Virender Sehwag: ವಿಶ್ವಕಪ್ ಸೆಮೀಸ್ ತಲುಪುವ ಬಲಿಷ್ಠ 4 ತಂಡಗಳನ್ನು ಆರಿಸಿದ ಸೆಹ್ವಾಗ್; ಪಾಕ್ ಫೈನಲ್ ತಲುಪಿದರೂ ಅಚ್ಚರಿ ಇಲ್ಲ ಎಂದ ವೀರು
Aug 11, 2023 05:28 PM IST
ವಿಶ್ವಕಪ್ ಸೆಮೀಸ್ ತಲುಪುವ ಬಲಿಷ್ಠ 4 ತಂಡಗಳನ್ನು ಆರಿಸಿದ ಸೆಹ್ವಾಗ್
- Virender Sehwag: ವೀರೇಂದ್ರ ಸೆಹ್ವಾಗ್ ಈ ಬಾರಿ ಏಕದಿನ ವಿಶ್ವಕಪ್ನಲ್ಲಿ ಸೆಮಿಫೈನಲ್ ಪ್ರವೇಶಿಸಲಿರುವ 4 ಬಲಿಷ್ಠ ತಂಡಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ, ತಂಡಗಳನ್ನು ಆಯ್ಕೆ ಮಾಡಿರುವುದಕ್ಕೆ ನಿಖರ ಕಾರಣವನ್ನೂ ವಿವರಿಸಿದ್ದಾರೆ.
ಅಕ್ಟೋಬರ್ 5ರಿಂದ ಕ್ರಿಕೆಟ್ ಹಬ್ಬ ಏಕದಿನ ವಿಶ್ವಕಪ್ (ODI World Cup 2023) ಶುರುವಾಗಲಿದೆ. ಬರೋಬ್ಬರಿ 48 ದಿನಗಳ ಈ ಪಂದ್ಯ ನಡೆಯಲಿದೆ. 2011ರ ನಂತರ ಅಂದರೆ 12 ವರ್ಷಗಳ ಬಳಿಕ ಮೆಗಾ ಟೂರ್ನಿಗೆ ಭಾರತವೇ ಆತಿಥ್ಯ ವಹಿಸಲಿದೆ. ಇನ್ನೇನು ಒಂದೂವರೆ ತಿಂಗಳಲ್ಲಿ ಶುರುವಾಗುವ ಈ ಕ್ರಿಕೆಟ್ ಮಹಾ ಸಂಗ್ರಾಮಕ್ಕೆ ಬಿಸಿಸಿಐ ಅಂತಿಮ ಸಿದ್ಧತೆಯಲ್ಲಿ ತೊಡಗಿದೆ. ಮತ್ತೊಂದೆಡೆ ಟೂರ್ನಿಯ ಸೆಮಿಫೈನಲ್, ಫೈನಲ್ಗೇರುವ ನೆಚ್ಚಿನ ತಂಡಗಳನ್ನು ಮಾಜಿ-ಹಾಲಿ ಕ್ರಿಕೆಟರ್ಗಳು ಆರಿಸುತ್ತಿದ್ದಾರೆ.
ಅದರಂತೆ, ವೀರೇಂದ್ರ ಸೆಹ್ವಾಗ್ (Virender Sehwag) ಕೂಡ ಈ ಬಾರಿ ಸೆಮಿಫೈನಲ್ ಪ್ರವೇಶಿಸಲಿರುವ 4 ಬಲಿಷ್ಠ ತಂಡಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ಅಲ್ಲದೆ, ತಂಡಗಳನ್ನು ಆಯ್ಕೆ ಮಾಡಿರುವುದಕ್ಕೆ ನಿಖರ ಕಾರಣವನ್ನೂ ವಿವರಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸೆಹ್ವಾಗ್, ನನ್ನ ಪ್ರಕಾರ ಈ ಸಲ ವಿಶ್ವಕಪ್ನಲ್ಲಿ ಸೆಮಿಫೈನಲ್ ಸೇರುವ ತಂಡಗಳು ಅಂದರೆ, ಅವು ಭಾರತ (India), ಆಸ್ಟ್ರೇಲಿಯಾ (Australia), ಇಂಗ್ಲೆಂಡ್ (England) ಮತ್ತು ಪಾಕಿಸ್ತಾನ (Pakistan) ಎಂದು ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು, ತುಂಬಾ ಆಕ್ರಮಣಕಾರಿ ಆಟವಾಡುತ್ತಿವೆ. ಉಭಯ ತಂಡಗಳು, ಏಷ್ಯನ್ ಪಿಚ್ಗಳಲ್ಲಿ ಅದ್ಭುತ ಪ್ರದರ್ಶನ ನೀಡಿವೆ. ಆಟಗಾರರೂ ಅಷ್ಟೇ ಬಲಿಷ್ಠರಾಗಿದ್ದಾರೆ. ಭಾರತದ ಪಿಚ್ಗಳಲ್ಲಿ ಈ ತಂಡಗಳಿಗೆ ಹೊರತುಪಡಿಸಿದರೆ, ಉಳಿದ ತಂಡಗಳು ನೀಡುವ ಸಾಮರ್ಥ್ಯ ಅಷ್ಟಕಷ್ಟೆ. ಹಾಗಾಗಿ, ಸೆಮಿಫೈನಲ್ ಪ್ರವೇಶಿಸುವ ಪ್ರಮುಖ ತಂಡಗಳಾಗಿ ಗುರುತಿಸಿಕೊಂಡಿವೆ ಎಂದು ಮಾಜಿ ಆಟಗಾರ ತಿಳಿಸಿದ್ದಾರೆ.
ಭಾರತಕ್ಕೆ ತವರಿನ ಲಾಭ
ಟೀಮ್ ಇಂಡಿಯಾ ಬಗ್ಗೆ ವಿಶೇಷವಾಗಿ ಹೇಳುವುದೇನಿಲ್ಲ. ತವರಿನ ಅಂಗಳದಲ್ಲಿ ಭಾರತ ತಂಡವು ಅತ್ಯಂತ ಬಲಿಷ್ಠವಾಗಿದೆ. ಸೆಮಿಫೈನಲ್ ಮಾತ್ರವಲ್ಲ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವೂ ಆಗಿದೆ. ಇದಕ್ಕೆ ಕಾರಣ, ಇತ್ತೀಚಿಗೆ ತಂಡದಲ್ಲಿ ಆಗುತ್ತಿರುವ ಬದಲಾವಣೆಗಳು. ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಎದುರಾಳಿಗಳ ಮೇಲೆ ಹೆಚ್ಚು ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದೆ. ಅದ್ಭುತ ಸಮತೋಲನದೊಂದಿಗೆ ಜವಾಬ್ದಾರಿಯುತ ಪ್ರದರ್ಶನ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ತವರಿನ ನೆಲದಲ್ಲಿ ಭಾರತ ತಂಡವು ಅದ್ಭುತ ಪ್ರದರ್ಶನ ನೀಡಿದೆ. ಕಳೆದ 4 ವರ್ಷಗಳಿಂದಲೂ ಏಕದಿನ ಸರಣಿಗಳಲ್ಲಿ ಮೆನ್ ಇನ್ ಬ್ಲೂ ಸಂಪೂರ್ಣ ಪ್ರಾಬಲ್ಯ ಮೆರೆದಿದೆ. ಹಾಗಾಗಿ, ಈ ಬಾರಿ ಸೆಮಿಫೈನಲ್ ಪ್ರವೇಶಿಸುವ ಮತ್ತು ಪ್ರಶಸ್ತಿ ಗೆಲ್ಲುವ ನೆಚ್ಚಿನ ಭಾರತವೇ ಆಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಟೀಮ್ ಇಂಡಿಯಾ ತುಂಬಾ ಬಲಿಷ್ಠವಾಗಿದೆ. ಕೆಲವೊಂದಿಷ್ಟು ನ್ಯೂನತೆಗಳನ್ನು ಸರಿಪಡಿಸಿಕೊಂಡರೆ, ಭಾರತವನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂದು ಸೆಹ್ವಾಗ್ ವಿವರಿಸಿದ್ದಾರೆ.
ಐಪಿಎಲ್ ಆಡಿದವರೇ ಹೆಚ್ಚು
ಹಾಲಿ ಚಾಂಪಿಯನ್ ಇಂಗ್ಲೆಂಡ್ ಮೋಸ್ಟ್ ಡೇಂಜರಸ್ ತಂಡವಾಗಿದ್ದು, ಮತ್ತೊಂದು ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಭಾರತದ ನೆಲದಲ್ಲಿ ಇಂಗ್ಲೆಂಡ್ನ ಏಕದಿನ ಸಾಧನೆಗಳನ್ನು ನೋಡಿದರೆ, ಅದ್ಭುತವಾಗಿದೆ. ಚಾಂಪಿಯನ್ ಬ್ಯಾಟರ್ಗಳನ್ನೇ ಹೊಂದಿರುವ ಆಂಗ್ಲರು, ಆಕ್ರಮಣಕಾರಿ ಆಟಕ್ಕೆ ಕೈಹಾಕಿದರೆ, ಅವರನ್ನು ಸೋಲಿಸುವುದು ಸುಲಭವಲ್ಲ. ಇದರೊಂದಿಗೆ ಐಪಿಎಲ್ ಆಡಿರುವ ಬಹುತೇಕ ಇಂಗ್ಲೆಂಡ್ ಆಟಗಾರರಿಗೆ ಭಾರತದ ಪಿಚ್ಗಳ ಬಗ್ಗೆ ಪರಿಚಯ ಇದೆ. ಇದು ಸೆಮಿಫೈನಲ್ ತಲುಪಲು ಬಹುದೊಡ್ಡ ಲಾಭವಾಗಲಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.
ಆಲ್ರೌಂಡ್ ಆಟವಾಡಿದರೆ ಕಷ್ಟ
ಇನ್ನು ಆಸ್ಟ್ರೇಲಿಯಾದ ಬಹುತೇಕ ಆಟಗಾರರಿಗೆ ಪಿಚ್ ಮರ್ಮ ಗೊತ್ತಿದೆ. ಯಾಕೆಂದರೆ ಐಪಿಎಲ್ನಲ್ಲಿ ಮಿಂಚಿದ ಆಟಗಾರರಲ್ಲಿ ಆಸಿಸ್ನವರೇ ಹೆಚ್ಚು. ಬ್ಯಾಟಿಂಗ್ನಲ್ಲೂ ಆಟಗಾರರ ದಂಡೇ ಇದೆ. ಆಸ್ಟ್ರೇಲಿಯಾ ತಂಡವನ್ನು ಪ್ಯಾಟ್ ಕಮಿನ್ಸ್ ಮುನ್ನಡೆಸಲಿದ್ದು, ಈಗಾಗಲೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದುಕೊಟ್ಟಿದ್ದಾರೆ. ಬೌಲಿಂಗ್ ವಿಭಾಗವೂ ಅಷ್ಟೇ ಬಲಿಷ್ಠವಾಗಿದೆ. ಆಲ್ರೌಂಡ್ ಪ್ರದರ್ಶನ ನೀಡಿದ್ದೇ ಆದರೆ, ಸುಲಭವಾಗಿ ಸೆಮಿಫೈನಲ್ ಪ್ರವೇಶಿಸಲಿದೆ ಎಂದು ವೀರೂ ಹೇಳಿದ್ದಾರೆ.
ಪಾಕ್ ಬಗ್ಗೆ ವೀರೂ ಅಚ್ಚರಿ ಹೇಳಿಕೆ
ಪಾಕಿಸ್ತಾನ ತಂಡವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬಾರದು ಸೆಹ್ವಾಗ್ ಸೂಚಿಸಿದ್ದಾರೆ. ಏಷ್ಯಾದ ವಾತಾವರಣ, ಪಿಚ್, ಕಂಡೀಷನ್ ಎಲ್ಲವೂ ಒಂದೇ ತರದ್ದು. ಹಾಗಾಗಿ ಪಿಚ್ನಲ್ಲಿ ಪಾಕಿಸ್ತಾನಕ್ಕೆ ಯಾವುದೇ ವ್ತತ್ಯಯ ಉಂಟಾಗುವುದಿಲ್ಲ. ಬ್ಯಾಟಿಂಗ್-ಬೌಲಿಂಗ್ ಎರಡರಲ್ಲೂ ಅದ್ಭುತ ಲೈನಪ್ ಅನ್ನು ಹೊಂದಿದೆ. ಕ್ಯಾಪ್ಟನ್ ಬಾಬರ್ ಅಜಮ್ ಅದ್ಭುತ ಫಾರ್ಮ್ನಲ್ಲಿದ್ದು, ಅವರನ್ನು ಕಟ್ಟಿಹಾಕುವುದೇ ಭಾರತದ ಮೂಲ ಮಂತ್ರವಾಗಬೇಕು. ಒಂದು ವೇಳೆ ಭಾರತ ವಿರುದ್ಧ ಜಯಿಸಿದ್ದೇ ಆದರೆ, ಪಾಕ್ ಫೈನಲ್ ತಲುಪಿದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಸೆಹ್ವಾಗ್.