ದಕ್ಷಿಣ ಆಫ್ರಿಕಾದಲ್ಲಿ ವಿಂಡೀಸ್ ಕ್ರಿಕೆಟಿಗನ ಮೇಲೆ ಬಂದೂಕುಧಾರಿಗಳ ದಾಳಿ; ಅಪಾಯದಿಂದ ಪಾರಾದ ಫ್ಯಾಬಿಯನ್ ಅಲೆನ್
Feb 06, 2024 11:23 AM IST
ದಕ್ಷಿಣ ಆಫ್ರಿಕಾದಲ್ಲಿ ಫ್ಯಾಬಿಯನ್ ಅಲೆನ್ ಮೇಲೆ ಬಂದೂಕುಧಾರಿಗಳ ದಾಳಿ
- Fabian Allen: ಬಂದೂಕು ಹಿಡಿದು ಬಂದಿದ್ದ ದರೋಡೆಕೋರರು ಪಾರ್ಲ್ ರಾಯಲ್ಸ್ ತಂಡದ ಆಟಗಾರರು ತಂಗಿದ್ದ ಸ್ಯಾಂಡ್ಟನ್ ಸನ್ ಹೋಟೆಲ್ ಬಳಿ ಫ್ಯಾಬಿಯನ್ ಅಲೆನ್ ಮೇಲೆ ದಾಳಿ ನಡೆಸಿದ್ದಾರೆ. ಅವರಲ್ಲಿದ್ದ ಫೋನ್ ಹಾಗೂ ಇತರ ವಸ್ತುಗಳನ್ನು ದರೋಡೆ ಮಾಡಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟಿಗ ಫ್ಯಾಬಿಯನ್ ಅಲೆನ್ ಮೇಲೆ (Fabian Allen) ಬಂದೂಕು ತೋರಿಸಿ ದಾಳಿ ನಡೆಸಿರುವ ಅಚ್ಚರಿಯ ಘಟನೆ ನಡೆದಿದೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್‌ನಲ್ಲಿ ಪಾರ್ಲ್ ರಾಯಲ್ಸ್ (Paarl Royals) ತಂಡದ ಹೋಟೆಲ್ ಹೊರಗೆ ದುಷ್ಕರ್ಮಿಗಳು ಗನ್ ತೋರಿಸಿ ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ ಎಂದು ವರದಿಯಾಗಿದೆ. ಎಸ್ಎ20 (SA20) ಪಂದ್ಯಾವಳಿ ನಡುವೆ ಈ ಘಟನೆ ನಡೆದಿದ್ದು, 28 ವರ್ಷದ ವಿಂಡೀಸ್ ಆಲ್‌ರೌಂಡರ್ ಬೆಚ್ಚಿಬಿದ್ದಿದ್ದಾರೆ.
ಬಂದೂಕು ಹಿಡಿದು ಬಂದಿದ್ದ ದರೋಡೆಕೋರರು ಸ್ಯಾಂಡ್ಟನ್ ಸನ್ ಹೋಟೆಲ್ ಬಳಿ ಅಲೆನ್ ಅವರ ಮೇಲೆ ಮುಗಿಬಿದ್ದಿದ್ದಾರೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ. ಬಲವಂತವಾಗಿ ಅವರ ಬಳಿ ಇದ್ದ ಫೋನ್, ವೈಯಕ್ತಿಕ ವಸ್ತುಗಳು ಮತ್ತು ಬ್ಯಾಗ್ ಅನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ. ಅದೃಷ್ಟವಶಾತ್, ಕ್ರಿಕೆಟಿಗನಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ.
ಈ ಘಟನೆಯು ಎಸ್ಎ20 ಕ್ರಿಕೆಟ್ ಟೂರ್ನಿಯಲ್ಲಿ ಭಾಗಿಯಾಗಿರುವ ಇತರ ಆಟಗಾರರ ಸುರಕ್ಷತೆಯ ಬಗ್ಗೆ ಕಳವಳ ಹುಟ್ಟುಹಾಕಿದೆ.
ಇದನ್ನೂ ಒದಿ | U19 World Cup: ಹಾಟ್‌ಸ್ಟಾರ್ ಅಥವಾ ಜಿಯೋ ಸಿನಿಮಾ; ಭಾರತ ಅಂಡರ್ 19 ವಿಶ್ವಕಪ್ ಸೆಮಿಫೈನಲ್ ಉಚಿತ ವೀಕ್ಷಣೆಗೆ ಹೀಗೆ ಮಾಡಿ
ಕ್ರಿಕೆಟಿಗ ಅಲೆನ್ ಅವರೊಂದಿಗೆ ಮಾತನಾಡಿದ್ದು, ಸದ್ಯ ಅವರು ಚೆನ್ನಾಗಿದ್ದಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ಜಮೈಕಾ ಮೂಲದ ನಮ್ಮ ಮುಖ್ಯ ಕೋಚ್ ಆಂಡ್ರೆ ಕೋಲಿ ಫ್ಯಾಬಿಯನ್ ಅವರೊಂದಿಗೆ ಮಾತನಾಡಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಮತ್ತೊಬ್ಬ ಕ್ರಿಕೆಟಿಗ ಒಬೆಡ್ ಮೆಕಾಯ್ ಮೂಲಕ ಸಂಪರ್ಕ ಸಾಧಿಸಲಾಗಿದೆ. ಸದ್ಯ ಅವರು ಚೆನ್ನಾಗಿದ್ದಾರೆ,” ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ | IND vs ENG: ಯಶಸ್ವಿ ಜೈಸ್ವಾಲ್ ಪ್ರಸ್ತುತ ಭಾರತದ ಅತ್ಯಂತ ಅಪಾಯಕಾರಿ ಬ್ಯಾಟರ್; ಇಂಗ್ಲೆಂಡ್ ಮಾಜಿ ಕ್ರಿಕೆಟಿಗ
ಎಡಗೈ ಸ್ಪಿನ್ನರ್ ಅಲೆನ್, ವೆಸ್ಟ್ ಇಂಡೀಸ್ ಪರ 20 ಏಕದಿನ ಹಾಗೂ 34 ಟಿ20 ಪಂದ್ಯಗಳನ್ನಾಡಿದ್ದಾರೆ. ಕೆಳಕ್ರಮಾಂಕದಲಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಇವರು, ಮಧ್ಯಮ ಓವರ್‌ಗಳಲ್ಲಿ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲೂ ಸಮರ್ಥರು.
ಎಸ್ಎ 20 ಲೀಗ್‌ನಲ್ಲಿ ಕಳಪೆ ಪ್ರದರ್ಶನ
28 ವರ್ಷದ ಆಟಗಾರ ಪ್ರಸ್ತುತ ನಡೆಯುತ್ತಿರುವ ಎಸ್ಎ 20 ಲೀಗ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿಲ್ಲ. ಈ ಋತುವಿನಲ್ಲಿ ಬ್ಯಾಟಿಂಗ್ ಮಾಡಿದ ಆರು ಇನ್ನಿಂಗ್ಸ್‌ಗಳಲ್ಲಿ ಅವರ ಗರಿಷ್ಠ ಸ್ಕೋರ್ ಅಜೇಯ 17 ರನ್. ಇದೇ ವೇಳೆ ಬೌಲಿಂಗ್ ಅಂಕಿ-ಅಂಶಗಳು ಕೂಡಾ ಕಳಪೆಯಾಗಿದೆ.
ಇದನ್ನೂ ಓದಿ | ಅಂಡರ್ 19 ವಿಶ್ವಕಪ್ ಸೆಮಿಫೈನಲ್; ಅಜೇಯ ಭಾರತಕ್ಕೆ ಆತಿಥೇಯ ದಕ್ಷಿಣ ಆಫ್ರಿಕಾ ಸವಾಲು, ಹೀಗಿದೆ ತಂಡಗಳ ಬಲಾಬಲ
ಕಳೆದ ತಿಂಗಳು ಡರ್ಬಾ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ನಂತರ, ಅಲೆನ್ ಅವರನ್ನು ಆಡುವ ಬಳಗದಿಂದ ಕೈಬಿಡಲಾಗಿದೆ. ಸದ್ಯ ತಂಡದ ಹೋಟೆಲ್ ಹೊರಗೆ ನಡೆದ ಘಟನೆಯ ಬಳಿಕ, ಮುಂದೆ ಅವರು ಲೀಗ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ಅತ್ತ ಪಾರ್ಲ್ ರಾಯಲ್ಸ್ ತಂಡವು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ತಂಡವು ಫೆಬ್ರವರಿ 7ರಂದು ಎಲಿಮಿನೇಟರ್ ಪಂದ್ಯದಲ್ಲಿ ಆಡಲಿದೆ.
(This copy first appeared in Hindustan Times Kannada website. To read more like this please logon to kannada.hindustantimes.com)