ಕೆಎಸ್ ಭರತ್ ಬದಲಿಗೆ ಯುವ ಆಟಗಾರನಿಗೆ ಅವಕಾಶ; ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ಗೆ ಧ್ರುವ್ ಜುರೆಲ್ ಪದಾರ್ಪಣೆ ಸಾಧ್ಯತೆ
Feb 12, 2024 01:22 PM IST
ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್‌ಗೆ ಧ್ರುವ್ ಜುರೆಲ್ ಪದಾರ್ಪಣೆ ಸಾಧ್ಯತೆ
- Dhruv Jurel Debut: ರಾಜ್‌ಕೋಟ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯಕ್ಕೆ ಧ್ರುವ್ ಜುರೆಲ್ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಕೆಎಸ್ ಭರತ್ ಬದಲಿಗೆ 23 ವರ್ಷದ ಕ್ರಿಕೆಟಿಗ ಭಾರತದ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ (India vs England 3rd Test) ಪಂದ್ಯಕ್ಕೆ ಕೆಲವೇ ದಿನಗಳು ಉಳಿದಿವೆ. ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆಯಾಗಿರುವ ಭಾರತದ ಯುವ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಧ್ರುವ್ ಜುರೆಲ್ (Dhruv Jurel), ಈಗಾಗಾಲೇ ನಡೆದ ಎರಡು ಪಂದ್ಯದಲ್ಲಿ ಆಡುವ ಬಳಗಕ್ಕೆ ಆಯ್ಕೆಯಾಗಿಲ್ಲ. ಇದೇ ಮೊದಲ ಬಾರಿಗೆ ಟೀಮ್ ಇಂಡಿಯಾಗೆ ಆಯ್ಕೆಯಾಗಿರುವ ಜುರೆಲ್, ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಲು ಕಾದು ಕುಳಿತಿದ್ದಾರೆ.
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದ ಮೂಲಕ, ಟೆಸ್ಟ್ ಕ್ರಿಕೆಟ್‌ಗೆ ಧ್ರುವ್ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಸುದ್ದಿ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡುತ್ತಿರುವ ಕೆಎಸ್ ಭರತ್ ಬದಲಿಗೆ 23 ವರ್ಷದ ಕ್ರಿಕೆಟಿಗ ಭಾರತದ ಆಡುವ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ.
ಕೆಎಸ್ ಭರತ್ ವೈಫಲ್ಯ
30 ವರ್ಷದ ಆಟಗಾರ ಭರತ್, ಆಂಗ್ಲರ ವಿರುದ್ಧದ ಮೊದಲ ಎರಡು ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಆಡಿದ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ ಒಮ್ಮೆಯೂ ಅರ್ಧಶತಕ ಗಳಿಲು ಅವರಿಂದ ಸಾಧ್ಯವಾಗಿಲ್ಲ. ಹೀಗಾಗಿ ಮತ್ತೆ ಅವಕಾಶ ನೀಡಲು ತಂಡದ ಮ್ಯಾನೇಜ್‌ಮೆಂಟ್‌ಗೆ ಇಷ್ಟವಿಲ್ಲ. ಹೀಗಾಗಿ ಜುರೆಲ್‌ಗೆ ಮಣೆ ಹಾಕುವ ಸಾಧ್ಯತೆ ಇದೆ.
ಇದನ್ನೂ ಓದಿ | ಆರೇ ತಿಂಗಳಲ್ಲಿ ಅಪ್ಪ-ಅಣ್ಣನ ಸಾವು; ಅವಳಿ ದುರಂತದಿಂದ ಮೇಲೆದ್ದು ಕ್ರಿಕೆಟರ್ ಆದ ಆಕಾಶ್ ದೀಪ್ ರೋಚಕ ಕಥೆ
2023ರ ಫೆಬ್ರವರಿ 9ರಂದು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ ಭರತ್, ಈವರೆಗೆ ಆಡಿದ ಏಳು ಟೆಸ್ಟ್‌ಗಳಲ್ಲಿ ಕೇವಲ 221 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ತ ಇದುವರೆಗೆ ಆಡಿದ 15 ಪ್ರಥಮ ದರ್ಜೆ ಪಂದ್ಯಗಳಲ್ಲಿ ಜುರೆಲ್ 790 ರನ್ ಗಳಿಸಿದ್ದಾರೆ.
ಜುರೆಲ್‌ಗೆ ಉಜ್ವಲ ಭವಿಷ್ಯವಿದೆ
“ಭಾರತ್ ಅವರ ಬ್ಯಾಟಿಂಗ್ ಸಾಧಾರಣವಾಗಿದೆ. ಅವರ ಕೀಪಿಂಗ್ ಕೂಡ ಅಷ್ಟೇನೂ ಉತ್ತಮವಾಗಿಲ್ಲ. ಅವರು ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿಲ್ಲ. ಮತ್ತೊಂದೆಡೆ, ಜುರೆಲ್ ಪ್ರತಿಭಾವಂತ ಹಾಗೂ ಉತ್ತಮ ಮನೋಭಾವ ಹೊಂದಿರುವ ಆಟಗಾರ. ಆತನಿಗೆ ಉಜ್ವಲ ಭವಿಷ್ಯವಿದೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತರ ಪ್ರದೇಶ, ಭಾರತ ಎ ಮತ್ತು ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಜುರೆಲ್ ರಾಜ್‌ಕೋಟ್‌ನಲ್ಲಿ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದರೆ ಅಚ್ಚರಿ ಇಲ್ಲ,” ಎಂದು ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.
ಇದನ್ನೂ ಓದಿ | ಆತನಿಲ್ಲದೆ ಟೆಸ್ಟ್ ಸರಣಿ ಅಪೂರ್ಣ; ಸ್ಟಾರ್ ಕ್ರಿಕೆಟಿಗನ ಅನುಪಸ್ಥಿತಿ ಬಗ್ಗೆ ಹರ್ಭಜನ್ ಸಿಂಗ್
ವಿರಾಟ್ ಕೊಹ್ಲಿ ಸರಣಿಯ ಉಳಿದ ಪಂದ್ಯಗಳಿಂದಲೂ ಹೊರಗುಳಿದಿದ್ದಾರೆ. ಇದೇ ವೇಳೆ ಗಾಯಗೊಂಡಿದ್ದ ರಾಹುಲ್ ಹಾಗೂ ಜಡೇಜಾ ತಂಡದಲ್ಲಿ ಸ್ಥಾನ ಪಡೆದರೂ, ಫಿಟ್ನೆಸ್ ವರದಿ ಆಧಾರ ಮೇಲೆ ಆಡುವ ಬಳಗಕ್ಕೆ ಲಭ್ಯವಾಗಲಿದ್ದಾರೆ. ಬೆನ್ನು ಮತ್ತು ತೊಡೆ ಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಎರಡನೇ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ಮೊಹ್ಮಮದ್ ಸಿರಾಜ್ ತಂಡಕ್ಕೆ ಮರಳಿದ್ದಾರೆ. ಆಕಾಶ್ ದೀಪ್ ತಂಡದ ಭಾಗವಾಗಿದ್ದಾರೆ. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ.
ಇದನ್ನೂ ಓದಿ | ಜಸ್ಪ್ರೀತ್ ಬುಮ್ರಾ ಹಣೆಬರಹ ಬದಲಾಗಿದ್ದೇ ರವಿ ಶಾಸ್ತ್ರಿಯ ಆ ಒಂದು ಕರೆಯಿಂದ; 2018ರ ಘಟನೆ ನೆನೆದ ಮಾಜಿ ಕೋಚ್
ಮೂರನೇ ಟೆಸ್ಟ್ ಪಂದ್ಯವು ಫೆಬ್ರವರಿ 15ರಂದು ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಫೆಬ್ರವರಿ 23 ರಿಂದ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಜರುಗಲಿದೆ. ಐದನೇ ಟೆಸ್ಟ್ ಮಾರ್ಚ್ 7ರಿಂದ ಧರ್ಮಶಾಲಾದಲ್ಲಿ ನಡೆಯಲಿದೆ.
ಇಂಗ್ಲೆಂಡ್ ವಿರುದ್ಧದ ಕೊನೆಯ 3 ಟೆಸ್ಟ್ಗಳಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಕೆಎಲ್ ರಾಹುಲ್*, ರಜತ್ ಪಾಟೀದಾರ್, ಸರ್ಫರಾಜ್ ಖಾನ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ*, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಆಕಾಶ್ ದೀಪ್.
(This copy first appeared in Hindustan Times Kannada website. To read more like this please logon to kannada.hindustantimes.com)