logo
ಕನ್ನಡ ಸುದ್ದಿ  /  ಕ್ರಿಕೆಟ್  /  India Vs West Indies: ಭಾರತದ ಬೌಲರ್​ಗಳಿಗೆ ಬೆಂಡೆತ್ತಿದ ಬ್ರೆಂಡನ್ ಕಿಂಗ್; ಕೊನೆ ಪಂದ್ಯದಲ್ಲಿ ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ವಿಂಡೀಸ್

India vs West Indies: ಭಾರತದ ಬೌಲರ್​ಗಳಿಗೆ ಬೆಂಡೆತ್ತಿದ ಬ್ರೆಂಡನ್ ಕಿಂಗ್; ಕೊನೆ ಪಂದ್ಯದಲ್ಲಿ ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ವಿಂಡೀಸ್

Prasanna Kumar P N HT Kannada

Aug 14, 2023 01:29 AM IST

google News

ಕೊನೆ ಪಂದ್ಯದಲ್ಲಿ ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ವಿಂಡೀಸ್.

    • India vs West Indies: ಅಂತಿಮ ಟಿ20 ಪಂದ್ಯದಲ್ಲಿ ಭಾರತದ ಎದುರು 8 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿದ ವೆಸ್ಟ್​ ಇಂಡೀಸ್, ಐದು ಪಂದ್ಯಗಳ ಟಿ20 ಸರಣಿಯನ್ನು 3-2ರಲ್ಲಿ ವಶಪಡಿಸಿಕೊಂಡಿದೆ.
ಕೊನೆ ಪಂದ್ಯದಲ್ಲಿ ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ವಿಂಡೀಸ್.
ಕೊನೆ ಪಂದ್ಯದಲ್ಲಿ ಗೆದ್ದು ಟಿ20 ಸರಣಿ ವಶಪಡಿಸಿಕೊಂಡ ವಿಂಡೀಸ್.

ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್​​ ಮತ್ತು ಏಕದಿನ ಸರಣಿ ಗೆದ್ದಿದ್ದ ಟೀಮ್ ಇಂಡಿಯಾ (India vs West Indies), ಟಿ20 ಸರಣಿಯನ್ನು ಕಳೆದುಕೊಂಡಿದೆ. ಸರಣಿ ನಿರ್ಧರಿಸುವ ಐದನೇ ಹಾಗೂ ಅಂತಿಮ ಟಿ20 ಕದನದಲ್ಲಿ ಹಾರ್ದಿಕ್ ಪಡೆ, ಹೀನಾಯ ಸೋಲು ಕಂಡಿದೆ. ಬ್ರೆಂಡನ್ ಕಿಂಗ್, ನಿಕೋಲಸ್ ಪೂರನ್ ಆರ್ಭಟಕ್ಕೆ ಬೆದರಿದ ಭಾರತ ತಂಡವು, 8 ವಿಕೆಟ್​​ಗಳಿಂದ ಶರಣಾಗಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯನ್ನು 3-2ರಲ್ಲಿ ಶರಣಾಗಿದೆ.

ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್​​ನಲ್ಲಿ ನಡೆದ ಸಿರೀಸ್ ಡಿಸೈಡರ್​​ ಪಂದ್ಯದಲ್ಲಿ ಹಾರ್ದಿಕ್​ ಪಡೆ, ಟಾಸ್​​​ ಗೆದ್ದು ಬ್ಯಾಟಿಂಗ್​ ಮಾಡಿಕೊಂಡಿತು. ಸೂರ್ಯಕುಮಾರ್ ಯಾದವ್ ಅವರ ಭರ್ಜರಿ ಅರ್ಧಶತಕದ ಫಲವಾಗಿ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಗುರಿ ಬೆನ್ನತ್ತಿದ ವಿಂಡೀಸ್​ ಇನ್ನೂ 2 ಓವರ್​​ಗಳು ಬಾಕಿ ಇರುವಂತೆಯೇ ಗೆಲುವಿಗೆ ನಗೆ ಬೀರಿತು.

ಕೈಕೊಟ್ಟ ಆರಂಭಿಕರು, ಮಧ್ಯಮ ಕ್ರಮಾಂಕ

4ನೇ ಟಿ20 ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿದ್ದ ಆರಂಭಿಕರಾದ ಯಶಸ್ವಿ ಜೈಸ್ವಾಲ್ (5) ಮತ್ತು ಶುಭ್ಮನ್​ ಗಿಲ್​ (9) ಅವರು ಐದನೇ ಟಿ20ಯಲ್ಲಿ ಪವರ್​ ಪ್ಲೇ ಮುಗಿಯುವದರೊಳಗೆ ಆಟ ಮುಗಿಸಿದರು. ಬಳಿಕ ಸೂರ್ಯಕುಮಾರ್​ ಯಾದವ್, ತಿಲಕ್ ವರ್ಮಾ ಕಚ್ಚಿ ನಿಂತು ಬ್ಯಾಟ್​ ಬೀಸಿದರು. ಆದರೆ, ಭರವಸೆಯ ಇನ್ನಿಂಗ್ಸ್​ ಕಟ್ಟುತ್ತಿದ್ದ ತಿಲಕ್ 27 ರನ್ ಗಳಿಸಿದ್ದಾಗ ಔಟಾದರು.

ಸೂರ್ಯಕುಮಾರ್​​ ಅರ್ಧಶತಕ

ತಿಲಕ್ ವರ್ಮಾ ಬಳಿಕ ಸಂಜು ಸ್ಯಾಮ್ಸನ್ (13), ಹಾರ್ದಿಕ್ ಪಾಂಡ್ಯ (14), ಅಕ್ಷರ್ ಪಟೇಲ್ (13) ಕೂಡ ನಿರಾಸೆ ಮೂಡಿಸಿದರು. ವಿಂಡೀಸ್​ ಬೌಲರ್​ಗಳ ಸಂಘಟಿತ ದಾಳಿಗೆ ಬೇಗನೇ ವಿಕೆಟ್​ ಒಪ್ಪಿಸಿದರು. ಪರಿಣಾಮ ರನ್​ ವೇಗವನ್ನು ಹೆಚ್ಚಿಸಲು ಸಾಧ್ಯವಾಗಿಲ್ಲ. ಆದರೆ ಸತತ ವಿಕೆಟ್​ಗಳ ನಡುವೆಯೂ ಸೂರ್ಯಕುಮಾರ್​​ ಆರ್ಭಟಿಸಿ ಅರ್ಧಶತಕ ಸಿಡಿಸಿದರು. 45 ಎಸೆತಗಳಲ್ಲಿ 61 ರನ್​ ಸಿಡಿಸಿ ಔಟಾದರು.

ಆ ಮೂಲಕ ಅಲ್ಪಮೊತ್ತಕ್ಕೆ ಕುಸಿಯಬೇಕಿದ್ದ ತಂಡಕ್ಕೆ ನೆರವಾದರು. ಅಗತ್ಯ ಸಮಯದಲ್ಲಿ 4 ಬೌಂಡರಿ, 3 ಸಿಕ್ಸರ್ ಸಿಡಿಸಿದ ಸೂರ್ಯ, ಜೇಸನ್ ಹೋಲ್ಡರ್ ಬೌಲಿಂಗ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಇನ್ನು ಭಾರತದ ಟೇಲೆಂಡರ್​ ಬ್ಯಾಟರ್​ಗಳು ಪೆವಿಲಿಯನ್ ಪರೇಡ್ ನಡೆಸಿದರು. ಅಂತಿಮವಾಗಿ ಟೀಮ್ ಇಂಡಿಯಾ 20 ಓವರ್​​ಗಳಲ್ಲಿ 165 ರನ್ ಗಳಿಸಿತು. ರೊಮಾರಿಯೋ ಶೆಫರ್ಡ್ 4 ವಿಕೆಟ್, ಜೇಸನ್ ಹೋಲ್ಡರ್, ಅಕೇಲ್ ಹೋಸೈನ್ ತಲಾ 2 ವಿಕೆಟ್​ ಪಡೆದರು.

ಬ್ರೆಂಡನ್ 'ಕಿಂಗ್' ಅವತಾರ

ಟೀಮ್ ಇಂಡಿಯಾ ನೀಡಿದ್ದ ಸ್ಪರ್ಧಾತ್ಮಕ ಮೊತ್ತವನ್ನು ವೆಸ್ಟ್​ ಇಂಡೀಸ್, ನಿರಾಯಾಸವಾಗಿ ಬೆನ್ನಟ್ಟಿತು. ಇನ್ನಿಂಗ್ಸ್​​ನ 2ನೇ ಓವರ್​​ನಲ್ಲಿ ಕೈಲ್​​ ಮೇಯರ್ಸ್​ ಬೇಗನೇ ಔಟಾದರೂ, ಭಾರತಕ್ಕೆ ಯಾವುದೇ ಲಾಭ ತಂದುಕೊಡಲಿಲ್ಲ. ಮತ್ತೊಂದೆಡೆ ಬ್ರೆಂಡನ್ ಕಿಂಗ್ ಮತ್ತು ನಿಕೋಲಸ್ ಪೂರನ್​ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಕಳೆದ ಪಂದ್ಯಗಳಲ್ಲಿ ತೀರಾ ವೈಫಲ್ಯ ಅನುಭವಿಸಿದ್ದ ಬ್ರೆಂಡನ್ ಕಿಂಗ್, ಭಾರತೀಯ ಬೌಲರ್​​ಗಳ ದಾಳಿಯನ್ನು ಧೂಳಿಪಟಗೊಳಿಸಿದರು.

ಕಿಂಗ್-ಪೂರನ್ ಶತಕದ ಜೊತೆಯಾಟ

ಬ್ರೆಂಡನ್ ಕಿಂಗ್ ಮತ್ತು ಪೂರನ್ ಅವರ ಅದ್ಭುತ ಆಟದ ಪರಿಣಾಮ 2ನೇ ವಿಕೆಟ್​​ಗೆ ಶತಕದ ಜೊತೆಯಾಟ ಹರಿದುಬಂತು. ಈ ಜೋಡಿ 72 ಎಸೆತಗಳಲ್ಲಿ 107 ರನ್ ಕಲೆ ಹಾಕಿತು. ಆದರೆ, ನಿಕೋಲಸ್ ಪೂರನ್ ಅರ್ಧಶತಕದ ಅಂಚಿನಲ್ಲಿ ಔಟಾದರು. ತಿಲಕ್​ ವರ್ಮಾ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು. ಆ ನಂತರ ಜೊತೆಯಾದ ಬ್ರೆಂಡನ್ ಕಿಂಗ್ ಮತ್ತು ಶಾಯ್ ಹೋಪ್​ ಮತ್ತೊಂದು ಅರ್ಧಶತಕದ ಜೊತೆಯಾಟವಾಡಿದರು. ಅಂತಿಮವಾಗಿ 18 ಓವರ್​​ಗಳಲ್ಲಿ ವಿಂಡೀಸ್​ ಪಂದ್ಯವನ್ನು ಮುಗಿಸಿತು.

ಆರಂಭಿಕನಾಗಿ ಕಣಕ್ಕಿಳಿದ ಬ್ರೆಂಡನ್ ಕಿಂಗ್​​, ಅಜೇಯ 84 ರನ್​ ಚಚ್ಚಿದರು. ಶಾಯ್​ ಹೋಪ್ ಅಜೇಯ 22 ರನ್ ಚಚ್ಚಿದರು. ಟೆಸ್ಟ್​ ಮತ್ತು ಏಕದಿನ ಸರಣಿ ಸೋಲಿನ ಸೇಡನ್ನು ವೆಸ್ಟ್​ ಇಂಡೀಸ್ ತೀರಿಸಿಕೊಂಡಿತು. ಅಲ್ಲದೆ, ಇದೇ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ತಂಡವು ಟಿ20 ಸರಣಿಯನ್ನು ಕೈ ಚೆಲ್ಲಿದೆ. ಇದೀಗ ಟೀಮ್ ಇಂಡಿಯಾ ಆಗಸ್ಟ್ 18ರಿಂದ ಐರ್ಲೆಂಡ್ ಎದುರು ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ