Explained: ಕ್ರಿಕೆಟ್ನಲ್ಲಿ ಡ್ರಾಪ್ ಇನ್ ಪಿಚ್ ಎಂದರೇನು; ಇದು ಸಾಮಾನ್ಯ ಪಿಚ್ಗಿಂತ ಹೇಗೆ ಭಿನ್ನ?
Jun 06, 2024 07:23 PM IST
Explained: ಕ್ರಿಕೆಟ್ನಲ್ಲಿ ಡ್ರಾಪ್ ಇನ್ ಪಿಚ್ ಎಂದರೇನು; ಇದು ಸಾಮಾನ್ಯ ಪಿಚ್ಗಿಂತ ಹೇಗೆ ಭಿನ್ನ?
- What is drop-in pitch: ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಅಳವಡಿಸಲಾದ ಡ್ರಾಪ್ ಇನ್ ಪಿಚ್ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತಿದೆ. ಹಾಗಾದರೆ ಡ್ರಾಪ್ ಇನ್ ಪಿಚ್ ಎಂದರೇನು? ಇಲ್ಲಿದೆ ವಿವರ.
ಬಹುನಿರೀಕ್ಷಿತ 2024ರ ಟಿ20 ಕ್ರಿಕೆಟ್ ವಿಶ್ವಕಪ್ ಆರಂಭಗೊಂಡಿದೆ. ಆದರೆ, ಯಾಕೋ ಅಭಿಮಾನಿಗಳಿಗೆ ಮಜವೇ ನೀಡುತ್ತಿಲ್ಲ. ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗುತ್ತಿದೆ. ದೊಡ್ಡದೊಡ್ಡ ಪಂದ್ಯಗಳಿಗೆ ಅಭಿಮಾನಿಗಳನ್ನು ಹುಡುಕುವಂತಾಗಿದೆ. ಫುಟ್ಬಾಲ್ನಂತೆ ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ವಿಸ್ತರಿಸಲು, ಜನಪ್ರಿಯತೆ ಹೆಚ್ಚಿಸಲು ಐಸಿಸಿ 20 ತಂಡಗಳಿಗೆ ಆಡಲು ಅವಕಾಶ ನೀಡಿದೆ. ಆದರೆ, ಮನರಂಜನೆಗಿಂತ ನಿರಾಸೆಯೇ ಹೆಚ್ಚಾಗಿದೆ. ಇದರ ನಡುವೆ ನ್ಯೂಯಾರ್ಕ್‌ನ ಡ್ರಾಪ್ ಇನ್ ಪಿಚ್ (Drop-in Pitch) ಬಗ್ಗೆ ಚರ್ಚೆಯಾಗುತ್ತಿದೆ.
ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಜೊತೆಗೆ ವೆಸ್ಟ್ ಇಂಡೀಸ್ ಆತಿಥ್ಯ ವಹಿಸುತ್ತಿದೆ. ಯುಎಸ್ಎ 3 ಸ್ಥಳಗಳಲ್ಲಿ 16 ಪಂದ್ಯ ಆಯೋಜಿಸುತ್ತಿವೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ಪಾರ್ಕ್, ಡಲ್ಲಾಸ್‌ನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ ಮತ್ತು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂ ಆತಿಥ್ಯ ವಹಿಸುತ್ತಿವೆ. ಆದರೆ, ನ್ಯೂಯಾರ್ಕ್ ಪಿಚ್ ಬಗ್ಗೆ ಮಾತ್ರ ಹೆಚ್ಚು ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ಅದು ಡ್ರಾಪ್ ಇನ್ ಪಿಚ್ ಆಗಿರುವುದು. ಡ್ರಾಪ್ ಇನ್ ಪಿಚ್ ಎಂದರೇನು? ಇದರ ವಿಶೇಷತೆಗಳು ಹೇಗಿವೆ? ಇಲ್ಲಿದೆ ವಿವರ.
ಏನಿದು ಡ್ರಾಪ್ ಇನ್ ಪಿಚ್? ಇದರ ವಿಶೇಷತೆಗಳೇನು?
ಡ್ರಾಪ್-ಇನ್ ಪಿಚ್‌ಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರಿಸಲಾಗುತ್ತದೆ. ಅಚ್ಚರಿ ಅಂದರೆ ಅವುಗಳನ್ನು ಸ್ಥಳದಲ್ಲೇ ಸಿದ್ಧಪಡಿಸುವುದಿಲ್ಲ. ಮೈದಾನದ ಹೊರಗೆ ಕ್ಯುರೇಟ್ ಮಾಡಿದ ನಂತರ ಕ್ರೀಡಾಂಗಣಕ್ಕೆ ರವಾನಿಸಲಾಗುತ್ತದೆ. ಕ್ರಿಕೆಟ್ ಪಂದ್ಯ ಇದ್ದಾಗ, ರಚಿಸಿದ ಪಿಚ್ ಅನ್ನು ಕ್ರೇನ್ ಮೂಲಕ ಪಿಚ್ ಮೇಲೆ ಡ್ರಾಪ್ ಮಾಡಲಾಗುತ್ತದೆ. ಸಿಮೆಂಟ್ ಸ್ಲಾಬ್ಗಳ ಮೇಲೆ ಪಿಚ್ ಕೂರಿಸಿದ ಬಳಿಕ, ಸ್ಟೀಲ್ ಕೇಸ್ ಹೊರ ತೆಗೆಯಲಾಗುತ್ತದೆ. ಈ ಪಿಚ್ನಲ್ಲಿ ಬಿರುಕು ಕಾಣಿಸುವುದಿಲ್ಲ.
ಈ ಡ್ರಾಪ್ ಇನ್ ಪಿಚ್ ಹೇಗಿರುತ್ತೆದೆ ಅಂದರೆ ಮೈದಾನದ ಮಧ್ಯೆ 20 ಮೀಟರ್ ಉದ್ದ, ಮೂರು ಮೀಟರ್ ಅಗಲ, 20 ಸೆಂಟಿ ಮೀಟರ್ ಆಳದಲ್ಲಿ, ಕ್ರಿಕೆಟ್ ಪಿಚ್ಗೆ ಗುಂಡಿ ತೆಗೆದಿರಲಾಗಿರುತ್ತದೆ. ಗುಂಡಿ ಸುತ್ತಲೂ ಸಿಮೆಂಟ್ ಸ್ಲಾಬ್ ನಿರ್ಮಿಸಲಾಗುತ್ತದೆ. ಮೈದಾನದ ಹೊರಗೆ ಪಿಚ್ ಅಳತೆಗೆ ತಕ್ಕಂತೆ, ಸ್ಟೀಲ್ ಕೇಸ್ ಸಿದ್ಧಪಡಿಸಲಾಗುತ್ತದೆ. ಆ ಕೇಸ್ನ ಕೆಳ ಭಾಗದಲ್ಲಿ ಕಪ್ಪುಮಣ್ಣು ಅಥವಾ ಜೇಡಿಮಣ್ಣು ಹಾಕಿದರೆ, ಮೇಲಿನ ಭಾಗದಲ್ಲಿ ಹುಲ್ಲಿನ ಸಂಯೋಜನೆ ಮಾಡಲಾಗುತ್ತದೆ. ಅಥವಾ ಹುಲ್ಲಿನ ಮ್ಯಾಟನ್ನೂ ಹಾಕಲಾಗುತ್ತದೆ.
ಈ ಫ್ಲಾಟ್ ಪಿಚ್ಗಳು ಬೌಲರ್ ಸ್ನೇಹಿಯಾಗಿದ್ದು, ಬೌಲರ್ಗಳು ಪೇಸ್ & ಬೌನ್ಸ್ ಹಾಕಲು ನೆರವಾಗುತ್ತದೆ. ಆಟಗಾರರಿಗೆ ಯಾವುದೇ ತೊಂದರೆ ಉಂಟಾಗದಂತೆ ತಯಾರಕರು ಎಚ್ಚರ ವಹಿಸುತ್ತಾರೆ. ಆದರೆ ಈ ಪಿಚ್ಗಳು ಹೆಚ್ಚು ಬೌನ್ಸ್ ಆಗುತ್ತವೆ. ಈ ರೀತಿ ಮೇಲ್ಮೈ ಆಸ್ಟ್ರೇಲಿಯಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕ್ರಿಕೆಟ್ ಪಂದ್ಯ ಮುಗಿದ ನಂತರ ಈ ಪಿಚ್ ಹೊರ ತೆಗೆದು ಫುಟ್ಬಾಲ್, ರಗ್ನಿಗಳಿಗೆ ಮೈದಾನ ಸಿದ್ಧಪಡಿಸಲಾಗುತ್ತದೆ. ಆಸೀಸ್ನ ಬಹುತೇಕ ಪಿಚ್ಗಳು ಇವೇ ಆಗಿವೆ. ನ್ಯೂಯಾರ್ಕ್ ಪಿಚ್ ಅನ್ನು ಆಸ್ಟ್ರೇಲಿಯಾದ ಅಡಿಲೇಡ್ನಿಂದ ರವಾನಿಸಲಾಗಿದೆ.
ಟಿ20 ವಿಶ್ವಕಪ್ಗೆ ನೀರಸ ಪ್ರತಿಕ್ರಿಯೆ
ಟಿ20 ವಿಶ್ವಕಪ್ ನಡುವೆ ಅತಿ ಹೆಚ್ಚು ಚರ್ಚೆ ಹುಟ್ಟು ಹಾಕಿರುವ ಪಿಚ್ಗಳ ಪೈಕಿ ನಸ್ಸೌ ಕೌಂಟಿ ಕ್ರಿಕೆಟ್ ಮೈದಾನ. ಹೊಸದಾಗಿ ನಿರ್ಮಿಸಲಾದ ಈ ಪಿಚ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಿನ ಮೊದಲ ಪಂದ್ಯವೇ ಅತ್ಯಂತ ನೀರಸವಾಗಿತ್ತು. ಪಿಚ್ ಹೇಗೆ ಕೆಲಸ ಮಾಡುತ್ತದೆ, ಬ್ಯಾಟರ್ಗಳಿಗೆ ಹೇಗೆ ನೆರವಾಗುತ್ತದೆ, ಹೇಗೆ ಸ್ವಿಂಗ್ ಆಗುತ್ತದೆ, ಬೌನ್ಸ್ ಆಗುತ್ತದೆ ಎಂಬುದನ್ನು ಅರಿಯುವಲ್ಲಿ ವಿಫಲರಾದರು. ಅಷ್ಟೆ ಅಲ್ಲ, ಟೀಮ್ ಇಂಡಿಯಾ-ಐರ್ಲೆಂಡ್ ಪಂದ್ಯಕ್ಕೂ ಕ್ರೇಜೇ ಇರಲಿಲ್ಲ.
ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಿಸುವ ಸಲುವಾಗಿ ಅದೇ ದೇಶಕ್ಕೆ ಸಹ ಆತಿಥ್ಯ ನೀಡಲಾಗಿದೆ. ಟೂರ್ನಿ ಆರಂಭವಾಗಿ ವಾರವಾಗುತ್ತಾ ಬಂದರೂ ರೋಚಕ ಹಣಾಹಣಿಗೆ ಒಂದೂ ಪಂದ್ಯವೂ ಸಾಕ್ಷಿಯಾಗಿಲ್ಲ. ಎದುರಾಳಿಗೆ ಪ್ರತಿರೋಧ ನೀಡಲು ಯಾವ ತಂಡಕ್ಕೂ ಸಾಧ್ಯವಾಗಿಲ್ಲ. ಕ್ರಿಕೆಟ್ ತಜ್ಞರು, ಪಂಡಿತರು, ಮಾಜಿ ಕ್ರಿಕೆಟರ್ಗಳಿಂದ ಪಿಚ್ಗಳ ಕುರಿತು ಆರೋಪಗಳು ಎದುರಾಗಿವೆ. ಜಗತ್ತೇ ಕಾಯುತ್ತಿದ್ದ ಟಿ20 ವಿಶ್ವಕಪ್ ಸಪ್ಪೆಯಾಗಿದ್ದಕ್ಕೆ ಬೇಸರ ಹೊರಹಾಕಿದ್ದಾರೆ.
ಇನ್ನಷ್ಟು ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ