ವಾಚ್ಮನ್ ಮಗ ರವೀಂದ್ರ ಜಡೇಜಾ; ಅಮ್ಮನಂತಿದ್ದ ಅಕ್ಕ, ಬಡತನದಲ್ಲೂ ಕ್ರಿಕೆಟರ್ ಮಾಡಿದ ತಂದೆಯನ್ನೇ ದೂರವಿಟ್ರಾ? ಇಲ್ಲಿದೆ ಜಡ್ಡು ಬದುಕಿನ ಕತೆ
Feb 10, 2024 03:44 PM IST
ವಾಚ್ಮನ್ ಮಗ ರವೀಂದ್ರ ಜಡೇಜಾ; ಅಮ್ಮನಂತಿದ್ದ ಅಕ್ಕ, ಬಡತನದಲ್ಲೂ ಕ್ರಿಕೆಟರ್ ಮಾಡಿದ ತಂದೆಯನ್ನೇ ದೂರವಿಟ್ರಾ?
- Ravindra Jadeja Life Story : ಕಡುಬಡತನದಿಂದ ಸಿರಿವಂತನಾದ ರವೀಂದ್ರ ಜಡೇಜಾ , ಈಗ ಜೀವ ಮತ್ತು ಜೀವನ ಕೊಟ್ಟ ತಂದೆಯನ್ನೇ ದೂರ ಮಾಡಿದ್ರಾ? ಅಮ್ಮನಂತೆ ಕ್ರಿಕೆಟ್ ಆಡಲು ಬೆಂಗಾವಲಾಗಿ ನಿಂತಿದ್ದ ಅಕ್ಕನನ್ನೇ ಮರೆತರಾ? ಜಡೇಜಾ ಬಾಲ್ಯದ ಜೀವನ ಹೇಗಿತ್ತು? ಇಲ್ಲಿದೆ ವಿವರ
ರವೀಂದ್ರ ಜಡೇಜಾ (Ravindra Jadeja) ಮತ್ತು ತಂದೆ ಅನಿರುದ್ಧ್ ಸಿನ್ಹಾ ಜಡೇಜಾ ಅವರ ಸಂಬಂಧ ಹಳಸಿದೆ ಎಂಬುದು ಇತ್ತೀಚೆಗೆ ನಡೆದ ಬೆಳವಣಿಗೆಗಳು ಬಹಿರಂಗಪಡಿಸಿವೆ. ತಂದೆಯ ವಿರುದ್ಧವೇ ಮಗ ಕಿಡಿಕಾರಿದ್ದು, ಪತ್ನಿ ರಿವಾಬಾ (Rivaba) ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನ ಎಂದು ಬಹಿರಂಗವಾಗಿ ಹೇಳಿದ್ದಾರೆ ಜಡ್ಡು. ನನ್ನ ಮಗನ ಸಂಬಂಧ ಮುರಿದುಬಿದ್ದಿದೆ. ಜಡೇಜಾ ಅವರ ಪತ್ನಿ ರಿವಾಬಾ ಅವರಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಿವೆ ಎಂದು ಅನಿರುದ್ಧ್ ಆರೋಪಿಸಿದ್ದರು.
ಈ ಆರೋಪಗಳಿಗೆ ಉತ್ತರ ನೀಡಿರುವ ಜಡೇಜಾ, ಎಲ್ಲಾ ಆರೋಪಗಳು ಅಸಂಬದ್ಧವಾಗಿದ್ದು, ತನ್ನ ಪತ್ನಿ ರಿವಾಬಾ ಅವರ ಘನತೆಗೆ ಕಳಂಕ ತರುವ ಪ್ರಯತ್ನ. ಸಂದರ್ಶನದಲ್ಲಿ ಹೇಳಲಾದ ಎಲ್ಲಾ ವಿಷಯಗಳು ಅರ್ಥಹೀನ ಮತ್ತು ಸುಳ್ಳು. ಇದು ಕೇವಲ ಏಕಪಕ್ಷೀಯ ವಿಚಾರ. ನಾನು ಈ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತೇನೆ. ಇವು ನನ್ನ ಹೆಂಡತಿಯ ವರ್ಚಸ್ಸಿಗೆ ಧಕ್ಕೆ ತರಲು ಮಾಡಿದ ಪ್ರಯತ್ನ. ನಿಜಕ್ಕೂ ಖಂಡನೀಯ ಮತ್ತು ಅಸಹ್ಯಕರವಾಗಿವೆ ಎಂದು ಹೇಳಿದ್ದಾರೆ.
ಇಷ್ಟು ದಿನ ಗುಟ್ಟಾಗಿದ್ದ ಕೌಟುಂಬಿಕ ಕಲಹಳು, ಜಡೇಜಾ ಮತ್ತು ತಂದೆಯ ಹೇಳಿಕಗಳೊಂದಿಗೆ ಕುಟುಂಬದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಸಾರ್ವಜನಿಕವಾಗಿ ಗೊತ್ತಾಗಿದೆ. ಈ ಬೆನ್ನಲ್ಲೇ ಒಂದೊತ್ತಿಗೆ ಊಟ ಮಾಡಲು ಸಾಧ್ಯವಾಗದ ಕಡುಬಡತನ ದಿನಗಳಲ್ಲಿ ಮಗನನ್ನು ದೊಡ್ಡ ಕ್ರಿಕೆಟರ್ನನ್ನು ಮಾಡಿದ ತಂದೆಯನ್ನೇ ಮಗ ರವೀಂದ್ರ ಜಡೇಜಾ ಹೊರಗಿಟ್ಟರೇ? ಹೆಸರು ಬಂದ ಬಳಿಕ ಪ್ರೇಮ ವಿವಾಹವಾದ ಜಡ್ಡು, ಅಕ್ಕ-ತಂದೆಯನ್ನೇ ದೂರವಿಟ್ಟರೇ ಎಂಬ ಪ್ರಶ್ನೆ ಕೇಳಿ ಬರುತ್ತಿವೆ.
ಜಡೇಜಾ ಅವರದ್ದು ಕಡುಬಡತನದ ಕುಟುಂಬ
ಜಡೇಜಾ ಅವರದ್ದು ಕಡು ಬಡತನದ ಕುಟುಂಬ. ಸಣ್ಣ ಕ್ವಾಟ್ರಸ್ವೊಂದರಲ್ಲಿ ವಾಸವಿದ್ದರು. ಇಕ್ಕಟ್ಟಾದ ಮನೆ ಅದಾಗಿತ್ತು. ಖಾಸಗಿ ಕಂಪನಿಯಲ್ಲಿ ಅಪ್ಪ ಅನಿರುದ್ಧ್ ಜಡೇಜಾ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಮ್ಮ ಲತಾ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್. ಆದರೆ ಇಬ್ಬರಿಗೆ ಬರುತ್ತಿದ್ದ ವೇತನ ಅಷ್ಟಕಷ್ಟೆ. ಕುಟುಂಬದ ಬಂಡಿ ಸಾಗಿಸಲು ಸಾಕಾಗಿತ್ತು. ಮತ್ತೊಂದೆಡೆ ಅಪ್ಪ ಭಾರಿ ಶಿಸ್ತಿನ ವ್ಯಕ್ತಿ. ಮಗನನ್ನು (ರವೀಂದ್ರ ಜಡೇಜಾ) ಸೇನೆಗೆ ಸೇರಿಸುವ ಕನಸು ಕಂಡಿದ್ದರು.
ಜಡೇಜಾಗೆ ಚಿಕ್ಕಂದಿನಿಂದಲೂ ಅಪ್ಪನೆಂದರೆ ಭಯ. ತಾನು ಬೆಳೆದಂತೆ ಕ್ರಿಕೆಟ್ ಮೇಲೆ ಹುಚ್ಚು ಹೆಚ್ಚಾಯಿತು. ಅಪ್ಪನಿಗೆ ತಿಳಿಯದಂತೆ ಕ್ರಿಕೆಟ್ ಆಡುತ್ತಿದ್ದರು. ಈ ವಿಷಯ ಅಮ್ಮ ಮತ್ತು ಅಕ್ಕ ನೈನಾ ಅವರಿಗೆ ಮಾತ್ರ ಗೊತ್ತಿತ್ತು. ದುರಾದೃಷ್ಟ ಅಂದರೆ ಜಡ್ಡುಗೆ ಬೆಂಬಲ ಕೊಡುತ್ತಿದ್ದ ತಾಯಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಆಗಿನ್ನೂ ಆಲ್ರೌಂಡರ್ಗೆ 15 ವರ್ಷ. ಈ ವೇಳೆ ತಾಯಿಯ ಉದ್ಯೋಗ ಪಡೆದ ಅಕ್ಕ, ತಮ್ಮನ ನೆರವಿಗೆ ನಿಂತು ಮತ್ತೆ ಕ್ರಿಕೆಟ್ ಆಡುವಂತೆ ಬೆಂಬಲ ನೀಡುತ್ತಾಳೆ.
ಕೊನೆಗೆ ಈ ವಿಚಾರ ಗೊತ್ತಾಗುತ್ತದೆ. ಮಗನನ್ನು ಸೇನೆಗೆ ಸೇರಿಸುವ ಬಯಕೆಯಿಂದ ಹೊರಬಂದು ದೊಡ್ಡ ಕ್ರಿಕೆಟರ್ ಮಾಡಬೇಕೆಂಬ ಹೊಸ ಕನಸು ಕಾಣುತ್ತಾರೆ. ಆರ್ಥಿಕವಾಗಿ ಸಾಕಷ್ಟು ನೆರವಾಗುತ್ತಾರೆ. ಸಾಲಸೋಲ ಮಾಡಿ ಮಗನ ಕ್ರಿಕೆಟ್ಗೆ ಬೆಂಬಲ ನೀಡುತ್ತಾರೆ. ಬಾಲ್ಯದಲ್ಲಿ ಕಠಿಣ ಪರಿಶ್ರಮ ಹಾಕಿದ್ದ ಜಡೇಜಾ, ಇಂದು ವಿಶ್ವಕ್ರಿಕೆಟ್ನಲ್ಲಿ ಸೂಪರ್ಸ್ಟಾರ್. ಆದರೆ ಇದೆಲ್ಲಾ ಸುಲಭಕ್ಕೆ ಸಿಕ್ಕದ್ದಲ್ಲ. ಬಡತನ, ನೋವು, ಹತಾಶೆ, ಅವಮಾನ ಎಲ್ಲವನ್ನೂ ಮೆಟ್ಟಿ ನಿಂತಿದ್ದಕ್ಕೆ ಸಿಕ್ಕಿದ್ದು.
ರವೀಂದ್ರ ಜಡೇಜಾ 1988ರ ಡಿಸೆಂಬರ್ 6ರಂದು ಗುಜರಾತಿನಲ್ಲಿ ಜನಿಸಿದರು. ಬಾಲ್ಯದಲ್ಲಯೇ ತಂದೆ-ತಾಯಿಯ ಕಷ್ಟವನ್ನು ಕಣ್ಣಾರೆ ಕಂಡಿದ್ದ ಅವರು, ಕಷ್ಟಟಪಟ್ಟು ಮೇಲಕ್ಕೆ ಬಂದರು. ತಂದೆಯ ಆಸೆಯಂತೆ ಸೇನೆಗೆ ಸೇರಲು ಒಪ್ಪದ ಜಡ್ಡು, ತಮ್ಮ ಆಸೆ, ಕನಸು ಹಾಗೂ ಪ್ರಾಣವೇ ಆಗಿದ್ದ ಕ್ರಿಕೆಟ್‌ನತ್ತ ಮುಖ ಮಾಡಿದರು. ತಂದೆಯೇ ಸ್ನೇಹಿತ ಮಹೇಂದ್ರ ಸಿಂಗ್ ಬಂಗ್ಲೋ ಬಳಿ ಜಡ್ಡುಗೆ ಕೋಚಿಂಗ್ ಕೊಡಿಸಿದರು. ಆರಂಭದಲ್ಲಿ ಸ್ಥಳೀಯ ಪಂದ್ಯಗಳಲ್ಲಿ ಅಬ್ಬರಿಸಿದ ಜಡೇಜಾ, 2006ರಲ್ಲಿ ದೇಶೀಯ ಕ್ರಿಕೆಟ್‌ಗೂ ಕಾಲಿಟ್ಟರು.
ದೇಶೀಯ ಕ್ರಿಕೆಟ್ನಲ್ಲೂ ಧೂಳೆಬ್ಬಿಸಿದ 2007ರಲ್ಲಿ ಟಿ20 ಕ್ರಿಕೆಟ್‌ಗೂ ಪದಾರ್ಪಣೆ ಮಾಡಿದರು. 2008ರಲ್ಲಿ ಅಂಡರ್ 19 ವಿಶ್ವಕಪ್ ತಂಡದಲ್ಲಿ ವಿರಾಟ್ ಕೊಹ್ಲಿಗೆ ಉಪನಾಯಕನಾಗಿಯೂ ಮಿಂಚಿದರು. ಅಂಡರ್-19 ವಿಶ್ವಕಪ್ ಬಳಿಕ ಜಡ್ಡು, ಅದೃಷ್ಟವೇ ಬದಲಾಯಿತು. ಅದೇ ವರ್ಷ ಐಪಿಟಲ್ಗೆ ಕಾಲಿಟ್ಟರು. ಅಲ್ಲಿನ ಪ್ರದರ್ಶನದ ಮೇಲೆ ಮುಂದಿನ ವರ್ಷವೇ ಟೀಮ್ ಇಂಡಿಯಾಗೂ ಕಾಲಿಟ್ಟರು. ಹೀಗೆ ತಮ್ಮ ಜೀವನದ ಪ್ರತಿ ಹಂತದಲ್ಲೂ ಯಶಸ್ಸು ಕಂಡ ಜಡೇಜಾ, ಟೀಮ್ ಇಂಡಿಯಾ ಮತ್ತು ವಿಶ್ವದ ಅತ್ಯುತ್ತಮ ಆಲ್‌ರೌಂಡರ್ ಆಗಿದ್ದಾರೆ.
ಜಡೇಜಾ-ರಿವಾಬಾ ಲವ್ಸ್ಟೋರಿ
ವಿಶ್ವದ ಸೂಪರ್ ಸ್ಟಾರ್ ಆದ ಕ್ರಿಕೆಟರ್ಗೆ ಸಿಕ್ಕಿದ್ದು, ಉದ್ಯಮಿ, ಆಗರ್ಭ ಶ್ರೀಮಂತನ ಮಗಳು. ಆಕೆಯ ಹೆಸರು ರಿವಾಬಾ ಸೋಲಂಕಿ. ಅಚ್ಚರಿ ಅಂದರೆ ಈಕೆ ಜಡ್ಡು ಸಹೋದರಿ ನೈನಾ ಸ್ನೇಹಿತೆ. ಪಾರ್ಟಿಯೊಂದರಲ್ಲಿ ರಿವಾಬಾ ಅವರನ್ನು ನೈನಾ, ಜಡೇಜಾಗೆ ಪರಿಚಯಿಸಿದ್ದರು. ಆಕೆಯ ಸೌಂದರ್ಯಕ್ಕೆ ಮಾರು ಹೋಗಿದ್ದ ಜಡ್ಡು ಮೊದಲ ನೋಟದಲ್ಲೇ ಪ್ರೀತಿಯಾಗುತ್ತದೆ. ನೈನಾಗೆ ತಿಳಿಯದೆ ಇಬ್ಬರು ಸ್ನೇಹಿತರಾಗಿ ಪ್ರೀತಿಯ ಬಲೆಗೆ ಬೀಳುತ್ತಾರೆ. ಕೊನೆಗೆ ಮನೆಯಲ್ಲಿ ಒಪ್ಪಿಸಿ ಜಡ್ಡುಸ್ ಫುಡ್ ಫೀಲ್ಡ್‌ನಲ್ಲಿ 2016ರ ಫೆಬ್ರವರಿ 5ರಂದು ನಿಶ್ಚಿತಾರ್ಥ ಮಾಡಿಕೊಂಡರು.
ಎಂಗೇಜ್ಮೆಂಟ್ ಆದ ಎರಡು ತಿಂಗಳ ನಂತರ ಅಂದರೆ 2016ರ ಏಪ್ರಿಲ್ 17ರಂದು ವಿವಾಹವಾದರು. ಅದ್ಧೂರಿ ಮದುವೆ ನಡೆಯಿತು. ಈ ದಂಪತಿಗೆ ನಿಧ್ಯಾನ ಎಂಬ ಮುದ್ದಿನ ಹೆಣ್ಣು ಮಗು ಇದೆ. ಮದುವೆಗೆ ಮುನ್ನವೇ ಜಡ್ಡುಗೆ ಮಾವ ಹರ್ದೇವ್ ಸಿಂಗ್ ಸೋಲಂಕಿ ಅವರು 1 ಕೋಟಿ ಮೌಲ್ಯದ ಆಡಿ ಕ್ಯೂ7 ಕಾರನ್ನು ಉಡಗೊರೆ ನೀಡಿದ್ದರು. ಮಾವ ಹರ್ದೇವ್ ಅವರಿಗೆ 2 ಖಾಸಗಿ ಶಾಲೆಗಳು, ಹೋಟೆಲ್ ಇದೆ. ರಿವಾಬಾ 2019ರಲ್ಲಿ ಬಿಜೆಪಿ ಸೇರಿದ್ದರು. ಎಂಜಿನಿಯರ್ ಕೂಡ ಆಗಿದ್ದರು.
ಕರ್ಣಿ ಸೇನೆಯ ಮಹಿಳಾ ವಿಭಾಗದ ಮುಖ್ಯಸ್ಥೆ ಕೂಡ ಆಗಿದ್ದರು. ಈಗ ಶಾಸಕಿ ಕೂಡ ಹೌದು. ಅಂದು ಏನೂ ಇಲ್ಲದೆ ಕಠಿಣ ಪರಿಶ್ರಮದೊಂದಿಗೆ ಇಂದು ಎಲ್ಲವನ್ನೂ ಗಳಿಸಿದ ಜಡ್ಡು, ಭಾರತದ ಶ್ರೀಮಂತರ ಪೈಕಿ ಒಬ್ಬರು. ಜಡೇಜಾ ಆಸ್ತಿ ಮೌಲ್ಯ 123 ಕೋಟಿ. ಬಡತನದಿಂದ ಸಿರಿವಂತನಾದ ಜಡ್ಡು ಈಗ ಜೀವ ಮತ್ತು ಜೀವನ ಕೊಟ್ಟ ತಂದೆಯನ್ನೇ ದೂರ ಮಾಡಿದ್ರಾ? ಅಮ್ಮನಂತೆ ಕ್ರಿಕೆಟ್ ಆಡಲು ಬೆಂಗಾವಲಾಗಿ ನಿಂತಿದ್ದ ಅಕ್ಕನನ್ನೇ ಮರೆತರಾ? ಇದೆಲ್ಲದಕ್ಕೂ ಅವರಿಂದಲೇ ಇದಕ್ಕೆ ಸ್ಪಷ್ಟನೆ ಸಿಗಬೇಕಿದೆ.