logo
ಕನ್ನಡ ಸುದ್ದಿ  /  ಕ್ರಿಕೆಟ್  /  ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಸಿಡಿಸಿ ಪಾಂಟಿಂಗ್ ದಾಖಲೆ ಚಿಂದಿ ಉಡಾಯಿಸಿದ ವಿರಾಟ್ ಕೊಹ್ಲಿ

ಆಸ್ಟ್ರೇಲಿಯಾ ವಿರುದ್ಧ ಅರ್ಧಶತಕ ಸಿಡಿಸಿ ಪಾಂಟಿಂಗ್ ದಾಖಲೆ ಚಿಂದಿ ಉಡಾಯಿಸಿದ ವಿರಾಟ್ ಕೊಹ್ಲಿ

Prasanna Kumar P N HT Kannada

Sep 28, 2023 06:00 AM IST

google News

ರಿಕಿ ಪಾಂಟಿಂಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ.

    • Virat Kohli: 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 61 ಎಸೆತಗಳಲ್ಲಿ 1 ಸಿಕ್ಸರ್​, 5 ಫೋರ್​​ಗಳೊಂದಿಗೆ 56 ರನ್​ ಬಾರಿಸಿ ಮ್ಯಾಕ್ಸ್​​ವೆಲ್​ಗೆ ವಿಕೆಟ್​ ಒಪ್ಪಿಸಿದರು. 56 ರನ್ ಸಿಡಿಸಿ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ.
ರಿಕಿ ಪಾಂಟಿಂಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ.
ರಿಕಿ ಪಾಂಟಿಂಗ್ ದಾಖಲೆ ಮುರಿದ ವಿರಾಟ್ ಕೊಹ್ಲಿ. (clutchpoints)

ಆಸ್ಟ್ರೇಲಿಯಾ ಎದುರಿನ ಅಂತಿಮ ಹಾಗೂ 3ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (India vs Australia) 66 ರನ್​​​ಗಳಿಂದ ಶರಣಾಗಿದೆ. ಪಂದ್ಯ ಸೋತರೂ ಭಾರತ ತಂಡವು 2-1ರಲ್ಲಿ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಆಸೀಸ್ ನೀಡಿದ್ದ 353 ರನ್​ಗಳ ಬೃಹತ್​ ಗುರಿ ಬೆನ್ನಟ್ಟಿದ ಭಾರತ, ರೋಹಿತ್​ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಅರ್ಧಶತಕಗಳ ಹೊರತಾಗಿಯೂ 286 ರನ್​​ಗಳಿಗೆ ಸರ್ವಪತನ ಕಂಡಿತು.

ಈ ಪಂದ್ಯವನ್ನು ಕಳೆದುಕೊಂಡರೂ ಅದ್ಭುತ ಪ್ರದರ್ಶನ ತೋರಿದ ಭಾರತದ ಕಿಂಗ್​ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿ 61 ಎಸೆತಗಳಲ್ಲಿ 1 ಸಿಕ್ಸರ್​, 5 ಫೋರ್​​ಗಳೊಂದಿಗೆ 56 ರನ್​ ಬಾರಿಸಿ ಮ್ಯಾಕ್ಸ್​​ವೆಲ್​ಗೆ ವಿಕೆಟ್​ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ ಜೊತೆ ಸೇರಿ 70 ರನ್​​ಗಳ ಜೊತೆಯಾಟವಾಡಿದ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ.

ಅರ್ಧಶತಕ ಸಿಡಿಸಿ ದಾಖಲೆ ಬರೆದ ವಿರಾಟ್

ಅರ್ಧಶತಕ ಸಿಡಿಸಿದ ಕೊಹ್ಲಿ (56) ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ 50+ (47 ಶತಕ, 66 ಅರ್ಧಶತಕ=113) ಸ್ಕೋರ್​ ಗಳಿಸಿದ ಬ್ಯಾಟ್ಸ್​​ಮನ್​​ಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಟಾಪ್​-3ನಲ್ಲಿ ಕಾಣಿಸಿಕೊಂಡ 2ನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದರೊಂದಿಗೆ ಪಂಟರ್ ರಿಕಿ ಪಾಂಟಿಂಗ್ ದಾಖಲೆ ಮುರಿದಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 365 ಇನಿಂಗ್ಸ್​​ಗಳಲ್ಲಿ ಒಟ್ಟು 112 ಬಾರಿ 50 ಪ್ಲಸ್ ಸ್ಕೋರ್​ ಗಳಿಸಿ 3ನೇ ಸ್ಥಾನದಲ್ಲಿ ಇದ್ದರು.

ಇದೀಗ ಈ ಸ್ಥಾನವನ್ನು ಕೊಹ್ಲಿ ವಶಪಡಿಸಿಕೊಂಡಿದ್ದಾರೆ. ವಿರಾಟ್ ಕೇವಲ 269 ಇನಿಂಗ್ಸ್​ಗಳಲ್ಲಿ 113 ಬಾರಿ 50ಕ್ಕೂ ಹೆಚ್ಚಿನ ಸ್ಕೋರ್​ ಗಳಿಸಿದ ದಾಖಲೆ ಹೊಂದಿದ್ದಾರೆ. ಇದರೊಂದಿಗೆ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ಏಕದಿನ ಕ್ರಿಕೆಟ್​ನಲ್ಲಿ ಅತ್ಯಧಿಕ ಬಾರಿ 50+ ಸ್ಕೋರ್​ ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ. ಮೊದಲ ಸ್ಥಾನದಲ್ಲಿ ಭಾರತದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್​ ಮತ್ತು ಶ್ರೀಲಂಕಾದ ಕುಮಾರ್ ಸಂಗಕ್ಕಾರ 2ನೇ ಸ್ಥಾನದಲ್ಲಿದ್ದಾರೆ.

ಸಚಿನ್​ಗೆ ಅಗ್ರಸ್ಥಾನ

ಈ ದಾಖಲೆ ಪಟ್ಟಿಯಲ್ಲಿ ಮಾಸ್ಟರ್ ಬ್ಲಾಸ್ಟರ್​ ಸಚಿನ್ ತೆಂಡೂಲ್ಕರ್​ ಅಗ್ರಸ್ಥಾನದಲ್ಲಿದ್ದಾರೆ. ಬ್ಯಾಟಿಂಗ್ ದಿಗ್ಗಜ ಸಚಿನ್ 452 ಇನ್ನಿಂಗ್ಸ್​​ಗಳಲ್ಲಿ ಒಟ್ಟು 145 ಬಾರಿ 50ಕ್ಕೂ ಹೆಚ್ಚು (49 ಶತಕ+96 ಅರ್ಧಶತಕ=145) ರನ್ ಗಳಿಸಿದ್ದಾರೆ. ಇನ್ನು 2ನೇ ಸ್ಥಾನದಲ್ಲಿರುವ ಕುಮಾರ್ ಸಂಗಕ್ಕಾರ ಕುಮಾರ ಸಂಗಾಕ್ಕರ 380 ಇನಿಂಗ್ಸ್​ಗಳಲ್ಲಿ ಒಟ್ಟು 118 ಬಾರಿ 50+ ಸ್ಕೋರ್​ ಸಿಡಿಸಿದ್ದಾರೆ. ಕೊಹ್ಲಿ 2ನೇ ಸ್ಥಾನಕ್ಕೇರಲು ಆರು 50 ಪ್ಲಸ್ ಸ್ಕೋರ್​ಗಳ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಈ ದಾಖಲೆಯನ್ನು ಕೊಹ್ಲಿ ಮುರಿಯುವ ನಿರೀಕ್ಷೆ ಇದೆ.

ಸಂಗಾಕ್ಕರ ದಾಖಲೆ ಸರಿಗಟ್ಟಿದ ಕೊಹ್ಲಿ

ಏಕದಿನ ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಅಲ್ಲದೆ, ಅತಿ ಹೆಚ್ಚು 50 ಪ್ಲಸ್​ ಸ್ಕೋರ್​ ಗಳಿಸಿದ ಆಟಗಾರನಾಗಿ ಕುಮಾರ್ ಸಂಗಾಕ್ಕರ ಅವರ ದಾಖಲೆ ಸರಿಗಟ್ಟಿದ್ದಾರೆ. ಆರಂಭಿಕನಾಗಿ ಅಲ್ಲದೆ ಸಂಗಕ್ಕಾರ 112 ಬಾರಿ 50 + ಸ್ಕೋರ್​ ಗಳಿಸಿದ್ದಾರೆ. ಇದೀಗ ಕೊಹ್ಲಿ ಕೂಡ 112 ಬಾರಿ ಈ ಸಾಧನೆ ಮಾಡಿದ್ದು, ಇನ್ನೊಂದು ಅರ್ಧಶತಕ ಸಿಡಿಸಿದರೆ ವಿಶ್ವದಾಖಲೆ ಬರೆಯಲಿದ್ದಾರೆ. ರಿಕಿ ಪಾಂಟಿಂಗ್​ 109 ಬಾರಿ ಈ ಸಾಧನೆ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ