ಇದೇ ಕಾರಣಕ್ಕೆ ಆರ್ಸಿಬಿ ಟ್ರೋಫಿ ಗೆಲ್ತಿಲ್ಲ; ಇದೊಂದು ತಪ್ಪು ತಿದ್ದಿಕೊಂಡ್ರೆ ಕಪ್ ಅವರದ್ದೇ; ವೀರೇಂದ್ರ ಸೆಹ್ವಾಗ್ ಸಲಹೆ
Apr 06, 2024 07:53 PM IST
ಆರ್ಸಿಬಿ ಟ್ರೋಫಿ ಗೆಲ್ಲದಿರಲು ಕಾರಣ ಏನೆಂಬುದನ್ನು ಬಹಿರಂಗಪಡಿಸಿದ ವೀರೇಂದ್ರ ಸೆಹ್ವಾಗ್
- Virender Sehwag : ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಟ್ರೋಫಿ ಗೆಲ್ಲದೇ ಇರಲು ಕಾರಣ ಏನೆಂಬುದನ್ನು ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಬಹಿರಂಗಪಡಿಸಿದ್ದಾರೆ.
17ನೇ ಆವೃತ್ತಿಯ ಐಪಿಎಲ್ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿರಾಸೆ ನೀಡುವುದನ್ನು ಮುಂದುವರೆಸಿದೆ. ಒಂದು ಪಂದ್ಯ ಗೆದ್ದರೆ, ಮತ್ತೊಂದು ಸೋಲುವುದು ಖಚಿತ ಎಂದು ಅಭಿಮಾನಿಗಳು ಷರಾ ಬರೆದುಬಿಟ್ಟಿದ್ದಾರೆ. ತಾರಾ ಬ್ಯಾಟರ್ಗಳ ಪಟ್ಟಿ ದೊಡ್ಡದೇ ಇದ್ದರೂ ತಂಡಕ್ಕೆ ಜಯದ ಕೊಡುಗೆ ನೀಡಲು ಯಾರಿಂದಲೂ ಆಗುತ್ತಿಲ್ಲ. ಪ್ರತಿ ಆವೃತ್ತಿಯಲ್ಲೂ ವಿರಾಟ್ ಕೊಹ್ಲಿ ಹೊರತುಪಡಿಸಿ ಉಳಿದವರು ತೀವ್ರ ವೈಫಲ್ಯ ಅನುಭವಿಸುತ್ತಿದ್ದು, ಆರ್ಸಿಬಿ ಸತತ ಸೋಲುಗಳಿಗೆ ಕಾರಣವಾಗುತ್ತಿದೆ.
2024ರ ಆವೃತ್ತಿಯಲ್ಲೂ 16 ವರ್ಷಗಳಿಂದ ಮಾಡಿದ ಕೆಲಸವನ್ನೇ ಮತ್ತೆ ಮುಂದುವರೆಸುತ್ತಿದೆ. ಬೆಂಗಳೂರು ತಂಡದಲ್ಲಿ ವಿರಾಟ್ ಕೊಹ್ಲಿ ಜೊತೆಗೆ ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್ವೆಲ್, ನಾಯಕ ಫಾಫ್ ಡು ಪ್ಲೆಸಿಸ್, 17.50 ಕೋಟಿ ಒಡೆಯ ಕ್ಯಾಮರೂನ್ ಗ್ರೀನ್ ಅವರ ಬ್ಯಾಟ್ ಕೂಡ ಸಿಡಿದರೆ ಎದುರಾಳಿಗಳನ್ನು ಹೆಡೆಮುರಿ ಕಟ್ಟುವುದು ದೊಡ್ಡ ವಿಷಯವೇ ಅಲ್ಲ. ಮಧ್ಯಮ ಕ್ರಮಾಂಕ ಪೂರ್ಣ ವಿಫಲವಾಗುತ್ತಿರುವ ಕಾರಣ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಅಬ್ಬರಿಸಿದರೂ ಪಂದ್ಯ ಗೆಲ್ಲಲು ಸಾಧ್ಯವಾಗುತ್ತಿಲ್ಲ.
ಆರ್ಸಿಬಿ ಕಪ್ ಗೆಲ್ಲದಿರಲು ಕಾರಣವೇನು; ವಿವರ ನೀಡಿದ ಸೆಹ್ವಾಗ್
ಇದೇ ಕಾರಣಕ್ಕೆ 16 ವರ್ಷಗಳಿಂದ ಒಂದು ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಪ್ರತಿ ವರ್ಷಕ್ಕೆ ಅಭಿಮಾನಿಗಳು 'ಈ ಸಲ ಕಪ್ ನಮ್ದೆ'ಎಂದು ಘೋಷಣೆ ಕೂಗುವುದನ್ನು ನಿಲ್ಲಿಸುತ್ತಿಲ್ಲ. ಇದೀಗ ಆರ್ಸಿಬಿ ಚಾಂಪಿಯನ್ ಆಗದೇ ಇರಲು ಕಾರಣ ಏನೆಂಬುದನ್ನು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು, ಕ್ರಿಕ್‌ಬಜ್ ಜೊತೆ ವಿವರಿಸಿದ್ದಾರೆ. ಮಾಷೆಯಾಗಿ ಹೇಳುತ್ತಲೇ ಚಾಟಿ ಬೀಸಿದ್ದಾರೆ. ತಮ್ಮ ತಂಡದಲ್ಲಿ ಕೆಜಿಎಫ್ ಇದೆ. ಆದರೆ ಕೆ (ಕೊಹ್ಲಿ) ಮಾತ್ರ ಕೆಲಸ ಮಾಡುತ್ತಿದ್ದಾರೆ. ಉಳಿದಂತೆ ಜಿಎಫ್ (ಗ್ಲೆನ್, ಫಾಫ್) ಕೆಲಸ ಮಾಡುತ್ತಿಲ್ಲ ಎಂದು ನಗುತ್ತಾ ಹೇಳಿದ್ದಾರೆ.
ಆರ್ಸಿಬಿ ತಂಡದಲ್ಲಿ ಆಡುವ ಅಗ್ರ ಕ್ರಮಾಂಕದ ನಾಲ್ವರಲ್ಲಿ ಮೂವರು ವಿದೇಶಿಯರೇ ಇದ್ದಾರೆ. ಕೇವಲ ವಿದೇಶಿ ಆಟಗಾರರ ಮೇಲೆ ಅವಲಂಬನೆ ಮಾಡುವುದು ಎಷ್ಟು ಸರಿ? ಅವರ ಮೇಲೆಯೇ ಹೆಚ್ಚು ಅವಲಂಬನೆ ಮಾಡುತ್ತಿರುವ ಕಾರಣ ತಂಡದ ಹಿನ್ನಡೆಗೆ ಕಾರಣವಾಗುತ್ತಿದೆ. ಈ ಹಿಂದೆ ಕೆಎಲ್ ರಾಹುಲ್, ಯುವರಾಜ್ ಸಿಂಗ್ ಅವರಂತಹ ಆಟಗಾರರು ತಂಡದಲ್ಲಿದ್ದರು. ಆದರೆ, ಅವಲಂಬಿತರಾಗಿದ್ದು ವಿದೇಶಿ ಆಟಗಾರರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ಗೇಲ್ ಮೇಲೆ ಎಂದು ಸೆಹ್ವಾಗ್ ತಂಡದ ಪರಿಸ್ಥಿತಿಯ ಕುರಿತು ವಿವರಿಸಿದ್ದಾರೆ.
ಇಂತಹ ವಾತಾವರಣ ನಿರ್ಮಾಣವಾಗಿರುವ ಆರ್ಸಿಬಿಯಲ್ಲಿ ಕೊಹ್ಲಿ, ರಾಹುಲ್ ದ್ರಾವಿಡ್, ದಿನೇಶ್ ಕಾರ್ತಿಕ್ ಹೊರತುಪಡಿಸಿ ಭಾರತದ ಯಾವೊಬ್ಬ ಆಟಗಾರನು ಹೆಸರು ಗಳಿಸಲು ಸಾಧ್ಯವಾಗಿಲ್ಲ. ಮೊದಲು ಭಾರತೀಯ ಆಟಗಾರರ ಮೇಲೆ ಫ್ರಾಂಚೈಸಿ ನಂಬಿಕೆ ಇಡಬೇಕು. ಟಾಪ್ ಆರ್ಡರ್ಗೆ ಭಾರತೀಯರನ್ನೇ ಆಯ್ಕೆ ಮಾಡಬೇಕು. ಹೀಗಾದರೆ, ತಂಡವು ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಇದನ್ನು ಅನುಕರಿಸಿದರೆ, ತಂಡವು ಚಾಂಪಿಯನ್ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ಸೆಹ್ವಾಗ್ ಮಹತ್ವದ ಸಲಹೆ ನೀಡಿದ್ದಾರೆ.
3 ಬಾರಿ ಫೈನಲ್ಗೇರಿದೆ ಆರ್ಸಿಬಿ
ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಒಟ್ಟು ಮೂರು ಬಾರಿ ಫೈನಲ್ಗೇರಿದರೂ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಎದುರು, 2011ರಲ್ಲಿ ಸಿಎಸ್ಕೆ ವಿರುದ್ಧ ಮತ್ತು 2016ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಎದುರು ಫೈನಲ್ನಲ್ಲಿ ಸೋಲನುಭವಿಸಿತ್ತು. ಆದರೆ ಡಬ್ಲ್ಯುಪಿಎಲ್ನಲ್ಲಿ ಆರ್ಸಿಬಿ ಮಹಿಳಾ ತಂಡ ತನ್ನ ಎರಡನೇ ಆವೃತ್ತಿಯಲ್ಲೇ ಚಾಂಪಿಯನ್ ಪಟ್ಟಕ್ಕೇರಿದೆ. ಹೀಗಾಗಿ ಅದೇ ವಿಶ್ವಾಸದೊಂದಿಗೆ ಕಣಕ್ಕಿಳಿದಿರುವ ಆರ್ಸಿಬಿ ಪುರುಷರ ತಂಡದ 17ನೇ ಆವೃತ್ತಿಯಲ್ಲಿ ಟ್ರೋಫಿ ಗೆಲ್ಲುತ್ತಾ ಇಲ್ಲವೇ ಎಂಬುದನ್ನು ಕಾದುನೋಡೋಣ.