ನಂಬಿದರೂ ನಂಬದಿದ್ದರೂ ಇದೇ ಸತ್ಯ; ಆರ್ಸಿಬಿ ವಿರುದ್ಧ ಸಿಎಸ್ಕೆ ಸೋತು ಪ್ಲೇಆಫ್ನಿಂದ ಹೊರಬಿದ್ದರೆ ಎಂಎಸ್ ಧೋನಿಗೆ ಅದೇ ವಿದಾಯದ ಪಂದ್ಯ
May 15, 2024 04:11 PM IST
ನಂಬಿದರೂ ನಂಬದಿದ್ದರೂ ಇದೇ ಸತ್ಯ; ಆರ್ಸಿಬಿ ವಿರುದ್ಧ ಸಿಎಸ್ಕೆ ಸೋತರೆ ಎಂಎಸ್ ಧೋನಿಗೆ ಅದೇ ವಿದಾಯದ ಪಂದ್ಯ
- MS Dhoni: ಮೇ 18ರಂದು ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋತು ಪ್ಲೇಆಫ್ನಿಂದ ಹೊರಬಿದ್ದರೆ ಎಂಎಸ್ ಧೋನಿ ಅವರಿಗೆ ಅದೇ ವಿದಾಯ ಪಂದ್ಯವಾಗಿರಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ತಂಡಗಳ ನಡುವಿನ ಹೈವೋಲ್ಟೇಜ್ ಕಾದಾಟಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ (Chinnaswamy Cricket Stadium) ಸಜ್ಜಾಗಿ ನಿಂತಿದೆ. ಮೇ 18ರಂದು ಶನಿವಾರ ನಡೆಯುವ ಬಹುನಿರೀಕ್ಷಿತ ಪಂದ್ಯಕ್ಕೆ ಇಡೀ ಜಗತ್ತೇ ಕಾದುಕುಳಿತಿದೆ. ಈ ಪಂದ್ಯ ಉಭಯ ತಂಡಗಳ ಪ್ಲೇಆಫ್ ಭವಿಷ್ಯ ನಿರ್ಧರಿಸಲಿರುವ ಕಾರಣ ಹೆಚ್ಚು ನಿರೀಕ್ಷೆ ಹುಟ್ಟುಹಾಕಿದೆ. ಆರ್ಸಿಬಿ ವಿರುದ್ಧ ಸೋತು ಪ್ಲೇಆಫ್ನಿಂದ ಹೊರಬಿದ್ದರೆ ಸಿಎಸ್ಕೆ ಅಭಿಮಾನಿಗಳ ಆರಾಧ್ಯ ದೈವ ಎಂಎಸ್ ಧೋನಿ (MS Dhoni) ಅವರಿಗೆ ಅದೇ ವಿದಾಯದ ಪಂದ್ಯವಾಗಿರಲಿದೆ.
2008 ರಿಂದ ಇಲ್ಲಿಯವರೆಗೂ 263 ಐಪಿಎಲ್ ಪಂದ್ಯಗಳನ್ನು ಆಡಿ 5218 ರನ್ ಗಳಿಸಿರುವ ಧೋನಿ ಕುರಿತು ಆಘಾತಕಾರಿ ಸುದ್ದಿ ಕೇಳಿದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ನಂಬಿದರೂ, ನಂಬದಿದ್ದರೂ ಇದೇ ಸತ್ಯ. ಹೌದು, ಎಂಎಸ್ ಧೋನಿ ಅವರಿಗೆ ಇದೇ ಅಂತಿಮ ಐಪಿಎಲ್. ಜುಲೈನಲ್ಲಿ 42ನೇ ವರ್ಷಕ್ಕೆ ಕಾಲಿಡಲಿರುವ ಧೋನಿ, 2024ರ ಐಪಿಎಲ್ ಆರಂಭಕ್ಕೂ ಮುನ್ನ ತನ್ನ ನಾಯಕತ್ವವನ್ನು ಋತುರಾಜ್ ಗಾಯಕ್ವಾಡ್ಗೆ ಹಸ್ತಾಂತರಿಸುವ ಮೂಲಕ ನಿವೃತ್ತಿಯ ಸುಳಿವು ಕೊಟ್ಟಿದ್ದಾರೆ. ಒಂದು ವೇಳೆ ಆರ್ಸಿಬಿ ವಿರುದ್ಧ ಚೆನ್ನೈ ಸೋತು ಪ್ಲೇಆಫ್ನಿಂದ ಹೊರಬಿದ್ದರೆ, ಎಂಎಸ್ ಪಾಲಿಗೆ ಅದೇ ಕೊನೆಯ ಪಂದ್ಯವಾಗಲಿದೆ.
ಟಿಕೆಟ್ಗಾಗಿ ಮುಗಿಬಿದ್ದ ಫ್ಯಾನ್ಸ್
ಮೇ 18ರಂದು ಆರ್ಸಿಬಿ ವಿರುದ್ಧ ಚೆನ್ನೈ ಸೆಣಸಾಟ ನಡೆಸಲಿದೆ. ಪ್ಲೇ ಆಫ್ ಪ್ರವೇಶಿಸಲು ಉತ್ತಮ ಅವಕಾಶ ಇರುವ ಕಾರಣ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಉಭಯ ತಂಡಗಳಿಗೂ ಅನಿವಾರ್ಯ. ಸಿಎಸ್ಕೆ 14 ಅಂಕ ಪಡೆದಿದ್ದರೆ, ಆರ್ಸಿಬಿ 12 ಅಂಕ ಪಡೆದಿದೆ. ನೆಟ್ರನ್ರೇಟ್ನಲ್ಲೂ ಸಿಎಸ್ಕೆ ಕೊಂಚ ಮುಂದಿದೆ. ಯಲ್ಲೋ ಆರ್ಮಿ ಮತ್ತು ರೆಡ್ ಆರ್ಮಿಗೆ ಇದು ಅಂತಿಮ ಲೀಗ್ ಪಂದ್ಯ. ಫಾಫ್ ಪಡೆಯು ಋತುರಾಜ್ ಪಡೆಯನ್ನು ಸೋಲಿಸಿದರೆ 14 ಅಂಕ ಪಡೆಯುತ್ತದೆ. ಆಗ ನೆಟ್ ರನ್ ರೇಟ್ ಮುಂದಿರುವ ತಂಡ ಪ್ಲೇಆಫ್ಗೆ ಬರುತ್ತದೆ.
ಒಂದು ವೇಳೆ ಸೋತರೆ ಧೋನಿ ಆಟವನ್ನು ಕಣ್ತುಂಬಿಕೊಳ್ಳಲು ಮತ್ತೆ ಅವಕಾಶ ಸಿಗುವುದಿಲ್ಲ ಎಂಬ ಉದ್ದೇಶದಿಂದ ಅಭಿಮಾನಿಗಳು ಟಿಕೆಟ್ ಖರೀದಿಗೆ ಮುಗಿಬೀಳುತ್ತಿದ್ದಾರೆ. ಆರ್ಸಿಬಿ ಅಧಿಕೃತ ವೆಬ್ಸೈಟ್ನಲ್ಲಿ ಈಗಾಗಲೇ ಎಲ್ಲಾ ಟಿಕೆಟ್ಗಳು ಮಾರಾಟವಾಗಿವೆ. ಆದರೆ ಜಿದ್ದಾಜಿದ್ದಿನ ಕಾದಾಟದ ಟಿಕೆಟ್ಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ಎಕ್ಸ್ ಖಾತೆಯಲ್ಲೂ #RCBvsCSKtickets ಹ್ಯಾಶ್ಟ್ಯಾಗ್ನಲ್ಲಿ ಟ್ರೆಂಡ್ ಆಗ್ತಿದೆ. ಆರ್ಸಿಬಿ ಫಾರ್ಮ್ನಲ್ಲಿರುವುದು ಗಮನಿಸಿದರೆ, ಸಿಎಸ್ಕೆ ಸೋಲುವುದು ಖಚಿತ ಎಂದು ಅನೇಕರು ಭಾವಿಸಿದ್ದಾರೆ. ಇದೇ ಕಾರಣಕ್ಕೆ ಚೆನ್ನೈ ಫ್ಯಾನ್ಸ್ ಟಿಕೆಟ್ಗಾಗಿ ಮುಗಿಬೀಳುತ್ತಿದ್ದಾರೆ.
ಪ್ಲೇಆಫ್ ಲೆಕ್ಕಾಚಾರ ಹೇಗಿದೆ?
ಆರ್ಸಿಬಿ ಪ್ಲೇಆಫ್ ಪ್ರವೇಶಿಸಲು ಈ ಪಂದ್ಯದ ಗೆಲುವು ಅತ್ಯಗತ್ಯ. ಅಲ್ಲದೆ, ನೆಟ್ರನ್ರೇಟ್ನಲ್ಲೂ ಚೆನ್ನೈ ತಂಡವನ್ನು ಮೀರಿಸಬೇಕು. ಆರ್ಸಿಬಿ +0.528, ಆರ್ಸಿಬಿ +0.387 ರನ್ ರೇಟ್ ಹೊಂದಿದೆ. ಆದರೆ ಫಾಫ್ ಪಡೆ ಈ ಪಂದ್ಯದಲ್ಲಿ ರನ್ ರೇಟ್ನಲ್ಲೂ ಮುಂದೆ ಬರಬೇಕು. ಆಗ ಪ್ಲೇಆಫ್ ಪ್ರವೇಶಿಸಲು ಸಾಧ್ಯವಾಗುತ್ತದೆ. ಒಂದು ವೇಳೆ ಆರ್ಸಿಬಿ ಗೆದ್ದು ಸಿಎಸ್ಕೆಗಿಂತ ಕಡಿಮೆ ನೆಟ್ ರನ್ ರೇಟ್ ಪಡೆದರೆ, ಲೀಗ್ನಿಂದಲೇ ಹೊರಬೀಳಿದೆ. ಬೆಂಗಳೂರು ತಂಡ 18.1 ಓವರ್ಗಳೊಳಗೆ ಚೇಸಿಂಗ್ ಮಾಡಬೇಕು, ಇಲ್ಲವಾದಲ್ಲಿ 18 ರನ್ಗಳಿಂದ ಗೆಲ್ಲಬೇಕು. ಆದರೆ ಸಿಎಸ್ಕೆ ಗೆದ್ದರೆ ಸಾಕು ಪ್ಲೇಆಫ್ ಪ್ರವೇಶಿಸಲಿದೆ.