Video: ಹಾರ್ದಿಕ್ ವಿರುದ್ಧ ಘೋಷಣೆ ಕೂಗಿದ ಮುಂಬೈ ಪ್ರೇಕ್ಷಕರನ್ನು ಒಂದೇ ಪದದಿಂದ ಮೌನವಾಗಿಸಿದ ಸಂಜಯ್ ಮಂಜ್ರೇಕರ್
Apr 01, 2024 08:20 PM IST
ಮುಂಬೈ ಪ್ರೇಕ್ಷಕರನ್ನು ಒಂದೇ ಪದದಿಂದ ಮೌನವಾಗಿಸಿದ ಸಂಜಯ್ ಮಂಜ್ರೇಕರ್
- Hardik Pandya: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಪ್ರಕ್ರಿಯೆ ವೇಳೆ ಹಾರ್ದಿಕ್ ಪಾಂಡ್ಯ ವಿರೋಧಿಸಿ ಘೋಷಣೆ ಕೂಗಿದ ಅಭಿಮಾನಿಗಳನ್ನು ಸಂಜಯ್ ಮಂಜ್ರೇಕರ್ ಮೌನವಾಗಿಸಿದ್ದಾರೆ. ಟಾಸ್ ಪ್ರಕ್ರಿಯೆ ವೇಳೆ ಲೇಡೀಸ್ ಆಂಡ್ ಜಂಟಲ್‌ಮೆನ್, ಬಿಹೇವ್ ಎಂದು ಹೇಳುವ ಮೂಲಕ ಪಾಂಡ್ಯ ಬೆಂಬಲಕ್ಕೆ ನಿಂತಿದ್ದಾರೆ.
ಐಪಿಎಲ್ 2024ರ ಆವೃತ್ತಿಯ 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಆರ್ ನಾಯಕ ಸಂಜು ಸ್ಯಾಮ್ಸನ್ ಚೇಸಿಂಗ್ ಆಯ್ಕೆ ಮಾಡಿಕೊಂಡರು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯ ನಡೆಯುತ್ತಿದ್ದು, ನಿರೀಕ್ಷೆಯಂತೆಯೇ ಮುಂಬೈ ಅಭಿಮಾನಿಗಳು ತಂಡದ ಹೊಸ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ಟಾಸ್ ವೇಳೆ ಘೋಷಣೆ ಕೂಗಲು ಆರಂಭಿಸಿದ್ದಾರೆ. ಆದರೆ, ಟಾಸ್ ಪ್ರಕ್ರಿಯೆ ನಡೆಸಿಕೊಟ್ಟ ಸಂಜಯ್ ಮಂಜ್ರೇಕರ್, ಅಭಿಮಾನಿಗಳ ಘೋಷಣೆಗೆ ಬ್ರೇಕ್ ಹಾಕಿದ್ದಾರೆ.
ಕಳೆದ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದ ಹಾರ್ದಿಕ್ ಪಾಂಡ್ಯ, ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಟ್ರೇಡಿಂಗ್ ಮೂಲಕ ತಮ್ಮ ಹಳೆಯ ಫ್ರಾಂಚೈಸ್ ಮುಂಬೈಗೆ ಮರಳಿದರು. ಅಷ್ಟೇ ಅಲ್ಲದೆ ಅವರಿಗೆ ತಂಡದ ನಾಯಕತ್ವ ನೀಡಲಾಯ್ತು. ಏಕಾಏಕಿ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದಕ್ಕಾಗಿ, ಹಿಟ್‌ಮ್ಯಾನ್ ಅಭಿಮಾನಿಗಳು ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದರು.
ಟೂರ್ನಿ ಆರಂಭವಾಗುತ್ತಿದ್ದಂತೆಯೇ, ಹಾರ್ದಿಕ್ ವಿರುದ್ಧ ಬಹಿರಂಗ ಘೋಷಣೆಗಳು ಕೇಳಿ ಬಂದಿತ್ತು. ಆರಂಭದಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಪರ ಘೋಷಣೆ ಕೂಗಿದ್ದ ಅಭಿಮಾನಿಗಳು, ಹಾರ್ದಿಕ್ ನಮ್ಮ ನಾಯಕ ಅಲ್ಲ ಎಂದು ಹೇಳಿದ್ದರು. ಆ ಬಳಿಕ ಹೈದರಾಬಾದ್‌ನಲ್ಲೂ ಹಾರ್ದಿಕ್ ವಿರುದ್ಧ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವರ್ತನೆ ಮುಂಬೈನಲ್ಲೂ ಮರುಕಳಿಸುವ ಸುಳಿವಿತ್ತು.
ಇದನ್ನೂ ಓದಿ | IPL 2024: ಅಲ್ಜಾರಿ ಜೋಸೆಫ್ ಔಟ್, ಫರ್ಗ್ಯುಸನ್ ಇನ್; ಲಕ್ನೋ ವಿರುದ್ಧ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ
ಟಾಸ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ, ವಾಂಖೆಡೆ ಸ್ಟೇಡಿಯಂನಲ್ಲಿ ಪ್ರೇಕ್ಷಕರ ಒಂದು ಭಾಗವು “ರೋಹಿತ್, ರೋಹಿತ್” ಎಂದು ಘೋಷಣೆ ಕೂಗಲು ಆರಂಭಿಸಿತು. ಅಭಿಮಾನಿಗಳ ಘೋಷಣೆಯನ್ನು ನಿಯಂತ್ರಿಸಲು ಸಂಜಯ್ ಮಂಜ್ರೇಕರ್ ಕೇವಲ ಒಂದು ಪದ ಮಾತ್ರವೇ ಹೇಳಿದರು. “ಲೇಡೀಸ್ ಆಂಡ್ ಜಂಟಲ್‌ಮೆನ್, ಬಿಹೇವ್” ಎಂದು ಮಂಜ್ರೇಕರ್ ಹೇಳುತ್ತಿದ್ದಂತೆಯೇ ಅಭಿಮಾನಿಗಳು ಸಾವಧಾನದಿಂದ ಟಾಸ್ ಕಡೆಗೆ ಗಮನ ಹರಿಸಿದರು.
ಹಾರ್ದಿಕ್ ಪಾಂಡ್ಯ ಮುಂಬೈ ನಾಯಕರಾದ ಬಳಿಕ ವಾಂಖೆಡೆ ಮೈದಾನದಲ್ಲಿ ಮೊದಲ ಪಂದ್ಯ ನಡೆಯುತ್ತಿದ್ದು, ಅಭಿಮಾನಿಗಳಿಂದ ನಾಯಕನಿಗೆ ವಿರೋಧ ವ್ಯಕ್ತವಾಗುವ ನಿರೀಕ್ಷೆಗಳಿದ್ದವು. ಅದರಂತೆಯೇ ರೋಹಿತ್ ಅಭಿಮಾನಿಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಮುಂಬೈ ವಿರುದ್ಧ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ಕೆ; ಸ್ಯಾಮ್ಸನ್ ಬಳಗದಲ್ಲಿ ಒಂದು ಬದಲಾವಣೆ
ವಾಂಖೆಡೆ ಮೈದಾನದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ರಾಜಸ್ಥಾನ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಸಂದೀಪ್ ಶರ್ಮಾ ಬದಲಿಗೆ ನಂಡ್ರೆ ಬರ್ಗರ್ ಆಡುವ ಬಳಗ ಸೇರಿಕೊಂಡಿದ್ದಾರೆ. ಇದೇ ವೇಳೆ ಮುಂಬೈ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಮುಂಬೈ ಇಂಡಿಯನ್ಸ್ ತಂಡ
ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ನಮನ್ ಧೀರ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಜೆರಾಲ್ಡ್ ಕೋಟ್ಜಿ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜಸ್ಪ್ರೀತ್ ಬುಮ್ರಾ, ಕ್ವೇನಾ ಮಫಕಾ.
ರಾಜಸ್ಥಾನ್ ರಾಯಲ್ಸ್ ತಂಡ
ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ/ವಿಕೆಟ್ ಕೀಪರ್), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂಡ್ರೆ ಬರ್ಗರ್, ಯುಜ್ವೇಂದ್ರ ಚಹಾಲ್.
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ