ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಫಲಿತಾಂಶ ನಿರ್ಣಯ ಹೇಗೆ; ಐಸಿಸಿ ನಿಯಮ ಹೇಳುವುದೇನು?
Nov 13, 2023 05:52 PM IST
ವಿಶ್ವಕಪ್ ಸೆಮಿಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಫಲಿತಾಂಶ ನಿರ್ಣಯ ಹೇಗೆ?
- World Cup 2023 Semi finals: ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಏನಾಗುತ್ತದೆ? ಫಲಿತಾಂಶ ಹೇಗೆ? ಐಸಿಸಿ ಮಳೆ ನಿಯಮ ಏನು? ಇಲ್ಲಿದೆ ವಿವರ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC ODI World Cup 2023) ಲೀಗ್ ಹಂತ ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇನ್ನೇನಿದ್ದರೂ ಸೆಮಿಫೈನಲ್ ಫೈಟ್. ಚಾಂಪಿಯನ್ ಪಟ್ಟಕ್ಕಾಗಿ 4 ತಂಡಗಳು ಹಸಿರು ಅಖಾಡದಲ್ಲಿ ಕಾದಾಡಲಿವೆ. ನವೆಂಬರ್ 15ರಂದು ಭಾರತ - ನ್ಯೂಜಿಲೆಂಡ್ (India vs New Zealand) ಮೊದಲ ಸೆಮಿಫೈನಲ್ನಲ್ಲಿ ಸೆಣಸಾಟ ನಡೆಸಲಿವೆ.
ನವೆಂಬರ್ 16ರಂದು ಎರಡನೇ ಸೆಮೀಸ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ(Australia vs South Africa) ಎದುರಾಗಲಿವೆ. ಕ್ರಮವಾಗಿ ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಈ ಪಂದ್ಯಗಳು ನಡೆಯಲಿವೆ. ಒಂದು ವೇಳೆ ಈ ಮಹತ್ವದ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಏನಾಗುತ್ತದೆ? ಫಲಿತಾಂಶ ಹೇಗೆ? ಐಸಿಸಿ ಮಳೆ ನಿಯಮ ಏನು? ಇಲ್ಲಿದೆ ವಿವರ.
ರಿಸರ್ವ್ ಡೇ (ಮೀಸಲು ದಿನ)
ಐಸಿಸಿ ನಿಯಮದ ಪ್ರಕಾರ ವಿಶ್ವಕಪ್ನ ಲೀಗ್ ಪಂದ್ಯಗಳಿಗೆ ಯಾವುದೇ ಮೀಸಲು ದಿನ ಇರುವುದಿಲ್ಲ. ಲೀಗ್ ಹಂತದಲ್ಲಿ ಮಳೆಯಿಂದ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ ಒಂದು ಅಂಕ ಪಡೆಯಲಿವೆ. ಆದರೆ, ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಪ್ರೇಕ್ಷಕರು ಚಿಂತಿಸುವ ಅಗತ್ಯ ಇಲ್ಲ. ಎರಡೂ ಸೆಮಿಫೈನಲ್ ಜೊತೆಗೆ ಫೈನಲ್ ಪಂದ್ಯಕ್ಕೂ ಮೀಸಲು ದಿನ (ರಿಸರ್ವ್ ಡೇ) ಇರಲಿದೆ.
ಮೀಸಲು ದಿನವೂ ಮಳೆ ಅಡ್ಡಿಪಡಿಸಿದರೆ ಹೇಗೆ?
ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ, ಮೀಸಲು ದಿನದಂದು ಪಂದ್ಯ ನಡೆಯಲಿದೆ. ಒಂದು ವೇಳೆ ಮೀಸಲು ದಿನವೂ ಮಳೆ ಕಾಡಿದರೆ ಫಲಿತಾಂಶ ಘೋಷಣೆ ಹೇಗೆ ಎಂಬ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳದ್ದು. ಅದಕ್ಕೆ ಉತ್ತರ ಇಲ್ಲಿದೆ. ರಿಸರ್ವ್ ಡೇ ದಿನವೂ ಪಂದ್ಯ ಸಂಪೂರ್ಣ ರದ್ದಾಗ ಆಗ ಲೀಗ್ನಲ್ಲಿ ಹೆಚ್ಚು ಅಂಕ ಮತ್ತು ರನ್ ರೇಟ್ ಹೊಂದಿರುವ ತಂಡ ಫೈನಲ್ಗೆ ನೇರವಾಗಿ ಪ್ರವೇಶಿಸಲಿದೆ.
ಉದಾಹರಣೆ: ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮುಖಾಮುಖಿಯಾಗುತ್ತವೆ. ಈ ಪಂದ್ಯಕ್ಕೆ ಮಳೆ ತೊಂದರೆ ನೀಡಿದರೆ, ಇದರ ಲಾಭ ಭಾರತಕ್ಕೆ ಲಭಿಸಲಿದೆ. ಏಕೆಂದರೆ ವಿಶ್ವಕಪ್ ಲೀಗ್ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಪಡೆದಿದೆ. ಹಾಗಾಗಿ ಮೀಸಲು ದಿನವೂ ಪಂದ್ಯ ಬಂದರೆ ಭಾರತ ಫೈನಲ್ ಪ್ರವೇಶ ಪಡೆಯುತ್ತದೆ. ನ್ಯೂಜಿಲೆಂಡ್ ತಂಡಕ್ಕೆ ಹಿನ್ನಡೆಯಾಗಲಿದೆ.
ಒಂದೇ ಅಂಕ ಪಡೆದಿದ್ದರೆ, ಫಲಿತಾಂಶ ಹೇಗೆ?
ಒಂದು ವೇಳೆ ಸೆಮಿಫೈನಲ್ನಲ್ಲಿ ಮುಖಾಮುಖಿಯಾಗುವ ಉಭಯ ತಂಡಗಳು ಸಮಾನ ಅಂಕ ಹೊಂದಿದ್ದರೆ, ಫಲಿತಾಂಶ ಹೇಗೆ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೂ ಉತ್ತರ ಇಲ್ಲಿದೆ. ಎರಡೂ ತಂಡಗಳು ಸಮಾನವಾದ ಅಂಕ ಹೊಂದಿದ್ದರೆ, ನೆಟ್ ರನ್ ರೇಟ್ನಲ್ಲಿ ಮುಂದಿರುವ ತಂಡವು ಫೈನಲ್ಗೆ ಪ್ರವೇಶಿಸಲಿದೆ.
ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ತಂಡಗಳು ತಲಾ 14 ಅಂಕ ಪಡೆದಿವೆ. ಈ ಉಭಯ ತಂಡಗಳ ಸೆಮಿಫೈನಲ್ ಪಂದ್ಯವು ಮೀಸಲು ದಿನವೂ ರದ್ದುಗೊಂಡರೆ ನೆಟ್ ರನ್ ರೇಟ್ನಲ್ಲಿ ಮುಂದಿರುವ ದಕ್ಷಿಣ ಆಫ್ರಿಕಾ ನೇರವಾಗಿ ಫೈನಲ್ ಪ್ರವೇಶಿಸಲಿದೆ.
ಬೌಂಡರಿ ಕೌಂಟ್ ಇಲ್ಲ
2019ರ ವಿಶ್ವಕಪ್ ಟೂರ್ನಿಯ ಫೈನಲ್ನಲ್ಲಿ ಸೂಪರ್ ಓವರ್ನಲ್ಲಿ ಟೈಗೊಂಡಾಗ ಫಲಿತಾಂಶ ನಿರ್ಧರಿಸಲು ಬೌಂಡರಿ ಕೌಂಟ್ ಮಾಡಲಾಗಿತ್ತು. ಅದರ ಆಧಾರದಲ್ಲಿ ಫಲಿತಾಂಶ ನಿರ್ಧರಿಸಲಾಗಿತ್ತು. ಇದು ವಿವಾದ ಮತ್ತು ಆಕ್ರೋಶಕ್ಕೂ ಕಾರಣವಾಗಿತ್ತು. ಹಾಗಾಗಿ ಈ ಬಾರಿ ನಿಯಮವನ್ನು ಕಿತ್ತು ಹಾಕಲಾಗಿದೆ. ಈ ಬಾರಿ ಸೆಮಿಫೈನಲ್, ಫೈನಲ್ ಆಗಲಿ ಟೈ ಗೊಂಡರೆ ಫಲಿತಾಂಶ ಬರುವ ತನಕ ಸೂಪರ್ ಓವರ್ ಹಾಕಿಸಲಾಗುತ್ತದೆ.