ಡಬ್ಲ್ಯುಎಫ್‌ಐ ಅಮಾನತು ಮಾಡುವಲ್ಲಿ ಸರ್ಕಾರ ಸೂಕ್ತ ಕಾರ್ಯವಿಧಾನ ಅನುಸರಿಸಿಲ್ಲ; ಸಂಜಯ್ ಸಿಂಗ್
Dec 28, 2023 08:46 PM IST
ಸಂಜಯ್ ಸಿಂಗ್
- Sanjay Singh: ಸ್ವಾಯತ್ತ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸಂಸ್ಥೆಯನ್ನು ಸರ್ಕಾರವು ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಭಾರತೀಯ ಕುಸ್ತಿ ಫೆಡರೇಶನ್ (Wrestling Federation of India -WFI)) ಅನ್ನು ಅಮಾನತುಗೊಳಿಸುವಲ್ಲಿ ಕ್ರೀಡಾ ಸಚಿವಾಲಯವು ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿಲ್ಲ ಎಂದು ಡಬ್ಲ್ಯೂಎಫ್‌ಐ ನೂತನ ಅಧ್ಯಕ್ಷ ಸಂಜಯ್ ಸಿಂಗ್ ಗುರುವಾರ (ಡಿಸೆಂಬರ್ 28) ಆರೋಪಿಸಿದ್ದಾರೆ. ಅಲ್ಲದೆ ಸರ್ಕಾರದ ನಿರ್ಧಾರವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳನ್ನು ನಿರ್ಲಕ್ಷಿಸಿದ ಕಾರಣ ಭಾರತೀಯ ಕುಸ್ತಿ ಫೆಡರೇಷನ್ ಅನ್ನು ಕ್ರೀಡಾ ಸಚಿವಾಲಯವು ಭಾನುವಾರ ಅಮಾನತುಗೊಳಿಸಿತ್ತು. U-15 ಮತ್ತು U-20 ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳ ಘೋಷಣೆ ಸೇರಿದಂತೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿತ್ತು. ಡಬ್ಲ್ಯೂಎಫ್‌ಐ ಚುನಾವಣೆ ನಡೆದ ಮೂರು ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು.
ಡಬ್ಲ್ಯುಎಫ್‌ಐನ ಅಭಿಪ್ರಾಯವನ್ನು ಕೇಳದೆ, ದೇಶದ ಸ್ವಾಯತ್ತ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸಂಸ್ಥೆಯನ್ನು ಸರ್ಕಾರವು ಅಮಾನತುಗೊಳಿಸಲು ಸಾಧ್ಯವಿಲ್ಲ ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ | ಅಸ್ತಿತ್ವದಲ್ಲಿದ್ದ ನಿಯಮ ನಿರ್ಲಕ್ಷ್ಯ, ಭಾರತೀಯ ಕುಸ್ತಿ ಫೆಡರೇಷನ್ ಅಮಾನತು; ಕ್ರೀಡಾ ಸಚಿವಾಲಯ ಆದೇಶ
“ನಾವು ಡಬ್ಲ್ಯುಎಫ್‌ಐ ಚುನಾವಣೆಗಳನ್ನು ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಗೆದ್ದಿದ್ದೇವೆ. ರಿಟರ್ನಿಂಗ್ ಆಫೀಸರ್ ಆಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶರಿದ್ದರು. 22 ರಾಜ್ಯ ಘಟಕಗಳು ಚುನಾವಣೆಯಲ್ಲಿ ಭಾಗವಹಿಸಿದ್ದು, 47 ಮತಗಳು ಚಲಾವಣೆಯಾಗಿವೆ. ಅದರಲ್ಲಿ ನನಗೆ 40 ಮತಗಳು ನಮಗೆ ಬಂದಿವೆ” ಎಂದು ಸಂಜಯ್ ಸಿಂಗ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
“ಇಷ್ಟೆಲ್ಲಾ ಆಗಿಯೂ ನಮ್ಮನ್ನು ಅಮಾನತುಗೊಳಿಸಲಾಗಿದೆ ಎಂದರೆ ಅದನ್ನು ಸ್ವೀಕರಿಸಲು ನಾವು ಸಿದ್ಧರಿಲ್ಲ. ಪ್ರಜಾಸತ್ತಾತ್ಮಕವಾಗಿ ಚುನಾಯಿತಗೊಂಡ ಸಂಸ್ಥೆಯು ತನ್ನ ನಿಲುವನ್ನು ವಿವರಿಸಲು ಎಲ್ಲೂ ಅವಕಾಶ ನೀಡಿಲ್ಲ. ಸಂವಿಧಾನದ ಅಡಿಯಲ್ಲಿ ಎಲ್ಲರೂ ಅರ್ಹರಾದ ನೈಸರ್ಗಿಕ ನ್ಯಾಯದ ತತ್ವಕ್ಕೆ ಇದು ವಿರುದ್ಧವಾಗಿದೆ” ಎಂದು ಸಂಜಯ್ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ.
“ಡಬ್ಲ್ಯುಎಫ್‌ಐ ಸ್ವಾಯತ್ತ ಸಂಸ್ಥೆಯಾಗಿದ್ದು, ಸರ್ಕಾರವೇ ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿಲ್ಲ. ಈ ಕುರಿತು ನಾವು ಸರ್ಕಾರದೊಂದಿಗೆ ಮಾತನಾಡಲಿದ್ದೇವೆ. ಒಂದು ವೇಳೆ ಸರ್ಕಾರವು ಅಮಾನತು ಹಿಂಪಡೆಯದಿದ್ದರೆ, ನಾವು ಕಾನೂನಿನ ಅಭಿಪ್ರಾಯ ಪಡೆದು ನ್ಯಾಯಾಲಯದ ಮೊರೆ ಹೋಗುತ್ತೇವೆ,” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಸಂಜಯ್ ಸಿಂಗ್ ಆಯ್ಕೆ ವಿರೋಧ; ಪದ್ಮಶ್ರೀ ಮರಳಿಸುವುದಾಗಿ ಪ್ರಧಾನಿಗೆ ಪತ್ರ ಬರೆದ ಬಜರಂಗ್ ಪುನಿಯಾ
ನೂತನ ಅಧ್ಯಕ್ಷ ಸಂಜಯ್ ಕುಮಾರ್ ಸಿಂಗ್, ಜೂನಿಯರ್ ರಾಷ್ಟ್ರೀಯ ಸ್ಪರ್ಧೆಗಳು (ಅಂಡರ್-16 ಮತ್ತು ಅಂಡರ್-20 ರಾಷ್ಟ್ರೀಯ ಕುಸ್ತಿ) ಈ ವರ್ಷಾಂತ್ಯ ಸಂದರ್ಭದಲ್ಲಿ ಪ್ರಾರಂಭವಾಗಲಿದೆ ಎಂದು ಘೋಷಿಸಿದ್ದರು. ಇದು ನಿಯಮಗಳಿಗೆ ವಿರುದ್ಧವಾಗಿದೆ. ಕುಸ್ತಿಪಟುಗಳು ತಯಾರಾಗಲು ಕನಿಷ್ಠ 15 ದಿನಗಳ ಸೂಚನೆ ಅಗತ್ಯವಿದೆ ಎಂದು ಸಚಿವಾಲಯ ವಿವರಿಸಿದೆ. ಸಂಸ್ಥೆಯ ನಿಯಮ ಮತ್ತು ನಿಬಂಧನೆಗಳನ್ನು ಗಾಳಿಗೆ ತೂರಿದ ಪರಿಣಾಮ ಸಚಿವಾಲಯ ಈ ನಿರ್ಧಾರ ಕೈಗೊಂಡಿದೆ.
ಅತ್ತ ಸಂಜಯ್ ಸಿಂಗ್ ಡಬ್ಲ್ಯೂಎಫ್‌ಐ ಅಧ್ಯಕ್ಷರಾಗಿ ಚುನಾಯಿತರಾದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕುಸ್ತಿಪಟುಗಳು ತಿರುಗಿ ಬಿದ್ದಿದ್ದಾರೆ. ಮಾಜಿ ಒಲಿಂಪಿಯನ್ ಸಾಕ್ಷಿ ಮಲಿಕ್ ನಿವೃತ್ತಿ ಘೋಷಿಸಿದರೆ, ವಿಶ್ವ ಚಾಂಪಿಯನ್ ಬಜರಂಗ್ ಪುನಿಯಾ ತಮಗೆ ಸಿಕ್ಕ ಪದ್ಮಶ್ರೀ ಮರಳಿಸುವುದಾಗಿ ತಿಳಿಸಿದ್ದಾರೆ.
ವಿಭಾಗ