ಸಂಪೂರ್ಣ ಶಿವಮಯಂ; 451 ಕೋಟಿ ರೂಪಾಯಿ ಬಜೆಟ್‌ನ ಕ್ರಿಕೆಟ್ ಮೈದಾನದ ವೈಭವ, ವೈಶಿಷ್ಟ್ಯ ಹೀಗಿವೆ
Sep 23, 2023 05:38 PM IST
ವಾರಣಾಸಿಯಲ್ಲಿ ಕ್ರಿಕೆಟ್ ಸ್ಟೇಡಿಯಂ.
- ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ (Varanasi International Cricket Stadium) ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಭವ್ಯ ಹಾಗೂ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಲಿರುವ ಕ್ರಿಕೆಟ್ ಮೈದಾನಕ್ಕೆ (Varanasi Stadium) ಪ್ರಧಾನಿ ನರೇಂದ್ರ ಮೋದಿ ಇಂದು (ಸೆಪ್ಟೆಂಬರ್ 23) ಶಂಕುಸ್ಥಾಪನೆ ನೆರವೇರಿಸಿದರು. ದೇವರ ನಗರಿ ಎಂದೇ ಖ್ಯಾತಿ ಪಡೆದಿರುವ ವಾರಾಣಸಿಯಲ್ಲಿ ಗಂಜಾರಿ, ರಾಜತಾಲಬ್ ರಿಂಗ್ ರೋಡ್ ಸಮೀಪ 30 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ.
ಶಿವನ ಸ್ಫೂರ್ತಿಯಿಂದ ಮೈದಾನ ನಿರ್ಮಿಸುತ್ತಿದ್ದು, ಕ್ರೀಡಾಂಗಣದ ಪ್ರತಿಯೊಂದು ವಿಭಾಗದಲ್ಲೂ ನಂಜುಡೇಶ್ವರ ಛಾಯೆ ಇರಲಿದೆ. ಇದೇ ಕಾರಣಕ್ಕೆ ಈ ಮೈದಾನ ಸಾಕಷ್ಟು ವಿಶೇಷತೆ ಪಡೆದುಕೊಂಡಿದೆ. ಸುಮಾರು 450 ಕೋಟಿ ರೂಪಾಯಿ ಕ್ರೀಡಾಂಗಣ ನಿರ್ಮಾಣಕ್ಕೆ ವೆಚ್ಚ ತಗಲುವ ಸಾಧ್ಯತೆ ಇದೆ. ನೂತನ ಮೈದಾನದ ಕುರಿತು ಹಲವು ವಿಶೇಷಗಳನ್ನು ಈ ಮುಂದೆ ತಿಳಿಯೋಣ.
ಡಮರುಗದಂತೆ ಇರಲಿದೆ!
ವಾರಣಾಸಿ ಕ್ರಿಕೆಟ್ ಸ್ಟೇಡಿಯಂ ವಾಸ್ತುಶಿಲ್ಪವು ಭಗವಾನ್ ಶಿವನಿಂದ ಸ್ಫೂರ್ತಿ ಪಡೆಯಲಾಗಿದೆ. ಮೈದಾನದ ಛಾವಣಿ ಅರ್ಧ ಚಂದ್ರಾಕಾರದಂತೆ, ತ್ರಿಶೂಲದ ಆಕಾರದ ಫ್ಲಡ್-ಲೈಟ್‌ಗಳು, ಘಾಟ್ ಮೆಟ್ಟಿಲುಗಳ ಆಧಾರದ ಮೇಲೆ ಆಸನಗಳು, ಮುಂಭಾಗದಲ್ಲಿ ಬಿಲ್ವಿಪತ್ರ ಆಕಾರದಂತೆ ವಿನ್ಯಾಸ, ಮುಂಭಾಗದಲ್ಲಿ ನಿರ್ಮಿಸಲಿರುವ ಮಾಧ್ಯಮ ಕೇಂದ್ರ (Media Centre) ಶಿವನ ಕೈಯಲ್ಲಿರುವ ಡಮರುಗದಂತೆ ಕಾಣಲಿದೆ.
ಏನೆಲ್ಲಾ ಇರಲಿದೆ?
ಈ ಕ್ರಿಕೆಟ್ ಮೈದಾನವು ಅಂತಾರಾಷ್ಟ್ರೀಯ ದರ್ಜೆ ಕ್ರೀಡಾಂಗಣ. ಇದರಲ್ಲಿ 30 ಸಾವಿರ ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಬಹುದು. ರಾಜಾತಲಾಬ್ ಪ್ರದೇಶದ ರಿಂಗ್ ರೋಡ್ ಬಳಿ ಇದನ್ನು ನಿರ್ಮಿಸಲಾಗಿದೆ. ಏಳು ಪಿಚ್‌ಗಳು ಇರಲಿವೆ. ಇದು ಡಿಸೆಂಬರ್ 2025ರ ವೇಳೆಗೆ ಸಿದ್ಧವಾಗಲಿದೆ. ಕಾನ್ಪುರ ಮತ್ತು ಲಕ್ನೋ ನಂತರ ಉತ್ತರ ಪ್ರದೇಶದ 3ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಆಗಲಿದೆ.
ಪಂದ್ಯದ ಜರುಗುವ ಸಂದರ್ಭದಲ್ಲಿ ಮಳೆ ಕಾಣಿಸಿಕೊಂಡರೆ ಕ್ಷಿಪ್ರವಾಗಿ ನೀರು ಹೀರಿಕೊಳ್ಳುವ, ಅತ್ಯಾಧುನಿಕ ಸೌಕರ್ಯದ ಡ್ರೆಸ್ಸಿಂಗ್ ರೂಮ್, ಮೂರು ಪ್ರಾಕ್ಟೀಸ್ ಪಿಚ್‌ಗಳು ಸೇರಿ ಹಲವು ಸೌಲಭ್ಯಗಳು ಇರಲಿವೆ. 2025ರ ಡಿಸೆಂಬರ್‌ನಲ್ಲಿ ಕ್ರೀಡಾಂಗಣಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ರಾಜ್ಯ ಸರ್ಕಾರವು 121 ಕೋಟಿ ರೂಪಾಯಿ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 330 ಕೋಟಿ ರೂಪಾಯಿ ವಿನಿಯೋಗಿಸಲಿದೆ.
ಸಚಿನ್ಗೆ ನಮೋ ಜೆರ್ಸಿ
ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶುಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡ್ಯೂಲ್ಕರ್ ಅವರಿಗೆ ನಂಬರ್ 1 ಮತ್ತು ‘ನಮೋ’ (Namo) ಎಂದು ಬರೆಯಲಾಗಿದ್ದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ನೆರೆದಿದ್ದ ನೂರಾರು ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯೂಂದಿಗೆ ಹರ್ಷೋದ್ಗಾರಗಳನ್ನು ಮೊಳಗಿಸಿದರು.