ಟಿ20 ವಿಶ್ವಕಪ್‌ಗೆ ನನ್ನನ್ನು ಆಯ್ಕೆ ಮಾಡ್ತೀರಾ, ಈಗಲೇ ಹೇಳಿ; ಬಿಸಿಸಿಐ ಅಧಿಕಾರಿಗಳಿಗೆ ರೋಹಿತ್ ಶರ್ಮಾ ಪ್ರಶ್ನೆ
Dec 06, 2023 04:08 PM IST
ರೋಹಿತ್ ಶರ್ಮಾ
- Rohit Sharma: 2024ರ ಟಿ20 ವಿಶ್ವಕಪ್‌ಗೆ ನನ್ನನ್ನು ಆಯ್ಕೆ ಮಾಡ್ತೀರಾ ಎಂದು ರೋಹಿತ್ ಶರ್ಮಾ ಬಿಸಿಸಿಐ ಉನ್ನತ ಅಧಿಕಾರಿಗಳನ್ನು ಕೇಳಿದ್ದಾರೆ.
ಎಕದಿನ ವಿಶ್ವಕಪ್ ಮುಗಿದ ಬೆನ್ನಲ್ಲೇ, ಬಿಸಿಸಿಐನ ಉನ್ನತ ಅಧಿಕಾರಿಗಳು ಇತ್ತೀಚೆಗೆ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಆಯ್ಕೆ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ಭಾರತೀಯ ಕ್ರಿಕೆಟ್ ಕುರಿತಂತೆ ಹಲವು ವಿಷಯಗಳನ್ನು ಮೀಟಿಂಗ್‌ನಲ್ಲಿ ಚರ್ಚಿಸಲಾಯ್ತು. ಮುಖ್ಯವಾಗಿ ಮುಂದಿನ ವರ್ಷ ನಡೆಯುತ್ತಿರುವ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಮನಗಂಡು ಕೆಲವೊಂದು ಅಂಶಗಳ ಕುರಿತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ವೇಳೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ತಂಡವನ್ನು ಕೂಡಾ ಆಯ್ಕೆ ಮಾಡಲಾಯ್ತು.
ಇದನ್ನೂ ಓದಿ | ಇಂಡೋ-ಆಫ್ರಿಕಾ ಟಿ20 ಸರಣಿ: ಮುಖಾಮುಖಿ ದಾಖಲೆ, ಅತ್ಯಧಿಕ ರನ್, ವಿಕೆಟ್, ಗರಿಷ್ಠ ಸ್ಕೋರ್; ಸಂಪೂರ್ಣ ವಿವರ ಇಲ್ಲಿದೆ
ವಿಶ್ವಕಪ್‌ನಲ್ಲಿ ಕಹಿ ಸೋಲಿನ ಬಳಿಕ, ಭಾರತದ ನಾಯಕ ರೋಹಿತ್ ಶರ್ಮಾ ತಮ್ಮ ಕುಟುಂಬದೊಂದಿಗೆ ಲಂಡನ್‌ಗೆ ಹಾರಿದ್ದಾರೆ. ಹೀಗಾಗಿ ನವದೆಹಲಿಯಲ್ಲಿ ನಡೆದ ಸಭೆಗೆ ಅವರು ವಿರ್ಚುವಲ್ ಆಗಿ ಸೇರಿಕೊಂಡಿದ್ದರು. ಕಳೆದ ಕೆಲವು ತಿಂಗಳುಗಳ ವಿಶ್ರಾಂತಿ ಇಲ್ಲದೆ ಕ್ರಿಕೆಟ್ ಆಡುತ್ತಿರುವ ಹಿಟ್‌ಮ್ಯಾನ್, ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ ದಕ್ಷಿಣ ಆಫ್ರಿಕಾ ವೈಟ್‌ಬಾಲ್ ಸರಣಿಯಿಂದ ವಿಶ್ರಾಂತಿ ಕೇಳಿದ್ದಾರೆ. ಇದೇ ವೇಳೆ, ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ನಾನು ಆಡಬೇಕೆಂದು ನೀವು ಬಯಸಿದ್ದೀರಾ ಎಂದು ಕೇಳಿದ್ದಾರೆ. ಈ ಕುರಿತು ಸಭೆಯಲ್ಲಿದ್ದ ಅಧಿಕಾರಿಯೊಬ್ಬರು ರೋಹಿತ್ ಮತ್ತು ಇತರರ ನಡುವಿನ ಸಂಭಾಷಣೆಯನ್ನು ವಿವರಿಸಿರುವುದಾಗಿ ದೈನಿಕ್ ಜಾಗರಣ್ ಪತ್ರಿಕೆ ವರದಿ ಮಾಡಿದೆ.
ಟಿ20 ವಿಶ್ವಕಪ್ ಕುರಿತು ಬಿಸಿಸಿಐ ಅಧಿಕಾರಿಗಳು ಮತ್ತು ಆಯ್ಕೆಗಾರರನ್ನು ಕೇಳಿದ ರೋಹಿತ್ ಶರ್ಮಾ
ಸಭೆಯಲ್ಲಿ ಹಾಜರಿದ್ದ ಬಿಸಿಸಿಐ ಅಧಿಕಾರಿಗಳು ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಮುಂದೆ ರೋಹಿತ್ ಪ್ರಶ್ನೆ ಹಾಕಿದ್ದಾರೆ. ‘ನೀವು ನನ್ನನ್ನು ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲು ಬಯಸಿದರೆ ಅದನ್ನು ಈಗಲೇ ತಿಳಿಸಿ. ಅದಕ್ಕಾಗಿ ಹೇಗೆ ಸಿದ್ದತೆ ಮಾಡಬೇಕೆಂಬುದನ್ನು ಸ್ಪಷ್ಟಪಡಿಸಿ’ ಎಂದು ರೋಹಿತ್ ಹೇಳಿದ್ದಾಗಿ ಅಧಿಕಾರಿಯೊಬ್ಬರು ಹೇಳಿರುವ ಬಗ್ಗೆ ಹಿಂದಿ ದಿನಪತ್ರಿಕೆ ವರದಿ ಮಾಡಿದೆ.
ರೋಹಿತ್ ನಾಯಕತ್ವಕ್ಕೆ ಎಲ್ಲರ ಇರಾದೆ
ಸಭೆಯಲ್ಲಿ ಹಾಜರಿದ್ದ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಕೂಡಾ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡವನ್ನು ಮುನ್ನಡೆಸಲು ರೋಹಿತ್ ಶರ್ಮಾ ಸೂಕ್ತ ವ್ಯಕ್ತಿ ಎಂಬುದಾಗಿ ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ದಕ್ಷಿಣ ಆಫ್ರಿಕಾ ಪ್ರವಾಸದಿಂದಲೇ ಟಿ20 ತಂಡದ ನಾಯಕತ್ವವನ್ನು ರೋಹಿತ್ ವಹಿಸಿಕೊಳ್ಳಬೇಕೆಂದು ಆಯ್ಕೆದಾರರು ಬಯಸಿದ್ದರು. ಆದರೆ ವಿಶ್ರಾಂತಿ ಸಲುವಾಗಿ ಅನುಭವಿ ಆರಂಭಿಕ ಆಟಗಾರ ಸೀಮಿತ ಓವರ್ ಸರಣಿಗಳಿಂದ ವಿರಾಮವನ್ನು ಕೋರಿದ ಹಿನ್ನೆಲೆಯಲ್ಲಿ, ದಕ್ಷಿಣ ಆಫ್ರಿಕಾ ಸರಣಿಗೆ ಅವರನ್ನು ಆಯ್ಕೆ ಮಾಡಿಲ್ಲ ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ | ತಂಡಕ್ಕೆ ಮರಳಿದ ಪ್ರಮುಖರು, ಯಾರೆಲ್ಲಾ ಇನ್, ಯಾರೆಲ್ಲಾ ಔಟ್; ದ.ಆಫ್ರಿಕಾ ಮೊದಲ ಟಿ20ಗೆ ಭಾರತದ ಪ್ಲೇಯಿಂಗ್ XI
ಟೆಸ್ಟ್ ತಂಡಕ್ಕೆ ಹಿಟ್‌ಮ್ಯಾನ್ ಕಂಬ್ಯಾಕ್
ಸದ್ಯ ಡಿಸೆಂಬರ್ 10ರಿಂದ ಪ್ರಾರಂಭವಾಗುವ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಸೂರ್ಯಕುಮಾರ್ ಯಾದವ್ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ. ಮತ್ತೊಂದೆಡೆ ಕೆಎಲ್ ರಾಹುಲ್ ನಾಯಕತ್ವದಲ್ಲಿ ಏಕದಿನ ಸರಣಿಯಲ್ಲಿ ಭಾರತ ಆಡಲಿದೆ. ಆ ಬಳಿಕ ಡಿಸೆಂಬರ್ 26ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ನಾಯಕನಾಗಿ ಮರಳಲಿದ್ದಾರೆ. ಅವರೊಂದಿಗೆ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಕೂಡಾ ವಿಶ್ರಾಂತಿ ಮುಗಿಸಿ ತಂಡ ಸೇರಿಕೊಳ್ಳಲಿದ್ದಾರೆ.