್ ಕೂಡ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ.
ಏಕದಿನ ವಿಶ್ವಕಪ್ 2023ರ 45ನೇ ಪಂದ್ಯದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ತಂಡಗಳು ಭಾನುವಾರ ಮುಖಾಮುಖಿಯಾಗುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಪಂದ್ಯ ಆಡಿದ ತಂಡವೇ ಡಚ್ಚರ ವಿರುದ್ಧವೂ ಕಣಕ್ಕಿಳಿಯುತ್ತಿದೆ.