ಪಾಂಡ್ಯ ಇಲ್ಲದೆಯೂ ಭಾರತ ಬಲಿಷ್ಠವಾಗಿದೆ; ಶಮಿ ಹೊರಗಿಡೋದು ಕಷ್ಟವಾಗಲಿದೆ ಎಂದ ವಾಸಿಂ ಅಕ್ರಮ್
Oct 25, 2023 03:29 PM IST
ಹಾರ್ದಿಕ್ ಇಲ್ಲದಿದ್ದರೂ ಭಾರತ ವಿಶ್ವಕಪ್ ತಂಡ ಬಲಿಷ್ಠವಾಗಿದೆ ಎಂದು ಅಕ್ರಮ್ ಹೇಳಿದ್ದಾರೆ
- Wasim Akram on Mohammed Shami: ಮೊಹಮ್ಮದ್ ಶಮಿ ಅವರನ್ನು ತಂಡದಿಂದ ಹೊರಗಿಡುವುದು ಭಾರತಕ್ಕೆ ಕಷ್ಟವಾಗಲಿದೆ ಎಂದು ವಾಸಿಂ ಅಕ್ರಮ್ ಅಭಿಪ್ರಾಯಪಟ್ಟಿದ್ದಾರೆ.
ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ಸತತ ಐದು ಪಂದ್ಯಗಳನ್ನು ಗೆದ್ದು ಬೀಗುತ್ತಿರುವ ರೋಹಿತ್ ಶರ್ಮಾ ಬಳಗದ ಮುಂದಿನ ಎದುರಾಳಿ ಹಾಲಿ ಚಾಂಪಿಯನ್ ಇಂಗ್ಲೆಂಡ್ (England Vs India). ಅಕ್ಟೋಬರ್ 29ರ ಭಾನುವಾರದಂದು ಲಖನೌನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಮ್ ಇಂಡಿತಾ ಸತತ ಆರನೇ ಗೆಲುವಿಗೆ ಎದುರು ನೋಡುತ್ತಿದೆ. ಮಹತ್ವದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ವಾಸಿಂ ಅಕ್ರಮ್ (Wasim Akram), ಟೀಮ್ ಇಂಡಿಯಾಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಭಾರತದ ಕೊನೆಯ ಪಂದ್ಯದಲ್ಲಿ ಭಾರತವು ರೋಚಕ ಜಯ ಸಾಧಿಸಿತ್ತು. ಪಂದ್ಯದಲ್ಲಿ ಮಿಂಚಿದ ವೇಗಿ ಮೊಹಮ್ಮದ್ ಶಮಿ (Mohammed Shami), ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು ತಮ್ಮ ಸಾಮರ್ಥ್ಯವನ್ನು ಸಮರ್ಥಿಸಿಕೊಂಡರು. ಹಾರ್ದಿಕ್ ಪಂಡ್ಯ ಗಾಯದಿಂದಾಗಿ ಪ್ರಸಕ್ತ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ತಂಡದ ಆಡುವ ಬಳಗದಲ್ಲಿ ಅವಕಾಶ ಪಡೆದ ಶಮಿ, ತಂಡದ ಮ್ಯಾನೇಜ್‌ಮೆಂಟ್‌ಗೆ ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿದ್ದಾರೆ. ಹೀಗಾಗಿ ಭಾರತ ತಂಡವು ಶಮಿಯನ್ನು ಆಡುವ ಬಳಗದಿಂದ ಹೊರಗಿಡುವುದು ಭಾರಿ ಕಷ್ಟ ಎಂದು ಅಕ್ರಮ್ ಹೇಳಿದ್ದಾರೆ.
5 ವಿಕೆಟ್, ಪಂದ್ಯಶ್ರೇಷ್ಠ ಪ್ರಶಸ್ತಿ
ನ್ಯೂಜಿಲ್ಯಾಂಡ್ ವಿರುದ್ಧ ಭಾರತದ ಆಡುವ ಬಳಗದಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ಆಡಿದ ಶಮಿ, ಕಿವೀಸ್ ಬ್ಯಾಟರ್‌ಗಳ ವಿರುದ್ಧ ದಂಗೆಯೆದ್ದರು. ಭರ್ಜರಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ, ಬರೋಬ್ಬರಿ 20 ವರ್ಷಗಳ ಬಳಿಕ ಐಸಿಸಿ ಈವೆಂಟ್‌ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ತಂಡ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇಂಗ್ಲೆಂಡ್ ವಿರುದ್ಧದ ಭಾರತದ ಮುಂದಿನ ಪಂದ್ಯಕ್ಕೂ ಮುಂಚಿತವಾಗಿ ಭಾರತ ತಂಡದ ಬಗ್ಗೆ ಮಾತನಾಡಿದ ಅಕ್ರಮ್, ಹಾರ್ದಿಕ್ ಅನುಪಸ್ಥಿತಿಯಲ್ಲೂ ಭಾರತ ತಂಡ ಬಲಿಷ್ಠವಾಗಿದೆ ಎಂದು ಹೇಳಿದ್ದಾರೆ.
ಪಾಂಡ್ಯ ಇಲ್ಲದಿದ್ದರೂ ಭಾರತ ತಂಡ ಚೆನ್ನಾಗಿದೆ
“ಪಾಂಡ್ಯ ಇಲ್ಲದಿದ್ದರೂ ಭಾರತ ತಂಡ ಬಲಿಷ್ಠವಾಗಿದೆ. ಒಂದು ವೇಳೆ ಪಾಂಡ್ಯ ಫಿಟ್ ಆದರೆ ಅದು ಒಳ್ಳೆಯದೇ. ಆದರೆ ಈಗ ಶಮಿಯನ್ನು ತಂಡದಿಂದ ಡ್ರಾಪ್ ಮಾಡುವುದು ಕಷ್ಟ. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪಾಂಡ್ಯರನ್ನು ಆಡಿಸಿ ಭಾರತವು ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬಾರದು ಎಂದು ನಾನು ಭಾವಿಸುತ್ತೇನೆ. ಅದು ಮಂಡಿರಜ್ಜು ಗಾಯವಾಗಿದ್ದರೆ, ಪಂದ್ಯದ ವೇಳೆ ಸ್ನಾಯು ಸೆಳೆತ ಶುರುವಾಗಬಹುದು. ಹೀಗಾಗಿ ಅವರು 100 ಪ್ರತಿಶತದಷ್ಟು ಚೇತರಿಸಿಕೊಳ್ಳಲು ಅವಕಾಶ ಮಾಡಿಕೊಡಿ. ಆ ಬಳಿಕ ಅವರನ್ನು ಆಡಿಸುವುದು ಉತ್ತಮ,” ಎಂದು ಅಕ್ರಂ ಸ್ಪೋರ್ಟ್ಸ್‌ಖೀಡಾದೊಂದಿಗೆ ತಿಳಿಸಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದ ಮೂಲಕ ಪ್ರಸಕ್ತ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಶಮಿ ತಂಡದಲ್ಲಿ ಅವಕಾಶ ಪಡೆದರು. ಇನ್ನಿಂಗ್ಸ್‌ನಲ್ಲಿ ತಮ್ಮ ಮೊದಲ ಎಸೆತದಲ್ಲಿ ವಿಕೆಟ್ ಪಡೆದು ಅಬ್ಬರ ಆರಂಭಿಸಿದರು. ಟೂರ್ನಿಯಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನ್ಯೂಜಿಲೆಂಡ್ ವಿರುದ್ಧ ಮೊಹಮ್ಮದ್ ಶಮಿ 5 ವಿಕೆಟ್; ಹಲವು ದಾಖಲೆಗಳು ಧೂಳೀಪಟ
ಮೊಹಮ್ಮದ್ ಶಮಿ ಈವರೆಗೂ 12 ವಿಶ್ವಕಪ್ ಪಂದ್ಯಗಳನ್ನಾಡಿದ್ದಾರೆ. ಕೇವಲ 5.09ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿರುವ ವೇಗಿ 36 ವಿಕೆಟ್ ಉರುಳಿಸಿದ್ದಾರೆ. 17.6 ಬೌಲಿಂಗ್ ಸ್ಟ್ರೈಕ್ರೇಟ್ ಇದ್ದರೆ, 15.02 ಬೌಲಿಂಗ್ ಸರಾಸರಿ ಹೊಂದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಭಾರತದ ಪರ ಅಧಿಕ ವಿಕೆಟ್ ಕಬಳಿಸಿದ ಬೌಲರ್ಗಳಲ್ಲಿ 3ನೇ ಸ್ಥಾನಕ್ಕೆ ಬಡ್ತಿ ಪಡೆದರು. ಆ ಮೂಲಕ ಅನಿಲ್ ಕುಂಬ್ಳೆ ದಾಖಲೆ ಬ್ರೇಕ್ ಮಾಡಿದ್ದಾರೆ. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಎರಡು ಬಾರಿ 5 ವಿಕೆಟ್ಗಳ ಸಾಧನೆ ಮಾಡಿದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಶಮಿ ಪಾತ್ರರಾಗಿದ್ದಾರೆ.