ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಶಿಲಾನ್ಯಾಸ; ಸಚಿನ್ ತೆಂಡ್ಯೂಲ್ಕರ್‌ಗೆ ಪ್ರಧಾನಿ ಮೋದಿ ಅವರಿಂದ 'ನಮೋ' ಜೆರ್ಸಿ ಗಿಫ್ಟ್
Sep 23, 2023 04:10 PM IST
ವಾರಣಾಸಿ ಕ್ರಿಕೆಟ್ ಸ್ಟೇಡಿಯಂ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡ್ಯೂಲ್ಕರ್‌ಗೆ ಪ್ರಧಾನಿ ಮೋದಿ ಅವರು 'ನಮೋ' ಜೆರ್ಸಿ ಗಿಫ್ಟ್ ನೀಡಿದ್ದಾರೆ.
ವಾರಣಾಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದೇ ವೇಳೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್‌ಗೆ ಪ್ರಧಾನಿ ಮೋದಿ ನಮೋ ಹೆಸರಿನ ಜೆರ್ಸಿಯನ್ನು ಗಿಫ್ಟ್ ಮಾಡಿದ್ದಾರೆ.
ವಾರಣಾಸಿ (ಉತ್ತರ ಪ್ರದೇಶ): ಭಾರತದಲ್ಲಿ (India) ಮತ್ತೊಂದು ಅತ್ಯಾಧುನಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ (International Cricket Stadium) ನಿರ್ಮಾಣಕ್ಕೆ ಬಿಸಿಸಿಐ (BCCI) ಮತ್ತು ಕೇಂದ್ರ ಸರ್ಕಾರ (Central Government) ಮುಂದಾಗಿದ್ದು, ಇಂದು (ಸೆಪ್ಟೆಂಬರ್ 23, ಶನಿವಾರ) ಪ್ರಧಾನಿ ಮೋದಿ (PM Narendra Modi) ಅವರು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ (Varanasi International Cricket Stadium) ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ವಾರಣಾಸಿಯಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಮಾರಂಭದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡ್ಯೂಲ್ಕರ್ (Sachin Tendulkar), ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಕಾರ್ಯದರ್ಶಿ ಜಯ್ ಶಾ, ಮಾಜಿ ಕ್ರಿಕೆಟಿಗರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಅವರಿಂದ ಸಚಿನ್‌ಗೆ ‘ನಮೋ’ ಜೆರ್ಸಿ ಗಿಫ್ಟ್
ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶುಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡ್ಯೂಲ್ಕರ್ ಅವರಿಗೆ ನಂಬರ್ 1 ಮತ್ತು ‘ನಮೋ’ (Namo) ಎಂದು ಬರೆಯಲಾಗಿದ್ದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು. ಈ ವೇಳೆ ನೆರೆದಿದ್ದ ನೂರಾರು ಅಭಿಮಾನಿಗಳು ಶಿಳ್ಳೆ, ಚಪ್ಪಾಳೆಯೂಂದಿಗೆ ಹರ್ಷೋದ್ಗಾರಗಳನ್ನು ಮೊಳಗಿಸಿದರು.
ವಾರಣಾಸಿಯಲ್ಲಿ 451 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ. ಇದಕ್ಕೆ ಬಿಸಿಸಿಐ 330 ಕೋಟಿ ರೂಪಾಯಿ ವೆಚ್ಚ ಮಾಡಲಿದೆ. ಉಳಿದ ಹಣವನ್ನು ಸರ್ಕಾರ ಭರಿಸಲಿದೆ.
ಶಿವನ ತ್ರಿಶೂಲ, ಡಮರುಗ, ಬಿಲ್ವಪತ್ರೆ, ಅರ್ಧ ಚಂದ್ರಾಕಾರಾದ ಸ್ಟೇಡಿಯಂ
ಪ್ರಸಿದ್ಧ ಪುಣ್ಯಕ್ಷೇತ್ರ ವಾರಣಾಸಿಯ ಈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಶಿವನ ಥೀಮ್‌ನಲ್ಲಿ ನಿರ್ಮಾಣವಾಗಲಿದೆ. ಕ್ರೀಡಾಂಗಣ ಡೂಮ್ ಶೇಪ್‌ನಲ್ಲಿ ಇರಲಿದೆ ಎಂದು ಗೊತ್ತಾಗಿದೆ. ಅದರ ಗ್ರಾಫಿಕ್ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸ್ಟೇಡಿಯಂನ ದೀಪದ ಸ್ತಂಭಗಳು ಶಿವನ ಬಳಿ ಇರುವ ತ್ರಿಶೂಲ ರೀತಿಯಲ್ಲಿ ಇರಲಿದೆ. ಕ್ರೀಡಾಂಗಣದ ಮುಖ್ಯ ಕಟ್ಟಡ ಡಮರುಗ ಶೈಲಿಯಲ್ಲಿ ಇರಲಿದೆ.
ಇನ್ನೂ ಪ್ರವೇಶ ದ್ವಾರಗಳು ಬಿಲ್ವ ಪತ್ರೆಗಳಂತೆ ಇರಲಿದೆ. ಕ್ರೀಡಾಂಗಣದ ಮೇಲ್ಛಾವಣಿಯುವ ಅರ್ಧ ಚಂದ್ರಕಾರಾದಲ್ಲಿ ಇರುತ್ತದೆ. ಕ್ರೀಡಾಂಗಣದಲ್ಲಿನ ಆಸನಗಳ ಸ್ಟ್ಯಾಂಡ್‌ಗಳನ್ನು ಗಂಗಾ ಘಾಟ್‌ನಂತೆ ನಿರ್ಮಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಕ್ರೀಡಾಂಗಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ತಮ್ಮ ಲೋಕಸಭಾ ಕ್ಷೇತ್ರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮಹಾದೇವನ ನಗರದಲ್ಲಿ ನಿರ್ಮಿಸಲಾಗಿರುವ ಈ ಕ್ರೀಡಾಂಗಣವನ್ನು ಲೋಕಾರ್ಪಣೆ ಮಾಡುತ್ತೇವೆ. ಕಾಶಿಯಲ್ಲಿ ನಿರ್ಮಾಣವಾಗಲಿರುವ ಈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಿಂದ ಕ್ರೀಡಾಪಟುಗಳು ಪ್ರಯೋಜನ ಪಡೆಯಲಿದ್ದಾರೆ. ಕ್ರೀಡಾಂಗಣವು ಪೂರ್ವಾಂಚಲ ಪ್ರದೇಶಕ್ಕೆ ನಕ್ಷತ್ರವಾಗಲಿದೆ ಎಂದು ನಮೋ ಹೇಳಿದ್ದಾರೆ.
ಕ್ರೀಡಾಂಗಣ ನಿರ್ಮಾಣಕ್ಕಾಗಿ 121 ಕೋಟಿ ವೆಚ್ಚ ಮಾಡಿ ಭೂಮಿ ವಶ
ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಾಗಿರುವ ಭೂಮಿ ಸ್ವಾಧೀನಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸರ್ಕಾರ 121 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದು ವರದಿಯಾಗಿದೆ.