logo
ಕನ್ನಡ ಸುದ್ದಿ  /  ಕ್ರಿಕೆಟ್  /  ಟಿ20ಐ ಕ್ರಿಕೆಟ್​ ಹುಟ್ಟಿದ್ದೇಗೆ, ಟಿ20ಐ ವಿಶ್ವಕಪ್ ಆರಂಭಗೊಂಡಿದ್ದು ಯಾವಾಗ; ಈವರೆಗಿನ ವಿಜೇತರು, ರನ್ನರ್​ಅಪ್​ ಯಾರು?

ಟಿ20ಐ ಕ್ರಿಕೆಟ್​ ಹುಟ್ಟಿದ್ದೇಗೆ, ಟಿ20ಐ ವಿಶ್ವಕಪ್ ಆರಂಭಗೊಂಡಿದ್ದು ಯಾವಾಗ; ಈವರೆಗಿನ ವಿಜೇತರು, ರನ್ನರ್​ಅಪ್​ ಯಾರು?

Prasanna Kumar P N HT Kannada

May 29, 2024 07:26 PM IST

google News

ಟಿ20ಐ ಕ್ರಿಕೆಟ್​ ಹುಟ್ಟಿದ್ದೇಗೆ, ಟಿ20ಐ ವಿಶ್ವಕಪ್ ಆರಂಭಗೊಂಡಿದ್ದು ಯಾವಾಗ; ಈವರೆಗಿನ ವಿಜೇತರು, ರನ್ನರ್​ಅಪ್​ ಯಾರು?

    • T20 World Cup History: ವಿಶ್ವ ಕ್ರಿಕೆಟ್​ನಲ್ಲಿ ಟಿ20 ಕ್ರಿಕೆಟ್ ಮಾದರಿ ಹುಟ್ಟಿದ್ದು ಯಾವಾಗ? ಪಂದ್ಯ ಪಂದ್ಯ ನಡೆದಿದ್ದೆಲ್ಲಿ? ಟಿ20 ವಿಶ್ವಕಪ್ ಪ್ರಾರಂಭಗೊಂಡಿದ್ದೆಂದು? ಈವರೆಗೂ ವಿಶ್ವಕಪ್ ಗೆದ್ದವರು ಯಾರು? ಇಲ್ಲಿದೆ ವಿವರ
ಟಿ20ಐ ಕ್ರಿಕೆಟ್​ ಹುಟ್ಟಿದ್ದೇಗೆ, ಟಿ20ಐ ವಿಶ್ವಕಪ್ ಆರಂಭಗೊಂಡಿದ್ದು ಯಾವಾಗ; ಈವರೆಗಿನ ವಿಜೇತರು, ರನ್ನರ್​ಅಪ್​ ಯಾರು?
ಟಿ20ಐ ಕ್ರಿಕೆಟ್​ ಹುಟ್ಟಿದ್ದೇಗೆ, ಟಿ20ಐ ವಿಶ್ವಕಪ್ ಆರಂಭಗೊಂಡಿದ್ದು ಯಾವಾಗ; ಈವರೆಗಿನ ವಿಜೇತರು, ರನ್ನರ್​ಅಪ್​ ಯಾರು?

ಟಿ20 ವಿಶ್ವಕಪ್ ಟೂರ್ನಿ 2024 ದಿನಗಣನೆ (T20 World Cup 2024) ಶುರುವಾಗಿದೆ. ಅಮೆರಿಕ ಮತ್ತು ವೆಸ್ಟ್ ಇಂಡೀಸ್ ದೇಶಗಳು (America and West Indies) ಜಂಟಿ ಆತಿಥ್ಯ ವಹಿಸಲು ಸಿದ್ಧಗೊಂಡಿವೆ. ಜೂನ್ 1 ರಿಂದ ಟೂರ್ನಿ ಆರಂಭವಾಗಲಿದ್ದು, 29ರ ತನಕ ನಡೆಯಲಿದೆ. ಇದೇ ಮೊದಲ ಬಾರಿಗೆ ಅಮೆರಿಕ, ಕ್ರಿಕೆಟ್​ ಟೂರ್ನಿಗೆ ಆತಿಥ್ಯ ಒದಗಿಸುತ್ತಿದೆ. ಇದು 9ನೇ ಆವೃತ್ತಿಯ ಟಿ20 ವಿಶ್ವಕಪ್ ಆಗಿದೆ. ಹಾಗಾದರೆ ಟಿ20 ಕ್ರಿಕೆಟ್ ಮತ್ತು ಟಿ20 ವಿಶ್ವಕಪ್ ಹುಟ್ಟಿದ್ದು ಯಾವಾಗ, ಇದರ ಇತಿಹಾಸ ಹೇಗಿದೆ? ಇಲ್ಲಿಯವರೆಗೂ ವಿಜೇತರು ಯಾರು? ಇಲ್ಲಿದೆ ವಿವರ.

ಟಿ20 ಕ್ರಿಕೆಟ್ ಹುಟ್ಟಿದ್ದು ಯಾವಾಗ?

ಟಿ20 ಕ್ರಿಕೆಟ್ ಮಾದರಿಗೆ ಉತ್ತೇಜನ ನೀಡಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಮಾರ್ಕೆಟಿಂಗ್ ಮ್ಯಾನೇಜರ್ ಸ್ಟುವರ್ಟ್ ರಾಬರ್ಟ್‌ಸನ್ 2001ರಲ್ಲಿ ಮೊದಲ ಬಾರಿಗೆ ಕೌಂಟಿ ಅಧ್ಯಕ್ಷರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕುರಿತು ನಡೆದ ಸಭೆಯಲ್ಲಿ 11-7 ಮತ ಪಡೆದು ನೂತನ ಕ್ರಿಕೆಟ್ ಮಾದರಿ ಹುಟ್ಟಲು ಕಾರಣವಾಗಿತ್ತು. ಆದರೆ ಇದು ಕೌಂಟಿ ಕ್ರಿಕೆಟ್​ಗೆ ಮಾತ್ರ ಅವಕಾಶ ಇತ್ತು. ಮೊದಲ ಅಧಿಕೃತ ಟಿ20 ನಡೆದಿದ್ದು, 2003ರ ಜೂನ್ 13 ರಂದು ಟಿ20 ಬ್ಲಾಸ್ಟ್‌ನಲ್ಲಿ. ಈ ಆವೃತ್ತಿಯ ಯಶಸ್ಸಿನ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಗೆ ತರಲು ಐಸಿಸಿ ನಿರ್ಧರಿಸಿತು.

ದೇಶೀಯ ಕ್ರಿಕೆಟ್​ನಲ್ಲಿ ಭರ್ಜರಿ ಸಕ್ಸಸ್ ಕಂಡ 2 ವರ್ಷಗಳ ನಂತರ ಅಂದರೆ 2005ರ ಫೆಬ್ರವರಿ 17ರಂದು ಮೊದಲ ಇಂಟರ್​ನ್ಯಾಷನಲ್ ಪಂದ್ಯ ನಡೆಯಿತು. ಅಂದು ಆಕ್ಲೆಂಡ್​ನ ಈಡನ್ ಪಾರ್ಕ್​ನಲ್ಲಿ ನಡೆದ ಮೊದಲ ಪುರುಷರ ಪೂರ್ಣ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವೆ ನಡೆಯಿತು. ಆದರೆ, ಕಿವೀಸ್​ ಈ ಪಂದ್ಯದಲ್ಲಿ ಸೋತಿತ್ತು. ಹಂತ ಹಂತವಾಗಿ ಏಕದಿನ, ಟೆಸ್ಟ್​ ಕಡೆಯಿಂದ ಟಿ20 ಕ್ರಿಕೆಟ್​ಗೆ ವಾಲಿದ ಕ್ರಿಕೆಟ್ ಪ್ರಿಯರು, ಚುಟುಕು ಕ್ರಿಕೆಟ್​ ಹುಚ್ಚು ಹೆಚ್ಚಿಸಿಕೊಂಡರು. ಇದು ವಿಶ್ವಮಟ್ಟದಲ್ಲಿ ಸದ್ದು ಮಾಡಿತು.

ಟಿ20 ವಿಶ್ವಕಪ್ ಹುಟ್ಟಿದ್ದು 2007ರಲ್ಲಿ!

ಟಿ20 ಕ್ರಿಕೆಟ್​ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ, ಏಕದಿನ ಕ್ರಿಕೆಟ್ ವಿಶ್ವಕಪ್​ನಂತೆ ಟಿ20 ವಿಶ್ವಕಪ್​ ಆಯೋಜಿಸಲು ಚರ್ಚೆ ನಡೆಸಿತು. ಅಂತಿಮವಾಗಿ 2007ರಲ್ಲಿ ಟೂರ್ನಿ ಆಯೋಜನೆಗೆ ನಿರ್ಧಾರ ತೆಗೆದುಕೊಂಡಿತು. 2 ವರ್ಷಗಳಿಗೊಮ್ಮೆ ಟೂರ್ನಿ ಆಯೋಜಿಸಲು ನಿರ್ಧರಿಸಿತು. ಪ್ರಪ್ರಥಮ ಬಾರಿಗೆ, ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ನಡೆಯಿತು. ಈ ಟೂರ್ನಿಯಲ್ಲಿ 12 ತಂಡಗಳು ಭಾಗವಹಿಸಿದ್ದವು. ಸೆಮಿಫೈನಲ್, ಫೈನಲ್ ಸೇರಿ 27 ಪಂದ್ಯಗಳು ಜರುಗಿದ್ದವು.

ಚೊಚ್ಚಲ ಆವೃತ್ತಿಯಲ್ಲೇ 12 ತಂಡಗಳನ್ನು 3 ತಂಡಗಳಂತೆ ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿತ್ತು. ಗುಂಪು ಹಂತದಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಸೂಪರ್​​-4ಕ್ಕೆ ಆಯ್ಕೆಯಾದವು. ಭಾರತ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಸೌತ್ ಆಫ್ರಿಕಾ, ಇಂಗ್ಲೆಂಡ್, ಕೀನಾ, ಶ್ರೀಲಂಕಾ, ಜಿಂಬಾಬ್ವೆ, ವೆಸ್ಟ್ ಇಂಡೀಸ್ ತಂಡಗಳು ಮೊದಲ ಆವೃತ್ತಿ ಟಿ20 ವಿಶ್ವಕಪ್​ನಲ್ಲಿ ಭಾಗಿಯಾಗಿದ್ದವು. ಈ ಆವೃತ್ತಿಯಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಆಗಿತ್ತು.

ಮೊದಲ ಆವೃತ್ತಿಯಲ್ಲೇ ಭಾರತ ಚಾಂಪಿಯನ್

ಚೊಚ್ಚಲ ಟಿ20 ವಿಶ್ವಕಪ್ ಆವೃತ್ತಿಯಲ್ಲೇ ಭಾರತ ತಂಡವನ್ನು ಎಂಎಸ್ ಧೋನಿ ಮುನ್ನಡೆಸಿದ್ದರು. ಫೈನಲ್​ನಲ್ಲಿ ಬದ್ಧ ವೈರಿ ಪಾಕಿಸ್ತಾನ ತಂಡವನ್ನು ಮಣಿಸಿದ ಟೀಮ್ ಇಂಡಿಯಾ, ಚಾಂಪಿಯನ್ ಪಟ್ಟಕ್ಕೇರಿತು. ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಗೌತಮ್ ಗಂಭೀರ್ ಅವರ 75 ರನ್​ಗಳ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಆದರೆ ಈ ಗುರಿ ಬೆನ್ನಟ್ಟಿದ ಪಾಕ್, 5 ರನ್​ಗಳಿಂದ ಸೋಲೊಪ್ಪಿಕೊಂಡಿತು. ಇರ್ಫಾನ್ ಪಠಾಣ್, ಆರ್​ಪಿ ಸಿಂಗ್ ತಲಾ 3 ವಿಕೆಟ್ ಉರುಳಿಸಿ ಪಂದ್ಯಕ್ಕೆ ಗೆಲುವು ತಂದುಕೊಟ್ಟಿದ್ದರು. ಪಾಕ್ 152 ರನ್ ಗಳಿಸಲಷ್ಟೆ ಶಕ್ತವಾಗಿತ್ತು.

2007-2023ರವರೆಗೂ ಟಿ20 ವಿಶ್ವಕಪ್ ಪ್ರಶಸ್ತಿ ವಿಜೇತರು

  • 2007 - ಟೀಮ್ ಇಂಡಿಯಾ (ಎಂಎಸ್ ಧೋನಿ), ರನ್ನರ್​ಅಪ್-ಪಾಕಿಸ್ತಾನ, ಆತಿಥ್ಯ-ಸೌತ್ ಆಫ್ರಿಕಾ
  • 2009 - ಪಾಕಿಸ್ತಾನ (ಯೂನಿಸ್ ಖಾನ್), ರನ್ನರ್​ಅಪ್-ಶ್ರೀಲಂಕಾ, ಆತಿಥ್ಯ-ಇಂಗ್ಲೆಂಡ್
  • 2010 - ಇಂಗ್ಲೆಂಡ್ (ಪಾಲ್ ಕಾಲಿಂಗ್​ವುಡ್​), ರನ್ನರ್​ಅಪ್-ಆಸ್ಟ್ರೇಲಿಯಾ, ಆತಿಥ್ಯ-ವೆಸ್ಟ್ ಇಂಡೀಸ್​
  • 2012 - ವೆಸ್ಟ್ ಇಂಡೀಸ್ (ಡರೇನ್ ಸಾಮಿ), ರನ್ನರ್​ಅಪ್​-ಶ್ರೀಲಂಕಾ, ಇಂಗ್ಲೆಂಡ್, ಆತಿಥ್ಯ-ಶ್ರೀಲಂಕಾ
  • 2014 - ಶ್ರೀಲಂಕಾ (ಲಸಿತ್ ಮಾಲಿಂಗ), ರನ್ನರ್​ಅಪ್-ಭಾರತ, ಆತಿಥ್ಯ - ಬಾಂಗ್ಲಾದೇಶ
  • 2016 - ವೆಸ್ಟ್ ಇಂಡೀಸ್ (ಡರೇನ್ ಸಾಮಿ), ರನ್ನರ್​ಅಪ್​-ಇಂಗ್ಲೆಂಡ್, ಆತಿಥ್ಯ -ಭಾರತ
  • 2021 - ಆಸ್ಟ್ರೇಲಿಯಾ (ಆರೋನ್ ಫಿಂಚ್), ರನ್ನರ್​ಅಪ್ - ನ್ಯೂಜಿಲೆಂಡ್, ಆತಿಥ್ಯ-ಯುಎಇ/ಓಮನ್
  • 2022 - ಇಂಗ್ಲೆಂಡ್ (ಜೋಸ್ ಬಟ್ಲರ್), ರನ್ನರ್​ಅಪ್​-ಪಾಕಿಸ್ತಾನ, ಆತಿಥ್ಯ-ಆಸ್ಟ್ರೇಲಿಯಾ

ಇದನ್ನೂ ಓದಿ: ರೋಹಿತ್​ ಶರ್ಮಾ, ಶಾಹಿದ್ ಅಫ್ರಿದಿ ಇನ್, ಎಂಎಸ್ ಧೋನಿ ನಾಯಕ; ಸಾರ್ವಕಾಲಿಕ ಟಿ20 ವಿಶ್ವಕಪ್ ಪ್ಲೇಯಿಂಗ್ 11 ಕಟ್ಟಿದ ಚಾಟ್​ಜಿಟಿಪಿ

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ