ವಿರಾಟ್ ಕೊಹ್ಲಿ ಹುಟ್ಟುಹಬ್ಬ; ಕ್ರಿಕೆಟ್ ದಿಗ್ಗಜನ ವೃತ್ತಿಜೀವನವನ್ನು ರೋಜರ್ ಫೆಡರರ್-ರೊನಾಲ್ಡೊಗೆ ಹೋಲಿಸುವುದೇಕೆ?
Nov 05, 2024 02:13 PM IST
ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿಯನ್ನು ರೋಜರ್ ಫೆಡರರ್-ರೊನಾಲ್ಡೊಗೆ ಹೋಲಿಸುವುದೇಕೆ?
- Virat Kohli Birthday: ವಿಶ್ವ ಕ್ರಿಕೆಟ್‌ನ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಅವರನ್ನು ಜಾಗತಿಕ ಕ್ರೀಡಾಲೋಕದ ದಿಗ್ಗಜರಾದ ರೋಜರ್ ಫೆಡರರ್, ಕ್ರಿಸ್ಟಿಯಾನೊ ರೊನಾಲ್ಡೊಗೆ ಹೋಲಿಸಲಾಗುತ್ತದೆ. ಕ್ರಿಕೆಟ್ ಎಂದಾಕ್ಷಣ ನೆನಪಾಗುವ ಆಟಗಾರನಾಗಿ ಕಿಂಗ್ ಕೊಹ್ಲಿ ಬೆಳೆದಿದ್ದಾರೆ.
ವಿಶ್ವ ಕ್ರಿಕೆಟ್‌ನ ದಿಗ್ಗಜ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ, ಸದ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿರಬಹುದು. ಆದರೆ, ಅವರ ವೃತ್ತಿಜೀವನದಲ್ಲಿ ಅವರು ಕಂಡ ಯಶಸ್ಸು ಹಾಗೂ ಮಾಡಿದ ಸಾಧನೆ, ಅವರನ್ನು ವಿಶ್ವ ಮಟ್ಟದಲ್ಲಿ ಶ್ರೇಷ್ಠ ಕ್ರಿಕೆಟಿಗನಾಗಿ ಮಾಡಿದೆ. ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಕೋಟಿ ಕೋಟಿ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ವಿರಾಟ್ ಕೊಹ್ಲಿಗೆ ಅವರೇ ಸಾಟಿ ಎಂದರೆ ಅತಿಶಯೋಕ್ತಿ ಅಲ್ಲ. ನವೆಂಬರ್ 5ರ ಮಂಗಳವಾರ ಕೊಹ್ಲಿ 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬವನ್ನು ವಿಶ್ವ ಕ್ರಿಕೆಟ್ ಸಂಭ್ರಮಿಸುತ್ತಿದೆ. ಕ್ರಿಕೆಟ್‌ನ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತದ ಪರ ಹತ್ತು ಹಲವಾರು ದಾಖಲೆ ನಿರ್ಮಿಸಿರುವ ವಿರಾಟ್, ತಮ್ಮ ವೃತ್ತಿಜೀವನದಲ್ಲಿ ಕ್ರಿಕೆಟ್‌ನ ಬ್ರಾಂಡ್ ಆಗಿ ಬೆಳೆದಿದ್ದಾರೆ. ಜಗತ್ತಿನ ದಿಗ್ಗಜ, ಶ್ರೇಷ್ಠ ಕ್ರೀಡಾಪಟುಗಳ ಪಟ್ಟಿಗೆ ಸೇರಿದ್ದಾರೆ.
ವಿರಾಟ್ ಕೊಹ್ಲಿ, ಈಗಾಗಲೇ ಟಿ20 ಸ್ವರೂಪಕ್ಕೆ ವಿದಾಯ ಹೇಳಿದ್ದಾರೆ. ಸದ್ಯ ಅವರು ಟೆಸ್ಟ್ ಮತ್ತು ಏಕದಿನ ತಂಡಗಳ ಅವಿಭಾಜ್ಯ ಅಂಗವಾಗಿ ಉಳಿದಿದ್ದಾರೆ. ಅತ್ತ ಆರ್‌ಸಿಬಿ ಪರ ಐಪಿಎಲ್‌ನಲ್ಲೂ ಆಟ ಮುಂದುವರೆಸಿದ್ದಾರೆ. ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ಟೂರ್ನಿಯ ಹಾಗೂ ಫೈನಲ್‌ನಲ್ಲಿ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದ ಕಿಂಗ್, ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದರು. ಹಲವು ಪ್ರಮುಖ ಟೂರ್ನಿಗಳಲ್ಲಿ ತಂಡವನ್ನು ಗೆಲುವಿನ ದಡ ಸೇರಿಸಿ ದಾಖಲೆಯ ಬೆಟ್ಟ ನಿರ್ಮಿಸಿದ ಕಿಂಗ್ ಜಾಗತಿಕ ದಿಗ್ಗಜ ಕ್ರೀಡಾಪಟುಗಳಿಗೆ ಸರಿಸಾಟಿಯಾಗಿ ಹೇಗೆ ನಿಲ್ಲುತ್ತಾರೆ ಎಂಬುದನ್ನು ನೋಡೋಣ.
ವಿಶ್ವ ಕ್ರೀಡಾಲೋಕದಲ್ಲಿ ದಿಗ್ಗಜರ ಸ್ಥಾನದಲ್ಲಿರುವ ಆಟಗಾರರಲ್ಲಿ ನಿವೃತ್ತ ಟೆನಿಸ್ ದಂತಕಥೆ ರೋಜರ್ ಫೆಡರರ್, ಬಾಸ್ಕೆಟ್ಬಾಲ್ ಶ್ರೇಷ್ಠ ಲೆಬ್ರಾನ್ ಜೇಮ್ಸ್ ಮತ್ತು ಪೋರ್ಚುಗಲ್ ಫುಟ್ಬಾಲ್ ಸೂಪರ್‌ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅಗ್ರಗಣ್ಯರು. ಕ್ರೀಡಾ ಕ್ಷೇತ್ರದ ಈ ಮೂವರೊಂದಿಗೆ ಕ್ರಿಕೆಟ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿಯನ್ನು ಹೋಲಿಸಲಾಗುತ್ತದೆ. ಕ್ರಿಕೆಟ್ ಎಂದಾಗ ಮೊದಲು ನೆನಪಿಗೆ ಬರುವವರೇ ವಿರಾಟ್ ಕೊಹ್ಲಿ.
2023ರ ಏಕದನ ವಿಶ್ವಕಪ್ ವೇಳೆ ಏಕದಿನ ಕ್ರಿಕೆಟ್‌ನಲ್ಲಿ 50 ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾರು. ಈವರೆಗೆ ಆಡಿದ 295 ಪಂದ್ಯಗಳಲ್ಲಿ 58.18ರ ಸರಾಸರಿಯಲ್ಲಿ ವಿರಾಟ್ 13,906 ರನ್ ಗಳಿಸಿದ್ದಾರೆ. 118 ಟೆಸ್ಟ್ ಪಂದ್ಯಗಳಲ್ಲಿ ಆಡಿ 29 ಶತಕಗಳೊಂದಿಗೆ 9040 ರನ್ ಪೇರಿಸಿದ್ದಾರೆ. 125 ಟಿ20 ಪಂದ್ಯಗಳಲ್ಲಿ 48.69ರ ಸರಾಸರಿಯಲ್ಲಿ 4188 ರನ್ ಗಳಿಸಿದ್ದಾರೆ. ಇದರಲ್ಲೂ ಒಂದು ಶತಕ ಮತ್ತು 38 ಅರ್ಧಶತಕಗಳು ಸೇರಿವೆ.
ಕೊಹ್ಲಿ 2011ರ ಏಕದಿನ ಮತ್ತು 2024ರ ಟಿ20 ವಿಶ್ವಕಪ್ ಗೆದ್ದಿದ್ದಾರೆ. ನಾಯಕನಾಗಿ, ಅವರು ಭಾರತವನ್ನು 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಮತ್ತು 2019ರ ವಿಶ್ವಕಪ್ ಸೆಮಿಫೈನಲ್‌ಗೆ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ನಾಯಕನಾಗಿ ಅವರ ಅತಿದೊಡ್ಡ ಸಾಧನೆ ಮಾಡಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ. ಆಸ್ಟ್ರೇಲಿಯಾ ವಿರುದ್ಧದ 2018/19ರ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತವು ಟೆಸ್ಟ್ ಸರಣಿಯನ್ನು ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.
ಕ್ರಿಸ್ಟಿಯಾನೊ ರೊನಾಲ್ಡೊ
ಇನ್‌ಸ್ಟಾಗ್ರಾಮ್‌ನಲ್ಲಿ 642 ಮಿಲಿಯನ್ ಫಾಲೋವರ್‌ಗಳೊಂದಿಗೆ ಅತಿ ಹೆಚ್ಚು ಫಾಲೊವರ್ಸ್ ಹೊಂದಿರುವ ಅಥ್ಲೀಟ್ ರೊನಾಲ್ಡೊ. ಆ ಬಳಿಕ ಲಿಯೋನೆಲ್ ಮೆಸ್ಸಿ 504 ಮಿಲಿಯನ್ ಫಾಲೊವರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 270 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇಬ್ಬರು ಫುಟ್ಬಾಲ್ ದಂತಕಥೆಗಳ ನಂತರ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಫಾಲೊವರ್ಸ್ ಹೊಂದಿರುವ ಸೆಲೆಬ್ರಿಟಿ ಇವರು. ರೊನಾಲ್ಡೊ ತಮ್ಮ ವೃತ್ತಿಜೀವನದಲ್ಲಿ 900ಕ್ಕೂ ಹೆಚ್ಚು ಗೋಲುಗಳನ್ನು ಗಳಿಸುವ ಮೂಲಕ ಸಾರ್ವಕಾಲಿಕ ಶ್ರೇಷ್ಠ ಗೋಲ್ ಸ್ಕೋರರ್ ಆಗಿದ್ದಾರೆ. ಕ್ರಿಕೆಟ್‌ನಲ್ಲಿ ಉತ್ತಮ ಅಂಕಿ-ಅಂಶ ಹೊಂದಿರುವ ವಿರಾಟ್ ಅದೇ ಸ್ಥಾನದಲ್ಲಿದ್ದಾರೆ.
ಲೆಬ್ರಾನ್ ಜೇಮ್ಸ್
ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಎನ್‌ಬಿಎ ದಂತಕಥೆ ಲೆಬ್ರಾನ್ ಜೇಮ್ಸ್ ಕೂಡಾ ಒಬ್ಬರು. ಬಾಸ್ಕೆಟ್‌ಬಾಲ್ ಎಂದಾಗ ಮೊದಲು ನೆನಪಿಗೆ ಬರುವವರು ಜೇಮ್ಸ್. ಜೇಮ್ಸ್ ನಾಲ್ಕು ಎನ್‌ಬಿಎ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. 10 ಬಾರಿ ಎನ್‌ಬಿಎ ಫೈನಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಎನ್‌ಬಿಎಯಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ.
ರೋಜರ್ ಫೆಡರರ್
ಟೆನಿಸ್‌ನಿಂದ ನಿವೃತ್ತಿ ಹೊಂದಿರುವ ದಿಗ್ಗಜ ಕ್ರೀಡಾಪಟು ರೋಜರ್ ಫೆಡರರ್, ವಿಶ್ವದಾದ್ಯಂತ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ಕ್ರೀಡಾಪಟುಗಳಲ್ಲಿ ಒಬ್ಬರು. 100 ಮಿಲಿಯನ್ ಡಾಲರ್ ಆದಾಯದೊಂದಿಗೆ ಅವರು 2020ರಲ್ಲಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಟೆನಿಸ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ಫೆಡರರ್ 2000ರ ದಶಕದ ಆರಂಭದಲ್ಲಿ ಪುರುಷರ ಟೆನಿಸ್‌ನಲ್ಲಿ ಪ್ರಾಬಲ್ಯ ಸಾಧಿಸಿದರು. ರಾಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ಅವರ ಉದಯದೊಂದಿಗೆ ಅವರ ಪ್ರಾಬಲ್ಯ ಕುಂದಿತು. ಫೆಡರರ್ ದಾಖಲೆಯ 20 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳೊಂದಿಗೆ ನಿವೃತ್ತರಾದರು. ಐದು ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆರು ಬಾರಿ ಆಸ್ಟ್ರೇಲಿಯನ್ ಓಪನ್ ಮತ್ತು ಒಂದು ಬಾರಿ ಫ್ರೆಂಚ್ ಓಪನ್ ಗೆದ್ದಿದ್ದಾರೆ. ಹೀಗಾಗಿ ಈ ಮೂಬರು ದಿಗ್ಗಜರಿಗೆ ಭಾರತದ ವಿರಾಟ್ ಕೊಹ್ಲಿಯನ್ನು ಹೋಲಿಸಲಾಗುತ್ತದೆ.