logo
ಕನ್ನಡ ಸುದ್ದಿ  /  ಕ್ರಿಕೆಟ್  /  ರಣಜಿ ಟ್ರೋಫಿ ಆಡಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ, ಸಿರಾಜ್; ಕೆಎಲ್‌ ರಾಹುಲ್‌ ಅಲಭ್ಯ

ರಣಜಿ ಟ್ರೋಫಿ ಆಡಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾ, ಸಿರಾಜ್; ಕೆಎಲ್‌ ರಾಹುಲ್‌ ಅಲಭ್ಯ

Jayaraj HT Kannada

Jan 21, 2025 09:49 AM IST

google News

ರಣಜಿ ಟ್ರೋಫಿ ಆಡಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್‌, ಸಿರಾಜ್; ಕೆಎಲ್‌ ರಾಹುಲ್‌ ಅಲಭ್ಯ

    • ವಿರಾಟ್ ಕೊಹ್ಲಿ ರಣಜಿ ಟ್ರೋಫಿ ಆಡುವುದು ಬಹುತೇಕ ಖಚಿತವಾಗಿದೆ. ಇದೇ ವೇಳೆ ರೋಹಿತ್‌ ಶರ್ಮಾ ಹಾಗೂ ಮೊಹಮ್ಮದ್‌ ಸಿರಾಜ್‌ ಕೂಡಾ ದೇಶೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಅತ್ತ ಕನ್ನಡಿಗ ಕೆಎಲ್‌ ರಾಹುಲ್‌ ಮುಂದಿನ ರಣಜಿ ಪಂದ್ಯ ಆಡುತ್ತಿಲ್ಲ.
ರಣಜಿ ಟ್ರೋಫಿ ಆಡಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್‌, ಸಿರಾಜ್; ಕೆಎಲ್‌ ರಾಹುಲ್‌ ಅಲಭ್ಯ
ರಣಜಿ ಟ್ರೋಫಿ ಆಡಲು ಸಜ್ಜಾದ ವಿರಾಟ್ ಕೊಹ್ಲಿ, ರೋಹಿತ್‌, ಸಿರಾಜ್; ಕೆಎಲ್‌ ರಾಹುಲ್‌ ಅಲಭ್ಯ (PTI)

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಇತ್ತೀಚೆಗೆ ಕೇಂದ್ರೀಯ ಗುತ್ತಿಗೆ ಪಡೆದ ಆಟಗಾರರಿಗೆ 10 ಅಂಶಗಳ ನಿರ್ದೇಶನವನ್ನು ಪರಿಚಯಿಸಿದೆ. ಅದರ ಪ್ರಕಾರ, ಪ್ರತಿಯೊಬ್ಬ ಆಟಗಾರರು ದೇಶೀಯ ಕ್ರಿಕೆಟ್‌ ಆಡುವ ಮಹತ್ವವನ್ನು ಒತ್ತಿಹೇಳಿದೆ. ಆಟಗಾರರು ಭಾರತ ತಂಡಕ್ಕೆ ಆಯ್ಕೆಗೆ ಅರ್ಹರಾಗಲು ದೇಶೀಯ ಪಂದ್ಯಾವಳಿಗಳಲ್ಲಿ ಆಡಬೇಕು ಎಂದು ಬಿಸಿಸಿಐ ಹೇಳಿದೆ. ಅದರಂತೆ ಫಾರ್ಮ್‌ನಲ್ಲಿ ಇಲ್ಲದ ಸ್ಟಾರ್‌ ಆಟಗಾರರು ಇದೀಗ ರಣಜಿ ಕ್ರಿಕೆಟ್‌ ಆಡಲು ಸಜ್ಜಾಗುತ್ತಿದ್ದಾರೆ. ರೋಹಿತ್‌ ಶರ್ಮಾ, ಮೊಹಮ್ಮದ್‌ ಸಿರಾಜ್‌ ಬೆನ್ನಲ್ಲೇ ವಿರಾಟ್‌ ಕೊಹ್ಲಿ ಕೂಡಾ ರಣಜಿ ಕ್ರಿಕೆಟ್‌ ಆಡುತ್ತಿದ್ದಾರೆ. ಅತ್ತ ಕನ್ನಡಿಗ ಕೆಎಲ್‌ ರಾಹುಲ್‌ ಮಾತ್ರ ಮುಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ವಿರಾಟ್ ಕೊಹ್ಲಿ 12 ವರ್ಷಗಳ ಸುದೀರ್ಘ ವಿರಾಮದ ನಂತರ ರಣಜಿ ಟ್ರೋಫಿ ಆಡಲು ಸಜ್ಜಾಗಿದ್ದಾರೆ. ಜನವರಿ 30ರಿಂದ ಪ್ರಾರಂಭವಾಗಲಿರುವ ಮುಂದಿನ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ಡೆಲ್ಲಿ ಪರ ಆಡುವ ನಿರೀಕ್ಷೆಯಿದೆ. ಈ ಹಿಂದೆ ಜನವರಿ 23ರಂದು ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಆಡಿರಲಿಲ್ಲ. ಇದೀಗ ರೈಲ್ವೆ ವಿರುದ್ಧದ ಮುಂಬರುವ ಪಂದ್ಯಕ್ಕೆ ಅವರು ಲಭ್ಯವಿರುತ್ತಾರೆ ಎಂದು ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ) ಮೂಲಗಳು ಸೋಮವಾರ (ಜ.20) ಖಚಿತಪಡಿಸಿವೆ.

“ಜನವರಿ 30ರಂದು ರೈಲ್ವೇಸ್ ವಿರುದ್ಧ ನಡೆಯಲಿರುವ ರಣಜಿ ಟ್ರೋಫಿ ಪಂದ್ಯಕ್ಕೆ ವಿರಾಟ್ ಕೊಹ್ಲಿ ಲಭ್ಯರಿದ್ದಾರೆ. ಅವರಿಗೆ ಸ್ವಲ್ಪ ಕುತ್ತಿಗೆ ಬಿಗಿತವಿತ್ತು. ಹೀಗಾಗಿ ಅವರು ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ ಲಭ್ಯವಿರಲಿಲ್ಲ. ಇಷ್ಟು ವರ್ಷಗಳ ನಂತರ ಅವರು ದೆಹಲಿಯನ್ನು ಪ್ರತಿನಿಧಿಸಲು ನಿರ್ಧರಿಸಿರುವುದು ನಮಗೆ ನಿಜವಾಗಿಯೂ ಸಂತೋಷವಾಗಿದೆ” ಎಂದು ಮೂಲಗಳು ಹಿಂದೂಸ್ತಾನ್ ಟೈಮ್ಸ್‌ಗೆ ದೃಢಪಡಿಸಿವೆ.

ಡೆಲ್ಲಿ ಪರ 23 ರಣಜಿ ಪಂದ್ಯಗಳನ್ನಾಡಿರುವ ಕೊಹ್ಲಿ, 50.77ರ ಸರಾಸರಿಯಲ್ಲಿ 1574 ರನ್ ಗಳಿಸಿದ್ದಾರೆ. 2009-10ರಲ್ಲಿ ಕೊಹ್ಲಿ ಕೇವಲ ಮೂರು ಪಂದ್ಯಗಳಲ್ಲಿ 93.50ರ ಸರಾಸರಿಯಲ್ಲಿ 374 ರನ್ ಗಳಿಸಿದ್ದರು. 2012-13ರಲ್ಲಿ ಗಾಜಿಯಾಬಾದ್‌ನಲ್ಲಿ ಉತ್ತರ ಪ್ರದೇಶ ವಿರುದ್ಧ ಕೊನೆಯ ರಣಜಿ ಪಂದ್ಯವಾಡಿದ್ದ ಅವರು, 57 ರನ್ ಗಳಿಸಿದ್ದರು.

ರೋಹಿತ್‌ ಶರ್ಮಾ ಕಣಕ್ಕೆ

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ 10 ವರ್ಷಗಳ ಬಳಿಕ ದೇಶೀಯ ಕ್ರಿಕೆಟ್‌ ಆಡಲು ಸಜ್ಜಾಗಿದ್ದಾರೆ. ಜನವರಿ 23ರಂದು ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಮುಂಬರುವ ಪಂದ್ಯಕ್ಕಾಗಿ ಮುಂಬೈನ ತಂಡಕ್ಕೆ ಬಲಗೈ ಬ್ಯಾಟರ್ ಸೋಮವಾರ ಸೇರ್ಪಡೆಗೊಂಡಿದ್ದಾರೆ. ಇತ್ತೀಚೆಗೆ ಕಳಪೆ ಫಾರ್ಮ್‌ನಲ್ಲಿರುವ ರೋಹಿತ್, ಮತ್ತೆ ಲಯಕ್ಕೆ ಮರಳುವ ಭರವಸೆಯಲ್ಲಿದ್ದಾರೆ. 37ರ ಹರೆಯದ ಆಟಗಾರ ಇದೀಗ ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ರಣಜಿ ಟ್ರೋಫಿ ಆಡಲಿದ್ದಾರೆ. ತಂಡದಲ್ಲಿ ಶಿವಂ ದುಬೆ, ಶ್ರೇಯಸ್ ಅಯ್ಯರ್ ಮತ್ತು ಶಾರ್ದೂಲ್ ಠಾಕೂರ್ ಕೂಡ ಇದ್ದಾರೆ.

ರೋಹಿತ್ ಶರ್ಮಾ 2015ರಲ್ಲಿ ಕೊನೆಯ ಬಾರಿಗೆ ಮುಂಬೈ ಪರ ರೆಡ್ ಬಾಲ್ ಪಂದ್ಯವನ್ನಾಡಿದ್ದರು. ಮುಂಬೈನ ಎಂಸಿಎ-ಬಿಕೆಸಿ ಮೈದಾನದಲ್ಲಿ ನಡೆಯಲಿರುವ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಪಂದ್ಯಕ್ಕೆ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್ ಅವರನ್ನು ಕೂಡಾ ತಂಡದಲ್ಲಿ ಹೆಸರಿಸಲಾಗಿದೆ. ಆಸ್ಟ್ರೇಲಿಯಾ ವಿರುದ್ಧ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 31 ರನ್ ಗಳಿಸಿದ್ದ ರೋಹಿತ್ ಶರ್ಮಾ, ಕಳಪೆ ಫಾರ್ಮ್‌ನಿಂದಾಗಿ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಅಂತಿಮ ಟೆಸ್ಟ್‌ನಿಂದ ಹೊರಗುಳಿದಿದ್ದರು.

ಕೆಎಲ್‌ ರಾಹುಲ್‌ ಇಲ್ಲ

ಅತ್ತ ಮೊಣಕೈ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅನುಭವಿ ಬ್ಯಾಟರ್‌ ಕೆ.ಎಲ್.ರಾಹುಲ್ ಅವರನ್ನು ಕರ್ನಾಟಕದ ರಣಜಿ ಟ್ರೋಫಿ ತಂಡದಲ್ಲಿ ಸೇರಿಸಿಕೊಳ್ಳಲಾಗಿಲ್ಲ. ಜನವರಿ 23ರಿಂದ ಪ್ರಾರಂಭವಾಗುವ ಪಂದ್ಯದಲ್ಲಿ ಪಂಜಾಬ್ ವಿರುದ್ಧದ ಎಲೈಟ್ ಗ್ರೂಪ್ ಸಿ ಪಂದ್ಯದಲ್ಲಿ ಕರ್ನಾಟಕ ಆಡಲಿದೆ. ಜನವರಿ 30 ರಂದು ಹರಿಯಾಣ ವಿರುದ್ಧದ ಕೊನೆಯ ಲೀಗ್ ಪಂದ್ಯಕ್ಕೆ ರಾಹುಲ್ ರಾಜ್ಯ ತಂಡದ ಭಾಗವಾಗುವ ಸಾಧ್ಯತೆ ಇದೆ ಎಂದು ಪಿಟಿಐ ವರದಿ ಮಾಡಿದೆ.

ಮೊಹಮ್ಮದ್‌ ಸಿರಾಜ್‌ ಲಭ್ಯ

ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮುಂಬರುವ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲು ಸಜ್ಜಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಾಗಿ ಭಾರತ ಏಕದಿನ ತಂಡದಿಂದ ಹೊರಬಿದ್ದ ಅವರು, ಜನವರಿ 23ರಂದು ಹಿಮಾಚಲ ಪ್ರದೇಶ ವಿರುದ್ಧದ ಹೈದರಾಬಾದ್ ತಂಡದ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆಯಿದೆ. ಆದರೆ ಮುಂದಿನ ವಾರ ವಿದರ್ಭ ವಿರುದ್ಧದ ತಂಡದ ಅಂತಿಮ ಗುಂಪು ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಭಾಗವಾಗಿದ್ದ ಸಿರಾಜ್, ಹೈದರಾಬಾದ್‌ ತಂಡದ ಕೊನೆಯ ಗ್ರೂಪ್ ಪಂದ್ಯದಲ್ಲಿ ಆಡುವ ನಿರೀಕ್ಷೆಯಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ