ICC Test Ranking: ಸತತ ದ್ವಿಶತಕ ಸಿಡಿಸಿ 14 ಸ್ಥಾನ ಮೇಲೇರಿದ ಯಶಸ್ವಿ ಜೈಸ್ವಾಲ್; ರೋಹಿತ್-ಜಡೇಜಾ ಶ್ರೇಯಾಂಕದಲ್ಲೂ ಏರಿಕೆ
Feb 21, 2024 04:57 PM IST
ಸತತ ದ್ವಿಶತಕ ಸಿಡಿಸಿ 14 ಸ್ಥಾನ ಮೇಲೇರಿದ ಯಶಸ್ವಿ ಜೈಸ್ವಾಲ್
- ICC Test Ranking : ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್ ಪ್ರಕಟಗೊಂಡಿದ್ದು, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ ಮತ್ತು ರೋಹಿತ್ ಶರ್ಮಾ ಟೆಸ್ಟ್ ಶ್ರೇಯಾಂಕದಲ್ಲಿ ಏರಿಕೆ ಕಂಡಿದ್ದಾರೆ.
ವಿಶಾಖಪಟ್ಟಣಂ ಮತ್ತು ರಾಜ್ಕೋಟ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯದಲ್ಲಿ 209, 214 ರನ್ ಗಳಿಸಿದ ನಂತರ ಭಾರತದ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ (Yashasvi Jaiswal) ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ (ICC Test Ranking) 14 ಸ್ಥಾನ ಮುಂಬಡ್ತಿ ಪಡೆದಿದ್ದಾರೆ. ಸತತ ಎರಡು ಟೆಸ್ಟ್ ಪಂದ್ಯಗಳಲ್ಲಿ ದ್ವಿಶತಕ ಗಳಿಸಿದ 22 ವರ್ಷದ ಎಡಗೈ ಬ್ಯಾಟರ್ 14 ಸ್ಥಾನಗಳ ಏರಿಕೆ ಕಂಡು 15 ನೇ ಸ್ಥಾನಕ್ಕೆ ತಲುಪಿದ್ದಾರೆ.
ಬ್ಯಾಟಿಂಗ್ - ಬೌಲಿಂಗ್ನಲ್ಲಿ ಮೇಲೇರಿದ ಜಡೇಜಾ
ನಾಲ್ಕನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ 112 ರನ್ ಕಲೆ ಹಾಕಿದ ರವೀಂದ್ರ ಜಡೇಜಾ (Ravindra Jadeja) ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ 41ನೇ ಸ್ಥಾನದಿಂದ 34ನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ, ಬೌಲಿಂಗ್ನಲ್ಲಿ ಏಳು ವಿಕೆಟ್ ಪಡೆದಿದ್ದ ಜಡ್ಡು, ಬೌಲಿಂಗ್ ಶ್ರೇಯಾಂಕದಲ್ಲಿ ಮೂರು ಸ್ಥಾನಗಳನ್ನು ಮೇಲಕ್ಕೇರಿ 6ನೇ ಸ್ಥಾನಕ್ಕೇರಿದ್ದಾರೆ. ಆಲ್ರೌಂಡರ್ಗಳಪಟ್ಟಿಯಲ್ಲಿ ಜಡೇಜಾ ಅಗ್ರಸ್ಥಾನದಲ್ಲೇ ಮುಂದುವರೆದಿದ್ದು, 416 ಅಂಕಗಳಿಂದ ವೃತ್ತಿಜೀವನದ ಅತ್ಯುತ್ತಮ 469 ರೇಟಿಂಗ್ ಪಾಯಿಂಟ್ಗಳಿಗೆ ಏರಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಶತಕ ಬಾರಿಸಿದ ನಾಯಕ ರೋಹಿತ್ ಶರ್ಮಾ ಒಂದು ಸ್ಥಾನ ಮೇಲಕ್ಕೇರಿ 12ನೇ ಸ್ಥಾನದಲ್ಲಿದ್ದರೆ, ಶುಭ್ಮನ್ ಗಿಲ್ ಎರಡನೇ ಇನ್ನಿಂಗ್ಸ್ನಲ್ಲಿ ಶತಕದ ಸನಿಹಕ್ಕೆ ಬಂದ ನಂತರ ಮೂರು ಸ್ಥಾನ ಮೇಲಕ್ಕೇರಿ 35ನೇ ಸ್ಥಾನದಲ್ಲಿದ್ದಾರೆ. ಸರ್ಫರಾಜ್ ಖಾನ್ ಮತ್ತು ಧ್ರುವ್ ಜುರೆಲ್ ಕ್ರಮವಾಗಿ 75 ಮತ್ತು 100ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 7ನೇ ಸ್ಥಾನದಲ್ಲಿದ್ದಾರೆ.
ಕುಟುಂಬದ ತುರ್ತು ಪರಿಸ್ಥಿತಿಯನ್ನು ಎದುರಿಸಲು ಪಂದ್ಯದ ಒಂದು ಭಾಗವನ್ನು ಕಳೆದುಕೊಂಡರೂ ರವಿಚಂದ್ರನ್ ಅಶ್ವಿನ್ ಎರಡು ಇನ್ನಿಂಗ್ಸ್ನಲ್ಲಿ ಒಂದು ವಿಕೆಟ್ ಪಡೆದರು. ಇದರೊಂದಿಗೆ ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದರು. ಜಸ್ಪ್ರೀತ್ ಬುಮ್ರಾ ಅವರು ಅಗ್ರಸ್ಥಾನದಲ್ಲಿದ್ದರೆ, 2ನೇ ಸ್ಥಾನದಲ್ಲಿ ರವಿಚಂದ್ರನ್ ಅಶ್ವಿನ್ ಅವರಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ 153 ರನ್ ಗಳಿಸಿದ್ದ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ಬೆನ್ ಡಕೆಟ್ 12 ಸ್ಥಾನ ಮೇಲಕ್ಕೇರಿ 13ನೇ ಸ್ಥಾನಕ್ಕೇರಿದರೆ, ವೇಗದ ಬೌಲರ್ ಮಾರ್ಕ್ ವುಡ್ 21ನೇ ಸ್ಥಾನಕ್ಕೇರಿದ್ದಾರೆ. ಕೇನ್ ವಿಲಿಯಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಶತಕ ಸಿಡಿಸಿದ ನಂತರ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆಸಿದ್ದಾರೆ. ವಿಲಿಯಮ್ಸನ್ 893 ಪಾಯಿಂಟ್ಸ್ಗಳನ್ನು ಪಡೆದಿದ್ದಾರೆ.
ಬ್ಯಾಟಿಂಗ್ ವಿಭಾಗದ ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಇದ್ದಾರೆ. ನ್ಯೂಜಿಲೆಂಡ್ನ ಡೇರಿಲ್ ಮಿಚೆಲ್, ಪಾಕಿಸ್ತಾನದ ಬಾಬರ್ ಅಜಮ್, ಇಂಗ್ಲೆಂಡ್ನ ಜೋ ರೂಟ್ ಕ್ರಮವಾಗಿ 2, 4, 5ನೇ ಸ್ಥಾನದಲ್ಲಿದ್ದಾರೆ. ಉಸ್ಮಾನ್ ಖವಾಜ 6ನೇ ಸ್ಥಾನದಲ್ಲಿದ್ದರೆ, ಕೊಹ್ಲಿ 7ನೇ ಸ್ಥಾನದಲ್ಲಿದ್ದಾರೆ. ಟಾಪ್-10ರಲ್ಲಿ ಸ್ಥಾನ ಪಡೆದಿರುವ ಏಕೈಕ ಆಟಗಾರ ಕೊಹ್ಲಿ ಆಗಿದ್ದಾರೆ. ದಿಮಿತ್ ಕರುಣರತ್ನೆ, ಹ್ಯಾರಿ ಬ್ರೂಕ್, ಮಾರ್ನಸ್ ಲಬುಶೇನ್ 8, 9, 10ನೇ ಸ್ಥಾನದಲ್ಲಿದ್ದಾರೆ.