Quinton De Kcok: ಬಾಂಗ್ಲಾದೇಶದ ವಿರುದ್ಧ ಸ್ಫೋಟಕ ಶತಕ ಸಿಡಿಸಿ ವಿಶ್ವಕಪ್‌ನಲ್ಲಿ ಗಿಲ್‌ಕ್ರಿಸ್ಟ್ ದಾಖಲೆ ಮುರಿದ ಕ್ವಿಂಟನ್ ಡಿ ಕಾಕ್
Oct 25, 2023 08:07 AM IST
ಬಾಂಗ್ಲಾದೇಶದ ವಿರುದ್ಧ 140 ಎಸೆತಗಳಲ್ಲಿ 174 ರನ್ ಬಾರಿಸಿದ ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿ ಕಾಕ್.
ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಬಾಂಗ್ಲಾದೇಶದ ವಿರುದ್ಧ ಸ್ಫೋಟಕ ಶತಕ ಸಿಡಿಸುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಆ ದಾಖಲೆ ಯಾವುದು ಅನ್ನೋದನ್ನ ತಿಳಿಯೋಣ.
ಮುಂಬೈ (ಮಹಾರಾಷ್ಟ್ರ): ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ಸ್ಟಾರ್ ಆಟಗಾರರ ಭರ್ಜರಿ ಶತಕಗಳನ್ನು ಬಾರಿಸುವ ಮೂಲಕ ತಮ್ಮ ತಂಡಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದ (South Africa) ಆರಂಭಿಕ ಸ್ಟಾರ್ ಬ್ಯಾಟರ್ ಕಂ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ (Quinton De Kock) ಬಾಂಗ್ಲಾದೇಶ (Bangladesh) ವಿರುದ್ಧ ಸ್ಫೋಟಕ ಶತಕ ಬಾರಿಸಿದ್ದಾರೆ. ಡಿ ಕಾಕ್ 140 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಸಿಕ್ಸರ್ ಸೇರಿ 174 ರನ್ ಚಚ್ಚಿದ್ದಾರೆ. ಇದು ಬಾಂಗ್ಲಾಗೆ 383 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಲು ನೆರವಾಗಿತ್ತು.
ನಿನ್ನೆ (ಅಕ್ಟೋಬರ್ 24, ಮಂಗಳವಾರ) ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 382 ರನ್ ಬಾರಿಸಿತ್ತು. ಹೆನ್ರಿಕ್ ಕ್ಲಾಸೆನ್ ಅದ್ಭುತ ಬ್ಯಾಟಿಂಗ್ ಮೂಲಕ 49 ಎಸೆತಗಳಲ್ಲಿ 90 ರನ್ ಬಾರಿಸಿ 10 ರನ್‌ಗಳಿಂದ ಶತಕ ವಂಚಿತರಾದರು. ಕ್ವಿಂಟನ್ ಡಿ ಕಾಕ್ 174 ರನ್‌ಗಳ ಭರ್ಜರಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದಿದ್ದಾರೆ.
ಶತಕ ಸಿಡಿಸಿ ದಾಖಲೆ ಬರೆದ ಡಿ ಕಾಕ್
ಬಾಂಗ್ಲಾದೇಶದ ವಿರುದ್ಧ 140 ಎಸೆತಗಳಲ್ಲಿ 15 ಬೌಂಡರಿ ಹಾಗೂ 7 ಸಿಕ್ಸರ್ ಸೇರಿ 174 ರನ್ ಬಾರಿಸಿರುವ ಕ್ವಿಂಟನ್ ಡಿ ಕಾಕ್, ಇತಿಹಾಸ ನಿರ್ಮಿಸಿದ್ದಾರೆ. ಏಕದಿನ ವಿಶ್ವಕಪ್‌ನ ಪಂದ್ಯವೊಂದರಲ್ಲಿ ವೈಯಕ್ತಿಕ ಅತಿ ಹೆಚ್ಚು ರನ್ ಗಳಿಸಿರುವ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಡಿ ಕಾಕ್ ಆಸ್ಟ್ರೇಲಿಯಾದ ಮಾಜಿ ಸ್ಟಾರ್ ವಿಕೆಟ್ ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ಅವರ ದಾಖಲೆಯನ್ನು ಮುರಿದಿದ್ದಾರೆ. ಗಿಲ್‌ಕ್ರಿಸ್ಟ್ 2007 ವಿಶ್ವಕಪ್‌ನಲ್ಲಿ 149 ರನ್‌ಗಳ ಶತಕ ಬಾರಿಸಿದ್ದರು.
ಈ ಸಾಧನೆ ಮಾಡಿದ ಮೊದಲ ಆಫ್ರಿಕನ್ ಬ್ಯಾಟರ್
ಕ್ವಿಂಟನ್ ಡಿ ಕಾಕ್ ವಿಶ್ವಕಪ್‌ನ ಒಂದೇ ಆವೃತ್ತಿಯಲ್ಲಿ 3 ಶತಕಗಳನ್ನು ಗಳಿಸಿದ ದಕ್ಷಿಣ ಆಫ್ರಿಕಾದ ಮೊದಲ ಬ್ಯಾಟ್ಸಮನ್ ಎನಿಸಿಕೊಂಡಿದ್ದಾರೆ. ಅಲ್ಲದೆ, ಒಂದೇ ಆವೃತ್ತಿಯಲ್ಲಿ ಮೂರು ಶತಕಗಳನ್ನು ಗಳಿಸಿದ 7ನೇ ಅಂತಾರಾಷ್ಟ್ರೀಯ ಬ್ಯಾಟರ್ ಆಗಿದ್ದಾರೆ. 2023ರ ವಿಶ್ವಕಪ್‌ನ ಬಳಿಕ ಡಿ ಕಾಕ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಅವರು ಕಳಪೆ ಪ್ರದರ್ಶನ ನೀಡಿದ್ದರು. ಆದರೆ ಈ ಬಾರಿ ಬ್ಯಾಟ್ ಮೂಲಕ ಮಿಂಚುತ್ತಿದ್ದಾರೆ.
ಮುಂಬೈನ ವಾಂಖೆಡೆಯಲ್ಲಿ ಮಂಗಳವಾರ (ಅಕ್ಟೋಬರ್ 24) ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾದ ಪರ ಡಿ ಕಾಕ್ ಆರಂಭದಿಂದಲೇ ಅಬ್ಬರಿಸಿದರು. 101 ಎಸೆತಗಳಲ್ಲಿ ಶತಕ ಬಾರಿಸಿದರು. ಆ ನಂತರ ಗೇರ್ ಬದಲಾಯಿಸಿ ತಮ್ಮ ಬ್ಯಾಟಿಂಗ್ ವೇಗವನ್ನು ಹೆಚ್ಚಿಸಿಕೊಂಡರು. ನಂತರ ಕೇವಲ 39 ಎಸೆತಗಳಲ್ಲಿ 73 ರನ್ ಸಿಡಿಸಿದರು. 101 ರನ್‌ಗೆ 100 ರನ್ ಬಾರಿಸಿದರೆ, 120 ರನ್‌ಗೆ 150 ರನ್ ಚಚ್ಚಿದರು. ಇನ್ನಿಂಗ್ಸ್‌ನ 46ನೇ ಓವರ್‌ನಲ್ಲಿ ಬಾಂಗ್ಲಾ ಬೌಲರ್ ಹಸನ್ ಮಹಮೂದ್ ಅವರ ಎಸೆತದಲ್ಲಿ ಔಟ್ ಆದರು.
ಒಂದು ಹಂತದಲ್ಲಿ ದ್ವಿಶತಕದ ನಿರೀಕ್ಷೆಯಲ್ಲಿದ್ದ ಡಿ ಕಾಕ್ 174 ರನ್ ಗಳಿಸಿ ತಮ್ಮ ಆಟವನ್ನು ಮುಗಿಸಿದರು. ಮತ್ತೊಂದೆಡೆ ಹೆನ್ರಿಕ್ ಕ್ಲಾಸೆನ್ ಕೂಡ ಅದ್ಭುತ ಆಟವಾಡಿದರು. ಕ್ಲಾಸೆನ್ 49 ಎಸೆತಗಳಲ್ಲಿ 90 ರನ್ ಬಾರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 382 ರನ್‌ಗಳ ಬೃಹತ್ ಮೊತ್ತ ಪೇರಿಸಲು ನೆರವಾಯಿತು. ಬಾಂಗ್ಲಾದೇಶದ ಪರ ಹಸನ್ ಮಹಮೂದ್ ಎರಡು, ಶಕೀಬ್ ಅಲ್ ಹಸನ್, ಶೋರಿಫುಲ್ ಇಸ್ಲಾಂ, ಮೆಹದಿ ಹಸನ್ ತಲಾ 1 ವಿಕೆಟ್ ಪಡೆದರು.