ಸೋತು-ಗೆದ್ದವರ ನಡುವೆ ಪೈಪೋಟಿ, 2ನೇ ಗೆಲುವಿನ ಮೇಲೆ ಕಣ್ಣಿಟ್ಟ ಬೆಂಗಳೂರು; ಆರ್ಸಿಬಿ-ಗುಜರಾತ್ ಪ್ಲೇಯಿಂಗ್ XI ಹೀಗಿರಲಿದೆ
Feb 27, 2024 08:59 AM IST
ಸೋತು-ಗೆದ್ದವರ ನಡುವೆ ಪೈಪೋಟಿ, 2ನೇ ಗೆಲುವಿನ ಮೇಲೆ ಕಣ್ಣಿಟ್ಟ ಬೆಂಗಳೂರು
- WPL 2024 : ಡಬ್ಲ್ಯುಪಿಎಲ್ನ ಐದನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ.
ಮಹಿಳಾ ಪ್ರೀಮಿಯರ್ ಲೀಗ್ (WPL) 2024ರ ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCBW) ಫೆಬ್ರವರಿ 27 ರಂದು ಗುಜರಾಜ್ ಜೈಂಟ್ಸ್ (GGW) ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾತ್ರಿ 7.30ರಿಂದ ಪಂದ್ಯ ನಡೆಯಲಿದೆ. ಈಗಾಗಲೇ ಗೆಲುವಿನ ಖಾತೆ ತೆರೆದಿರುವ ಆರ್ಸಿಬಿ, ಮತ್ತೊಂದು ಜಯದ ಕನಸಿನಲ್ಲಿದೆ. ತನ್ನ ಆರಂಭಿಕ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 2 ರನ್ಗಳಿಂದ ಗೆದ್ದಿತ್ತು.
ಮತ್ತೊಂದೆಡೆ ಗುಜರಾತ್ ಜೈಂಟ್ಸ್ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 5 ವಿಕೆಟ್ಗಳ ಸೋಲು ಅನುಭವಿಸಿತ್ತು. ಇದೀಗ ಆರ್ಸಿಬಿಯನ್ನು ಮಣಿಸಿ ಗೆಲುವಿನ ಖಾತೆ ತೆರೆಯುವ ಹಂಬಲದಲ್ಲಿದೆ. ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ಆಡುವ 11ರ ಬಳಗ ಹೇಗಿರಲಿದೆ ಎಂಬುದರ ಕುರಿತು ನೋಡೋಣ. ಅಲ್ಲದೆ, ಅಲ್ಲದೆ, ಎರಡು ತಂಡಗಳ ನಡುವೆ ಯಾರ ಮೇಲುಗೈ ಎಂಬುದನ್ನು ತಿಳಿಯೋಣ.
ತಲಾ ಒಂದೊಂದು ಗೆಲುವು ದಾಖಲಿಸಿದ ಉಭಯ ತಂಡಗಳು
ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾಜ್ ಜೈಂಟ್ಸ್ ಇದುವರೆಗೆ ಎರಡು ಬಾರಿ ಮುಖಾಮುಖಿಯಾಗಿವೆ. ಉಭಯ ತಂಡಗಳು ತಲಾ ಒಂದೊಂದು ಜಯದ ನಗೆ ಬೀರಿವೆ. ಕಳೆದ ಬಾರಿಯ ಮೊದಲ ಮುಖಾಮುಖಿಯಲ್ಲಿ ಗುಜರಾತ್ 11 ರನ್ಗಳಿಂದ ಗೆದ್ದಿತ್ತು. ಎರಡು ತಂಡಗಳ ನಡುವಿನ ಎರಡನೇ ಮುಖಾಮುಖಿಯಲ್ಲಿ ಬೆಂಗಳೂರು 8 ವಿಕೆಟ್ಗಳ ಅಂತರದಿಂದ ಜಯಿಸಿತ್ತು. ಮತ್ತೊಂದು ಗೆಲುವಿಗಾಗಿ ಉಭಯ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
ಗುಜರಾಜ್ ಜೈಂಟ್ಸ್ ಸಂಭಾವ್ಯ ತಂಡ
ಬೆತ್ ಮೂನಿ (ನಾಯಕ ಮತ್ತು ವಿಕೆಟ್‌ಕೀಪರ್), ವೇದಾ ಕೃಷ್ಣಮೂರ್ತಿ, ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಆಶ್ಲೇ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ, ತನುಜಾ ಕನ್ವರ್, ಕ್ಯಾಥರೀನ್ ಬ್ರೈಸ್, ಲೀ ತಹುಹು, ಮೇಘನಾ ಸಿಂಗ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಭಾವ್ಯ ತಂಡ
ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಆಶಾ ಶೋಭನಾ, ರೇಣುಕಾ ಠಾಕೂರ್ ಸಿಂಗ್.
ಅಂಕಪಟ್ಟಿಯಲ್ಲಿ ಮೇಲೇರಿದ ಡೆಲ್ಲಿ
ಯುಪಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಡೆಲ್ಲಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮುಂಬೈ ಇಂಡಿಯನ್ಸ್ ಸತತ ಎರಡು ಗೆಲುವಿನೊಂದಿಗೆ 4 ಅಂಕ ಸಂಪಾದಿಸಿ +0.488 ನೆಟ್ ರನ್ರೇಟ್ ಪಡೆದಿದೆ. ಡೆಲ್ಲಿ 2ರಲ್ಲಿ 1 ಜಯಿಸಿ 2 ಅಂಕ ಪಡೆದು ನೆಟ್ ರನ್ರೇಟ್ +1.222 ಅನ್ನು ಹೊಂದಿದೆ.
ಆರ್ಸಿಬಿ ಎರಡರಿಂದ ಮೂರನೇ ಸ್ಥಾನಕ್ಕೆ ಕುಸಿದಿದೆ. ಆಡಿರುವ 1 ಪಂದ್ಯ ಗೆದ್ದಿದ್ದು 2 ಅಂಕ ಪಡೆದಿದೆ. ಆದರೆ ನೆಟ್ ರನ್ ರೇಟ್ (+0.100) ಡೆಲ್ಲಿಗಿಂತ ಕಡಿಮೆ ಇದೆ. ಇನ್ನು ಯುಪಿ ವಾರಿಯರ್ಸ್ ಆಡಿದ ಎರಡರಲ್ಲೂ ಸೋತಿದ್ದು ನೆಟ್ರನ್ರೇಟ್ -1.266 ಹೊಂದಿದೆ. ಗುಜರಾತ್ ಜೈಂಟ್ಸ್ ಆಡಿದ 1ರಲ್ಲಿ ಸೋತಿದ್ದು -0.801 ರನ್ರೇಟ್ ಹೊಂದಿದೆ.