ಬಾಬರ್ ಒಬ್ಬನನ್ನೇ ಯಾಕೆ ಬಲಿಪಶು ಮಾಡ್ತೀರಿ; ಪಾಕಿಸ್ಥಾನ ಕ್ರಿಕೆಟ್ ವ್ಯವಸ್ಥೆಯೇ ಸರಿಯಿಲ್ಲ ಎಂದ ಅಕ್ರಮ್
Nov 12, 2023 11:31 AM IST
ಬಾಬರ್ ಅಜಾಮ್ ಸಮರ್ಥಿಸಿದ ವಾಸಿಂ ಅಕ್ರಮ್
- ಏಕದಿನ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಕಳಪೆ ಪ್ರದರ್ಶನಕ್ಕೆ ನಾಯಕ ಬಾಬರ್ ಅಜಾಮ್ ಪ್ರದರ್ಶನವನ್ನು ದೂಷಿಸಲಾಗುತ್ತಿದೆ. ಆದರೆ, ಮಾಜಿ ಕ್ರಿಕೆಟಿಗ ವಾಸಿಂ ಅಕ್ರಮ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಪ್ರಸಕ್ತ ಆವೃತ್ತಿಯ ವಿಶ್ವಕಪ್ (ICC ODI World Cup 2023) ಸೆಮಿಫೈನಲ್ ರೇಸ್‌ನಿಂದ ಶನಿವಾರ ಅಧಿಕೃತವಾಗಿ ಹೊರಬಿತ್ತು. ಕೋಲ್ಕತ್ತಾದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 93 ರನ್‌ಗಳ ಅಂತರದಿಂದ ಹೀನಾಯವಾಗಿ ಸೋತು ಟೂರ್ನಿಯಲ್ಲಿ ತನ್ನ ಕಳಪೆ ಪ್ರದರ್ಶನ ಮುಂದುವರೆಸಿತು. ಒಂದೇ ವಿಶ್ವಕಪ್ ಆವೃತ್ತಿಯಲ್ಲಿ ಪಾಕಿಸ್ತಾನವು ಒಟ್ಟು ಐದು ಪಂದ್ಯಗಳಲ್ಲಿ ಸೋತಿರುವುದು ಇದೇ ಮೊದಲು. ಹೀಗಾಗಿ ಬಾಬರ್ ಅಜಾಮ್ ಬಳಗದ ವಿರುದ್ಧ ಅವರದೇ ದೇಶದಲ್ಲಿ ವ್ಯಾಪಕ ಟೀಕೆಗಳು ಕೇಳಿಬರುತ್ತಿವೆ.
ಪ್ರಸಕ್ತ ವಿಶ್ವಕಪ್‌ನಲ್ಲಿ ಪಾಕ್ ತಂಡದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಹೊರಬಂದಿಲ್ಲ. ನಾಯಕ ಬಾಬರ್ ಅಜಾಮ್ ಬ್ಯಾಟ್ ಕೂಡಾ ನಿರೀಕ್ಷೆಯಂತೆ ಸದ್ದು ಮಾಡಿಲ್ಲ. ಆಡಿದ ಒಂಬತ್ತು ಇನ್ನಿಂಗ್ಸ್‌ಗಳಲ್ಲಿ ಕೇವಲ 320 ರನ್ ಗಳಿಸಿರುವ ಬಾಬರ್, ಪಾಕ್ ಮಾಜಿ ಆಟಗಾರರ ಟೀಕೆಗಳಿಗೆ ಗುರಿಯಾಗಿದ್ದಾರೆ. ಈ ನಡುವೆ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗ ವಾಸಿಂ ಅಕ್ರಮ್ ಅವರು, ಎ ಸ್ಪೋರ್ಟ್ಸ್ ಜೊತೆಗಿನ ಸಂಭಾಷಣೆ ವೇಳೆ ಬಾಬರ್ ವಿರುದ್ಧ ಟೀಕೆ ಮಾಡುತ್ತಿರುವವರ ವಿರುದ್ಧ ಗುಡುಗಿದ್ದಾರೆ. ಭಾರತದಲ್ಲಿ ಪಾಕ್ ತಂಡದ ನಡೆದ ಕಳಪೆ ಪ್ರದರ್ಶನಕ್ಕೆ ಬಾಬರ್ ಒಬ್ಬರೇ ಕಾರಣರಲ್ಲ. ಪಾಕಿಸ್ತಾನದ ಕ್ರಿಕೆಟ್ ವ್ಯವಸ್ಥೆಯೇ ದೋಷಪೂರಿತವಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಬಾಬರ್ ಒಬ್ಬನ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ?
“ನಾಯಕ ಒಬ್ಬನೇ ಆಟ ಆಡುವುದಲ್ಲ. ಹೌದು, ಆತ ಈ ವಿಶ್ವಕಪ್ ಮತ್ತು ಏಷ್ಯಾಕಪ್‌ನಲ್ಲಿ ನಾಯಕತ್ವದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದ್ದಾನೆ. ಆದರೆ, ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎಂಬಂತೆ ಆತನನ್ನೊಬ್ಬನನ್ನೇ ದೂಷಿಸುವುದು ಸರಿಯಲ್ಲ. ಕಳೆದ ಒಂದು ವರ್ಷದಿಂದ ಪಾಕಿಸ್ತಾನ ಕ್ರಿಕೆಟ್‌ನ ಇಡೀ ವ್ಯವಸ್ಥೆಯಲ್ಲೇ ತಪ್ಪಾಗಿದೆ. ಬಹುತೇಕ ಆಟಗಾರರಿಗೆ ಕೋಚ್ ಯಾರೆಂಬುದೇ ತಿಳಿದಿಲ್ಲ. ಹೀಗಾಗಿ ನೀವು ಇಲ್ಲಿ ಬಾಬರ್ ಒಬ್ಬನನ್ನೇ ಹರಕೆಯ ಕುರಿ ಮಾಡುವುದು ಸರಿಯಲ್ಲ,” ಎಂದು ಅಕ್ರಮ್ ಹೇಳಿದ್ದಾರೆ.
ಬಾಬರ್ ಮೇಲೆ ನಾಯಕತ್ವದ ಒತ್ತಡವಿದೆ
“ಬಾಬರ್ ಒಬ್ಬ ಸ್ಟಾರ್ ಆಟಗಾರ ಎಂಬುದರಲ್ಲಿ ಅನುಮಾನವೇ ಇಲ್ಲ. ಆತ ರನ್ ಗಳಿಸಿದಾಗ ಇಡೀ ರಾಷ್ಟ್ರವೇ ಸಂಭ್ರಮಿಸುತ್ತದೆ ಮತ್ತು ಹೆಮ್ಮೆಪಡುತ್ತದೆ. ಆದರೆ ನಾಯಕತ್ವದ ಜವಾಬ್ದಾರಿಯು ಬಾಬರ್ ಪ್ರದರ್ಶನದ ಮೇಲೆ ಒತ್ತಡ ಹೇರಿದೆ. ಆತ ವಿಶ್ವಕಪ್ ಮತ್ತು ಏಷ್ಯಾಕಪ್ ಎರಡರಲ್ಲೂ ಒತ್ತಡಕ್ಕೆ ಒಳಗಾಗಿದ್ದ. ಹೀಗಾಗಿ ಒತ್ತಡವನ್ನು ಹೇಗೆ ನಿಭಾಯಿಸಬೇಕೆಂದು ಆತ ಕಲಿಯಬೇಕಾಗಿದೆ. ಮೈದಾನದಲ್ಲಿ ಬ್ಯಾಟ್ ಬೀಸುವಾಗ ಕೇವಲ ಬ್ಯಾಟ್ಸ್‌ಮನ್ ಆಗಿ ಮಾತ್ರ ಯೋಚಿಸಿ, ಕ್ರೀಸ್‌ನಲ್ಲಿದ್ದಾಗ ರನ್ ಗಳಿಸುವುದು ಹೇಗೆ ಎಂದು ಯೋಚಿಸಿ,” ಎಂದು ಅಕ್ರಮ್ ಸಲಹೆ ನೀಡಿದ್ದಾರೆ.
ಎಲ್ಲರನ್ನೂ ದೂಷಿಸಬೇಕು
“ನಾವು ಬಾಬರ್ ಅಭಿಮಾನಿಗಳಾಗಿ, ಆತ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಿದ ಅಗ್ರ ಮೂರು ಬ್ಯಾಟರ್‌ಗಳಲ್ಲಿ ಒಬ್ಬರಾಗಬೇಕೆಂದು ನಿರೀಕ್ಷಿಸಿದ್ದೇವೆ. ಆದರೆ, ಭಾರತೀಯ ಪರಿಸ್ಥಿತಿಗಳಲ್ಲಿ ಆತ ವಿಫಲವಾಗಿದ್ದಾನೆ. ಪಾಕಿಸ್ತಾನದದ ವೇಗದ ಬೌಲರ್‌ಗಳು, ಸ್ಪಿನ್ನರ್‌ಗಳು ಕೂಡಾ ಪ್ರದರ್ಶನ ನೀಡದಿದ್ದರೆ ಆಗ ಬಾಬರ್ ಒಬ್ಬನನ್ನೇ ದೂಷಿಸಬೇಕಿಲ್ಲ. ಇದೇ ವೇಳೆ ನಾಯಕತ್ವದ ವಿಷಯಕ್ಕೆ ಬಂದಾಗ, ತಂಡದ ಮ್ಯಾನೇಜ್‌ಮೆಂಟ್, ಆಯ್ಕೆಗಾರರು, ತರಬೇತುದಾರರು ಮತ್ತು ಎಲ್ಲರನ್ನೂ ದೂಷಿಸಬೇಕು,” ಎಂದು ಅಕ್ರಮ್ ಹೇಳಿದ್ದಾರೆ.
ಗೆದ್ದು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆದ ಇಂಗ್ಲೆಂಡ್; ಸೋತು ವಿಶ್ವಕಪ್ನಿಂದ ಹೊರಬಿದ್ದ ಪಾಕಿಸ್ತಾನ
ಏಕದಿನ ವಿಶ್ವಕಪ್ ಟೂರ್ನಿಯ 44ನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಭರ್ಜರಿ ಗೆಲುವು ದಾಖಲಿಸಿತು. ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದ ಬಟ್ಲರ್ ಪಡೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಅರ್ಹತೆ ಪಡೆಯಿತು. ಅಲ್ಲದೆ ಸೆಮಿಫೈನಲ್ಗೆ ಅರ್ಹತೆ ಪಡೆಯುವಲ್ಲೂ ವಿಫಲವಾದರೂ ಗೆಲುವಿನೊಂದಿಗೆ ಅಭಿಯಾನ ಮುಗಿಸಿತು.