ನಿತ್ಯ ಯೋಗ, ಸೀಮಿತ ಆಹಾರ; ಕೆಎಲ್ ರಾಹುಲ್ ಫಿಟ್‌ನೆಸ್ ಸೀಕ್ರೆಟ್ ನೀವೂ ತಿಳ್ಕೊಳಿ
Jan 06, 2024 05:45 PM IST
ಕೆಎಲ್ ರಾಹುಲ್ ಫಿಟ್‌ನೆಸ್ ಸೀಕ್ರೆಟ್
- KL Rahul Fitness Regime: ಪ್ರಾದೇಶಿಕ ಆಹಾರವನ್ನು ಹಿತ ಮಿತವಾಗಿ ಸೇವಿಸಿದರೆ ಫಿಟ್ ಆಗಿರುತ್ತೀರಿ ಎಂದು ಕೆಎಲ್ ರಾಹುಲ್ ಪ್ರತಿಪಾದಿಸುತ್ತಾರೆ. ಹೀಗಾಗಿ ಫಿಟ್‌ನೆಸ್‌ಗೆ ಆಹಾರಕ್ರಮ ಮುಖ್ಯ ಎಂಬುದು ಕನ್ನಡಿಗನ ವಾದ.
ಟೀಮ್ ಇಂಡಿಯಾದಲ್ಲಿ ಇತ್ತೀಚೆಗೆ ಸ್ಥಿರ ಪ್ರದರ್ಶನ ನೀಡುತ್ತಿರುವ ಕನ್ನಡಿಗ ಕೆಎಲ್ ರಾಹುಲ್ (KL Rahul), ತಂಡದಲ್ಲಿ ತಮ್ಮ ಸ್ಥಾನವನ್ನು ಬಹುತೇಕ ಕಾಯಂ ಮಾಡಿದ್ದಾರೆ. ತಮ್ಮ ದೇಹವನ್ನು ಫಿಟ್ ಆಗಿ ಇರಿಸಿಕೊಂಡಿರುವ ರಾಹುಲ್, ಆಹಾರಕ್ರಮ ಹಾಗೂ ಫಿಟ್‌ನೆಸ್ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವವರಲ್ಲ. ಆರೋಗ್ಯದ ಬಗ್ಗೆ ಅಪಾರ ಕಾಳಜಿ ವಹಿಸುವ ಕನ್ನಡಿಗನ ಡಯಟ್ ಪ್ಲಾನ್ ಹೇಗಿದೆ, ಫಿಟ್‌ನೆಸ್ ಹೇಗೆ ಕಾಪಾಡಿಕೊಳ್ಳುತ್ತಾರೆ ಎಂಬ ಕುರಿತ ಮಾಹಿತಿ ಇಲ್ಲಿದೆ.
ಪ್ರತಿದಿನ ತಪ್ಪದೆ ವ್ಯಾಯಾಮ ಮಾಡುವ ರಾಹುಲ್, ಆರೋಗ್ಯಕರ ಆಹಾರವನ್ನು ಮಾತ್ರ ಸೇವಿಸುತ್ತಾರೆ. ವಿಶ್ರಾಂತಿಗಾಗಿ ನಿಗದಿತ ಸಮಯವನ್ನು ಮೀಸಲಿರಿಸುವ ಕ್ರಿಕೆಟಿಗ, ದೇಹ ಹಾಗೂ ಮನಸಿಗೆ ಸಂಪೂರ್ಣ ವಿಶ್ರಾಂತಿ ನೀಡುತ್ತಾರೆ. ಸರಿಯಾದ ನಿದ್ದೆಯೊಂದಿಗೆ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳುತ್ತಾರೆ.
ಎಲ್ಲಿಯವರೆಗೆ ಪ್ರಾದೇಶಿಕ ಆಹಾರವನ್ನು ಕಾಲೋಚಿತವಾಗಿ ಮತ್ತು ಹಿತ-ಮಿತವಾಗಿ ಸೇವಿಸುತ್ತೀರೋ, ಅಲ್ಲಿಯವರೆಗೆ ಫಿಟ್ ಆಗಿರುತ್ತೀರಿ ಎಂದು ಕೆಎಲ್ ರಾಹುಲ್ ಪ್ರತಿಪಾದಿಸುತ್ತಾರೆ. ಹೀಗಾಗಿ ಫಿಟ್‌ನೆಸ್‌ಗೆ ಆಹಾರಕ್ರಮ ಮುಖ್ಯ ಎಂಬುದು ಕನ್ನಡಿಗನ ವಾದ.
ಇದನ್ನೂ ಓದಿ | ತೂಕ ಇಳಿಸೋ ಪ್ಲಾನ್ ಇದ್ಯಾ, ಹಾಗಿದ್ರೆ ನಿಮ್ಮ ಫುಡ್‌ಲಿಸ್ಟ್‌ನಲ್ಲಿ ಸೋಯಾ ಚಂಕ್‌ಗೂ ಇರಲಿ ಜಾಗ; ಇದನ್ನ ಹೇಗೆಲ್ಲಾ ತಿನ್ನಬಹುದು ನೋಡಿ
ಪಂದ್ಯಕ್ಕಿಂತ ಮುನ್ನ ಜಿಮ್ ವರ್ಕೌಟ್
ದೇಹವನ್ನು ಫಿಟ್ ಆಗಿರಿಸಿಕೊಳ್ಳಲು ಬಯಸುವ ಪ್ರತಿಯೊಬ್ಬರು ಕೂಡಾ ಜಿಮ್ ಹೋಗುತ್ತಾರೆ ಅಥವಾ ತಮ್ಮದೇ ಆದ ವರ್ಕೌಟ್ ವಿಧಾನ ಅನುಸರಿಸುತ್ತಾರೆ. ಅದರಂತೆಯೇ ರಾಹುಲ್ ಕೂಡಾ ಪ್ರತಿ ಬಾರಿ ಪಂದ್ಯಕ್ಕಿಂತ ಇಪ್ಪತ್ತು ನಿಮಿಷ ಮುಂಚಿತವಾಗಿ ವರ್ಕೌಟ್ ಮಾಡುತ್ತಾರೆ. ವರ್ಕೌಟ್ ಮೂಲಕ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಾಗುತ್ತಾರೆ.
ಸೂಕ್ತ ಆಹಾರಕ್ರಮ
ಕೆಎಲ್ ರಾಹುಲ್ ಅವರಿಗೆ ವೈಯಕ್ತಿಕ ತರಬೇತುದಾರರಿದ್ದಾರೆ (personal trainer). ಅವರು ರಾಹುಲ್ ಆರೋಗ್ಯ ಹಾಗೂ ದೇಹಸ್ಥಿತಿಯನುಸಾರ ಸೂಕ್ತ ಫಿಟ್‌ನೆಸ್ ಸಲಹೆ ನೀಡುತ್ತಾರೆ. ಕೆಎಲ್ ಡಿಎನ್‌ಎ ಪರೀಕ್ಷೆಯ ಪ್ರಕಾರ, ಅವರಿಗೆ ವಿಶೇಷ ಆಹಾರಕ್ರಮವನ್ನು (ಡಯಟ್ ಪ್ಲಾನ್) ರೂಪಿಸಿದ್ದಾರೆ. ಆ ಪ್ರಕಾರ ಕೆಲವೊಂದು ಆಹಾರಗಳನ್ನು ತ್ಯಜಿಸಲು ಸಲಹೆ ನೀಡಿದ್ದಾರೆ. ಅದರಂತೆ ವೇಗವಾಗಿ ತೂಕ ಕಡಿಮೆಯಾಗಲು ನೆರವಾಗುವ ಆಹಾರವನ್ನು ರಾಹುಲ್ ಸೇವಿಸುವುದಿಲ್ಲ.
ಯೋಗ ಬೇಕೇ ಬೇಕು
ಭಾರತದ ಶ್ರೀಮಂತ ಯೋಗ ಪರಂಪರೆ ಕೆಎಲ್ ರಾಹುಲ್ ಅವರಿಗೂ ಭಾರಿ ಇಷ್ಟ. ರಜೆಯ ದಿನಗಳಲ್ಲೂ ನಿತ್ಯ ರಾಹುಲ್ ಯೋಗಾಭ್ಯಾಸ ಮಾಡುತ್ತಾರೆ. ಆಟಕ್ಕೆ ತ್ವರಿತವಾಗಿ ಹೊಂದಿಕೊಳ್ಳಲು ಮತ್ತು ದೇಹ ಹಾಗೂ ಮನಸ್ಸನ್ನು ಚುರುಕಾಗಿರಿಸಲು ಯೋಗ ಸಹಾಯ ಮಾಡುತ್ತದೆ.
ವ್ಯಾಯಾಮ, ಓಟ, ನಡಿಗೆ
ರಾಹುಲ್ ಪ್ರತಿದಿನ ತಪ್ಪದೆ ವ್ಯಾಯಾಮ ಮಾಡುತ್ತಾರೆ. ಇದರಲ್ಲಿ ಜಾಗಿಂಗ್, ರನ್ನಿಂಗ್, ಇತರ ಆಟಗಳು, ಸೈಕ್ಲಿಂಗ್ ಎಲ್ಲವೂ ಸೇರಿವೆ. ವಾರದ ವಿವಿಧ ದಿನಗಳಲ್ಲಿ ವಿವಿಧ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ.
ಡೈರಿ ಉತ್ಪನ್ನಗಳಿಗೆ ಗುಡ್ ಬಾಯ್
ರಾಹುಲ್ ಡೈರಿ ಉತ್ಪನ್ನಗಳನ್ನು ಸೇವಿಸುವುದನ್ನು ನಿಲ್ಲಿಸಿದ್ದಾರೆ. ಅಂದರೆ ಹಾಲಿನ ಉತ್ಪನ್ನಗಳನ್ನು ಕನ್ನಡಿಗ ಸೇವಿಸಲ್ಲ. ಕ್ರಿಕೆಟ್ ಆಡಲು ಆರಂಭಿಸಿದ ನಂತರ ನಿಧಾನವಾಗಿ ಈ ಆಹಾರ ಕ್ರಮವನ್ನು ಅಭ್ಯಾಸ ಮಾಡಿದ್ದಾರೆ. ಕರ್ನಾಟಕ ಕರಾವಳಿ ಮೂಲದವರಾದ ರಾಹುಲ್, ಸಹಜವಾಗಿಯೇ ಅನ್ನ ತಿನ್ನಲು ಇಷ್ಟಪಡುತ್ತಾರೆ. ಆ ಮೂಲಕ ಕಾರ್ಬೋಹೈಡ್ರೇಟ್ ಸೇವನೆಗೆ ಅವರು ನಿರ್ಬಂಧ ಹೇರಿಲ್ಲ. ಆದರೆ ಜಿಮ್ ಮತ್ತು ವ್ಯಾಯಾಮಗಳ ಮೂಲಕ ದೇಹವನ್ನು ಫಿಟ್ ಆಗಿ ಇರಿಸಿಕೊಳ್ಳುತ್ತಾರೆ.
ಈ ವ್ಯಾಯಾಮಗಳು ರಾಹುಲ್‌ಗೆ ಇಷ್ಟ
ಒಳಾಂಗಣ ವ್ಯಾಯಾಮಕ್ಕಿಂತ ಹೊರಾಂಗಣ ವ್ಯಾಯಾಮವನ್ನು ನೆಚ್ಚಿಕೊಳ್ಳುವ ರಾಹುಲ್, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಾರೆ. ಪ್ರಕೃತಿಯ ನಡುವೆ ದೇಹಕ್ಕೆ ವ್ಯಾಯಾಮದೊಂದಿಗೆ ತಾಜಾತನವನ್ನು ಕೊಡುತ್ತಾರೆ. ಜಿಮ್‌ನಲ್ಲಿ ಪುಶ್-ಅಪ್ಸ್, ಬಾಕ್ಸ್ ಜಂಪ್ಸ್, ಫ್ರಂಟ್ ಸ್ಕ್ವಾಟ್ಸ್, ಬ್ಯಾಟಲ್ ರೋಪ್ ವೇವ್ಸ್ ಮತ್ತು ಪುಲ್-ಅಪ್ಸ್ ಹೆಚ್ಚಾಗಿ ಮಾಡುತ್ತಾರೆ. ಹೊರಾಂಗಣ ವ್ಯಾಯಾಮದ ಭಾಗವಾಗಿ ಫುಟ್‌ಬಾಲ್, ಬಾಸ್ಕೆಟ್‌ಬಾಲ್, ವಾಲಿಬಾಲ್ ಮತ್ತು ಈಜು ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಭಾಗಿಯಾಗುತ್ತಾರೆ.