ಹಾರ್ದಿಕ್-ನತಾಶಾ ವಿಚ್ಛೇದನ ವದಂತಿ; ವಿವಾಹಪೂರ್ವ ಒಪ್ಪಂದ ಎಂದರೇನು? ಭಾರತದಲ್ಲಿ ಇದು ಕಾನೂನುಬದ್ಧವೇ?
May 31, 2024 12:44 PM IST
ಹಾರ್ದಿಕ್-ನತಾಶಾ ವಿಚ್ಛೇದನ ವದಂತಿ; ವಿವಾಹಪೂರ್ವ ಒಪ್ಪಂದ ಎಂದರೇನು?
- ನತಾಶಾ ಸ್ಟಾಂಕೋವಿಕ್ ಹಾಗೂ ಹಾರ್ದಿಕ್ ಪಾಂಡ್ಯ ಬೇರ್ಪಟ್ಟಿದ್ದಾರೆ ಎಂಬುದು ಸದ್ಯದ ವದಂತಿ. ಇದಕ್ಕೆ ಹಲವು ಸುಳಿವುಗಳು ಸಿಕ್ಕರೂ ದಂಪತಿ ಕಡೆಯಿಂದ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ನಡುವೆ ಹಾರ್ದಿಕ್ ಅವರ 70 ಶೇಕಡ ಆಸ್ತಿ ಪಾಲು ನತಾಶಾಗೆ ಕೊಡಬೇಕಾಗಿದೆ ಎಂಬ ವದಂತಿಯೂ ಇವೆ. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ.
ಹಾರ್ದಿಕ್ ಪಾಂಡ್ಯ ಮತ್ತು ಅವರ ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಎಂಬ ವದಂತಿ ಗಾಳಿಸುದ್ದಿಯಂತೆ ಹಬ್ಬಿದೆ. ಇವರಿಬ್ಬರೂ ವಿಚ್ಛೇದನ ಪಡೆದಿದ್ದಾರೆ ಎಂಬ ಗುಮಾನಿಗೆ ಸಾಕಷ್ಟು ಸುಳಿವು ಕೂಡಾ ಸಿಕ್ಕಿದೆ. ಹಲವು ಸಮಯದಿಂದ ಇವರಿಬ್ಬರು ಆನ್‌ಲೈನ್‌ನಲ್ಲಿ ಪರಸ್ಪರರಿಗೆ ಸಂಬಂಧಿಸಿದ ಯಾವುದೇ ಪೋಸ್ಟ್ ಮಾಡಿಲ್ಲ. ಈ ನಡುವೆ ನತಾಶಾ ಸ್ಟಾಂಕೋವಿಕ್ ಇತ್ತೀಚೆಗೆ ಹಾರ್ದಿಕ್ ಅವರ ಉಪನಾಮ ಪಾಂಡ್ಯ ಹೆಸರನ್ನು ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ನಿಂದ ತೆಗೆದುಹಾಕಿದರು. ಇದು ವಿಚ್ಛೇದನ ವದಂತಿಗೆ ಮತ್ತಷ್ಟು ಪುಷ್ಠಿ ಕೊಟ್ಟಿದೆ.
ವಿಚ್ಛೇದನ ವದಂತಿಗೂ ಹೆಚ್ಚಾಗಿ ಸುದ್ದಿಯಾಗಿದ್ದು, ನತಾಶಾ ಅವರು ಹಾರ್ದಿಕ್ ಅವರ ಆಸ್ತಿಯಲ್ಲಿ 70 ಪ್ರತಿಶತ ಪಾಲನ್ನು ಪಡೆಯುತ್ತಾರೆ ಎಂಬುದು. ಇದಕ್ಕೆ ಕಾರಣ, 2020ರಲ್ಲಿ ಮದುವೆಯಾಗುವುದಕ್ಕೂ ಮುನ್ನ ದಂಪತಿಯು ವಿವಾಹಪೂರ್ವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂಬ ಊಹಾಪೋಹಗಳಿವೆ. ಆದಾರೆ, ಇಂಥಾ ಊಹಾಪೋಹಗಳಿಗೆ ಯಾವುದೇ ಸ್ಪಷ್ಟ ಪುರಾವೆಗಳಿಲ್ಲ.
ಹಾಗಿದ್ದರೆ ಈ ವಿವಾಹಪೂರ್ವ ಒಪ್ಪಂದ ಎಂದರೇನು? ನಮ್ಮ ಭಾರತದಲ್ಲಿ ಈ ಒಪ್ಪಂದ ಕಾನೂನುಬದ್ಧವಾಗಿ ಮಾನ್ಯವಾಗಿದೆಯೇ? ಅದರ ಸಾಧಕ-ಬಾಧಕಗಳೇನು? ಎಂಬುದನ್ನು ತಿಳಿಯೋಣ.
ಯಾವುದೇ ನಿಯಮಿತ ಒಪ್ಪಂದದಂತೆಯೇ, ವಿವಾಹಪೂರ್ವ ಒಪ್ಪಂದವು ಭಾರತೀಯ ಒಪ್ಪಂದ ಕಾಯಿದೆ 1872ರ ಅಡಿಯಲ್ಲಿ ಬರುತ್ತದೆ. ಆದರೆ, ಸಾಂಪ್ರದಾಯಿಕವಾಗಿ ಅದು ಅಷ್ಟಾಗಿ ಗುರುತಿಸಿಕೊಂಡಿಲ್ಲ. ಭಾರತದಲ್ಲಿ ವಿವಾಹದ ವಿಷಯಗಳಿಗೆ ಬಂದಾಗ, ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ವಿವಿಧ ಧರ್ಮಗಳ ವೈಯಕ್ತಿಕ ಕಾನೂನುಗಳನ್ನು ಹೆಚ್ಚಾಗಿ ಅನುಸರಿಸಲಾಗುತ್ತದೆ. ಆದಾಗ್ಯೂ, ಭವಿಷ್ಯದಲ್ಲಿ ವಿಚ್ಛೇದನದ ಸಂದರ್ಭ ಎದುರಾಗುವ ಸಂಭಾವ್ಯತೆಯ ಮೇಲೆ ತಮ್ಮ ಆಸ್ತಿಯನ್ನು ಕಳೆದುಕೊಳ್ಳದಂತೆ ರಕ್ಷಿಸಲು ಬಯಸುವ ಜನರು ಮದುವೆಯಾಗುವ ಮೊದಲು ವಿವಾಹಪೂರ್ವ ಒಪ್ಪಂದ ಮಾಡಿಕೊಳ್ಳಬಹುದು.
ಈ ಕುರಿತು ವಕೀಲರಾದ ಡಾ. ರೆನ್ನಿ ಜಾಯ್ ಅವರು ಮಾತನಾಡಿದ್ದಾರೆ. ಅವರ ಪ್ರಕಾರ “ಭಾರತದಲ್ಲಿ, ಮದುವೆ ಎಂಬುದನ್ನು ಧರ್ಮದ ಆಧಾರದ ಮೇಲೆ ವೈಯಕ್ತಿಕ ಕಾನೂನುಗಳಿಂದ ನಿಯಂತ್ರಿಸಲಾಗುತ್ತದೆ. ಅವುಗಳನ್ನು ಸಾಂಪ್ರದಾಯಿಕ ಅರ್ಥದಲ್ಲಿ ಒಪ್ಪಂದಗಳೆಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ವಿಶೇಷ ವಿವಾಹ ಕಾಯಿದೆ-1954ರ ಪ್ರಕಾರ, ಧರ್ಮವನ್ನು ಲೆಕ್ಕಿಸದೆ ನಾಗರಿಕ ವಿವಾಹಗಳಿಗೆ ಅವಕಾಶ ನೀಡುತ್ತದೆ. ಇದರ ಪ್ರಕಾರ ಮದುವೆಯನ್ನು ಸ್ವಲ್ಪ ಮಟ್ಟಿಗೆ ಒಪ್ಪಂದವಾಗಿ ಕಾಣಬಹುದು. ಆದರೆ ಇದಕ್ಕೆ ಕೆಲವೊಂದು ನಿಬಂಧನೆಗಳಿವೆ.”
ವಿವಾಹಪೂರ್ವ ಒಪ್ಪಂದದ ಸಾಧಕ-ಬಾಧಕಗಳೇನು?
- ಆಸ್ತಿ ರಕ್ಷಣೆ: ಈ ಒಪ್ಪಂದವು ವಿಚ್ಛೇದನ ಸಮಯದಲ್ಲಿ ಆಸ್ತಿ ಮಾಲೀಕತ್ವದ ಹಕ್ಕನ್ನು ರಕ್ಷಿಸುತ್ತದೆ. ವೈಯಕ್ತಿಕ ಆಸ್ತಿ ಮತ್ತು ಕುಟುಂಬದ ಉತ್ತರಾಧಿಕಾರವನ್ನು ರಕ್ಷಿಸುತ್ತದೆ.
- ಸಾಲದ ಹೊಣೆಗಾರಿಕೆ: ವಿವಾಹ ಪೂರ್ವ ಸಾಲಗಳು ಸಾಲಗಾರರ ಸಂಗಾತಿಯ ಜವಾಬ್ದಾರಿಯಾಗಿ ಉಳಿಯುತ್ತದೆ.
- ಸಂಘರ್ಷ ಕಡಿಮೆ: ಒಪ್ಪಂದದಿಂದಾಗಿ ವಿಚ್ಛೇದನದ ಸಮಯದಲ್ಲಿ ಆಸ್ತಿ ಮತ್ತು ಹಣಕಾಸಿನ ಮೇಲಿನ ವಿವಾದಗಳು ಮತ್ತು ದಾವೆಗಳು ಕಡಿಮೆಯಾಗುತ್ತವೆ.
- ಹಣಕಾಸಿನ ಸ್ಪಷ್ಟತೆ: ಎರಡೂ ಪಕ್ಷಗಳಿಗೆ (ಗಂಡ ಮತ್ತು ಹೆಂಡತಿ) ಹಣಕಾಸಿನ ವಿಚಾರವಾಗಿ ಪಾರದರ್ಶಕತೆ ಮತ್ತು ಸ್ಪಷ್ಟ ಯೋಜನೆಯನ್ನು ಒದಗಿಸುತ್ತದೆ.
ಭಾರತದಲ್ಲಿ ವಿವಾಹಪೂರ್ವ ಒಪ್ಪಂದಗಳ ಬಾಧಕಗಳು
- ಜಾರಿ ಸಮಸ್ಯೆಯೇ ದೊಡ್ಡದಯ: ಸ್ಪಷ್ಟವಾದ ಕಾನೂನು ಮಾನ್ಯತೆಯ ಕೊರತೆಯಿಂದಾಗಿ ಒಪ್ಪಂದ ಜಾರಿಗೊಳಿಸುವಿಕೆ ಅನಿಶ್ಚಿತವಾಗಿದೆ. ಹೀಗಾಗಿ ಈ ಕಾನೂನು ಇದ್ದೂ ಇಲ್ಲದಂತಿದೆ.
- ನಂಬಿಕೆಯ ಸಮಸ್ಯೆ: ಇದು ವೈವಾಹಿಕ ಜೀವನದಲ್ಲಿ ಭಾವನಾತ್ಮಕ ಒತ್ತಡವನ್ನು ಉಂಟುಮಾಡುವ ಅಪನಂಬಿಕೆಯಾಗಿ ಕಾಣಬಹುದು.
- ಸಾರ್ವಜನಿಕ ನೀತಿ: ನ್ಯಾಯಾಲಯಗಳು ಸಾರ್ವಜನಿಕ ನೀತಿಗೆ ವಿರುದ್ಧವಾದ ಷರತ್ತುಗಳನ್ನು ಅಮಾನ್ಯಗೊಳಿಸಬಹುದು.
ಇದನ್ನೂ ಓದಿ | ಭಾರತ vs ಬಾಂಗ್ಲಾದೇಶ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯ ಎಲ್ಲಿ, ಯಾವಾಗ; ಭಾರತದಲ್ಲಿ ಲೈವ್ ವೀಕ್ಷಿಸೋದು ಹೇಗೆ?
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)