ವರ್ಷ 22, ಸಿಡಿಸಿದ್ದು 209; ಚಿಕ್ಕ ವಯಸ್ಸಲ್ಲೇ ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
Feb 03, 2024 11:39 AM IST
ಚಿಕ್ಕ ವಯಸ್ಸಲ್ಲೇ ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
- Yashasvi Jaiswal Double Century : ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ದ್ವಿಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ.
ವಿಶಾಖಪಟ್ಟಣಂನ ಡಾ ವೈಎಸ್ ರಾಜಶೇಖರ್ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ (Yashasvi Jaiswal Double Century) ಚೊಚ್ಚಲ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಮಯಾಂಕ್ ಅಗರ್ವಾಲ್ (ನವೆಂಬರ್ 2019) ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಡಬಲ್ ಸೆಂಚುರಿ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಯುವ ಓಪನರ್ ಪಾತ್ರರಾದರು.
ದ್ವಿಶತಕ ಸಿಡಿಸಿದ 3ನೇ ಕಿರಿಯ ಆಟಗಾರ ಜೈಸ್ವಾಲ್
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 336 ರನ್ ಗಳಿಸಿತ್ತು. ಈ ಸ್ಕೋರ್ನೊಂದಿಗೆ ಎರಡನೇ ದಿನದಾಟ ಆರಂಭಿಸಿದ ಭಾರತಕ್ಕೆ 179 ರನ್ ಗಳಿಸಿ ಅಜೇಯರಾಗಿದ್ದ ಯಶಸ್ವಿ ಜೈಸ್ವಾಲ್, 277 ಎಸೆತಗಳಲ್ಲಿ ತನ್ನ ಮೊದಲ 200 ರನ್ ಗಳಿಸಿದರು. ಆ ಮೂಲಕ ಸುನಿಲ್ ಗವಾಸ್ಕರ್ ಮತ್ತು ವಿನೋದ್ ಕಾಂಬ್ಳಿ ನಂತರ ಈ ಮೈಲಿಗಲ್ಲನ್ನು ತಲುಪಿದ 3ನೇ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮತ್ತು ವಿಶ್ವದ ನಾಲ್ಕನೇ ಬ್ಯಾಟರ್ ಎನಿಸಿದ್ದಾರೆ. ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನದ ಜಾವೆಂದ್ ಮಿಯಾಮಿಂದ್ 19ನೇ ವರ್ಷದಲ್ಲಿ ದ್ವಿಶತಕ ಚಚ್ಚಿದ್ದರು.
ಡಬಲ್ ಸೆಂಚುರಿ ಬಾರಿಸಿದ ಎಡಗೈ ಆಟಗಾರರ ಪಟ್ಟಿಗೆ ಪ್ರವೇಶ
ಅಲ್ಲದೆ, ಗೌತಮ್ ಗಂಭೀರ್ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಮೊದಲ ಎಡಗೈ ಬ್ಯಾಟ್ಸ್ಮನ್ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಭಾರತದ ಮಾಜಿ ಆರಂಭಿಕ ಆಟಗಾರ 2008 ರಲ್ಲಿ ಆಸ್ಟ್ರೇಲಿಯಾ ವಿರುದ್ಧ 206 ರನ್ ಗಳಿಸಿದ್ದರು. ಜೈಸ್ವಾಲ್ ಈಗ ಟೆಸ್ಟ್ ಕ್ರಿಕೆಟ್ನಲ್ಲಿ 200 ರನ್ ಗಳಿಸಿದ ಭಾರತೀಯ ಎಡಗೈ ಬ್ಯಾಟ್ಸ್ಮನ್ಗಳ ಎಲೈಟ್ ಗುಂಪಿಗೂ ಸೇರಿದ್ದಾರೆ. ಗಂಭೀರ್ ಜೊತೆಗೆ ಭಾರತದ ಎಡಗೈ ಬ್ಯಾಟ್ಸ್ಮನ್ಗಳಾದ ಕಾಂಬ್ಳಿ (ಎರಡು ಬಾರಿ), ಸೌರವ್ ಗಂಗೂಲಿ (ಒಂದು ಬಾರಿ) ಈ ಸಾಧನೆ ಮಾಡಿದ್ದಾರೆ.
19 ಬೌಂಡರಿ, 7 ಸಿಕ್ಸರ್; ಜೈಸ್ವಾಲ್ 209 ರನ್
ಮೊದಲ ದಿನ 257 ಎಸೆತಗಳಲ್ಲಿ ಅಜೇಯ 179 ರನ್ ಗಳಿಸುವ ಮೂಲಕ ಭಾರತದ ತಂಡವನ್ನು ಮುನ್ನಡೆಸುವ ಮೂಲಕ 22 ವರ್ಷದ ಯಂಗ್ ಬ್ಯಾಟರ್, ಎರಡನೇ ದಿನ ಸಹ ಗಮನಾರ್ಹ ಆತ್ಮವಿಶ್ವಾಸವನ್ನು ಪ್ರದರ್ಶಿಸಿದರು. ತನ್ನ ಚೊಚ್ಚಲ ದ್ವಿಶತಕ ಸಿಡಿಸಿದ ಇನ್ನಿಂಗ್ಸ್ನಲ್ಲಿ 290 ಎಸೆತಗಳನ್ನು ಎದುರಿಸಿದ್ದು 209 ರನ್ ಕಲೆ ಹಾಕಿದ್ದಾರೆ. 19 ಬೌಂಡರಿ, ಭರ್ಜರಿ 7 ಸಿಕ್ಸರ್ಗಳು ಅವರ ಇನ್ನಿಂಗ್ಸ್ನಲ್ಲಿವೆ. ಜೈಸ್ವಾಲ್ 200ರ ಗಡಿ ದಾಟಿದರೆ ಭಾರತದ ಪರ ಯಾರೊಬ್ಬರೂ ಸಹ ಅರ್ಧಶತಕ ಸಹ ಗಳಿಸಿಲ್ಲ.
ಸಿಕ್ಸರ್ ಮೂಲಕ ಶತಕ, ಬೌಂಡರಿ ಮೂಲಕ ದ್ವಿಶತಕ
ಕ್ರೀಸ್ನಲ್ಲಿ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸಿದ ಯುವ ಬ್ಯಾಟರ್, ಸಿಕ್ಸರ್ ಬಾರಿಸಿ ಶತಕ ಪೂರೈಸಿದ್ದರು. ಆದರೆ ಚೊಚ್ಚಲ ದ್ವಿಶತಕವನ್ನೂ ಬೌಂಡರಿ ಮೂಲಕವೇ ಪೂರ್ಣಗೊಳಿಸಿದ್ದು ವಿಶೇಷ. 191 ರನ್ ಗಳಿಸಿದ್ದಾಗ 102ನೇ ಓವರ್ನ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ಎರಡನೇ ಎಸೆತದಲ್ಲಿ ಬೌಂಡರಿ ಚಚ್ಚುವ ಮೂಲಕ ದಾಖಲೆಯ ದ್ವಿಶತಕ ತಲುಪಿದರು. ಸಿಕ್ಸರ್ನೊಂದಿಗೆ ತಮ್ಮ 100 ರನ್, ಬೌಂಡರಿಯೊಂದಿಗೆ 200 ರನ್ ಗಳಿಸಿದರು. ಆದರೆ ಜೇಮ್ಸ್ ಆಂಡರ್ಸನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಗಳಲ್ಲಿ ದ್ವಿಶತಕ ಸಿಡಿಸಿದ ಭಾರತೀಯ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
- ಕರುಣ್ ನಾಯರ್- 303*
- ವಿರಾಟ್ ಕೊಹ್ಲಿ- 235
- ವಿನೋದ್ ಕಾಂಬ್ಳಿ- 224
- ಗುಂಡಪ್ಪ ವಿಶ್ವನಾಥ್- 222
- ಸುನಿಲ್ ಗವಾಸ್ಕರ್- 221
- ರಾಹುಲ್ ದ್ರಾವಿಡ್- 217
- ಯಶಸ್ವಿ ಜೈಸ್ವಾಲ್- 209
- ಚೇತೇಶ್ವರ ಪೂಜಾರ- 206*
- ಮನ್ಸೂರ್ ಅಲಿ ಖಾನ್ ಪಟೌಡಿ- 203*
ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಅಂತ್ಯಕ್ಕೆ ಜೈಸ್ವಾಲ್ ಟೆಸ್ಟ್ ಕಿಕೆಟ್ನಲ್ಲಿ 10 ಇನ್ನಿಂಗ್ಸ್ ಆಡಿದ್ದಾರೆ. 62ರ ಬ್ಯಾಟಿಂಗ್ ಸರಾಸರಿಯಲ್ಲಿ 620 ರನ್ ಕಲೆ ಹಾಕಿದ್ದು ಎರಡು ಶತಕ, ಎರಡು ಅರ್ಧಶತಕ ಸಿಡಿಸಿದ್ದಾರೆ. ಆಂಗ್ಲರ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದರು. ದೇಶೀಯ ಕ್ರಿಕೆಟ್ನ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ಇರಾನಿ ಕಪ್ ಬಳಿಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ನಲ್ಲೂ ದ್ವಿಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.