Video: ಹಾರ್ದಿಕ್ ಅಪ್ಪುಗೆಯನ್ನು ತಪ್ಪಿಸಿದ ರೋಹಿತ್ ಶರ್ಮಾ; ಸೋಲಿನ ಬಳಿಕ ಮುಂಬೈ ಹಾಲಿ-ಮಾಜಿ ನಾಯಕರ ಬಿಸಿ ಬಿಸಿ ಚರ್ಚೆ
Mar 25, 2024 02:55 PM IST
ಹಾರ್ದಿಕ್ ಅಪ್ಪುಗೆಯನ್ನು ತಪ್ಪಿಸಿದ ರೋಹಿತ್ ಶರ್ಮಾ
- Rohit Sharma: ಗುಜರಾತ್ ಟೈಟಾನ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡದ ಸೋಲಿನ ನಂತರ ರೋಹಿತ್ ಶರ್ಮಾ ಅವರನ್ನು ಹಾರ್ದಿಕ್ ಪಾಂಡ್ಯ ಹಿಂದಿನಿಂದ ತಬ್ಬಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಇದು ರೋಹಿತ್‌ಗೆ ಇಷ್ಟವಾಗಿಲ್ಲ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಐಪಿಎಲ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಮತ್ತೊಂದು ಕಳಪೆ ದಾಖಲೆಯ ಸಂಪ್ರದಾಯವನ್ನುಮುಂದುವರೆಸಿದೆ. 2012ರ ನಂತರ ಪಂದ್ಯಾವಳಿಯಲ್ಲಿ ಪ್ರತಿ ಬಾರಿಯೂ ಮೊದಲ ಪಂದ್ಯದಲ್ಲಿ ಸೋಲುವಂತೆ ಈ ಭಾರಿಯೂ ಸೋತಿದೆ. ಈ ನಡುವೆ ನಾಯಕತ್ವ ಬದಲಾವಣೆ ಬಳಿಕ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲ ಪಂದ್ಯವಾಡಿದ ಮುಂಬೈಗೆ, ಸೋಲಿನ ಆರಂಭ ಸಿಕ್ಕಂತಾಗಿದೆ. ಅತ್ತ ತವರಿನ ಅಭಿಮಾನಿಗಳ ಬಲದೊಂದಿಗೆ ಗುಜರಾತ್ ಟೈಟಾನ್ಸ್ ಮುನ್ನಡೆಸಿದ ಶುಭ್ಮನ್ ಗಿಲ್, ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ್ದಾರೆ. ಪಂದ್ಯ ಒಂದೆಡೆಯಾದರೆ, ಈ ಪಂದ್ಯದ ಉದ್ದಕ್ಕೂ ಗಮನ ಸೆಳೆದವರು ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ.
ಪಂದ್ಯ ಆರಂಭವಾಗುತ್ತಿದ್ದಂತೆಯೇ, ಮುಂಬೈ ನೂತನ ನಾಯಕನನ್ನು ಅಭಿಮಾನಿಗಳು ಕಾಲೆಳೆಯಲು ಆರಂಭಿಸಿದ್ದರು. ಟಾಸ್ ವೇಳೆ ಹಾರ್ದಿಕ್ ಮಾತನಾಡುವಾಗ ರೋಹಿತ್, ರೋಹಿತ್ ಎಂಬ ಘೋಷಣೆ ಕೇಳಿ ಬಂತು. ಪಂದ್ಯದ ನಡುವೆ ಹಾರ್ದಿಕ್ ಪಾಂಡ್ಯರನ್ನು ಅಭಿಮಾನಿಗಳು ರೇಗಿಸುತ್ತಿರುವುದು ಕಂಡುಬಂತು. ಮೈದಾನ ಮಾತ್ರವಲ್ಲದೆ ಮೈದಾನದ ಹೊರಗೂ, ಸೋಷಿಯಲ್ ಮೀಡಿಯಾದಲ್ಲೂ ಈ ಚರ್ಚೆ ಜೋರಾಗಿತ್ತು.
ನಾಯಕನಾಗಿ ಮೈದಾನದಲ್ಲಿ ಫೀಲ್ಡರ್‌ಗಳನ್ನು ನಿಲ್ಲಿಸುತ್ತಿದ್ದ ಹಾರ್ದಿಕ್, ತಂಡದ ಮಾಜಿ ನಾಯಕ ರೋಹಿತ್ ಅವರನ್ನು ಬೌಂಡರಿ ಲೈನ್‌ನತ್ತ ಕಳುಹಿಸಿದರು. ಕಳೆದ ಆವೃತ್ತಿಯವರೆಗೂ ರೋಹಿತ್ ಆ ಕೆಲಸ ಮಾಡುತ್ತಿದ್ದರು. ಈ ಬಾರಿ ನಾಯಕತ್ವ ಕಳೆದುಕೊಂಡ ಹಿಟ್‌ಮ್ಯಾನ್, ಹಾರ್ದಿಕ್ ಮಾತಿನಂತೆ ಫೀಲ್ಡಿಂಗ್ ಸ್ಥಾನ ಬದಲಿಸಬೇಕಾಯ್ತು. ಈ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆಗೊಳಗಾಗಿದೆ. ನಮ್ಮ ನಾಯಕನ್ನು ಈ ರೀತಿ ನೋಡಲು ಸಾಧ್ಯಯವಾಗುತ್ತಿಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಅಲ್ಲದೆ, ಪಾಂಡ್ಯ ಸನ್ನೆ ಮಾಡುತ್ತಿದ್ದಾಗ ರೋಹಿತ್ ಶರ್ಮಾ ಕೊಡುತ್ತಿದ್ದ ಪ್ರತಿಕ್ರಿಯೆ ನೋಡಿ ಅಭಿಮಾನಿಗಳಿಗೆ ಸಂಕಟವಾಗಿದೆ.
ಇದನ್ನೂ ಓದಿ | ಪದೇ ಪದೇ ರೋಹಿತ್ ಶರ್ಮಾ ತೋರಿಸಿದ ಕ್ಯಾಮೆರಾಮೆನ್; ಬಾಸ್ನ ನೋಡೋಕೆ ಆಗ್ತಿಲ್ಲ, ತೋರಿಸ್ಬೇಡ್ರೋ ಎಂದ ಹಿಟ್‌ಮ್ಯಾನ್ ಫ್ಯಾನ್ಸ್
ಪಂದ್ಯದ ನಡುವೆ, ಹಿರಿಯ ಆಟಗಾರರಾದ ರೋಹಿತ್, ಬುಮ್ರಾ ಹಾಗೂ ಹಾರ್ದಿಕ್ ನಡುವೆ ಆಗಾಗ ಮಾತುಕತೆಗಳು ನಡೆದವು. ಈ ಎಲ್ಲಾ ಸನ್ನಿವೇಶಗಳು ರೋಹಿತ್‌ಗೆ ಇಷ್ಟವಾದಂತಿಲ್ಲ. ಅಲ್ಲದೆ ಪಂದ್ಯದಲ್ಲಿ ತಂಡ ಅನುಭವಿಸಿದ ಸೋಲಿನಿಂದ ಹಿಟ್‌ಮ್ಯಾನ್ ಮತ್ತಷ್ಟು ಕುಪಿತಗೊಂಡರು.
ಪಂದ್ಯದ ನಂತರ ರೋಹಿತ್ ಬಳಿಗೆ ನಡೆದು ಬಂದ ಹಾರ್ದಿಕ್ ಪಾಂಡ್ಯ, ಹಿಂದಿನಿಂದ ತಬ್ಬಿಕೊಳ್ಳಲು ಪ್ರಯತ್ನಿಸಿದರು. ಆದರೆ, ಮುಂಬೈ ಮಾಜಿ ನಾಯಕ ಹಾರ್ದಿಕ್ ಕೈಗಳನ್ನು ಸರಿಸಿದರು. ಈ ವೇಳೆ ಹಾರ್ದಿಕ್‌ಗೆ ರೋಹಿತ್ ಏನೋ ಹೇಳುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ. ಇಬ್ಬರು ಆಟಗಾರರ ನಡುವೆ ಸುದೀರ್ಘ ಮಾತುಕತೆ ನಡೆಯಿತು. ರೋಹಿತ್ ಮಾತನಾಡುವಾಗ ಹಾರ್ದಿಕ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಈ ಕುರಿತು ಪಂದ್ಯದ ನಂತರ ಜಿಯೋ ಸಿನೆಮಾದಲ್ಲಿ ಮಾತನಾಡಿದ ಭಾರತದ ಹಿರಿಯ ಕ್ರಿಕೆಟಿಗ ರಾಬಿನ್ ಉತ್ತಪ್ಪ, ಮುಂಬೈ ಇಂಡಿಯನ್ಸ್ ತಂಡವು ಪಂದ್ಯದಲ್ಲಿ ಎಲ್ಲಿ ಎಡವಿತು ಎಂಬುದರ ಬಗ್ಗೆ ಹಾರ್ದಿಕ್-ರೋಹಿತ್ ನಡುವೆ ಚರ್ಚೆ ನಡೆದಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ 11 ವರ್ಷಗಳಲ್ಲಿ, ಮುಂಬೈ ಇಂಡಿಯನ್ಸ್ ತನ್ನ ಆರಂಭಿಕ ಪಂದ್ಯವನ್ನು ಸೋತಿದೆ ಎಂದು ರೋಹಿತ್ ಅವರಿಗೆ ಹೇಳುತ್ತಿರಬೇಕು ಎಂದು ಅವರು ಹೇಳಿದ್ದಾರೆ. ಆದರೆ, ಅಭಿಮಾನಿಗಳು ಇದನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ.
ಮುಂಬೈ ತಂಡವು ಈಗ ಒಂದು ಕುಟುಂಬವಾಗಿಲ್ಲ. ಅಲ್ಲಿ ಎಲ್ಲವೂ ಸರಿ ಇಲ್ಲ. ನಾಯಕತ್ವ ಬದಲಾವಣೆ ನಂತರ ತಂಡದಲ್ಲಿ ಬಿರುಕು ಬಿದ್ದಿದೆ. ರೋಹಿತ್, ಬುಮ್ರಾ ಹಾಗೂ ಹಾರ್ದಿಕ್ ನಡುವೆ ಒಮ್ಮತವಿಲ್ಲ ಎಂದು ಇಂಟರ್ನೆಟ್‌ನಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿವೆ.