WPL 2024: ಮೊದಲ ಗೆಲುವಿಗೆ ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರ ಸೆಣಸಾಟ; ಹೀಗಿದೆ ಸಂಭಾವ್ಯ ತಂಡ
Feb 26, 2024 11:19 AM IST
ಮೊದಲ ಗೆಲುವಿಗೆ ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ವನಿತೆಯರ ಸೆಣಸಾಟ
- UP Warriorz vs Delhi Capitals: ಡಬ್ಲ್ಯೂಪಿಎಲ್ ಪಂದ್ಯಾವಳಿಯಲ್ಲಿ ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಸೋಮವಾರ ಮುಖಾಮುಖಿಯಾಗುತ್ತಿವೆ. ಟೂರ್ನಿಯಲ್ಲಿ ಮೊದಲ ಗೆಲುವಿನ ರುಚಿ ನೋಡಲು ಉಭಯ ತಂಡಗಳು ಪಣ ತೊಟ್ಟಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಮೈದಾನವು ರೋಚಕ ಹಣಾಹಣಿಗೆ ವೇದಿಕೆಯಾಗಲಿದೆ.
ಮಹಿಳಾ ಪ್ರೀಮಿಯರ್ ಲೀಗ್ (Womens Premier League 2024) ಎರಡನೇ ಆವೃತ್ತಿಯು ಭರ್ಜರಿ ಜನಬೆಂಬಲ ಪಡೆದಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯು ಮೊದಲ ಹಂತದ ಪಂದ್ಯಗಳಿಗೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುತ್ತಿದ್ದಾರೆ. ಡಬ್ಲ್ಯೂಪಿಎಲ್ ಎರಡನೇ ಆವೃತ್ತಿಯ ನಾಲ್ಕನೇ ಪಂದ್ಯದಲ್ಲಿ ಇಂದು (ಫೆಬ್ರುವರಿ 26) ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ (UP Warriorz vs Delhi Capitals Women) ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಟೂರ್ನಿಯ ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಗೆಲುವಿಗಾಗಿ ಹವಣಿಸುತ್ತಿವೆ.
ಈ ಎರಡೂ ತಂಡಗಳು ಟೂರ್ನಿಯಲ್ಲಿ ತಮ್ಮ ಮೊದಲ ಪಂದ್ಯಗಳಲ್ಲಿ ಕೂದಲೆಳೆ ಅಂತರದಿಂದ ರೋಚಕ ಸೋಲು ಕಂಡಿವೆ. ಹೀಗಾಗಿ ಗೆಲುವಿನ ಲಯಕ್ಕೆ ಮರಳುವುದು ಉಭಯ ತಂಡಗಳ ಗುರಿಯಾಗಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯವನ್ನು ಕೊನೆಯ ಎಸೆತದಲ್ಲಿ ಕ್ಯಾಪಿಟಲ್ಸ್ ಸೋತಿತ್ತು. ಅತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ವಾರಿಯರ್ಸ್ ಕೂಡಾ ಕೊನೆಯ ಎಸೆತದಲ್ಲಿ ಸೋಲು ಕಂಡಿತ್ತು.
ಮುಖಾಮುಖಿ ದಾಖಲೆ
ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡಗಳು ಡಬ್ಲ್ಯೂಪಿಎಲ್ 2023ರ ಗುಂಪು ಹಂತಗಳಲ್ಲಿ ಎರಡು ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಈ ಎರಡೂ ಪಂದ್ಯಗಳಲ್ಲಿ ಮೆಗ್ ಲ್ಯಾನಿಂಗ್ ಪಡೆ ಗೆದ್ದು ಬೀಗಿದೆ. ಹೀಗಾಗಿ ಡೆಲ್ಲಿ ವಿರುದ್ಧ ಮೊದಲ ಗೆಲುವು ಕಾಣಲು ಹೀಲಿ ಬಳಗ ಎದುರು ನೋಡುತ್ತಿದೆ.
ಇದನ್ನೂ ಓದಿ | ಏನಪ್ಪಾ ಇಷ್ಟೊಂದ್ ಕ್ರೇಜ್! ಪಾಕಿಸ್ತಾನ ಪ್ರೀಮಿಯರ್ ಲೀಗ್ನಲ್ಲೂ ಆರ್ಸಿಬಿ ಜೆರ್ಸಿಯೊಂದಿಗೆ ಕಾಣಿಸಿಕೊಂಡ ಅಭಿಮಾನಿ
ಚಿನ್ನಸ್ವಾಮಿ ಮೈದಾನದ ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಕ್ರೀಡಾಂಗಣವು ಚಿಕ್ಕ ಬೌಂಡರಿಗಳನ್ನು ಹೊಂದಿದ್ದು, ಸೀಮಿತ-ಓವರ್‌ಗಳ ಕ್ರಿಕೆಟ್‌ನಲ್ಲಿ ಬ್ಯಾಟರ್‌ಗಳ ಸ್ವರ್ಗವಾಗಿದೆ. ಮೈದಾನದಲ್ಲಿ ಬೃಹತ್ ಮೊತ್ತ ನಿರೀಕ್ಷಿಸಬಹುದು. ಅಲ್ಲದೆ ಉಭಯ ತಂಡಗಳಲ್ಲಿ ಸ್ಫೋಟಕ ಆಟಗಾರರು ಹಾಗೂ ಆಲ್‌ರೌಂಡರ್‌ಗಳಿದ್ದಾರೆ. ಚೇಸಿಂಗ್‌ನಲ್ಲೂ ತಂಡಗಳು ಮಿಂಚಬಹುದು. ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಇಲ್ಲ.
ನೇರಪ್ರಸಾರ ವಿವರ
ಯುಪಿ ವಾರಿಯರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಡಬ್ಲ್ಯೂಪಿಎಲ್ ಪಂದ್ಯವನ್ನು ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಇಲ್ಲಿ ಉಚಿತವಾಗಿ ವೀಕ್ಷಿಸಬಹುದು. ಟಿವಿ ಮೂಲಕ ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ.
ಇದನ್ನೂ ಓದಿ | ರಣಜಿಗೆ ಚಕ್ಕರ್, ಐಪಿಎಲ್ ಜಾಹೀರಾತು ಶೂಟಿಂಗ್ಗೆ ಹಾಜರ್; ಇದು ಶ್ರೇಯಸ್ ಅಯ್ಯರ್ ಒಂದು ಸುಳ್ಳಿನ ಕಥೆ
ಯುಪಿ ವಾರಿಯರ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಆಡುವ ಬಳಗ
ಯುಪಿ ವಾರಿಯರ್ಸ್: ಅಲಿಸ್ಸಾ ಹೀಲಿ (ನಾಯಕಿ ಮತ್ತು ವಿಕೆಟ್ ಕೀಪರ್), ವೃಂದಾ ದಿನೇಶ್, ತಹ್ಲಿಯಾ ಮೆಕ್‌ಗ್ರಾತ್, ಗ್ರೇಸ್ ಹ್ಯಾರಿಸ್, ಕಿರಣ್ ನವಗಿರೆ, ದೀಪ್ತಿ ಶರ್ಮಾ, ಸೋಫಿ ಎಕ್ಲೆಸ್ಟನ್, ಶ್ವೇತಾ ಸೆಹ್ರಾವತ್, ರಾಜೇಶ್ವರಿ ಗಾಯಕ್‌ವಾಡ್, ಅಂಜಲಿ ಸರ್ವಾಣಿ, ಸೈಮಾ ಠಾಕೋರ್.
ಡೆಲ್ಲಿ ಕ್ಯಾಪಿಟಲ್ಸ್ : ಶಫಾಲಿ ವರ್ಮಾ, ಮೆಗ್ ಲ್ಯಾನಿಂಗ್ (ನಾಯಕಿ), ಆಲಿಸ್ ಕ್ಯಾಪ್ಸಿ, ಜೆಮಿಮಾ ರೋಡ್ರಿಗಸ್, ಮರಿಜಾನ್ನೆ ಕಪ್, ಅನ್ನಾಬೆಲ್ ಸದರ್ಲ್ಯಾಂಡ್, ಅರುಂಧತಿ ರೆಡ್ಡಿ, ಮಿನ್ನು ಮಣಿ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ರಾಧಾ ಯಾದವ್, ಟಿಟಾಸ್ ಸಾಧು.
ಇದನ್ನೂ ಓದಿ | ಬ್ಯೂಟಿಫುಲ್ ಅಮೆಲಿಯಾ ಕೇರ್ ಬ್ಯೂಟಿಫುಲ್ ಆಟ; ಮುಂಬೈ ಇಂಡಿಯನ್ಸ್ಗೆ ಸತತ 2ನೇ ಗೆಲುವು, ಗುಜರಾತ್ಗೆ ಸೋಲು
ಮಹಿಳಾ ಪ್ರೀಮಿಯರ್ ಲೀಗ್ನ 2024ರ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸತತ ಎರಡನೇ ಗೆಲುವು ದಾಖಲಿಸಿತು. ಅಮೆಲಿಯಾ ಕೇರ್ ಅವರ ಅಮೋಘ ಆಲ್ರೌಂಡ್ ಆಟದ ನೆರವಿನಿಂದ ಗುಜರಾತ್ ಜೈಂಟ್ಸ್ 5 ವಿಕೆಟ್ಗಳ ಸುಲಭ ಜಯ ಸಾಧಿಸಿತು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಕಲೆ ಹಾಕಿತು. ಚೇಸಿಂಗ್ ನಡೆಸಿದ ಮುಂಬೈ, 18.1ನೇ ಓವರ್ನಲ್ಲಿ ಗುರಿ ತಲುಪಿತು.
(This copy first appeared in Hindustan Times Kannada website. To read more like this please logon to kannada.hindustantimes.com)