ರಾಹುಲ್ ದ್ರಾವಿಡ್ ಸ್ಥಾನಕ್ಕೆ ಗೌತಮ್ ಗಂಭೀರ್ರನ್ನು ಅಧಿಕೃತವಾಗಿ ನೇಮಿಸಲು ಬಿಸಿಸಿಐ ವಿಳಂಬ ಮಾಡ್ತಿರೋದ್ಯಾಕೆ?
Jul 09, 2024 02:21 PM IST
ರಾಹುಲ್ ದ್ರಾವಿಡ್ ಸ್ಥಾನಕ್ಕೆ ಗೌತಮ್ ಗಂಭೀರ್ರನ್ನು ಅಧಿಕೃತವಾಗಿ ನೇಮಿಸಲು ಬಿಸಿಸಿಐ ವಿಳಂಬ ಮಾಡ್ತಿರೋದ್ಯಾಕೆ?
- Gautam Gambhir: ಟೀಮ್ ಇಂಡಿಯಾ ನೂತನ ಹೆಡ್ ಕೋಚ್ ಸ್ಥಾನಕ್ಕೆ ಗೌತಮ್ ಗಂಭೀರ್ ಅಂತಿಮಗೊಂಡಿದ್ದರೂ ಅಧಿಕೃತವಾಗಿ ಘೋಷಿಸಲು ಏಕಿಷ್ಟು ವಿಳಂಬವಾಗುತ್ತಿದೆ. ಅದಕ್ಕಿಲ್ಲಿದೆ ಕಾರಣ?
2024ರ ಟಿ20 ವಿಶ್ವಕಪ್ 2024 ಟ್ರೋಫಿಯೊಂದಿಗೆ ಮುಖ್ಯಕೋಚ್ ಆಗಿ ತಮ್ಮ ಅಧಿಕಾರದ ಅವಧಿಯನ್ನು ಕೊನೆಗೊಳಿಸಿದ ರಾಹುಲ್ ದ್ರಾವಿಡ್ (Rahul Dravid) ಸ್ಥಾನವನ್ನು ಗೌತಮ್ ಗಂಭೀರ್ (Gautam Gambhir) ತುಂಬಲಿದ್ದಾರೆ. ಇದೇ ತಿಂಗಳ ಕೊನೆಯಲ್ಲಿ ನಡೆಯುವ ಶ್ರೀಲಂಕಾ ಎದುರಿನ ಸರಣಿಗೂ ಮುನ್ನ ನೂತನ ಕೋಚ್ ಆಯ್ಕೆಯಾಗಲಿದೆ. ಆದರೆ, ಸರಣಿ ಹತ್ತಿರ ಇದ್ದರೂ ಗಂಭೀರ್ ಆಯ್ಕೆಗೆ ಬಿಸಿಸಿಐ ವಿಳಂಬ ಮಾಡುತ್ತಿರುವುದೇಕೆ? ಇನ್ನೆಷ್ಟು ಸಮಯಬೇಕು?
ಟಿ20 ವಿಶ್ವಕಪ್ ನಂತರ ಮುಂದುವರಿಯುವುದಿಲ್ಲ ಎಂದು ದ್ರಾವಿಡ್ ಖಚಿತಪಡಿಸಿದ ನಂತರ ಗಂಭೀರ್ ಈ ಪಾತ್ರಕ್ಕೆ ಮುಂಚೂಣಿಯಲ್ಲಿದ್ದಾರೆ. ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ, ಸುಲಕ್ಷಣಾ ನಾಯಕ್ ಅವರ ಕ್ರಿಕೆಟ್ ಸಲಹಾ ಸಮಿತಿಯು ನಡೆಸಿದ ಸಂದರ್ಶನ ಪ್ರಕ್ರಿಯೆಯ ಮೂಲಕ ಪ್ರವೇಶಿಸಿದ ಇಬ್ಬರು ಅರ್ಜಿದಾರರಲ್ಲಿ ಗಂಭೀರ್ ಕೂಡ ಒಬ್ಬರಾಗಿದ್ದರು. ಗಂಭೀರ್ ಭಾರತದ ಮುಂದಿನ ಮುಖ್ಯ ಕೋಚ್ ಆಗುವುದು ಖಚಿತ ಎಂದು ವರದಿಗಳು ಸೂಚಿಸುತ್ತವೆ.
ಐಪಿಎಲ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 10 ವರ್ಷಗಳ ನಂತರ ಚಾಂಪಿಯನ್ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಿದ ನಂತರ ಮೆಂಟರ್ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ವಿಷಯಗಳು ಇಷ್ಟು ಸ್ಪಷ್ಟವಾಗಿದ್ದರೂ ಅಧಿಕೃತವಾಗಿ ಘೋಷಿಸಲು ಬಿಸಿಸಿಐ ಏಕೆ ಇಷ್ಟು ಸಮಯ ತೆಗೆದುಕೊಳ್ಳುತ್ತಿದೆ? ಇದಕ್ಕೆ ಉತ್ತರ ವೇತನದ ಮಾತುಕತೆ ನಡೆಯುತ್ತಿದೆ.
ನಡೆಯುತ್ತಿದೆ ವೇತನದ ಕುರಿತು ಚರ್ಚೆ
ಹೌದು, ವೇತನದ ಕುರಿತು ಮಾತುಕತೆ ನಡೆಯುತ್ತಿರುವ ಕಾರಣ ಅಧಿಕೃತ ನೇಮಕಾತಿ ವಿಳಂಬವಾಗುತ್ತಿದೆ. ದಿ ಇಂಡಿಯನ್ ಎಕ್ಸ್ಪ್ರೆಸ್ ಪ್ರಕಾರ, ಗಂಭೀರ್ ಮತ್ತು ಬಿಸಿಸಿಐ ವೇತನ ಮಾತುಕತೆಯ ಅಂತಿಮ ಹಂತದಲ್ಲಿದೆ. ಗಂಭೀರ್ ಅವರ ಸಂಭಾವನೆಯನ್ನು ಅಂತಿಮಗೊಳಿಸಿದ ಕ್ಷಣವೇ ಬಿಸಿಸಿಐ ಈ ಬಗ್ಗೆ ಘೋಷಣೆ ಮಾಡಲಿದೆ. ಆದರೆ ದ್ರಾವಿಡ್ ಅವರಿಗಿಂತಲೂ ಹೆಚ್ಚಿನ ವೇತನ ನೀಡಲು ಗಂಭೀರ್ ಬೇಡಿಕೆಯಿಟ್ಟಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ (ಪುರುಷರು) ಮುಖ್ಯಕೋಚ್ ವೇತನಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಆಯ್ಕೆಗಳನ್ನು ಮುಕ್ತವಾಗಿರಿಸಿದೆ. ಇದಕ್ಕಾಗಿ ಅರ್ಜಿದಾರರನ್ನು ಆಹ್ವಾನಿಸುವ ಜಾಹೀರಾತಿನಲ್ಲಿ ಸಂಭಾವನೆಯು ‘ರಾಜಿ ಮಾಡಿಕೊಳ್ಳಬಹುದಾದದ್ದು ಮತ್ತು ಅನುಭವಕ್ಕೆ ಅನುಗುಣವಾಗಿರುತ್ತದೆ’ ಎಂದು ಉಲ್ಲೇಖಿಸಿತ್ತು. ಗಂಭೀರ್ ಅವರು ಹಿಂದಿನ ಕೋಚ್ ದ್ರಾವಿಡ್ ಅವರಿಗಿಂತ ಹೆಚ್ಚಿನ ವೇತನ ಪಡೆಯುವ ನಿರೀಕ್ಷೆಯಿದೆ.
ಗಂಭೀರ್ ವಾರ್ಷಿಕ ಸಂಭಾವನೆ ಸುಮಾರು 12 ಕೋಟಿ ರೂಪಾಯಿ ಪಡೆಯುವ ಸಾಧ್ಯತೆ ಇದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಗಂಭೀರ್ ಅವರ ಮೊದಲ ನೇಮಕವಾಗಿದೆ. ಅಲ್ಲದೆ, ಅವರ ವೃತ್ತೀಜೀವನದಲ್ಲಿ ಎಲ್ಲಿಯೂ ಕೋಚ್ ಆಗಿ ಸೇವೆ ಸಲ್ಲಿಸಿಲ್ಲ. ಮೆಂಟರ್ ಆಗಿ ಮೂರು ವರ್ಷಗಳ ಕಾರ್ಯನಿರ್ವಹಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ಪರ 2 ವರ್ಷ, ಕೆಕೆಆರ್ ಪರ 1 ವರ್ಷ ಮೆಂಟರ್ ಆಗಿದ್ದರು.
ಶೀಘ್ರದಲ್ಲೇ ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಕೋಚ್ಗೆ ಅರ್ಜಿ
ಪ್ರಸ್ತುತ ಜಿಂಬಾಬ್ವೆಯಲ್ಲಿ ಭಾರತ ತಂಡವು ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ಮಾರ್ಗದರ್ಶನದಲ್ಲಿ ಆಡುತ್ತಿದೆ. ಟೀಮ್ ಇಂಡಿಯಾ ಹೊಸ ಮುಖ್ಯಕೋಚ್ನೊಂದಿಗೆ ವೈಟ್ ಬಾಲ್ ಸರಣಿಗೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಚಿತಪಡಿಸಿದ್ದಾರೆ.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್, ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ ದಿಲೀಪ್ ಅವರ ಅಧಿಕಾರಾವಧಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆದ ಟಿ20 ವಿಶ್ವಕಪ್ ನಂತರ ಕೊನೆಗೊಂಡಿದೆ. ಬಿಸಿಸಿಐ ಶೀಘ್ರದಲ್ಲೇ ತಂಡದ ಸಹಾಯಕ ಸಿಬ್ಬಂದಿಗೆ ಅರ್ಜಿಗಳನ್ನು ಆಹ್ವಾನಿಸಲಿದೆ ಎಂದು ವರದಿ ತಿಳಿಸಿದೆ.
ಸಹಾಯಕ ಸಿಬ್ಬಂದಿ ನೇಮಕ ಮಾಡುವಾಗ ಬಿಸಿಸಿಐ, ಮುಖ್ಯ ಕೋಚ್ಗೆ ಅಂತಿಮ ಕರೆ ತೆಗೆದುಕೊಳ್ಳಲು ಅವಕಾಶ ನೀಡುವ ಅಭ್ಯಾಸ ಅನುಸರಿಸುತ್ತದೆ. ಅರ್ಜಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಗಂಭೀರ್ ಅವರಿಗೆ ತಮ್ಮ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಲಾಗುವುದು ಎಂದು ವರದಿಯಾಗಿದೆ.