WPL 2024: ಗುಜರಾತ್ ಜೈಂಟ್ಸ್‌ಗೆ ಗುಮ್ಮಿದ ಮಂಧಾನ ಪಡೆ; ಆರ್‌ಸಿಬಿಗೆ ಸತತ ಎರಡನೇ ಗೆಲುವು
Feb 27, 2024 10:52 PM IST
ಗುಜರಾತ್ ಜೈಂಟ್ಸ್ ವಿರುದ್ಧ ಆರ್‌ಸಿಬಿಗೆ ಗೆಲುವು
- WPL 2024: ಡಬ್ಲ್ಯೂಪಿಎಲ್ ಎರಡನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸತತ ಎರಡನೇ ಜಯ ದಾಖಲಿಸಿದೆ. ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಸುಲಭ ಗೆಲುವು ದಾಖಲಿಸಿದ ಸ್ಮೃತಿ ಮಂಧಾನ ಪಡೆಯು ಅಂಕಪಟ್ಟಿಯಲ್ಲಿ ಮೇಲೇರಿದೆ.
ವಿಮೆನ್ಸ್ ಪ್ರೀಮಿಯರ್ ಲೀಗ್‌ನ (Womens Premier League 2024) ಪ್ರಸಕ್ತ ಆವೃತ್ತಿಯ ಎರಡನೇ ಪಂದ್ಯದಲ್ಲಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ (Royal Challengers Bangalore Women vs Gujarat Giants) ವಿರುದ್ಧ ಸ್ಮೃತಿ ಮಂಧಾನ ಬಳಗವು 8 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಅಲ್ಲದೆ ಅಂಕಪಟ್ಟಿಯಲ್ಲಿಯೂ ಅಗ್ರಸ್ಥಾನಕ್ಕೇರಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್, ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿತು. ಬಲಿಷ್ಠ ವಿದೇಶಿ ಆಟಗಾರ್ತಿಯರು ರನ್ ಕಲೆ ಹಾಕಲು ಪರದಾಡಿ ಸಂಪೂರ್ಣ ವಿಫಲರಾದರು. ಹೀಗಾಗಿ 7 ವಿಕೆಟ್ ಕಳೆದುಕೊಂಡು ಕೇವಲ 107 ರನ್ ಗಳಿಸಲಷ್ಟೇ ಶಕ್ತವಾಯ್ತು. ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ವನಿತೆಯರ ತಂಡವು, ನಾಯಕ ಸ್ಮೃತಿ ಮಂಧಾನ ಸ್ಫೋಟಕ ಆಟದ ನರವಿಂದ ಸುಲಭ ಜಯ ಸಾಧಿಸಿತು. ಕೇವಲ 12.3 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ ಗೆದ್ದು ಬೀಗಿದೆ.
ಇದನ್ನೂ ಒದಿ | Ranji Trophy: 10, 11ನೇ ಕ್ರಮಾಂಕದ ಬ್ಯಾಟರ್‌ಗಳ ಶತಕ ವೈಭವ; ಕೊನೆಯ ವಿಕೆಟ್‌ಗೆ ತುಷಾರ್-ತನುಷ್ ದಾಖಲೆಯ 232 ರನ್ ಜೊತೆಯಾಟ
ಸುಲಭ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ನಾಯಕಿ ಮಂಧಾನ ಹಾಗೂ ಅನುಭವಿ ಆಟಗಾರ್ತಿ ಸೋಫಿ ಡಿವೈನ್ ಉತ್ತಮ ಆರಂಭ ಪಡೆದರು. ಇವರಿಬ್ಬರೂ 32 ರನ್ ಗಳೆ ಹಾಕಿದರು. ಡಿವೈನ್ 6 ರನ್ ಗಳಿಸಿ ಔಟಾದರೂ, ಆರಂಭದಿಂದಲೂ ಅಬ್ಬರಿಸಿದ ಸ್ಮೃತಿ 43 ರನ್ ಸಿಡಿಸಿದರು. ಇದು ಡಬ್ಲ್ಯೂಪಿಎಲ್‌ನಲ್ಲಿ ಅವರ ಗರಿಷ್ಠ ಮೊತ್ತವಾಗಿದೆ. ತಮ್ಮ ಇನ್ನಿಂಗ್ಸ್‌ನಲ್ಲಿ ಅವರು 8 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ಮೊದಲ ಪಂದ್ಯದಂತೆ ಎರಡನೇ ಪಂದ್ಯದಲ್ಲೂ ಅಮೋಘ ಆಟವಾಡಿದ ಮೇಗನಾ 36 ರನ್ ಗಳಿಸಿದರು. ಗೆಲುವಿನ ಬೌಂಡರಿ ಹೊಡೆದ ಕ್ವೀನ್ ಎಲಿಸ್ ಪೆರ್ರಿ 23 ರನ್ ತಮ್ಮ ಖಾತೆಗೆ ಸೇರಿಸಿಕೊಂಡರು.
ಪ್ರಬಲ ವಿದೇಶಿ ಆಟಗಾರ್ತಿಯರು ವಿಫಲ, ಗುಜರಾತ್ ಅಲ್ಪ ಮೊತ್ತ
ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ಜೈಂಟ್ಸ್, ನಿರೀಕ್ಷಿತ ಆರಂಭ ಪಡೆಯಲಿಲ್ಲ. ಅನುಭವಿ ನಾಯಕಿ ಬೆತ್ ಮೂನಿ 8 ರನ್ ಗಳಿಸಿ ರೇಣುಕಾ ಸಿಂಗ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಕೆಲಕಾಲ ಜವಾಬ್ದಾರಿಯುತ ಆಟವಾಡಿದ ಫೋಬ್ ಲಿಚ್‌ಫೀಲ್ಡ್ 5 ರನ್ ಗಳಿಸಿದ್ದಾಗ ಸ್ಟಂಪ್ ಔಟ್ ಆದರು. ಕನ್ನಡತಿ ವೇದಾ ಕೃಷ್ಣಮೂರ್ತಿ ಆಟ 9 ರನ್‌ಗೆ ಅಂತ್ಯವಾದರೆ, ಹರ್ಲೀನ್ ಡಿಯೋಲ್ 22 ರನ್ ಗಳಿಸಿದ್ದಾಗ ರನೌಟ್ ಆದರು. ಗಾರ್ಡನರ್ 7, ಕ್ಯಾಥರೀನ್ ಬ್ರೈಸ್ 3 ಹಾಗೂ ಸ್ನೇಹಾ ರಾಣಾ 12 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ದಯಾಲನ್ ಹೇಮಲತಾ 31 ರನ್ ಗಳಿಸಿ ಅಜೇಯರಾಗಿ ಉಳಿದರು.
ಆರ್‌ಸಿಬಿ ಪರ ಸೋಫಿ ಮೊಲಿನೆಕ್ಸ್ 3 ವಿಕೆಟ್ ಕಬಳಿಸಿದರೆ, ರೇಣುಕಾ ಸಿಂಗ್ ಪ್ರಮುಖ 2 ವಿಕೆಟ್ ಪಡೆದರು.
ಇದನ್ನೂ ಓದಿ | T20 Record: ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ; ರೋಹಿತ್ ಶರ್ಮಾ ದಾಖಲೆ ಮುರಿದ ನಮೀಬಿಯಾ ಆಟಗಾರ
ಮೊದಲ ಪಂದ್ಯದಂತೆಯೇ, ಈ ಬಾರಿಯೂ ಟಾಸ್ ಪ್ರಕ್ರಿಯೆ ವೇಳೆ ಸ್ಮೃತಿ ಮಂಧಾನ ಮಾತನಾಡುವಾಗ ಬೆಂಗಳೂರು ಅಭಿಮಾನಿಗಳು ಹರ್ಷೋದ್ಘಾರ ಮಾಡಿದ್ದಾರೆ. ಟಾಸ್ ಗೆಲ್ಲುತ್ತಿದ್ದಂತೆಯೇ ಮೈದಾನದ ತುಂಬೆಲ್ಲಾ ಆರ್‌ಸಿಬಿ ಆರ್‌ಸಿಬಿ ಎಂಬ ಘೋಷಣೆ ಕೇಳಿಬಂದಿದೆ. ಇಂದಿನ ಪಂದ್ಯಕ್ಕೆ ಉಭಯ ತಂಡಗಳು ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕೊನೆಯ ಪಂದ್ಯದಲ್ಲಿ ಕಣಕ್ಕಿಳಿದ ತಂಡವೇ ಇಂದು ಕೂಡಾ ಆಡಿವೆ.
ಆರ್‌ಸಿಬಿ ಆಡುವ ಬಳಗ
ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಸಬ್ಬಿನೇನಿ ಮೇಘನಾ, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ ಕೀಪರ್), ಸೋಫಿ ಮೊಲಿನೆಕ್ಸ್, ಜಾರ್ಜಿಯಾ ವೇರ್ಹ್ಯಾಮ್, ಶ್ರೇಯಾಂಕಾ ಪಾಟೀಲ್, ಸಿಮ್ರಾನ್ ಬಹದ್ದೂರ್, ಆಶಾ ಶೋಭನಾ, ರೇಣುಕಾ ಠಾಕೂರ್ ಸಿಂಗ್.
ಗುಜರಾಜ್ ಜೈಂಟ್ಸ್ ಆಡುವ ಬಳಗ
ಬೆತ್ ಮೂನಿ (ನಾಯಕ ಮತ್ತು ವಿಕೆಟ್‌ಕೀಪರ್), ವೇದಾ ಕೃಷ್ಣಮೂರ್ತಿ, ಫೋಬೆ ಲಿಚ್‌ಫೀಲ್ಡ್, ಹರ್ಲೀನ್ ಡಿಯೋಲ್, ಆಶ್ಲೇ ಗಾರ್ಡ್ನರ್, ದಯಾಲನ್ ಹೇಮಲತಾ, ಸ್ನೇಹ ರಾಣಾ, ತನುಜಾ ಕನ್ವರ್, ಕ್ಯಾಥರೀನ್ ಬ್ರೈಸ್, ಲೀ ತಹುಹು, ಮೇಘನಾ ಸಿಂಗ್.
ಇದನ್ನೂ ಓದಿ | ಖಾತೆ ತೆರೆದ ಡೆಲ್ಲಿ ಕ್ಯಾಪಿಟಲ್ಸ್, ಸತತ ಎರಡನೇ ಸೋಲು ಕಂಡ ಯುಪಿ ವಾರಿಯರ್ಸ್; ಅಂಕಪಟ್ಟಿಯಲ್ಲಿ ಕುಸಿದ ಆರ್‌ಸಿಬಿ
(This copy first appeared in Hindustan Times Kannada website. To read more like this please logon to kannada.hindustantimes.com)