ಹೀಗೊಂದು ಕಾಕತಾಳೀಯ, 2009ರ ಐಪಿಎಲ್ ನೆನಪಿಸಿದ ಆರ್ಸಿಬಿ ಮಹಿಳಾ ತಂಡ; ಅಂದು-ಇಂದು ಸೇಮ್ ಟು ಸೇಮ್
Mar 16, 2024 06:00 AM IST
2009ರ ಐಪಿಎಲ್ ನೆನಪಿಸಿದ ಆರ್ಸಿಬಿ ಮಹಿಳಾ ತಂಡ
- Royal Challengers Bangalore : ಐಪಿಎಲ್ ಮತ್ತು ಡಬ್ಲ್ಯುಪಿಎಲ್ನಲ್ಲಿ ಆರ್ಸಿಬಿ ತಂಡಕ್ಕೆ ಸಂಬಂಧಿಸಿ ಕಾಕತಾಳೀಯ ಘಟನೆಯೊಂದು ನಡೆದಿದೆ. ಅದು ಏನು ಎಂಬುದನ್ನು ಈ ಮುಂದೆ ನೋಡೋಣ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಜರುಗಿದ ಎಲಿಮಿನೇಟರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Bangalore) ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ (WPL) ಇದೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ. ನಿರ್ಣಾಯಕ ಪಂದ್ಯದಲ್ಲಿ ಖಡಕ್ ಬೌಲಿಂಗ್ ಪ್ರದರ್ಶಿಸಿದ ಆರ್ಸಿಬಿ, 5 ರನ್ಗಳಿಂದ ಗೆದ್ದು ಬೀಗಿದೆ. ಜಯದ ಬೆನ್ನಲ್ಲೇ ಆರ್ಸಿಬಿಗೆ ಸಂಬಂಧಿಸಿ ಕಾಕತಾಳೀಯ ಘಟನೆಯೊಂದು ನಡೆದಿದೆ.
ಕಾಕತಾಳೀಯ ಎಂಬಂತೆ ಆರ್ಸಿಬಿಗೆ ಐಪಿಎಲ್ನಲ್ಲಿ ನಡೆದಂತೆ ಡಬ್ಲ್ಯುಪಿಎಲ್ನಲ್ಲೂ ನಡೆದಿದೆ. 2008ರ ಉದ್ಘಾಟನಾ ಐಪಿಎಲ್ನಲ್ಲಿ ಆರ್ಸಿಬಿ ಹೀನಾಯ ಪ್ರದರ್ಶನದೊಂದಿಗೆ ಲೀಗ್ನಿಂದ ಹೊರಬಿದ್ದಿತ್ತು. ಆದರೆ 2ನೇ ಆವೃತ್ತಿಯಲ್ಲಿ ಆರ್ಸಿಬಿ ಫೈನಲ್ ಪ್ರವೇಶಿಸಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಅದರಂತೆ ಡಬ್ಲ್ಯುಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಸತತ ಸೋಲಿನಿಂದ ಲೀಗ್ನಿಂದಲೇ ಹೊರಬಿದ್ದಿದ್ದ ಸ್ಮೃತಿ ಮಂಧಾನ ಪಡೆ, 2ನೇ ಸೀಸನ್ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ. ಆದರೆ ಡಬ್ಲ್ಯುಪಿಎಲ್ನಲ್ಲಿ ಇನ್ನೂ ಉತ್ತರ ಸಿಗಬೇಕಿದೆ.
ಐಪಿಎಲ್ ಮತ್ತು ಡಬ್ಲ್ಯುಪಿಎಲ್ ಉದ್ಘಾಟನಾ ಟೂರ್ನಿಯಲ್ಲಿ ಹೀನಾಯ ಸೋಲನುಭವಿಸಿದ್ದ ಆರ್ಸಿಬಿ, ತನ್ನ 2ನೇ ಸೀಸನ್ನಲ್ಲಿ ಅದ್ಭುತ ಪ್ರದರ್ಶನದೊಂದಿಗೆ ಮಹಿಳಾ ಮತ್ತು ಪುರುಷರ ತಂಡಗಳು ಫೈನಲ್ಗೇರಿರುವುದು ವಿಶೇಷ. ಆದರೆ 2009ರ ಫಲಿತಾಂಶವನ್ನು ಅಳಿಸಿ ಹಾಕಿ ಮಹಿಳೆಯರ ತಂಡ ಹೊಸ ದಾಖಲೆ ಬರೆಯಲು ಸನ್ನದ್ಧವಾಗಿದೆ. ಅಲ್ಲದೆ 16 ವರ್ಷಗಳಿಂದ ಟ್ರೋಫಿ ಬರ ಎದುರಿಸುತ್ತಿರುವ ಆರ್ಸಿಬಿಗೆ ಚೊಚ್ಚಲ ಪ್ರಶಸ್ತಿ ಗೆಲ್ಲುವ ಸುವರ್ಣಾವಕಾಶ ಸಿಕ್ಕಿದೆ.
ಅಂದು-ಇಂದು ಡಿಸಿ ವಿರುದ್ಧವೇ ಫೈನಲ್ ಪಂದ್ಯ
ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ, 2009ರಲ್ಲಿ ಆರ್ಸಿಬಿ ಪುರುಷರ ತಂಡದ ಎದುರಿಸಿದ್ದು ಡಿಸಿಯನ್ನೇ ಅಂದರೆ, ಡೆಕ್ಕನ್ ಚಾರ್ಜಸ್ ಎಂದು. ಈಗ ಆರ್ಸಿಬಿ ಮಹಿಳಾ ತಂಡವು ಸಹ ಡಿಸಿ ಅಂದರೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೇ ಫೈನಲ್ನಲ್ಲಿ ಸೆಣಸಾಣ ನಡೆಸಲಿದೆ. ಅಂದು-ಇಂದು ಡಿಸಿ ವಿರುದ್ಧವೇ ಫೈನಲ್ ಪಂದ್ಯವನ್ನಾಡಲು ಸಜ್ಜಾಗಿದೆ ಆರ್ಸಿಬಿ. ಆದರೆ ಯಾರು ಗೆದ್ದು ಪ್ರಶಸ್ತಿ ಗೆಲ್ಲುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಫೈನಲ್ ಪಂದ್ಯ ಯಾವಾಗ?
ಡಬ್ಲ್ಯುಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಅರ್ಹತೆ ಪಡೆದಿತ್ತು. ಆದರೆ, ಪಾಯಿಂಟ್ಸ್ ಟೇಬಲ್ನಲ್ಲಿ ಮೂರನೇ ಸ್ಥಾನದಲ್ಲಿದ್ದ ಆರ್ಸಿಬಿ, 2ನೇ ಸ್ಥಾನದಲ್ಲಿದ್ದ ಮುಂಬೈ ಇಂಡಿಯನ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೆಣಸಾಟ ನಡೆಸಿದವು. ಆದರೆ ಗೆಲ್ಲುವ ಪಂದ್ಯವನ್ನು ಕೈಚೆಲ್ಲಿದ ಮುಂಬೈ ತೀವ್ರ ನಿರಾಸೆಗೊಂಡಿದೆ. ಫೈನಲ್ ಪಂದ್ಯವು ಮಾರ್ಚ್ 17ರಂದು ಭಾನುವಾರ ನಡೆಯಲಿದೆ.
ಅಂಕಪಟ್ಟಿಯಲ್ಲೂ ಸೇಮ್ ಟು ಸೇಮ್
2008ರ ಉದ್ಘಾಟನಾ ಐಪಿಎಲ್ನಲ್ಲಿ ಆರ್ಸಿಬಿ 14 ಪಂದ್ಯಗಳಲ್ಲಿ 1 ಗೆಲುವು, 10 ಸೋಲು ಸಾಧಿಸಿತ್ತು. ಇದರಿಂದ ಅಂಕಪಟ್ಟಿಯಲ್ಲಿ ಕೊನೆಯ ಎರಡನೇ ಸ್ಥಾನವನ್ನು ಪಡೆದಿತ್ತು. ಬಳಿಕ 2ನೇ ಆವೃತ್ತಿಯ ಐಪಿಎಲ್ನಲ್ಲಿ ಆಡಿದ 14 ಪಂದ್ಯಗಳಲ್ಲಿ 8ರಲ್ಲಿ ಜಯಿಸಿ 3ನೇ ಸ್ಥಾನ ಪಡೆದು ಎರಡನೇ ಸೆಮಿಫೈನಲ್ ಆಡಿತ್ತು. ಇದೀಗ ಡಬ್ಲ್ಯುಪಿಎಲ್ನ ಉದ್ಘಾಟನಾ ಟೂರ್ನಿಯ ಅಂಕಪಟ್ಟಿಯ ಕೊನೆಯ 2ನೇ ಸ್ಥಾನವನ್ನು ಪಡೆದಿದ್ದ ಆರ್ಸಿಬಿ, ಎರಡನೇ ಆವೃತ್ತಿಯ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದು ಇದೀಗ ಫೈನಲ್ಗೆ ಎಂಟ್ರಿಕೊಟ್ಟಿದೆ.
ಎಲಿಮಿನೇಟರ್ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿತು. ಎಲ್ಲೀಸ್ ಪೆರ್ರಿ ಭರ್ಜರಿ ಅರ್ಧಶತಕ ಸಿಡಿಸಿದ್ದರು. ಆದರೆ ಈ ಗುರಿ ಬೆನ್ನಟ್ಟಿದ ಮುಂಬೈ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲು ಮಾತ್ರ ಶಕ್ತವಾಯಿತು. ಬೌಲಿಂಗ್ನಲ್ಲಿ ಶ್ರೇಯಾಂಕಾ ಪಾಟೀಲ್ 2 ವಿಕೆಟ್ ಪಡೆದು ಮಿಂಚಿದರು.