Video: ಎಲ್ಗರ್ ಕ್ಯಾಚ್ ಪಡೆದು ಸಂಭ್ರಮಾಚರಿಸಬೇಡಿ ಎಂದು ಪ್ರೇಕ್ಷಕರಿಗೆ ಹೇಳಿದ ವಿರಾಟ್; ಕೊಹ್ಲಿ ನಡೆಗೆ ವ್ಯಾಪಕ ಮೆಚ್ಚುಗೆ
Jan 04, 2024 06:41 AM IST
ಡೀನ್ ಎಲ್ಗರ್‌ಗೆ ಹಾರೈಸಿದ ವಿರಾಟ್ ಕೊಹ್ಲಿ
- Virat Kohli Dean Elgar: ಟೆಸ್ಟ್ ವೃತ್ತಿಜೀವನಕ್ಕೆ ಡೀನ್ ಎಲ್ಗರ್ ತೆರೆ ಎಳೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 86 ಪಂದ್ಯಗಳನ್ನು ಆಡಿರುವ ಅವರು, 37.65ರ ಸರಾಸರಿಯಲ್ಲಿ 5347 ರನ್ ಗಳಿಸಿದ್ದಾರೆ. ಇದರಲ್ಲಿ 14 ಶತಕಗಳು ಸೇರಿವೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ (South Africa vs India 2nd Test) ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಬೌಲರ್‌ಗಳದ್ದೇ ಕಾರುಬಾರು. ಮೊದಲ ದಿನದಾಟದಲ್ಲಿ ಬರೋಬ್ಬರಿ 23 ವಿಕೆಟ್‌ಗಳು ಪತನವಾಗಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕಳಪೆ ದಾಖಲೆ ನಿರ್ಮಾಣವಾಯ್ತು. ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದಲ್ಲಿ ಉಭಯ ತಂಡಗಳು ಕೂಡಾ ತಮ್ಮ ಪಾಲಿನ ಮೊದಲ ಇನ್ನಿಂಗ್ಸ್ ಪೂರ್ಣಗೊಳಿಸಿದವು. ಈ ನಡುವೆ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಔಟಾದ ಸಂದರ್ಭದಲ್ಲಿ ತಮ್ಮ ನಡೆಯಿಂದಾಗಿ ಭಾರತ ತಂಡದ ಹಿರಿಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಉಭಯ ತಂಡಗಳು ತಮ್ಮ ಪಾಲಿನ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿದ ಬಳಿಕ, ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್ ಆರಂಭಿಸಿತು. ಈ ವೇಳೆ, ತಮ್ಮ ವೃತ್ತಿ ಜೀವನದ ಕೊನೆಯ ಟೆಸ್ಟ್ ಪಂದ್ಯ ಆಡುತ್ತಿರುವ ಡೀನ್ ಎಲ್ಗರ್ ಮೊದಲನೆಯವರಾಗಿ ವಿಕೆಟ್ ಒಪ್ಪಿಸಿದರು. ಹರಿಣಗಳ ಬಳಗದ ಅನುಭವಿ ಬ್ಯಾಟರ್ ಮೊದಲ ಸ್ಲಿಪ್‌ನಲ್ಲಿ ನಿಂತಿದ್ದ ಕೊಹ್ಲಿ ಕೈಗೆ ಕ್ಯಾಚ್ ನೀಡಿ ಔಟಾದರು. ಭಾರತಕ್ಕೆ ವೇಗಿ ಮುಖೇಶ್ ಕುಮಾರ್ ಮೊದಲ ಮುನ್ನಡೆ ತಂದುಕೊಟ್ಟರು. ಈ ವೇಳೆ ಕೊಹ್ಲಿ ಸಂಭ್ರಮಾಚರಣೆ ನಡೆಸದೆ ಹೃದಯ ಗೆದ್ದರು.
ಇದನ್ನೂ ಓದಿ | ICC rankings: ಅಗ್ರ 10ರೊಳಗೆ ಮರಳಿದ ವಿರಾಟ್; ಬೌಲಿಂಗ್‌ನಲ್ಲಿ ಅಶ್ವಿನ್ ಮತ್ತೆ ನಂಬರ್ ವನ್
ಇದು ಎಲ್ಗರ್ ಅವರ ವೃತ್ತಿಜೀವನದ ಅಂತಿಮ ಟೆಸ್ಟ್ ಇನ್ನಿಂಗ್ಸ್. ಪಂದ್ಯದಲ್ಲಿ ಅವರು ಸುದೀರ್ಘ ಇನ್ನಿಂಗ್ಸ್ ಆಡಬೇಕೆಂಬುದು ದಕ್ಷಿಣ ಆಫ್ರಿಕಾ ಅಭಿಮಾನಿಗಳ ಬಯಕೆಯಾಗಿತ್ತು. ಕೇಪ್‌ಟೌನ್ ಟೆಸ್ಟ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವುದಾಗಿ ಸರಣಿಗೂ ಮುನ್ನವೇ ಘೋಷಿಸಿದ್ದ ಎಲ್ಗರ್, ತಮ್ಮ ವೃತ್ತಿಜೀವನದ ಅಂತಿಮ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ವಿಡಿಯೋ ನೋಡಿ
ಎಲ್ಗರ್ ಔಟಾದ ವೇಳೆ, ಬೌಲರ್ ಮುಖೇಶ್ ಕುಮಾರ್ ಸಂಭ್ರಮಾಚರಣೆಯಲ್ಲಿ ತೊಡಗುತ್ತಾರೆ. ಈ ವೇಳೆ ಕ್ಯಾಚ್ ಪಡೆದ ಕೊಹ್ಲಿ ಮಾತ್ರ, ಸೆಲೆಬ್ರೇಟ್ ಮಾಡುವುದಿಲ್ಲ. ಅಲ್ಲದೆ ಸ್ಟ್ಯಾಂಡ್ ಕಡೆ ಸಂಭ್ರಮದಲ್ಲಿ ತೊಡಗಿದ್ದ ಭಾರತೀಯ ಪ್ರೇಕ್ಷಕರ ಕಡೆಗೆ ತಿರುಗಿ, ಎಲ್ಗರ್ ವಿಕೆಟ್ ಅನ್ನು ಸಂಭ್ರಮಿಸಬೇಡಿ ಎಂದು ಹೇಳಿದ್ದಾರೆ.
ಆ ಬಳಿಕ ಭಾರತದ ಮಾಜಿ ನಾಯಕ ಎಲ್ಗರ್ ಅವರಿಗೆ ಬೆನ್ನು ಬಾಗಿಸಿ ನಮಸ್ಕರಿಸುತ್ತಾ ಗೌರವಿಸಿದ್ದಾರೆ. ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುತ್ತಿದ್ದ ಎಲ್ಗರ್ ಅವರನ್ನು ತಬ್ಬಿಕೊಂಡು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.
ಸುದೀರ್ಘ ವೃತ್ತಿಜೀವನಕ್ಕೆ ಎಲ್ಗರ್ ತೆರೆ ಎಳೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 86 ಪಂದ್ಯಗಳನ್ನು ಆಡಿರುವ ಅವರು, 37.65ರ ಸರಾಸರಿಯಲ್ಲಿ 5347 ರನ್ ಗಳಿಸಿದ್ದಾರೆ. ಇದರಲ್ಲಿ 14 ಶತಕಗಳು ಸೇರಿವೆ. ತಂಡದ ನಿಯಮಿತ ನಾಯಕ ಟೆಂಬಾ ಬವುಮಾ ಗಾಯಗೊಂಡ ಹಿನ್ನೆಲೆಯಲ್ಲಿ ಎಲ್ಗರ್ ತಮ್ಮ ವಿದಾಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿದ್ದಾರೆ.
ಇದನ್ನೂ ಓದಿ | IND vs SA: 11 ಎಸೆತಗಳಲ್ಲಿ 6 ವಿಕೆಟ್ ಪತನ; 153 ರನ್‌ಗೆ ಭಾರತ ಆಲೌಟ್, 6 ಮಂದಿ ಡಕೌಟ್
ಮೊದಲ ದಿನದಾಟದಲ್ಲಿ 46 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ದಿನದ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಿದರು. ಕೊಹ್ಲಿ ಇದುವರೆಗಿನ ಸರಣಿಯಲ್ಲಿ ಭಾರತದ ಪ್ರಮುಖ ರನ್ ಗಳಿಸಿದ ಆಟಗಾರರಾಗಿದ್ದಾರೆ. ಮೂರು ಇನ್ನಿಂಗ್ಸ್‌ಗಳಲ್ಲಿ 53.33 ಸರಾಸರಿಯಲ್ಲಿ ಬ್ಯಾಟ್ ಬೀಸಿ 160 ರನ್ ಗಳಿಸಿದ್ದಾರೆ.