ನಿಮ್ಮಂಥವರು ಸಿಗುವುದೇ ಅಪರೂಪ; ನವೀನ್ ಉಲ್ ಹಕ್ ಜನ್ಮದಿನಕ್ಕೆ ಗಂಭೀರ್ ವಿಶೇಷ ಪೋಸ್ಟ್, ಹೌದೌದು ತುಂಬಾ ಅಪರೂಪ ಎಂದ ಕೊಹ್ಲಿ ಫ್ಯಾನ್ಸ್
Sep 23, 2023 04:43 PM IST
ನವೀನ್ ಉಲ್ ಹಕ್ ಜನ್ಮದಿನಕ್ಕೆ ಶುಭಕೋರಿದ ಗೌತಮ್ ಗಂಭೀರ್.
- Naveen Ul Haq Birthday: ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವೇಗಿ ನವೀನ್ ಉಲ್ ಹಕ್ ಅವರು ಇಂದು 24ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಅಫ್ಘಾನಿಸ್ತಾನದ ಯುವ ವೇಗಿ ನವೀನ್ ಉಲ್ ಹಕ್ ಅವರಿಗೆ ಇಂದು 24 ವರ್ಷದ ಹುಟ್ಟು ಹಬ್ಬದ (Naveen ul Haq Birthday) ಸಂಭ್ರಮ. ಅಫ್ಘನ್ ತಂಡದ ಬೌಲಿಂಗ್ ಅಸ್ತ್ರ ಎನಿಸಿದ ಈ ಯಂಗ್ ಸೆನ್ಸೇಷನ್ಗೆ ಮಾಜಿ-ಹಾಲಿ ಕ್ರಿಕೆಟರ್ ಮತ್ತು ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಅದರಂತೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ (Gautam Gambhir), ವಿಶೇಷವಾಗಿ ನವೀನ್ ಬರ್ತ್ಡೇಗೆ ಶುಭ ಕೋರಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಗಂಭೀರ್ ಪೋಸ್ಟ್ಗೆ ಇಬ್ಬರನ್ನೂ ಸೇರಿಸಿ ಅಣಕಿಸುವಂತೆ ವಿರಾಟ್ ಕೊಹ್ಲಿ (Virat Kohli) ಫ್ಯಾನ್ಸ್ ಪ್ರತಿಕ್ರಿಯಿಸುತ್ತಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ನವೀನ್ ಉಲ್ ಹಕ್ಗೆ ಜನ್ಮದಿನದ ಶುಭಾಶಯ ಕೋರಿರುವ ಗಂಭೀರ್, ವಿಶೇಷ ಕ್ಯಾಪ್ಶನ್ ಬರೆದಿದ್ದಾರೆ. ತನ್ನ ಜೊತೆಗಿನ ಫೋಟೋವನ್ನು ಹಂಚಿಕೊಂಡ ಗಂಭೀರ್, ಜನ್ಮದಿನದ ಶುಭಾಶಯಗಳು ನವೀನ್ ಉಲ್ ಹಕ್. ನಿಮ್ಮಂತಹವರು ಸಿಗುವುದು ಬಹಳ ಕಡಿಮೆ. ಎಂದಿಗೂ ಬದಲಾಗಬೇಡ ಎಂದು ಬರೆದಿದ್ದಾರೆ. ಇಬ್ಬರು ಸಹ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಕೆಲಸ ಮಾಡುತ್ತಿದ್ದಾರೆ. ಗಂಭೀರ್ ಮೆಂಟರ್ ಆಗಿದ್ದರೆ, ನವೀನ್ ತಂಡದ ಬೌಲರ್.
ಕೊಹ್ಲಿ ಅಭಿಮಾನಿಗಳ ಪ್ರತಿಕ್ರಿಯೆ
ಗಂಭೀರ್ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಫ್ಯಾನ್ಸ್, ವಿರಾಟ್ ಕೊಹ್ಲಿ ಹೆಸರಿನ ಜೊತೆ ಲವ್ ಎಮೋಜಿಯನ್ನು ಬಳಸಿದ್ದಾರೆ. ಆದರೆ ನವೀನ್ ಉಲ್ ಹಕ್ ಅವರಿಗೆ ಒಬ್ಬರೂ ಸಹ ಶುಭ ಕೋರಿದ್ದು, ಕಾಮೆಂಟ್ಗಳಲ್ಲಿ ಕಂಡು ಬಂದಿಲ್ಲ. ಕೊಹ್ಲಿ ಅಭಿಮಾನಿಗಳು ಬಗೆಬಗೆಯ ಕಾಮೆಂಟ್ಗಳ ಮೂಲಕ ಇಬ್ಬರನ್ನೂ ಅಣಕಿಸಿದ್ದಾರೆ. ಐಪಿಎಲ್ನಲ್ಲಿ ನವೀನ್ ಉಲ್ ಹಕ್ ಮತ್ತು ವಿರಾಟ್ ಕೊಹ್ಲಿ ಗಲಾಟೆ ಬಳಿಕ ನವೀನ್ಗೆ ಸಂಬಂಧಿಸಿದ ಪ್ರತಿ ವಿಷಯದಲ್ಲೂ ಫ್ಯಾನ್ಸ್ ಟ್ರೋಲ್ ಮಾಡುತ್ತಿದ್ದಾರೆ.
ಐಪಿಎಲ್ನಲ್ಲಿ ಕೊಹ್ಲಿ ಜೊತೆ ಕಿರಿಕ್
ಪ್ರಸಕ್ತ ಸಾಲಿನ ಐಪಿಎಲ್ನಲ್ಲಿ ಆರ್ಸಿಬಿ-ಲಕ್ನೋ ನಡುವಿನ ಪಂದ್ಯ ಮುಕ್ತಾಯದ ನಂತರ ಹಸ್ತಲಾಘವ ಮಾಡುವ ಸಂದರ್ಭದಲ್ಲಿ ಕೊಹ್ಲಿ ಜೊತೆ ನವೀನ್ ಕಿರಿಕ್ ಮಾಡಿಕೊಂಡಿದ್ದರು. ನವೀನ್ ಬ್ಯಾಟಿಂಗ್ ಮಾಡುವಾಗ ಕೊಹ್ಲಿ ಗುರಾಯಿಸಿ ನೋಡಿದ್ದರು. ಇದೇ ವಿಚಾರವಾಗಿ ಹಸ್ತಲಾಘವ ವೇಳೆ ನವೀನ್ ವಾಕ್ಸಮರ ನಡೆಸಿತ್ತು. ಆಗ ನವೀನ್ಗೆ ಬೆಂಬಲ ನೀಡಿದ್ದ ಗಂಭೀರ್, ಕೊಹ್ಲಿ ಜೊತೆಗೆ ದೊಡ್ಡ ಗಲಾಟೆ ಮಾಡಿಕೊಂಡಿದ್ದರು. ಇಬ್ಬರಿಗೂ ದಂಡ ವಿಧಿಸಲಾಗಿತ್ತು.
ನವೀನ್ ವಿವಾದಗಳು
ನವೀನ್ ಕೊಹ್ಲಿ ಜೊತೆಗೆ ಮಾತ್ರವಲ್ಲ, ಹಲವರ ಜೊತೆ ಜಗಳ ಮಾಡಿಕೊಂಡಿದ್ದಾರೆ. 2020ರ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಮೊಹಮ್ಮದ್ ಅಮೀರ್ ಅವರೊಂದಿಗೆ ತೀವ್ರ ಮಾತಿನ ಚಕಮಕಿ ನಡೆಸಿದ್ದರು. ಪಂದ್ಯದ ನಂತರದ ಹಸ್ತಲಾಘವದ ಸಮಯದಲ್ಲಿ ನವೀನ್ ಮತ್ತು ಶಾಹಿದ್ ಅಫ್ರಿದಿ ನಡುವೆ ವಾಕ್ಸಮರ ನಡೆದಿತ್ತು. 2021ರಲ್ಲಿ ಇದೇ ಲೀಗ್‌ನಲ್ಲಿ ಶ್ರೀಲಂಕಾದ ತಿಸಾರ ಪೆರೆರಾ ಜೊತೆ ಮಾತಿನ ಚಕಮಕಿಯಲ್ಲಿ ಭಾಗಿಯಾಗಿದ್ದರು.
2022-23ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಸಿಂಗಲ್ ಅನ್ನು ಕದಿಯಲು ಪ್ರಯತ್ನಿಸುತ್ತಿದ್ದ ಡಿ'ಆರ್ಸಿ ಶಾರ್ಟ್ಗೆ ನವೀನ್ ಉದ್ದೇಶಪೂರ್ವಕವಾಗಿ ಅಡ್ಡಬಂದರು. ಆಗ ಇಬ್ಬರ ನಡುವೆ ದೊಡ್ಡದಾಗಿ ಗಲಾಟೆ ನಡೆದಿತ್ತು. ಮೈದಾನದಲ್ಲಿ ಸ್ವಲ್ಪ ಉದ್ವಿಗ್ನತೆಗೆ ಕಾರಣವಾಯಿತು. ಕೊನೆಗೆ ಐಪಿಎಲ್ನಲ್ಲಿ ಜೊತೆಗೆ ಕ್ಯಾತೆ ತೆಗೆದರು. ಅಲ್ಲದೆ, ಇನ್ಸ್ಟಾ ಸ್ಟೋರಿಗಳಲ್ಲಿ ಕೊಹ್ಲಿ ಮತ್ತು ಅವರ ಫ್ಯಾನ್ಸ್ ಅನ್ನು ಕೆಣಕುವ ರೀತಿ ಪೋಸ್ಟ್ ಹಾಕುತ್ತಿದ್ದರು. ಇದರಿಂದ ಅಭಿಮಾನಿಗಳಿಗೆ ಮನಬಂದಂತೆ ಟ್ರೋಲ್ ಮಾಡಿದ್ದರು.
ನವೀನ್ ವೃತ್ತಿಜೀವನ
2016ರಲ್ಲಿ ಏಕದಿನ ಕ್ರಿಕೆಟ್ಗೆ ಕಾಲಿಟ್ಟ ನವೀನ್, ಈವರೆಗೂ 7 ಪಂದ್ಯಗಳನ್ನಷ್ಟೇ ಆಡಿದ್ದು, 14 ವಿಕೆಟ್ ಪಡೆದಿದ್ದಾರೆ. 27 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವೇಗಿ, 34 ವಿಕೆಟ್ ಕಬಳಿಸಿದ್ದು, 8.11ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಕಣಕ್ಕಿಳಿದಿದ್ದು, 8 ಪಂದ್ಯಗಳಲ್ಲಿ 11 ವಿಕೆಟ್ ಬೇಟೆಯಾಡಿದ್ದಾರೆ. 7.82ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.