ಸಹಾಯಕ ಸಿಬ್ಬಂದಿ, ಆಟಗಾರರು ನಿಮ್ಮನ್ನು ಗೌರವಿಸದ ಹೊರತು ನಿಷ್ಠೆ ಪಡೆಯುವುದು ಕಷ್ಟ: ನಾಯಕತ್ವದ ಬಗ್ಗೆ ಎಂಎಸ್ ಧೋನಿ
Feb 10, 2024 06:41 PM IST
ಸಹಾಯಕ ಸಿಬ್ಬಂದಿ, ಆಟಗಾರರು ನಿಮ್ಮನ್ನು ಗೌರವಿಸದ ಹೊರತು ನಿಷ್ಠೆ ಪಡೆಯುವುದು ಕಷ್ಟ: ನಾಯಕತ್ವದ ಬಗ್ಗೆ ಎಂಎಸ್ ಧೋನಿ
- MS Dhoni : ಸಹಾಯಕ ಸಿಬ್ಬಂದಿ ಅಥವಾ ಆಟಗಾರರು ನಿಮ್ಮನ್ನು ಗೌರವಿಸದ ಹೊರತು ನಿಷ್ಠೆಯನ್ನು ಪಡೆಯುವುದು ಕಷ್ಟ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024ಕ್ಕೆ (IPL 2024) ಸಜ್ಜಾಗುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ನಾಯಕತ್ವದ ಕೌಶಲಗಳ ಕುರಿತು ಮಾತನಾಡಿದ್ದಾರೆ. ಐಪಿಎಲ್ಗೆ ಅಭ್ಯಾಸ ಆರಂಭಿಸಿರುವ ಮಾಹಿ, ಯಾವಾಗಲೂ ಶಾಂತ ಸ್ವಭಾವ ಹೊಂದಿರುವ ನಾಯಕ. ತಮ್ಮ ನಾಯಕತ್ವದ ಕೌಶಲ್ಯದಿಂದಲೂ ಸಾಕಷ್ಟು ಹೆಸರು ಗಳಿಸಿದ್ದಾರೆ.
ನಿಷ್ಠೆಯ ಕುರಿತು ಮಾತನಾಡಿದ ಧೋನಿ
ನಾಯಕತ್ವದ ಜವಾಬ್ದಾರಿ ಹೊರುವವನು ಏನೆಲ್ಲಾ ಗುಣಲಕ್ಷಣ ಹೊಂದಿರಬೇಕು ಎಂಬುದರ ಕುರಿತು ಮಾತನಾಡಿದ ಧೋನಿ, ನಾಯಕನಾದವನು ನಿಷ್ಠೆ, ಗೌರವ ಹೊಂದಿರಬೇಕು ಎಂದಿದ್ದಾರೆ. ಸಹಾಯಕ ಸಿಬ್ಬಂದಿ ಅಥವಾ ಆಟಗಾರರು ನಿಮ್ಮನ್ನು ಗೌರವಿಸದ ಹೊರತು ಆ ನಿಷ್ಠೆಯನ್ನು ಪಡೆಯುವುದು ಕಷ್ಟ ಎಂದು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಹೇಳಿದ್ದಾರೆ.
ನಡವಳಿಕೆ ಉತ್ತಮವಾಗಿರಬೇಕು ಎಂದ ಮಾಹಿ
ನೀವು ಏನು ಮಾಡುತ್ತಿದ್ದೀರಿ ಅಥವಾ ನೀವು ಏನು ಮಾತನಾಡುತ್ತಿದ್ದೀರಿ ಎಂಬುದರ ಬಗ್ಗೆ ನಾನು ಹೇಳುತ್ತಿಲ್ಲ. ನೀವು ಏನನ್ನೂ ಮಾತನಾಡದೇ ಇರಬಹುದು. ನಿಷ್ಠೆ ಗೌರವಕ್ಕೂ ಇದು ಸಂಬಂಧ ಇಲ್ಲ. ಆದರೆ, ನಿಮ್ಮ ನಡವಳಿಕೆ ಆ ಗೌರವವನ್ನು ಸಂಪಾದಿಸುತ್ತದೆ. ನಡವಳಿಕೆ ಎಂದೂ ಕೆಟ್ಟದಾಗಿ ಇರಬಾರದು. ಇದು ನಮ್ಮ ಮೇಲಿನ ನಿಷ್ಠೆಗೆ ಧಕ್ಕೆ ತರುತ್ತದೆ ಎಂದು ಧೋನಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಗೌರವ ಕಳೆದುಕೊಳ್ಳಬೇಡಿ ಎಂದ ಸಿಎಸ್ಕೆ ನಾಯಕ
ಗೌರವವನ್ನು ಗಳಿಸುವುದು ಮುಖ್ಯ ಎಂದು ನಾನು ಯಾವಾಗಲೂ ಭಾವಿಸುತ್ತೇನೆ. ಏಕೆಂದರೆ ಅದು ಕುರ್ಚಿ ಅಥವಾ ಸ್ಥಾನದೊಂದಿಗೆ ಬರುವುದಿಲ್ಲ. ಇದು ನಿಮ್ಮ ನಡವಳಿಕೆಯೊಂದಿಗೆ ಬರುತ್ತದೆ. ಕೆಲವೊಮ್ಮೆ ತಂಡ ನಿಮ್ಮನ್ನು ನಂಬಿದ್ದರೂ ಸಹ, ನಿಮ್ಮನ್ನು ನಂಬದ ಮೊದಲ ವ್ಯಕ್ತಿ ನೀವೇ ಆಗಿರುತ್ತೀರಿ. ಸಂಕ್ಷಿಪ್ತವಾಗಿ ಹೇಳುವುದಾದರೆ, ಗೌರವವನ್ನು ಆಜ್ಞಾಪಿಸಲು ಪ್ರಯತ್ನಿಸಬೇಡಿ. ಆದರೆ ಅದನ್ನು ಗಳಿಸಿ, ಏಕೆಂದರೆ ಅದು ತುಂಬಾ ಸಾವಯವವಾಗಿದೆ ಎಂದು ಹೇಳಿದ್ದಾರೆ.
ಒಮ್ಮೆ ನೀವು ಆ ನಿಷ್ಠೆಯನ್ನು ಹೊಂದಿದ್ದರೆ, ನಂತರ ಪ್ರದರ್ಶನವೂ ಅದನ್ನೇ ಅನುಸರಿಸುತ್ತದೆ ಎಂದು ಅವರು ಹೇಳಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತವು ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಕಳೆದ ವರ್ಷ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದಾಖಲೆಯ ಐದನೇ ಟ್ರೋಫಿಗೆ ಮುತ್ತಿಕ್ಕಿದರು.
2-3 ಸೀಸನ್ ಆಡಬಹುದು ಎಂದ ಚಹರ್
2023ರ ಐಪಿಎಲ್ ಅವಧಿಯಲ್ಲಿ ಧೋನಿ ನಿವೃತ್ತಿಯ ವದಂತಿಗಳು ಹಬ್ಬಿದ್ದವು. ಆದರೆ ಪ್ರಶಸ್ತಿ ಗೆದ್ದ ನಂತರ ಅವರು ಮುಂದಿನ ವರ್ಷ ಕೂಡ ಆಡುವುದಾಗಿ ಸುಳಿವು ನೀಡಿದ್ದರು. ಸಿಎಸ್ಕೆ ತಂಡದ ಆಟಗಾರ ದೀಪಕ್ ಚಹರ್ ತನ್ನ ನಾಯಕ ಮನಮೋಹಕ ಲೀಗ್‌ನಲ್ಲಿ ಇನ್ನೂ ಕೆಲವು ಸೀಸನ್‌ಗಳು ಆಡಲಿದ್ದಾರೆ ಎಂದು ಬೆಂಬಲಿಸಿದ್ದರು. ಇನ್ನೂ 2-3 ಋತುಗಳಲ್ಲಿ ಆಡಬಹುದು. ನೆಟ್ಸ್‌ನಲ್ಲಿ ಬ್ಯಾಟ್ ಮಾಡುವುದನ್ನು ನಾನು ನೋಡಿದ್ದೇನೆ. ಧೋನಿ ತನ್ನನ್ನು ತಾನು ನಿಜವಾಗಿಯೂ ಫಿಟ್ ಆಗಿ ಇರಿಸಿಕೊಂಡಿದ್ದಾರೆ ಎಂದು ಚಹರ್ ಹೇಳಿದ್ದರು.